ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚುನಾವಣೆಯಲ್ಲಿ ರೈತರ ವಿಚಾರಕ್ಕೆ ಆದ್ಯತೆ ಸಿಗಲಿ: ಕಮ್ಮರಡಿ

Published 21 ಏಪ್ರಿಲ್ 2024, 6:08 IST
Last Updated 21 ಏಪ್ರಿಲ್ 2024, 6:08 IST
ಅಕ್ಷರ ಗಾತ್ರ

ಮಂಗಳೂರು: ‘ಚುನಾವಣೆ ಹತ್ತಿರವಾಗುತ್ತಿದ್ದಂತೆ ಭಾವನಾತ್ಮಕ ವಿಚಾರಗಳು ಹಾಗೂ ವಿಭಜಕ ನಿರೂಪಣೆಗಳ ಬದಲು ರೈತರ ವಿಚಾರಗಳಿಗೆ ಆದ್ಯತೆ ಸಿಗಬೇಕು. ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಸಿಗುವ ಬಗ್ಗೆ ಕಾನೂನಿನ ಖಾತರಿ ಪಡೆಯುವ ಅಗತ್ಯವಿದೆ’ ಎಂದು ಕೃಷಿ ಆರ್ಥಿಕ ತಜ್ಞ ಪ್ರಕಾಶ್‌ ಕಮ್ಮರಡಿ ಅಭಿಪ್ರಾಯಪಟ್ಟರು.

ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೃಷಿ  ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆಗೆ ಕಾನೂನಾತ್ಮಕವಾಗಿ ಖಾತರಿ ನೀಡುವ ಆಶ್ವಾಸನೆಯನ್ನು ಕಾಂಗ್ರೆಸ್‌ ಪಕ್ಷವು ನೀಡಿದೆ. ಆದರೆ, ಇದು ಘೋಷಣೆಯಾಗಿ ಉಳಿಯದೇ ಜಾರಿಯಾಗಬೇಕು. ನೊಂದಾಯಿತ ರೈತರಿಂದ ಬೆಂಬಲ ಬೆಲೆಯಲ್ಲೇ ದ್ವಿದಳ ಧಾನ್ಯ, ಜೋಳ, ಹತ್ತಿ ಖರೀದಿಸುವುದಾಗಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ತಿಳಿಸಿದೆ. ಕೃಷಿ ಕುರಿತ ವಿಚರಗಳು ಮುನ್ನೆಲೆಗೆ ಬಂದಿದ್ದು ಸ್ವಾಗತಾರ್ಹ’ ಎಂದರು.

'ಕರ್ನಾಟಕ ಕೃಷಿ ಬೆಲೆ ಆಯೋಗವು ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆಯ ಖಾತರಿ ಒದಗಿಸುವ ಬಗ್ಗೆ 2018ರಲ್ಲೇ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಇದಿನ್ನೂ ಅನುಷ್ಠಾನವಾಗಿಲ್ಲ. ಇದರ  ಅನುಷ್ಠಾನದಿಂದ ಸರ್ಕಾರಕ್ಕೆ ಭಾರಿ ಹೊರೆಯೇನೂ  ಆಗದು. ಸಕಾಲದಲ್ಲಿ ಮಧ್ಯಪ್ರವೇಶಿಸಿ ಸರ್ಕಾರವೇ ಕೃಷಿ ಉತ್ಪನ್ನ ಖರೀದಿ ಮಾಡಿದರೆ, ರೈತರಿಗೆ ಬೆಂಬಲ ಬೆಲೆ ಸಿಗುವಂತೆ ಮಾಡುವುದು ಕಷ್ಟವಲ್ಲ. ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳನ್ನು (ಎಪಿಎಂಸಿ ) ಬಲಪಡಿಸಿ, ಅವುಗಳ ಲೋಪ ನಿವಾರಿಸಿ ರೈತರಿಗೆ ಪಟ್ಟಭದ್ರ ಹಿತಾಸಕ್ತಿಗಳ ಕಪಿಮುಷ್ಠಿಯಿಂದ ಬಿಡುಗಡೆ ಕೊಡಿಸಬೇಕು’ ಎಂದು ಆಯೋಗದ ಮಾಜಿ ಅಧ್ಯಕ್ಷರೂ ಆಗಿರುವ ಕಮ್ಮರಡಿ ಒತ್ತಾಯಿಸಿದರು.

ಕೃಷಿ ಆರ್ಥಿಕ ತಜ್ಞ ಜಿ.ವಿ.ಸುಂದರ್‌, ‘ ಕಾರ್ಪೊರೇಟ್ ಸಂಸ್ಥೆಗಳ ಬಗ್ಗೆ ಭಾರಿ ಕಾಳಜಿವಹಿಸುವ ಕೇಂದ್ರ ಸರ್ಕಾರ ರೈತರು ಬರಗಾಲದಿಂದ ತತ್ತರಿಸಿದ್ದರೂ ನೆರವಿಗೆ ಬಂದಿಲ್ಲ. 2019 ರಿಂದ ಈಚೆಗೆ ಖಾಸಗಿ ಕಂಪನಿಗಳ ತೆರಿಗೆ ಕಡಿತದಿಂದ ಸರ್ಕಾರದ ಬೊಕ್ಕಸಕ್ಕೆ ₹ 1.75 ಲಕ್ಷ ಕೋಟಿ ಖೋತಾ ಆಗಿದೆ. ಕಾರ್ಪೊರೇಟ್‌ ಕಂಪನಿಗಳ ₹ 15 ಲಕ್ಷ ಕೋಟಿ ಸಾಲವನ್ನು ರೈಟ್ ಆಫ್ ಮಾಡಿದೆ. ಇಷ್ಟೆಲ್ಲ ನೆರವು ನೀಡಿದರೂ ದೇಶದಲ್ಲಿ ಉತ್ಪಾದನೆ ಮತ್ತು ರಫ್ತುಜಾಸ್ತಿಯಾಗಿಲ್ಲ’ ಎಂದು ಟೀಕಿಸಿದರು.

ಪ್ರಾಂತ ರೈತ ಸಂಘದ ದ.ಕ. ಜಿಲ್ಲಾ ಘಟಕದ ಅಧ್ಯಕ್ಷ ಯಾದವ ಶೆಟ್ಟಿ, ಮೂಡುಬಿದಿರೆ ತಾಲ್ಲೂಕು ಘಟಕದ ಅಧ್ಯಕ್ಷ ಆಲ್ವಿನ್‌ ಮಿನೇಜಸ್‌, ರಾಜ್ಯ ರೈತ ಸಂಘದ ಆದಿತ್ಯ ಕೊಲ್ಲಾಜೆ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT