ಗುರುವಾರ , ಜೂನ್ 4, 2020
27 °C
ಫಸ್ಟ್‌ ನ್ಯೂರೋ ಆಸ್ಪತ್ರೆ ಮುಖ್ಯಸ್ಥ ಡಾ.ರಾಜೇಶ್‌ ಶೆಟ್ಟಿ ಸ್ಪಷ್ಟನೆ

ಮಂಗಳೂರು: ಸೋಂಕು ಎರಡೇ ಕೋಣೆಗೆ ಸೀಮಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಮಂಗಳೂರು: ‘ನಮ್ಮ ಆಸ್ಪತ್ರೆಯೇ ಸೋಂಕಿನ ಮೂಲವಾಗಿದ್ದರೆ, ಆಸ್ಪತ್ರೆಯಲ್ಲಿರುವ 200 ಮಂದಿಗೆ ಕೋವಿಡ್–19 ಸೋಂಕು ತಗಲಬೇಕಿತ್ತು. ಆದರೆ, ಎಲ್ಲರ ವರದಿಯೂ ನೆಗೆಟಿವ್‌ ಬಂದಿದೆ’ ಎಂದು ಫಸ್ಟ್‌ ನ್ಯೂರೋ ಆಸ್ಪತ್ರೆ ಮುಖ್ಯಸ್ಥ ಡಾ.ರಾಜೇಶ್‌ ಶೆಟ್ಟಿ ಸ್ಪಷ್ಟಪಡಿಸಿದ್ದಾರೆ.

‘ಪ್ರಜಾವಾಣಿ’ ಜತೆ ಮಾತನಾಡಿದ ಅವರು, ‘ಆಸ್ಪತ್ರೆಯ ಎಲ್ಲ ಸಿಬ್ಬಂದಿಯ ಗಂಟಲು ದ್ರವದ ಮಾದರಿಯ ಪರೀಕ್ಷೆ ನಡೆಸಲಾಗಿದೆ. ಎರಡೂ ವರದಿಗಳು ನೆಗೆಟಿವ್‌ ಬಂದಿದೆ. ಒಬ್ಬರು ಸ್ವೀಪರ್‌ಗೆ ಮಾತ್ರ ಸೋಂಕು ದೃಢಪಟ್ಟಿತ್ತು. ಇದೀಗ ಅವರೂ ಗುಣಮುಖರಾಗಿದ್ದಾರೆ’ ಎಂದು ಹೇಳಿದರು.

‘ಪಾರ್ಶ್ವವಾಯುವಿಗೆ ತುತ್ತಾಗಿದ್ದ ಬಂಟ್ವಾಳದ ಕಸಬಾ ಗ್ರಾಮದ 78 ವರ್ಷದ ಮಹಿಳೆ ನಮ್ಮ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆ ಕೊಠಡಿ ಹಾಗೂ ಅವರ ಪಕ್ಕದ ಕೊಠಡಿಗೆ ಸೋಂಕು ಸೀಮಿತವಾಗಿದೆ. 78 ವರ್ಷದ ಮಹಿಳೆ ಮಾರ್ಚ್‌ 16ರಂದು ಆಸ್ಪತ್ರೆಗೆ ಬಂದಿದ್ದರು. ಏಪ್ರಿಲ್‌ 1ರವರೆಗೂ ಅವರು ತೀವ್ರ ನಿಗಾ ಘಟಕದಲ್ಲಿದ್ದರು. ಏ.1ರಂದು ವಾರ್ಡ್‌ಗೆ ಸ್ಥಳಾಂತರಿಸಿದ್ದರು. ಏ.2ರಂದು ಅವರ ಸೊಸೆ (ಪಿ–390) ಆಸ್ಪತ್ರೆಗೆ ಬಂದಿದ್ದು, ಎರಡು ಗಂಟೆ ಕೊಠಡಿಯಲ್ಲಿದ್ದರು’ ಎಂದು ತಿಳಿಸಿದರು.

‘ಏ.19ರಂದು ಬಂಟ್ವಾಳದ 50 ವರ್ಷದ ಮಹಿಳೆ ಕೋವಿಡ್‌–19 ಸೋಂಕಿನಿಂದ ಮೃತಪಟ್ಟ ಬಳಿಕ ಪೊಲೀಸರು ನಮ್ಮ ಆಸ್ಪತ್ರೆಗೆ ಬಂದರು. ನಂತರವೇ ನಮಗೆ ವಿಷಯ ತಿಳಿಯಿತು. ಆ ಮೇಲೆ ಅವರ ಅತ್ತೆಯಲ್ಲೂ ಸೋಂಕು ದೃಢಪಟ್ಟಿತು. ಬಂಟ್ವಾಳದ ಮಹಿಳೆ ಇದ್ದ ಕೊಠಡಿಯಲ್ಲೇ ಮತ್ತೊಂದು ಹಾಸಿಗೆಯಲ್ಲಿ ಚಿಕಿತ್ಸೆ ಪಡೆದ ಮಹಿಳೆ ಮತ್ತು ಅವರ ಮಗನಿಗೆ ಕೋವಿಡ್‌–19 ಸೋಂಕು ತಗಲಿದೆ. ಅಲ್ಲಿ ಕೆಲಸ ಮಾಡಿದ ನಮ್ಮ ಸಿಬ್ಬಂದಿಯೊಬ್ಬರಿಗೂ ಸೋಂಕು ತಗಲಿತ್ತು. ಬಂಟ್ವಾಳದ ಮಹಿಳೆಯ ಪಕ್ಕದ ಮನೆಯವರಿಗೂ ಸೋಂಕು ದೃಢಪಟ್ಟಿದೆ’ ಎಂದು ವಿವರಿಸಿದರು.

‘ನಮ್ಮ ಆಸ್ಪತ್ರೆಯೇ ಸೋಂಕಿನ ಮೂಲ ಎನ್ನಲಾಗದು. ಆಸ್ಪತ್ರೆಯಲ್ಲಿ ಇರುವವರ ವರದಿ ನೆಗೆಟಿವ್‌ ಬಂದಿದೆ. ಹೀಗಾಗಿ ನಮ್ಮ ಸ್ಪಷ್ಟನೆಯನ್ನು ಶೀಘ್ರದಲ್ಲಿಯೇ ಮಾಧ್ಯಮಗಳ ಮುಂದೆ ಇಡಲಿದ್ದೇವೆ’ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು