ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಮ್ಮ ಪೋಷಕರು ಅಲೆದಾಡುವಂತೆ ಮಾಡಬೇಡಿ

ಡ್ರಗ್ಸ್‌ ದಂಧೆಯಲ್ಲಿ ನಿರತರಾಗಿರುವ ವಿದ್ಯಾರ್ಥಿಗಳಿಗೆ ಶಶಿಕುಮಾರ್ ಕವಿಮಾತು
Last Updated 7 ಜನವರಿ 2021, 4:36 IST
ಅಕ್ಷರ ಗಾತ್ರ

ಮಂಗಳೂರು: ‘ವಿದ್ಯಾರ್ಥಿ ಜೀವನಕ್ಕೆ ಒತ್ತು ನೀಡಿ. ನಿಮ್ಮಿಂದ ನಿಮ್ಮ ಕುಟುಂಬ, ಪೋಷಕರನ್ನು ಪೊಲೀಸ್ ಠಾಣೆ, ಕೋರ್ಟ್ ಕಚೇರಿಗಳಿಗೆ ಅಲೆದಾಡುವಂತೆ ಮಾಡಬೇಡಿ’.

ಡ್ರಗ್ಸ್‌ ದಂಧೆಯಲ್ಲಿ ನಿರತರಾಗಿರುವ ವಿದ್ಯಾರ್ಥಿಗಳಿಗೆ ಮಂಗಳೂರು ನಗರ ಪೊಲೀಸ್‌ ಕಮಿಷನರ್‌ ಎನ್‌. ಶಶಿಕುಮಾರ್‌ ಹೇಳಿದ ಕಿವಿಮಾತಿದು. ಬುಧವಾರ ಇಲ್ಲಿನ ಪೊಲೀಸ್ ಮೈದಾನದಲ್ಲಿ ಡ್ರಗ್ಸ್ ಸೇವನೆ ಮತ್ತು ಮಾರಾಟ ಪ್ರಕರಣಗಳಲ್ಲಿ ಮೂರು ವರ್ಷಗಳಲ್ಲಿ ಹಲವು ಪ್ರಕರಣಗಳಲ್ಲಿ ಆರೋಪಿಗಳ ಪರೇಡ್ ನಡೆಸುವ ಮೂಲಕ ಅವರು ಕಠಿಣ ಎಚ್ಚರಿಕೆ ನೀಡಿದರು.

‘ನಾವು ಸಣ್ಣವರಿದ್ದಾಗ ನಿಮ್ಮ ಹಾಗೆ ವಿದ್ಯಾರ್ಥಿಗಳಾಗಿದ್ದು, ಯುವಕರಾಗಿದ್ದು, ಜೀವನ ಸಾಗಿಸಿ ಬಂದವರು. ನಮ್ಮ ಮನೆಯ ಸುತ್ತಮುತ್ತ ಪೊಲೀಸರು ಬಂದರೆಂದರೆ ನಮಗೆ ಹೆದರಿಕೆ ಆಗುತ್ತಿತ್ತು. ಇದೀಗ ನಿಮ್ಮಿಂದಾಗಿ ಅಂತಹ ಅಂಜಿಕೆ, ತೊಂದರೆಗೆ ನಿಮ್ಮ ಪೋಷಕರನ್ನು ಸಿಲುಕಿಸಬೇಡಿ’ ಎಂದು ಸೂಚನೆ ನೀಡಿದ ಅವರು, ‘ಪೋಷಕರು ಕೂಡಾ ಮಕ್ಕಳ ತಪ್ಪುಗಳಿಗೆ ಪ್ರೋತ್ಸಾಹ ಅಥವಾ ಬೆಂಬಲ ನೀಡದೇ ಅವರು ಸರಿದಾರಿಗೆ ಬರುವಲ್ಲಿ ಸಹಕರಿಸಬೇಕು’ ಎಂದರು.

ಡ್ರಗ್ಸ್ ವ್ಯಸನಕ್ಕೆ ತುತ್ತಾದವರನ್ನು ಪತ್ತೆ ಹಚ್ಚಿದಾಗ, ಪೊಲೀಸರು ಬಂದು ಮನೆಯಲ್ಲಿ ವಿಚಾರಿಸುವುದು, ಇದರಿಂದ ಮನೆಯವರಿಗೆ ಮುಜಗರಕ್ಕೆ ಕಾರಣವಾಗಿ, ಮನೆಯವರು ಕೋರ್ಟ್ ಕಚೇರಿ ಅಲೆದಾಡುವಂತಾಗಲು ಅವಕಾಶ ನೀಡಬಾರದು. ಬದಲಾವಣೆ ಮಾಡಿಕೊಂಡು ಬದುಕು ಸಾಗಿಸಲು ಮುಂದಾಗಬೇಕು. ವ್ಯಸನ ಮುಂದುವರಿಸಿದರೆ ಕಾನೂನಿನ ಪ್ರಕಾರ ಏನೆಲ್ಲಾ ಮಾಡಲು ಸಾಧ್ಯವೋ ಅಂತಹ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ನಿಗಾ ಇರಿಸಿ: ಡ್ರಗ್ಸ್ ಸೇವನೆ ಹಾಗೂ ಅಡ್ಡೆಗಳ ಮೇಲೆ ಅಧಿಕಾರಿಗಳು ನಿಗಾ ಇರಿಸಬೇಕು. ವ್ಯಸನಿಗಳು ಪತ್ತೆಯಾದಾಗ ಅವರ ಕುಟುಂಬದವನ್ನು ಸಂಪರ್ಕಿಸಿ ಮಾಹಿತಿ ಕಲೆ ಹಾಕಬೇಕು. ಮನೆಯವರಿಗೆ ತಿಳಿವಳಿಕೆ ನೀಡಿ, ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕ್ರಮ ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ಡಿಸಿಪಿ ವಿನಯ್ ಗಾಂವ್ಕರ್ ಹಾಗೂ ಎಸಿಪಿಗಳು ಸೇರಿದಂತೆ ಪೊಲಿೀಸ್ ಅಧಿಕಾರಿಗಳು ಇದ್ದರು.

140 ಜನರ ಪರೇಡ್‌
ಪೊಲೀಸ್‌ ಮೈದಾನದಲ್ಲಿ ಪರೇಡ್ ಬಳಿಕ ಠಾಣಾ ವ್ಯಾಪ್ತಿಯಂತೆ ಆರೋಪಿಗಳನ್ನು ಮೈದಾನದ 3 ಸುತ್ತುಗಳ ಮಾರ್ಚ್‌ಫಾಸ್ಟ್‌ ಅನ್ನು ಪೊಲೀಸ್ ಆಯುಕ್ತ ಶಶಿಕುಮಾರ್ ನಡೆಸಿದರು.

3 ವರ್ಷಗಳಲ್ಲಿ 150ಕ್ಕೂ ಅಧಿಕ ಮಂದಿ ಡ್ರಗ್ಸ್‌ ಮಾರಾಟಗಾರರು, 350ಕ್ಕೂ ಅಧಿಕ ಡ್ರಗ್ಸ್ ಸೇವಿಸುವವರ ವಿರುದ್ಧ ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿವೆ. ಎರಡು ದಿನಗಳಿಂದ ಹಳೆ ಆರೋಪಿಗಳ ಮನೆಗಳಿಗೆ ಪೊಲೀಸರು ತೆರಳಿ, ಅವರನ್ನು ವಿಚಾರಣೆ ನಡೆಸಿ ಅವರಿಂದ ಮಾಹಿತಿ ಕಲೆ ಹಾಕಲಾಗಿದೆ ಎಂದು ಅವರು ತಿಳಿಸಿದರು.

ಬುಧವಾರ 140 ಕ್ಕೂ ಅಧಿಕ ಜನರು ಪರೇಡ್‌ನಲ್ಲಿ ಭಾವಹಿಸಿದ್ದು, ಕೆಲವರ ಮೇಲೆ 15ಕ್ಕೂ ಹೆಚ್ಚು ಪ್ರಕರಣಗಳಿವೆ. ರೌಡಿಶೀಟರ್‌ಗಳಾಗಿದ್ದು ಮನ ಪರಿವರ್ತನೆ ಮಾಡಿಕೊಂಡು ಸಮಾಜದಲ್ಲಿ ಉತ್ತಮರಾಗಿ ಬದುಕುತ್ತಿರುವವರ ಮೇಲಿನ ಪ್ರಕರಣವನ್ನು ಹಿಂಪಡೆಯಲು ಕ್ರಮ ಕೈಗೊಳ್ಳಲಾಗುವುದು ಎಂದು ಎನ್‌. ಶಶಿಕುಮಾರ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT