ಎಸ್ಡಿಪಿಐ ಕಚೇರಿಗೆ ಬೆಂಕಿ: ಪ್ರತಿಭಟನೆ

ವಿಟ್ಲ: ವಲಯ ಎಸ್ಡಿಪಿಐ ಕಚೇರಿಗೆ ಕಿಡಿಗೇಡಿಗಳು ಬೆಂಕಿ ಹಾಕಿರುವ ಘಟನೆ ಇಲ್ಲಿನ ಮೇಗಿನಪೇಟೆಯಲ್ಲಿ ನಡೆದಿದೆ.
ಸೋಮವಾರ ಬೆಳಿಗ್ಗೆ ಈ ಕೃತ್ಯ ಬೆಳಕಿಗೆ ಬಂದಿದೆ. ಕಚೇರಿಯ ಮುಂಭಾಗದ ಬಾಗಿಲಿಗೆ ಬೆಂಕಿ ಹಚ್ಚಿದ್ದು, ಸ್ಥಳದಲ್ಲಿ ಪೇಂಟ್ ಡಬ್ಬಗಳು ಪತ್ತೆಯಾಗಿವೆ. ಪೇಂಟ್ ಹಚ್ಚಿ ಬೆಂಕಿ ಹಾಕಿದ್ದಾರೆಂಬ ಶಂಕೆ ವ್ಯಕ್ತವಾಗಿದೆ. ಕಚೇರಿಯ ಮುಂಭಾಗ ಹಾನಿಗೊಂಡಿದೆ. ಘಟನಾ ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿ, ಪರಿಶೀಲಿಸಿದ್ದಾರೆ.
ಪ್ರತಿಭಟನೆ
ವಿಟ್ಲ: ಇಲ್ಲಿನ ಎಸ್ಡಿಪಿಐ ಕಚೇರಿಗೆ ಬೆಂಕಿ ಹಚ್ಚಿದ ಘಟನೆಯನ್ನು ಖಂಡಿಸಿ ವಿಟ್ಲ ವಲಯ ಎಸ್ಡಿಪಿಐ ವತಿಯಿಂದ ಕಚೇರಿ ಮುಂಭಾಗದಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.
ಸಂಘ ಪರಿವಾರ ಮತ್ತು ಬಿಜೆಪಿ ವಿರುದ್ಧ ಘೋಷಣೆ ಕೂಗಿದ ಕಾರ್ಯಕರ್ತರು, ತಕ್ಷಣವೇ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿದರು. ಪ್ರತಿಭಟನಕಾರರು ರ್ಯಾಲಿ ನಡೆಸಲು ಮುಂದಾದಾಗ, ಸ್ಥಳಕ್ಕೆ ಬಂದ ಪೊಲೀಸರು ಪ್ರತಿಭಟನೆ ಹಿಂಪಡೆಯುವಂತೆ ಮನವಿ ಮಾಡಿದರು. ಎಸೈ ರಾಜೇಶ್ ಕೆ.ವಿ ಅವರು ಪ್ರತಿಭಟನಕಾರರ ಜತೆ ಮಾತುಕತೆ ನಡೆಸಿ ತಕ್ಷಣವೇ ಆರೋಪಿಗಳನ್ನು ಬಂಧಿಸುವುದಾಗಿ ಭರವಸೆ ನೀಡಿದ ಬಳಿಕ ಪ್ರತಿಭಟನೆ ಸ್ಥಗಿತಗೊಳಿಸಲಾಯಿತು.
ಎಸ್ಡಿಪಿಐ ಮುಖಂಡ ಖಲಂದರ್ ಪರ್ತಿಪ್ಪಾಡಿ ಮಾತನಾಡಿ, ‘ರಾಜ್ಯ ಹಾಗೂ ಜಿಲ್ಲೆಯಲ್ಲಿ ಪಕ್ಷದ ಬೆಳವಣಿಗೆಯನ್ನು ಸಹಿಸಲಾಗದ ತಂಡದಿಂದ ಈ ಕೃತ್ಯ ನಡೆದಿದೆ. ಇದರ ಹಿಂದೆ ಸಂಘ ಪರಿವಾರ, ಬಿಜೆಪಿ ಷಡ್ಯಂತ್ರ ಇದ್ದಂತಿದೆ’ ಎಂದು ದೂರಿದರು.
ಶಾಕೀರ್ ಅಳಕೆಮಜಲು ಮಾತನಾಡಿ, ‘ಪಕ್ಷವನ್ನು ದಮನ ಮಾಡಲು ಈ ರೀತಿ ಕೃತ್ಯ ಮಾಡಿದರೆ ನಾವು ಜಗ್ಗುವುದಿಲ್ಲ. ಬಿಜೆಪಿಯ ಕೆಲವು ನಾಯಕರ ಪ್ರಚೋದನಕಾರಿ ಹೇಳಿಕೆಗಳಿಂದ ಇಂತಹ ಕೃತ್ಯಗಳು ನಡೆಯುತ್ತಿವೆ’ ಎಂದರು. ಪುತ್ತೂರು ನಗರ ಸಮಿತಿ ಅಧ್ಯಕ್ಷ ಬಶೀರ್ ಕೂರ್ನಡ್ಕ, ಅಝೀಜ್ ಕಡಂಬು ರಹೀಂ ವಿಟ್ಲ, ರಫೀಕ್ ಪೊನ್ನೋಟ್ಟು ಇದ್ದರು.
ಪ್ರಜಾವಾಣಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.