ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಕ್ಷಿಣ ಕನ್ನಡ | ಜಿಲ್ಲೆಗೆ ಬೇಕು ಪ್ರತ್ಯೇಕ ಪರಿಸರ ಪ್ರಣಾಳಿಕೆ

ನದಿಗಳ ರಕ್ಷಣೆ, ಎತ್ತಿನ ಹೊಳೆ ಯೋಜನೆ ಕೈಬಿಡಲು ಪರಿಸರ ಕಾರ್ಯಕರ್ತರ ಆಗ್ರಹ
Published 9 ಏಪ್ರಿಲ್ 2024, 7:30 IST
Last Updated 9 ಏಪ್ರಿಲ್ 2024, 7:30 IST
ಅಕ್ಷರ ಗಾತ್ರ

ಮಂಗಳೂರು: ಉಷ್ಣ ಅಲೆ, ಸುಡು ಬಿಸಿಲಿನ ತಾಪಕ್ಕೆ ಕಾದ ಕಾವಲಿಯಂತಾಗಿದೆ ದಕ್ಷಿಣ ಕನ್ನಡ ಜಿಲ್ಲೆ. ಅಭಿವೃದ್ಧಿಯಷ್ಟೇ ಆದ್ಯತೆ ಪರಿಸರ ಕಾಳಜಿಗೂ ದೊರೆಯುವ ಮೂಲಕ ಜಿಲ್ಲೆಗೆ ಹಸಿರು ಕವಚದ ರಕ್ಷಣೆ ಸಿಗಬೇಕು...

ಈ ಕಲ್ಪನೆ ಸಾಕಾರಗೊಳ್ಳಲು ಪ್ರಮುಖ ಪಕ್ಷಗಳ ಅಭ್ಯರ್ಥಿಗಳು ಪ್ರಣಾಳಿಕೆಯಲ್ಲಿ ಪರಿಸರ ರಕ್ಷಣೆಯ ಬದ್ಧತೆ ತೋರಿ, ಮುಂದೆ ಅದನ್ನು ಅನುಷ್ಠಾನಗೊಳಿಸಬೇಕು ಎಂದು ಪರಿಸರ ಕಾರ್ಯಕರ್ತರು ಆಗ್ರಹಿಸಿದ್ದಾರೆ. ಈ ಸಂಬಂಧ ಇನ್‌ಸ್ಟಾಗ್ರಾಂ, ಎಕ್ಸ್‌, ಫೇಸ್‌ಬುಕ್ ಅಥವಾ ಪತ್ರ ಚಳವಳಿಯ ಮೂಲಕ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಪ್ರಮುಖ ಪಕ್ಷಗಳ ಅಭ್ಯರ್ಥಿಗಳ ಗಮನ ಸೆಳೆಯಲು ಮುಂದಾಗಿದ್ದಾರೆ.

‘ದಕ್ಷಿಣ ಕನ್ನಡ ಜಿಲ್ಲೆ ಈಗ ಬರ ಪರಿಸ್ಥಿತಿ ಎದುರಿಸುತ್ತಿರುವುದಕ್ಕೆ ಎತ್ತಿನಹೊಳೆ ಯೋಜನೆ ಮೂಲ ಕಾರಣ. ಇದು ಜಿಲ್ಲೆಗೆ ಮಾರಕ ಎಂಬುದನ್ನು ಎಂಟು ವರ್ಷಗಳ ಹಿಂದೆಯೇ ಪರಿಸರ ಕಾರ್ಯಕರ್ತರು ಎಚ್ಚರಿಸಿದ್ದರು. ಆ ವೇಳೆ ಸಂಸದರು, ಎಲ್ಲ ಶಾಸಕರ ಗಮನ ಸೆಳೆಯಲಾಗಿತ್ತು. 2017ರಲ್ಲಿ ನೋಟಾ ಅಭಿಯಾನವನ್ನೂ ನಡೆಸಲಾಗಿತ್ತು. ರಾಜಕೀಯ ಒತ್ತಡದಿಂದ ಯೋಜನೆ ಅನುಷ್ಠಾನಗೊಳಿಸಿ, ಪಶ್ಚಿಮ ಘಟ್ಟದ ಹೃದಯ ಭಾಗವನ್ನೇ ಕಿತ್ತು ಛಿದ್ರ ಮಾಡಲಾಗಿದೆ. ಇನ್ನಾದರೂ ಎಚ್ಚೆತ್ತುಕೊಂಡು ಇಂತಹ ವಿನಾಶಕಾರಿ ಯೋಜನೆ ಕೈಬಿಡಬೇಕು. ಪಶ್ಚಿಮ ಘಟ್ಟದಲ್ಲಿ ಪರಿಸರಕ್ಕೆ ಮಾರಕವಾದ ಜಲವಿದ್ಯುತ್ ಯೋಜನೆ, ಗಣಿಗಾರಿಕೆ, ಒತ್ತುವರಿಯನ್ನು ಕಟ್ಟುನಿಟ್ಟಾಗಿ ತಡೆಯಬೇಕು. ಪರಿಸರ ಧಾರಣ ಶಕ್ತಿ ಮೀರಿ ಯೋಜನೆ ತಂದರೆ ಭವಿಷ್ಯಕ್ಕೆ ಅಪಾಯ’ ಎನ್ನುತ್ತಾರೆ ಪರಿಸರವಾದಿ ದಿನೇಶ್ ಹೊಳ್ಳ.

‘ಜನರು ಎಚ್ಚೆತ್ತುಕೊಂಡು, ಮನೆ ಬಾಗಿಲಿಗೆ ಮತ ಕೇಳಲು ಬಂದಾಗ, ಪರಿಸರ ರಕ್ಷಣೆಗೆ ರಾಜಕೀಯ ಪಕ್ಷಗಳ ಭರವಸೆ ಏನು ಎಂಬುದನ್ನು ಪ್ರಶ್ನಿಸಬೇಕು’ ಎಂಬುದು ಅವರ ಸಲಹೆ.

‘ಎತ್ತಿನ ಹೊಳೆ ಯೋಜನೆ ನಿಲ್ಲಲೇ ಬೇಕು. ಮಂಗಳೂರಿನ ಎಲ್ಲ ವೆಟ್‌ವೆಲ್‌ಗಳು ಸರಿಯಾಗಿ ಕಾರ್ಯನಿರ್ವಹಿಸಿ, ಯಾವುದೇ ರೀತಿಯ ತ್ಯಾಜ್ಯ ನೀರು ನೇತ್ರಾವತಿ, ಫಲ್ಗುಣಿ ನದಿ ಒಡಲು ಸೇರುವುದನ್ನು ತಪ್ಪಿಸಬೇಕು. ಪ್ರವಾಸೋದ್ಯಮ ಅಭಿವೃದ್ಧಿಯಲ್ಲಿ ನದಿ ನೀರು ಶುದ್ಧತೆಯೂ ಪ್ರಮುಖ ಪಾತ್ರವಹಿಸುತ್ತದೆ. ಎಲ್ಲ ವಿದ್ಯುತ್ ಮಾರ್ಗಗಳನ್ನು ಭೂಗತಗೊಳಿಸುವ ಮೂಲಕ ನಗರದ ನಡುವೆ ಹೆಚ್ಚು ಹಸಿರು ಬೆಳೆಸಲು ಅನುವು ಮಾಡಿಕೊಡಬೇಕು. ಚಾರ್ಮಾಡಿಯಿಂದ ಬಂಟ್ವಾಳದವರೆಗೆ ಯಾವ ನಗರದಲ್ಲೂ ವೆಟ್‌ವೆಲ್ ಇಲ್ಲವಾಗಿದೆ. ಹೀಗಾಗಿ ಎಲ್ಲ ರೀತಿಯ ಹೊಲಸು ನೀರು ನದಿ, ಹೊಳೆಗೆ ಸೇರುತ್ತದೆ. ಜನಪ್ರತಿನಿಧಿಯಾಗುವವರು ಇದರ ಬಗ್ಗೆ ಕ್ರಮವಹಿಸಬೇಕು. ಈ ಸಂಬಂಧ ರಾಜಕೀಯ ಪಕ್ಷಗಳ ಗಮನ ಸೆಳೆಯಲು ಪತ್ರ ಅಭಿಯಾನ ಅಥವಾ ಫೇಸ್‌ಬುಕ್ ಅಭಿಯಾನ ನಡೆಸಲು ಯೋಚಿಸುತ್ತಿದ್ದೇವೆ’ ಎನ್ನುತ್ತಾರೆ ಎನ್‌ಇಸಿಎಫ್ ಸಂಘಟನೆಯ ಕಾರ್ಯದರ್ಶಿ ಶಶಿಧರ್ ಶೆಟ್ಟಿ.

ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಿಗೆ ಪರಿಸರ ಕಾರ್ಯಕರ್ತರ ಬೇಡಿಕೆ ಒಳಗೊಂಡ ಪತ್ರ ಸಲ್ಲಿಸಿ, ಈ ಅಂಶಗಳನ್ನು ಪಕ್ಷದ ಪ್ರಣಾಳಿಕೆಯಲ್ಲಿ ಸೇರಿಸುವಂತೆ ಆಗ್ರಹಿಸಲಾಗುವುದು. ಅಲ್ಲದೆ, ಅದು ಅನುಷ್ಠಾನಕ್ಕೆ ಬರುವಂತೆಯೂ ಒತ್ತಡ ತರಲಾಗುವುದು ಎಂದು ತಿಳಿಸಿದರು.

‘ರಾಷ್ಟ್ರೀಯ ಹೆದ್ದಾರಿ ವಿಸ್ತರಣೆಯ ವೇಳೆ ಹೆಚ್ಚು ಮರಗಳ ಕಟಾವು ಮಾಡುವುದನ್ನು ತಡೆಗಟ್ಟಿ ಸ್ಥಳಾಂತರಬೇಕು ಎಂದು ಹೆದ್ದಾರಿ ಹಸಿರು ನೀತಿ ಹೇಳುತ್ತದೆ. ಒಂದು ಮರ ಕಡಿದರೆ 10 ಸಸಿಗಳನ್ನು ನಾಟಿ ಮಾಡಬೇಕು ಎಂಬ ನಿಯಮ ಇದೆ. ಇದು ಪಾಲನೆ ಆಗುತ್ತಿಲ್ಲ. ಈ ಬಗ್ಗೆ ನಾವು ಕಾನೂನು ಹೋರಾಟ ನಡೆಸುತ್ತಿದ್ದೇವೆ. ಮರ ಸಂರಕ್ಷಣೆ ಕಾಯ್ದೆ 1976ರ ಪ್ರಕಾರ, ಪ್ರತಿ ನಗರದಲ್ಲಿ ಮರ ಪ್ರಾಧಿಕಾರ (ಟ್ರೀ ಅಥಾರಿಟಿ) ರಚನೆಯಾಗಬೇಕು. ಕಾಯ್ದೆ ರಚನೆಯಾಗಿ 46 ವರ್ಷ ಕಳೆದರೂ ಇದು ಜಾರಿಗೊಂಡಿಲ್ಲ. ಜಿಲ್ಲೆಯ ಜನಪ್ರತಿನಿಧಿಯಾಗಿ ಆಯ್ಕೆಯಾಗುವವರು ಇನ್ನಾದರೂ, ಮರ ಪ್ರಾಧಿಕಾರ ರಚನೆಗೆ ಆಸಕ್ತಿ ತೋರಿ, ಹಸಿರು ಗೋಡೆ ನಿರ್ಮಾಣಕ್ಕೆ ಬದ್ಧತೆ ತೋರಬೇಕು’ ಎಂದು ಆಗ್ರಹಿಸುತ್ತಾರೆ ಸೊಸೈಟಿ ಫಾರ್ ಫಾರೆಸ್ಟ್, ಎನ್ವಿರಾನ್‌ಮೆಂಟ್, ಆ್ಯಂಡ್ ಕ್ಲೈಮೆಟ್ ಚೇಂಜ್‌ನ ಬೆನೆಡಿಕ್ಟ್ ಫರ್ನಾಂಡಿಸ್.

ಬೆಂಗಳೂರಿನಲ್ಲಿ ‘ಪರಿಸರಕ್ಕಾಗಿ ನಾವು’ ಸಂಘಟನೆಯವರು ಪರಿಸರ ಪ್ರಣಾಳಿಕೆ ರೂಪಿಸಲು ಒತ್ತಡ ಸೃಷ್ಟಿಸಿದಂತೆ, ಜಿಲ್ಲೆಯಲ್ಲೂ ಈ ಕಾರ್ಯ ನಡೆಸಲು ಪರಿಸರ ಕಾರ್ಯಕರ್ತರು ಯೋಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT