ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು | ಲಾಕ್‌ಡೌನ್ ಎಫೆಕ್ಟ್‌: ಯುಗಾದಿ ಬಳಿಕ ಮೀನೂ ಇಲ್ಲ!

ಮೀನುಗಾರಿಕೆಗೂ ನಿಷೇಧ
Last Updated 23 ಮಾರ್ಚ್ 2020, 18:31 IST
ಅಕ್ಷರ ಗಾತ್ರ

ಮಂಗಳೂರು: ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಮೀನುಗಾರಿಕೆ ನಿಲ್ಲಿಸಲು ಆದೇಶ ನೀಡಿರುವ ದಕ್ಷಿಣ ಕನ್ನಡ ಜಿಲ್ಲಾಡಳಿತವು, ಬೋಟುಗಳಿಗೆ ಸಬ್ಸಿಡಿ ಡೀಸೆಲ್ ಪೂರೈಕೆಯನ್ನು ಸೋಮವಾರ ಸ್ಥಗಿತಗೊಳಿಸಿದೆ. ಇದರಿಂದಾಗಿ ಯುಗಾದಿ (ಮಾ.25) ಬಳಿಕ ಮತ್ಸ್ಯೋದ್ಯಮವು ಸಂಪೂರ್ಣ ಸ್ಥಗಿತಗೊಳ್ಳಲಿದೆ.

ಮೀನುಗಾರಿಕಾ ಇಲಾಖೆಯು ಬೋಟುಗಳಿಗೆ ಡೀಸೆಲ್ ಪೂರೈಕೆಯನ್ನು ನಿಲ್ಲಿಸಿದ್ದು, ಕಡಲಿಗೆ ತೆರಳದಂತೆ ಸೂಚನೆ ನೀಡಿದೆ. ಈಗಾಗಲೇ ಆಳ ಸಮುದ್ರಕ್ಕೆ ಹಲವು ಬೋಟ್‌ಗಳು ಹೋಗಿದ್ದು, ಅವುಗಳನ್ನು ಮಾ.25ರೊಳಗೆ ವಾಪಸ್ ಬರುವಂತೆ ಕರೆಯಿಸಿಕೊಳ್ಳಲಾಗುತ್ತಿದೆ. ಅಂದಿನಿಂದ ಸರ್ಕಾರದ ಮುಂದಿನ ಆದೇಶದ ತನಕ ‘ಮತ್ಸ್ಯೋದ್ಯಮ’ ಸ್ಥಗಿತಗೊಳ್ಳಲಿದೆ.

‘ಜಿಲ್ಲೆಯಲ್ಲಿ ಸುಮಾರು 1,300 ಬೋಟ್‌ಗಳಿದ್ದು, ಸದ್ಯ ಸುಮಾರು 400ಕ್ಕೂ ಹೆಚ್ಚು ಆಳ ಸಮುದ್ರದಲ್ಲಿವೆ. ಅವು ಒಂದು ಬಾರಿ ತೆರಳಿದರೆ, ಸುಮಾರು 10 ದಿನಗಳಷ್ಟು ಸಮುದ್ರ ಮಧ್ಯದಲ್ಲಿ ಲಂಗರು ಹಾಕಿರುತ್ತವೆ. ಅವುಗಳನ್ನು ನಾವು ಬೇಗನೇ ಕರೆಯಿಸಿಕೊಳ್ಳಬೇಕಾಗಿದೆ’ ಎಂದು ಮಂಗಳೂರು ಟ್ರಾವೆಲ್‌ ಬೋಟ್ ಯೂನಿಯನ್ ಜಂಟಿ ಕಾರ್ಯದರ್ಶಿ ಸಂದೀಪ್ ಪುತ್ರನ್ ತಿಳಿಸಿದರು.

ಪ್ರತಿ ಬೋಟ್‌ನಲ್ಲಿ 10 ಮಂದಿಯಂತೆ ಸುಮಾರು 13 ಸಾವಿರ ಮಂದಿ ಕಾರ್ಮಿಕರು ಇದ್ದಾರೆ. ಬೋಟಿನಿಂದ ಮೀನು ಇಳಿಸುವ ಕಾರ್ಮಿಕರು, ಮಾರಾಟಗಾರರು, ಏಲಂ ಹಾಕುವವರು, ಇತರ ದಿನಗೂಲಿಗಳು ಸೇರಿದಂತೆ ಸುಮಾರು 25ರಿಂದ 30 ಸಾವಿರಕ್ಕೂ ಅಧಿಕ ಮಂದಿ ಯಾವುದೇ ಭದ್ರತೆ ಇಲ್ಲದೇ ಈ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ. ಅವರೆಲ್ಲರ ಬದುಕು ಅತಂತ್ರವಾಗಿದೆ ಎಂದು ಮೀನುಗಾರರು ನೋವು ತೋಡಿಕೊಂಡರು.

ಮೀನುಗಾರಿಕೆ ಮಾಡುವ ಶೇ 99ರಷ್ಟು ಕಾರ್ಮಿಕರು ತಮಿಳುನಾಡು, ಒಡಿಶಾ, ಆಂಧ್ರಪ್ರದೇಶದವರು. ಅವರಿಗೆ ಊರಿಗೆ ತೆರಳಲು ರೈಲು, ಬಸ್ ಸಂಚಾರವಿಲ್ಲ. ಅವರನ್ನು ಒಂದು ವಾರ ಇಲ್ಲಿಯೇ ಇರಿಸಿಕೊಳ್ಳುವುದೂ ಕಷ್ಟ. ಪ್ರತಿನಿತ್ಯದ ಪಡಿತರ ಹಾಗೂ ಇತರ ಖರ್ಚುಗಳಿವೆ. ಮೀನುಗಾರಿಕೆ ಸ್ಥಗಿತದ ಜೊತೆ ಇಂತಹ ತೊಂದರೆಗಳು ಇನ್ನಷ್ಟು ಸಮಸ್ಯೆಗೆ ಈಡುಮಾಡಿವೆ ಎನ್ನುತ್ತಾರೆ ಬೋಟ್ ಮಾಲೀಕರು.

ರಫ್ತು:ಮಂಗಳೂರು ಕಡಲಿನ ಮದಿಮಾಲ್, ಬೊಂಡಾಸ್, ಅರಣೆ ಮತ್ತಿತರ ಮೀನುಗಳಿಗೆ ಚೀನಾ, ಐರೋಪ್ಯ ರಾಷ್ಟ್ರಗಳು, ಜಪಾನ್ ಮತ್ತಿತರ ದೇಶಗಳಲ್ಲಿ ಭಾರಿ ಬೇಡಿಕೆ ಇದೆ. ಅಲ್ಲಿ ಕೊರೊನಾ ಮುನ್ನೆಚ್ಚರಿಕೆಗಳನ್ನು ಕೈಗೊಳ್ಳಲು ಆರಂಭಿಸಿದ ಬಳಿಕ ರಫ್ತು ಕುಂಠಿತಗೊಂಡಿತ್ತು. ಈಗ ವಿಮಾನ ಮತ್ತು ಹಡಗು ಯಾನಗಳೂ ಸ್ಥಗಿತಗೊಂಡಿದ್ದು, ರಫ್ತು ನಿಂತಿದೆ. ಹೆಚ್ಚಿನ ಹಡಗುಗಳು ಸಿಂಗಾಪುರಕ್ಕೆ ಹೋಗಿ, ಅಲ್ಲಿಂದ ಬೇರೆ ದೇಶಗಳಿಗೆ ರವಾನಿಸಲಾಗುತ್ತಿತ್ತು. ಸದ್ಯ ನಿಷಿದ್ಧವಾಗಿದೆ.

ಸಾಗಾಟ–ಕಾರ್ಖಾನೆ:ಬಂಗುಡೆ, ಬೂತಾಯಿ, ಅಂಜಲ್, ಮಾಂಜಿ ಇತ್ಯಾದಿ ಮೀನುಗಳು ಕೇರಳ, ತಮಿಳುನಾಡು ಹಾಗೂ ರಾಜ್ಯದ ಪ್ರಮುಖ ನಗರಗಳ ಮಾರುಕಟ್ಟೆಗೆ ಸರಬರಾಜು ಆಗುತ್ತಿತ್ತು. ನಗರದಲ್ಲಿ 15 ಫಿಶ್ ಮೀಲ್ಸ್ ಕಾರ್ಖಾನೆಗಳಿದ್ದರೆ, ಬೇರೆ ಜಿಲ್ಲೆ ಹಾಗೂ ರಾಜ್ಯಗಳಲ್ಲೂ ಇವೆ. ಅಲ್ಲಿಗೆ ಮೀನು ರವಾನೆಯಾಗುತ್ತಿತ್ತು. ಈಗ ಈಗ ಅವು ಹೋಗುತ್ತಿಲ್ಲ. ಇದರಿಂದಾಗಿ ಈಗಾಗಲೇ ಕುಸಿತ ಕಂಡಿರುವ ಮತ್ಸ್ಯೋದ್ಯಮ, ಇನ್ನಷ್ಟು ಸಂಕಷ್ಟಕ್ಕೀಡಾಗಿದೆ.

ಮೀನು ಸ್ವಚ್ಛಗೊಳಿಸುವವರು:ತಮಿಳುನಾಡಿನ ಮೀನುಗಾರರ ಜೊತೆಗೆ ಬರುವ ಕುಟುಂಬದ ಮಹಿಳೆಯರು ಹಾಗೂ ಹಿರಿಯರು ಬಂದರಿನ ಮೀನು ಮಾರುಕಟ್ಟೆಯಲ್ಲಿ ಮೀನು ಸ್ವಚ್ಛಗೊಳಿಸುವ, ಸಾಗಾಟಕ್ಕೆ ನೆರವಾಗುವ, ಮಾರಾಟ ಮಾಡುವ ಮತ್ತಿತರ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅಂತಹ ಸುಮಾರು 200ಕ್ಕೂ ಹೆಚ್ಚು ಮಂದಿ ಪೊಯ್ಯೆಕಂಡದಲ್ಲಿ ವಾಸ್ತವ್ಯವಿದ್ದು, ಅವರಿಗೆ ದೈನಂದಿನ ಬದುಕಿನ ಆತಂಕ ಕಾಡಿದೆ.

‘ನಮಗೆ ಏನು ಮಾಡಬೇಕು ಎಂದು ತಿಳಿಯುತ್ತಿಲ್ಲ. ದಿನದ ದುಡಿಮೆ ಇಲ್ಲದೇ ಮಂಗಳೂರಿನಲ್ಲಿ ಬದುಕುವುದಾದರೂ ಹೇಗೆ?’ ಎಂದು ತಮಿಳುನಾಡು ಸೇಲಂನ ವೇಲಮ್ಮ ಪ್ರಶ್ನಿಸಿದರು.

‘ಮಾ.25ರ ಬಳಿಕ ಮೀನು ಬರುವುದಿಲ್ಲ ಎಂದು ತಿಳಿಸಿದ್ದಾರೆ. ಹೀಗಾಗಿ, ಯುಗಾದಿ ದಿನದಂದೇ ಮೀನು ಮಾರುಕಟ್ಟೆ ಕೊನೆಯಾಗಬಹುದು. ಮತ್ತೆ ಕಾದು ನೋಡಬೇಕು’ ಎಂದು ಮೀನು ಮಾರಾಟ ಮಾಡುತ್ತಿದ್ದ ಶೋಭಾ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT