ಬುಧವಾರ, ಆಗಸ್ಟ್ 4, 2021
28 °C

ಕೋಸ್ಟಲ್‌ ಬರ್ತ್‌ ನಿರ್ಮಾಣಕ್ಕೆ ವಿರೋಧ: ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಸಾಗರ ಮಾಲಾ ಯೋಜನೆಯಡಿ ಕೋಸ್ಟಲ್ ಬರ್ತ್ ನಿರ್ಮಾಣದಿಂದ ಸ್ಥಳೀಯ ಸಾಂಪ್ರದಾಯಿಕ ನಾಡದೋಣಿ ಮೀನುಗಾರಿಕೆಗೆ ತೊಂದರೆಯಾಗಲಿದೆ ಎಂದು ಆರೋಪಿಸಿ ಫಲ್ಗುಣಿ ಸಾಂಪ್ರದಾಯಿಕ ಮೀನುಗಾರರ ಸಂಘದ ನೇತೃತ್ವದಲ್ಲಿ ಬೆಂಗರೆಯಲ್ಲಿ ಶುಕ್ರವಾರ ಮೀನುಗಾರರು ದೋಣಿ ಹಾಗೂ ಮನೆಗಳಲ್ಲಿ ವಿನೂತನ ಪ್ರತಿಭಟನೆ ನಡೆಸಿದರು.

ಬೆಂಗರೆಯ ಫಲ್ಗುಣಿ ನದಿ ತೀರದಲ್ಲಿ ದೋಣಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಸಂಘದ ಗೌರವಾಧ್ಯಕ್ಷ ಮುನೀರ್ ಕಾಟಿಪಳ್ಳ, ಕೋಸ್ಟಲ್ ಬರ್ತ್ ಜಾರಿಗೊಂಡರೆ ಫಲ್ಗುಣಿ, ನೇತ್ರಾವತಿ ನದಿಗಳಲ್ಲಿ ಮೀನುಗಾರಿಕೆ ನಡೆಸುವ 600 ನಾಡದೋಣಿ ಮೀನುಗಾರರು ಹಾಗೂ ಮಂಗಳೂರು ಮೀನುಗಾರಿಕಾ ದಕ್ಕೆಯಲ್ಲಿ ಬೋಟ್‌ ಮೀನುಗಾರರು ತೊಂದರೆ ಅನುಭವಿಸಲಿದ್ದಾರೆ’ ಎಂದರು.

ಕೇಂದ್ರ ಸರ್ಕಾರದ ಸಾಗರಮಾಲಾ ಯೋಜನೆ ಬೆಂಗರೆ ಪ್ರದೇಶಕ್ಕೆ ಮಾತ್ರ ಸೀಮಿತವಾಗಿಲ್ಲ. ಇದು ರಾಜ್ಯದ ಮೂರು ಜಿಲ್ಲೆಗಳ ಕರಾವಳಿ ತೀರಕ್ಕೆ ಸಮಸ್ಯೆ ಆಗಲಿದೆ. ಹೊನ್ನಾವರ, ಕಾರವಾರದಲ್ಲಿ ಈಗಾಗಲೇ ಸಾಗರಮಾಲಾ ಯೋಜನೆ ಜಾರಿಗೊಳ್ಳುತ್ತಿದೆ. ಇದನ್ನು ವಿರೋಧಿಸಿ ಹೋರಾಟವೂ ನಡೆಯುತ್ತಿದೆ. ಆದರೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮೀನುಗಾರರ ಹೋರಾಟವನ್ನು ಹತ್ತಿಕ್ಕಲು ಪೊಲೀಸ್ ಬಲ ಪ್ರಯೋಗಿಸುತ್ತಿದೆ. ಹೊನ್ನಾವರದಲ್ಲಿ ಇತ್ತೀಚೆಗೆ ಲಾಠಿ ಪ್ರಹಾರ ಮಾಡಿ ಹೋರಾಟಗಾರರ ಧ್ವನಿಯಡಗಿಸುವ ಪ್ರಯತ್ನ ಮಾಡಿದೆ ಎಂದು ದೂರಿದರು.

ಕೇಂದ್ರ ಹಾಗೂ ರಾಜ್ಯದ ಬಿಜೆಪಿ ಸರ್ಕಾರ ಮೀನುಗಾರರು ಸೇರಿದಂತೆ ದುಡಿಯುವ ಜನರ ಸಮಸ್ಯೆಗಳನ್ನು ಆಲಿಸದೆ, ಕಾರ್ಪೊರೇಟ್ ಶಕ್ತಿಗಳ ಪರವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಆರೋಪಿಸಿದರು.

ಬೆಂಗರೆಯಲ್ಲಿ ಕೋಸ್ಟಲ್ ಬರ್ತ್ ಕಾಮಗಾರಿ ಆರಂಭ ಆದಾಗಲೇ ಮನವಿ ಸಲ್ಲಿಸಿ, ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡಲಾಗಿದೆ. ಆದರೆ ಸಮಸ್ಯೆ, ಮನವಿಗಳಿಗೆ ಗಮನ ನೀಡದೆ ಪೊಲೀಸ್ ಬಂದೋಬಸ್ತ್‌ನಲ್ಲಿ ಕಾಮಗಾರಿ ಆರಂಭವಾಗಿದ್ದು, ಇದೀಗ ಶಾಂತಿಯುತ ಪ್ರತಿಭಟನೆಯ ಮೂಲಕ ಸರ್ಕಾರದ ಗಮನ ಸೆಳೆಯಲಾಗುತ್ತಿದೆ ಎಂದು ಹೇಳಿದರು.

ಡಿವೈಎಫ್‌ಐ ಮುಖಂಡರಾದ ಸಂತೋಷ್‌ಕುಮಾರ್ ಬಜಾಲ್, ಬಿ.ಕೆ. ಇಮ್ತಿಯಾಝ್, ಸಂಘದ ಅಧ್ಯಕ್ಷ ಅಬ್ದುಲ್ ತಯ್ಯೂಬ್ ಬೆಂಗರೆ, ಸಂತೋಷ್‌, ಮೀನುಗಾರರು ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು