ಶನಿವಾರ, ಸೆಪ್ಟೆಂಬರ್ 26, 2020
23 °C
ಮೀನುಗಾರ ಸಂಘಟನೆಗಳ ಮುಖಂಡರ ಸಭೆಯಲ್ಲಿ ನಿರ್ಧಾರ

ಸೆ.1 ರಿಂದ ಮೀನುಗಾರಿಕೆ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಕರಾವಳಿಯಲ್ಲಿ ಸೆಪ್ಟೆಂಬರ್‌ 1 ರಿಂದ ಮೀನುಗಾರಿಕೆ ಆರಂಭಿಸಲು ನಗರದಲ್ಲಿ ಬುಧವಾರ ನಡೆದ ಮೀನುಗಾರರ ವಿವಿಧ ಸಂಘಟನೆಗಳ ಮುಖಂಡರ ಸಭೆಯಲ್ಲಿ ನಿರ್ಧರಿಸಲಾಗಿದೆ.

ಮೀನುಗಾರಿಕೆಯ ನಿಷೇಧದ ಅವಧಿ ಇದೇ 31 ಕ್ಕೆ ಮುಕ್ತಾಯವಾಗಿ, ಆಗಸ್ಟ್ 1ರಿಂದ ಆರಂಭವಾಗಬೇಕಾಗಿತ್ತು. ಆದರೆ, ಕೋವಿಡ್–19 ಸಂಕಷ್ಟದಿಂದಾಗಿ ನಿಷೇಧವನ್ನು ಒಂದು ತಿಂಗಳು ಮುಂದೂಡುವುದು ಅನಿವಾರ್ಯ ಎನ್ನುವ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಗಿದೆ.

‘ವಿವಿಧ ಸಂಘಟನೆಗಳ ಸಭೆ ಕರೆದು, ಮೀನುಗಾರಿಕೆ ಪ್ರಾರಂಭಿಸುವ ಕುರಿತು ವಿಸ್ತೃತ ಚರ್ಚೆ ನಡೆಸಲಾಗಿದೆ. ಅನೇಕ ವಿಷಯಗಳ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲದೇ ಇರುವುದರಿಂದ ಸೆಪ್ಟೆಂಬರ್‌ 1 ರವರೆಗೆ ಮುಂದೂಡಲು ನಿರ್ಧರಿಸಲಾಗಿದೆ’ ಎಂದು ಟ್ರಾಲ್‌ ಬೋಟ್‌ ಮಾಲೀಕರ ಸಂಘದ ಅಧ್ಯಕ್ಷ ನಿತಿನ್‌ಕುಮಾರ್ ತಿಳಿಸಿದ್ದಾರೆ.

‘ಜಿಲ್ಲೆಯಲ್ಲಿ 1,200 ಮೀನುಗಾರಿಕೆ ಬೋಟ್‌ಗಳಿದ್ದು, ಶೇ 75 ರಷ್ಟು ಕಾರ್ಮಿಕರು ತಮಿಳುನಾಡು, ಆಂಧ್ರಪ್ರದೇಶ, ಜಾರ್ಖಂಡ, ಒಡಿಶಾ ರಾಜ್ಯದವರು. ಮೀನುಗಾರಿಕೆ ಆರಂಭಿಸಲು ಈ ಕಾರ್ಮಿಕರು ಮಂಗಳೂರಿಗೆ ಬರಬೇಕಿದೆ’ ಎಂದು ಹೇಳಿದ್ದಾರೆ.

‘ಅಲ್ಲದೇ ಸುರಕ್ಷಿತ ಮೀನುಗಾರಿಕೆ ನಡೆಸಲು ಅಗತ್ಯ ಮಾರ್ಗಸೂಚಿಗಳನ್ನು ತಯಾರಿಸಬೇಕಾಗಿದೆ. ಈ ಕಾರ್ಯಯೋಜನೆಯೊಂದಿಗೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಜತೆಗೆ ಚರ್ಚಿಸಲಾಗುವುದು. ಇದರ ಜತೆಗೆ ಬೋಟ್‌ಗಳಲ್ಲಿ ಧಕ್ಕೆಗೆ ತರುವ ಮೀನಿನ ನಿರ್ವಹಣೆ, ಸಾಗಣೆ ಹಾಗೂ ಮಾರಾಟದ ಕುರಿತೂ ಯೋಜನೆ ರೂಪಿಸಬೇಕಾಗಿದೆ’ ಎಂದು ತಿಳಿಸಿದ್ದಾರೆ.

‘ಸದ್ಯಕ್ಕೆ ಮೀನು ವಹಿವಾಟು ಆರಂಭವಾದಲ್ಲಿ ಜನದಟ್ಟಣೆ ಹಾಗೂ ಸುರಕ್ಷಿತ ಅಂತರವನ್ನು ಕಾಪಾಡುವುದು ಕಷ್ಟಕರವಾಗಲಿದೆ. ಅಲ್ಲದೇ ಕೋವಿಡ್–19 ಪ್ರಕರಣಗಳಿಂದಾಗಿ ಬಂದರು ಪ್ರದೇಶವನ್ನು ಸೀಲ್‌ಡೌನ್‌ ಮಾಡಿದಲ್ಲಿ, ಮೀನುಗಾರರು ಭಾರಿ ನಷ್ಟ ಅನುಭವಿಸುವ ಆತಂಕವೂ ಇದೆ’ ಎಂದು ಅಭಿಪ್ರಾಯಪಟ್ಟರು.

‘ಮೀನುಗಾರಿಕೆಗೆ ತೆರಳುವ ಶೇ 25 ರಷ್ಟು ಬೋಟ್‌ಗಳಾದರೂ ಅದೇ ದಿನ ಬಂದರಿಗೆ ಮರಳುವಂತೆ ನೋಡಿಕೊಳ್ಳಬೇಕು ಎಂದು ಮೀನುಗಾರಿಕೆ ಇಲಾಖೆ ಅಧಿಕಾರಿಗಳು ಸಲಹೆ ನೀಡಿದ್ದರು. ಆದರೆ, ವಾಸ್ತವದಲ್ಲಿ ಇದು ಸಾಧ್ಯವಿಲ್ಲ. ಆಳ ಸಮುದ್ರದ ಮೀನುಗಾರಿಕೆ ಮಾಡುವ ಬೋಟ್‌ಗಳಲ್ಲಿ 8–10 ಜನರ ತಂಡ ಇರಲಿದ್ದು, 10 ದಿನಗಳವರೆಗೆ ಸಮುದ್ರದಲ್ಲಿ ಮೀನು ಹಿಡಿಯುತ್ತದೆ. ಯಾಂತ್ರೀಕೃತ ಬೋಟ್‌ಗಳು ಮೂರು ದಿನಕ್ಕೆ ಬಂದರಿಗೆ ಹಿಂದಿರುಗುತ್ತವೆ. ಕೆಲವು ಪರ್ಸಿನ್‌ ಬೋಟ್‌ಗಳು ಮಾತ್ರ ಅದೇ ದಿನ ಬಂದರಿಗೆ ಮರಳಲು ಸಾಧ್ಯವಿದೆ’ ಎಂದು ವಿವರಿಸಿದರು.

ಟ್ರಾಲ್ ಬೋಟ್, ಪರ್ಸಿನ್ ಬೋಟ್, ಮೀನು ಮಾರಾಟಗಾರರು, ಮೀನು ರಫ್ತು ಕಂಪನಿಗಳ ಪ್ರತಿನಿಧಿಗಳು, ಫಿಶ್‌ ಮಿಲ್‌ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು