ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು | ಯಾಂತ್ರೀಕೃತ ಮೀನುಗಾರಿಕೆ ಮುಕ್ತಾಯ: ಲಂಗರು ಹಾಕಿದ ಬೋಟ್‌ಗಳು

ಮತ್ಸ್ಯ ಸಂಪತ್ತು ಹೆಚ್ಚಿದರೂ, ಮೀನುಗಾರರಿಗೆ ದಕ್ಕದ ಲಾಭ
Last Updated 15 ಜೂನ್ 2020, 13:21 IST
ಅಕ್ಷರ ಗಾತ್ರ

ಮಂಗಳೂರು: ಈ ಋತುವಿನ (2019–20) ಯಾಂತ್ರೀಕೃತ ಮೀನುಗಾರಿಕೆ ಸೋಮವಾರ ಮುಕ್ತಾಯಗೊಂಡಿದ್ದು, ಮೀನುಗಾರಿಕಾ ದಿನಗಳ ನಷ್ಟದ ನಡುವೆಯೂ ಅತಿ ಹೆಚ್ಚು ಮತ್ಸ್ಯ ಸಂಪತ್ತು ಲಭ್ಯವಾಗಿದೆ. ಆದರೆ, ಬೋಟ್‌ಗಳ ಸಂಖ್ಯೆ ಹೆಚ್ಚಿದ ಪರಿಣಾಮ ಮೀನುಗಾರರ ವೈಯಕ್ತಿಕ ಗಳಿಕೆ ಇಳಿಕೆಯಾಗಿದೆ.

ಜೂನ್‌ 15ರಿಂದ ಜುಲೈ 31ರ ವರೆಗೆ (47 ದಿನಗಳು) ಯಾಂತ್ರೀಕೃತ ಮೀನುಗಾರಿಕೆಗೆ ನಿಷೇಧ ಹೇರಲಾಗಿದ್ದು, ಬೋಟ್‌ಗಳು ಲಂಗರು ಹಾಕಿವೆ. ಈ ಅವಧಿಯಲ್ಲಿ 10 ಅಶ್ವಶಕ್ತಿ ಸಾಮರ್ಥ್ಯದೊಳಗಿನ ನಾಡದೋಣಿಗಳಿಗೆ ಮಾತ್ರ ಹವಾಮಾನ ಇಲಾಖೆಯ ಮುನ್ಸೂಚನೆ ಆಧರಿಸಿಕೊಂಡು ಮೀನುಗಾರಿಕೆಗೆ ಅವಕಾಶ ನೀಡಲಾಗಿದೆ.

ಪ್ರತಿ ವರ್ಷ ಆಗಸ್ಟ್ 1ಕ್ಕೆ ಮೀನುಗಾರಿಕೆ ಆರಂಭಗೊಳ್ಳುತ್ತದೆ. ಈ ಋತುವಿನಲ್ಲಿ ಚಂಡಮಾರುತದ ಪರಿಣಾಮ 2019ರ ಆಗಸ್ಟ್‌ 15ಕ್ಕೆ ಆರಂಭಗೊಂಡಿತ್ತು. ಅಲ್ಲದೇ, ಕೊರೊನಾ ಪರಿಣಾಮ 2020ರ ಮಾರ್ಚ್‌ 25ರಿಂದ ಮೀನುಗಾರಿಕೆ ನಿಷೇಧಿಸಿದ್ದು, ಮಾರ್ಚ್‌ 23ರ ಬಳಿಕ ಬೋಟ್‌ಗಳಿಗೆ ತೆರಳಲು ಅವಕಾಶ ನೀಡಿರಲಿಲ್ಲ.

ಮೇ 14ರಿಂದ 110 ಅಶ್ವಶಕ್ತಿ ಸಾಮರ್ಥ್ಯದೊಳಗಿನ ಸಣ್ಣ ಯಾಂತ್ರೀಕೃತ ದೋಣಿಗಳಲ್ಲಿ ಮೀನುಗಾರಿಕೆ ನಡೆಸಲು ಮೀನುಗಾರಿಕಾ ಇಲಾಖೆ ಷರತ್ತುಬದ್ಧ ಅನುಮತಿ ನೀಡಿತ್ತು. ಬಳಿಕ ಲಾಕ್‌ಡೌನ್ ನಷ್ಟ ಪರಿಹಾರವಾಗಿ ಜೂನ್‌ 15ರ ತನಕ ಮೀನುಗಾರಿಕೆಗೆ ಅವಕಾಶ ವಿಸ್ತರಿಸಿತ್ತು.

ಪ್ರತಿ ವರ್ಷ ಮೀನುಗಳ ಸಂತಾನೋತ್ಪತ್ತಿಯ ಅವಧಿಯ ಜೂನ್‌ 1ರಿಂದ ಜುಲೈ 31ರತನಕ ಯಾಂತ್ರೀಕೃತ ಮೀನುಗಾರಿಕೆಗೆ ನಿಷೇಧ ಇರುತ್ತದೆ.

ನಿಷೇಧದ ಅವಧಿಯಲ್ಲಿ 10 ಎಚ್‌ಪಿಗಿಂತ ಹೆಚ್ಚಿನ ಸಾಮರ್ಥ್ಯದ ಬೋಟ್‌ಗಳು ಮೀನುಗಾರಿಕೆ ನಡೆಸಬಾರದು. ಇದರಿಂದಾಗಿ ಪರ್ಸೀನ್, ಟ್ರಾಲ್ ಬೋಟ್‌ಗಳು ಮೀನುಗಾರಿಕೆಗೆ ಇಳಿಯುವುದಿಲ್ಲ. ಆಳ ಸಮುದ್ರ ಮೀನುಗಾರಿಕೆ ಇಲ್ಲದ ಕಾರಣ, ಮೀನಿನ ಆವಕವೂ ವಿರಳವಾಗುತ್ತದೆ. ಈ ಬಾರಿ ದರ ಹೆಚ್ಚುವ ಸಾಧ್ಯತೆಯೂ ಇದೆ.

ಕೊರೊನಾ ಕರಿಛಾಯೆ:ಮಂಗಳೂರಿನ ಧಕ್ಕೆಯಿಂದ ಕಾರ್ಯಾಚರಿಸುವ 1,200 ಟ್ರಾಲ್ ಬೋಟ್‌ಗಳಿದ್ದು, ಆಂಧ್ರಪ್ರದೇಶ, ತಮಿಳುನಾಡು, ಒಡಿಶಾ ರಾಜ್ಯಗಳ ಕಾರ್ಮಿಕರೇ ಹೆಚ್ಚಾಗಿದ್ದಾರೆ. ಅವರೆಲ್ಲ, ಲಾಕ್‌ಡೌನ್ ಸಂದರ್ಭ ತವರೂರಿಗೆ ವಾಪಸ್ ಆಗಿದ್ದರು. ಮುಂದಿನ ತಿಂಗಳಲ್ಲಿ ಆ ರಾಜ್ಯಗಳಲ್ಲಿ ಕೊರೊನಾ ಸೋಂಕು ಹೆಚ್ಚಿದರೆ, ವಾಪಸ್ ಬರುವ ನಿರೀಕ್ಷೆ ಇಲ್ಲ ಎಂದು ಮೀನುಗಾರಿಕಾ ಉದ್ಯಮದ ಮುಖಂಡರು ಆತಂಕ ವ್ಯಕ್ತಪಡಿಸುತ್ತಾರೆ.

‘ಕೊರೊನಾ, ಚಂಡಮಾರುತ ಹಾಗೂ ಅಸೋಸಿಯೇಷನ್‌ಗೆ ಸೇರದವರು ಅನಧಿಕೃತವಾಗಿ ಲೈಟ್‌ ಫಿಶಿಂಗ್ ಮಾಡಿದ ಪರಿಣಾಮ ಮೀನುಗಾರರಿಗೆ ಈ ಬಾರಿ ನಷ್ಟ ಉಂಟಾಗಿದೆ’ ಎನ್ನುತ್ತಾರೆ ಟ್ರಾಲ್ ಬೋಟ್ ಅಸೋಸಿಯೇಷನ್‌ನ ಸಂದೀಪ್ ಪುತ್ರನ್.

ಹೆಚ್ಚಿದ ಬೋಟ್ ಸಂಖ್ಯೆ:‘ಮಂಗಳೂರಿನಲ್ಲಿ ಬೋಟ್‌ಗಳ ಸಂಖ್ಯೆ ಹೆಚ್ಚಾಗಿದೆ. ಇದರಿಂದಾಗಿ ಒಟ್ಟು ಮೀನಿನ ಲಭ್ಯತೆ ಹೆಚ್ಚಿದ್ದರೂ, ಪ್ರತಿ ಬೋಟ್‌ಗೆ ಸಿಗುವ ಮೀನಿನ ಪ್ರಮಾಣ ಕಡಿಮೆಯಾಗಿದೆ. ಈ ಬಾರಿ 1,022 ಬೋಟ್‌ಗಳು ಮೀನುಗಾರಿಕೆಗೆ ಹೋಗಿವೆ. ಪ್ರತಿ ಬೋಟ್‌ಗೂ ಡೀಸೆಲ್‌ ಸಬ್ಸಿಡಿ ನೀಡಲಾಗುತ್ತಿದೆ’ ಎಂದು ಮೀನುಗಾರಿಕಾ ಇಲಾಖೆ ಉಪ ನಿರ್ದೇಶಕ ಪಾರ್ಶ್ವನಾಥ ತಿಳಿಸಿದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೀನಿನ ಲಭ್ಯತೆ

ವರ್ಷ (ಋತು) ಲಭ್ಯ ಮಿನಿನ ಪ್ರಮಾಣ (ಟನ್) ಅಂದಾಜು ಬೆಲೆ (ಕೋಟಿ)
2017-18 1,63,925 1,656
2018-19 1,59,825 1,716
2019-20 1,80,189 2,036

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT