ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿಗರು ದಂಧೆಯಲ್ಲಿ ಜಾತ್ಯತೀತರು: ರಮಾನಾಥ ರೈ ಆರೋಪ

Last Updated 14 ನವೆಂಬರ್ 2020, 13:23 IST
ಅಕ್ಷರ ಗಾತ್ರ

ಮಂಗಳೂರು: ‘ಬಿಜೆಪಿಯವರು ಓಟಿಗಾಗಿ ಮಾತ್ರ ಹಿಂದೂ ರಕ್ಷಕರು. ವ್ಯಾಪಾರ–ದಂಧೆಯಲ್ಲಿ ಜಾತ್ಯತೀತರು’ ಎಂದು ಮಾಜಿ ಸಚಿವ ರಮಾನಾಥ ರೈ ವಾಗ್ದಾಳಿ ನಡೆಸಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬಂಟ್ವಾಳದ ಶಾಸಕ ರಾಜೇಶ್‌ ನಾಯ್ಕ್ ಅವರ ಪತ್ನಿ ಹೆಸರಿನಲ್ಲಿ ತೆಂಕ ಎಡಪದವಿನಲ್ಲಿ ಕಲ್ಲು ಗಣಿಗಾರಿಕೆಗೆ ಪರವಾನಗಿ ಪಡೆಯಲಾಗಿದೆ. ಆದರೆ, ಮುಡಿಪು ಪರಿಸರದಿಂದ ಅದಿರ(ಬಾಕ್ಸೈಟ್‌)ನ್ನು ಅಕ್ರಮವಾಗಿ ಬೇರೆ ರಾಜ್ಯಗಳಿಗೆ ಸಾಗಾಟ ಮಾಡಲಾಗುತ್ತಿದೆ. ಕೈರಂಗಳದ ಅಂದಿನ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹೆಸರಿನಲ್ಲೂ ಅಕ್ರಮ ಸಾಗಾಟ ಮಾಡಲಾಗಿದೆ. ಈ ದಂಧೆಯಲ್ಲಿ ಹಲವರು ಕೈ ಜೋಡಿಸಿದ್ದು, ವ್ಯಾಪಕ ಅಕ್ರಮ ನಡೆದಿದೆ’ ಎಂದು ಅವರು ಗಂಭೀರ ಆರೋಪ ಮಾಡಿದರು.

‘ಶಾಸಕರೊಬ್ಬರ ಸಂಬಂಧಿಯ ಅಕ್ರಮ ಗಣಿಗಾರಿಗೆ ಬಗ್ಗೆ ನಾನು ಆಪಾದಿಸಿದ್ದೆನು. ಆದರೆ, ಬಂಟ್ವಾಳ ಶಾಸಕರು ದಾಖಲೆ ಸಹಿತ ಸಾಬೀತು ಪಡಿಸುವಂತೆ ಸವಾಲು ಹಾಕಿ, ಅಕ್ರಮ ತಮ್ಮದೆಂದು ಒಪ್ಪಿಕೊಂಡಿದ್ದಾರೆ. ಅದಕ್ಕಾಗಿ ವಿವರ ಮುಂದಿಡುತ್ತಿದ್ದೇನೆ’ ಎಂದು ಅವರು ವಿವರಿಸಿದರು.

‘ಕೈರಂಗಳ ಪಿಡಿಒ ಹೆಸರಿನಲ್ಲಿ ಮುಡಿಪು ಪರಿಸರದಲ್ಲಿ ಭೂಮಿ ಸಮತಟ್ಟು ಮಾಡಲು ಅನುಮತಿ ಪಡೆಯಲಾಗಿದೆ. ಆದರೆ, ಅಲ್ಲಿಂದ ಅದಿರನ್ನು ಸಾಗಾಟ ಮಾಡಲಾಗುತ್ತಿದೆ. ಮುಡಿಪು ಹಾಗೂ ಸುತ್ತಲ ಪ್ರದೇಶಗಳಿಂದ ಬೇರೆ ರಾಜ್ಯಗಳಿಗೆ ಅವ್ಯಾಹತವಾಗಿ ಅದಿರು ಸಾಗಿಸುತ್ತಿರುವ ಬಗ್ಗೆ ದೂರುಗಳಿವೆ. ನಾನು ರಾಜ್ಯದ ಮುಖ್ಯ ಕಾರ್ಯದರ್ಶಿ ಅವರಿಗೆ ದೂರು ನೀಡಿದ್ದು, ಅವರು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ’ ಎಂದರು.

‘ಆರೋಪ ಸಾಬೀತು ಪಡಿಸಿದರೆ ರಾಜೀನಾಮೆ ನೀಡುವುದಾಗಿ ಶಾಸಕ ರಾಜೇಶ್ ನಾಯ್ಕ್ ಹೇಳಿದ್ದರು. ರೈತರಂತೆ ಫೋಸ್ ನೀಡುವ ಬಂಟ್ವಾಳ ಶಾಸಕರು, ವ್ಯಾಪಾರಿಯೋ? ರೈತರೋ? ಎಂದು ಅವರೇ ಹೇಳಲಿ’ ಎಂದು ಲೇವಡಿ ಮಾಡಿದರು.

‘ಬಾಳೆಪುಣಿ, ಇನೋಳಿ ಸೇರಿದಂತೆ ಕೇರಳದ ಗಡಿ ಭಾಗದಲ್ಲಿ ರೆಡ್‌ಬಾಕ್ಸೈಟ್ ಗಣಿಗಾರಿಕೆಯಲ್ಲಿ ಸ್ಥಳೀಯರೊಂದಿಗೆ ಕೇರಳ, ತಮಿಳುನಾಡು, ಆಂಧ್ರ ಪ್ರದೇಶದ ಧಂದೆಕೋರರು ಇದ್ದಾರೆ. ಇದು ಸಾರ್ವಜನಿಕ ಸಂಚಾರ, ಪರಿಸರದ ಮೇಲೂ ದುಷ್ಪರಿಣಾಮ ಬೀರುತ್ತಿದೆ. ಈ ಬಗ್ಗೆ ಉನ್ನತ ಮಟ್ಟದ ಸಮಗ್ರ ತನಿಖೆ ನಡೆಯಬೇಕಾಗಿದೆ’ ಎಂದರು.

ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಕಾಂಗ್ರೆಸ್ ಮುಖಂಡರಾದ ಐವನ್ ಡಿಸೋಜ, ಜೆ.ಆರ್.ಲೋಬೊ, ಶಶಿಧರ ಹೆಗ್ಡೆ, ಹರಿನಾಥ್, ಶಾಲೆಟ್ ಪಿಂಟೊ, ಸದಾಶಿವ ಉಳ್ಳಾಲ್, ವಿಶ್ವಾಸ್ ದಾಸ್, ಸುಧೀರ್ ಟಿ.ಕೆ., ಸಂತೋಷ್‌ ಶೆಟ್ಟಿ, ನಝೀರ್ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT