ಶನಿವಾರ, ಅಕ್ಟೋಬರ್ 23, 2021
20 °C
ಬೆಂಗಳೂರಿನಿಂದ ನಾಪತ್ತೆಯಾಗಿದ್ದ ನಾಲ್ವರು ಮಕ್ಕಳು

ಬೆಂಗಳೂರಿನಿಂದ ನಾಪತ್ತೆಯಾಗಿದ್ದ ನಾಲ್ವರು ಮಕ್ಕಳು ಮಂಗಳೂರಿನಲ್ಲಿ ಪತ್ತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ಬೆಂಗಳೂರಿನಿಂದ ನಾಪತ್ತೆಯಾಗಿದ್ದ ಏಳು ಮಕ್ಕಳ ಪ್ರಕರಣ ಸುಖಾಂತ್ಯವಾಗಿದ್ದು, ಒಬ್ಬ ಯುವತಿ ಹಾಗೂ ಮೂವರು ಮಕ್ಕಳು ಮಂಗಳವಾರ ಬೆಳಿಗ್ಗೆ ನಗರದಲ್ಲಿ ಪತ್ತೆಯಾಗಿದ್ದಾರೆ. ಭಾನುವಾರ 7 ಮಕ್ಕಳು ಮನೆಯಿಂದ ನಾಪತ್ತೆಯಾಗಿದ್ದು, ಈ ಪೈಕಿ ಮೂರು ಮಂದಿ ಸೋಮವಾರ ಬೆಂಗಳೂರಿನಲ್ಲಿ ಪತ್ತೆಯಾಗಿದ್ದರು.

ಅಮೃತವರ್ಷಿಣಿ, ರಾಯನ್ ಸಿದ್ದಾರ್ಥ, ಚಿಂತನ್, ಭೂಮಿ ನಗರದಲ್ಲಿ ಪತ್ತೆಯಾಗಿದ್ದು, 20 ವರ್ಷದ ಅಮೃತವರ್ಷಿಣಿ, ಈ ಮಕ್ಕಳಿಗೆ ಸೂಚನೆ ನೀಡುತ್ತಿದ್ದಳು. ಅವಳ ಮಾತು ಕೇಳಿಯೇ ಮಕ್ಕಳು ಮನೆಬಿಟ್ಟು ಬಂದಿದ್ದರು ಎಂದು ತಿಳಿದು ಬಂದಿದೆ.

ಸೋಮವಾರ ರಾತ್ರಿ ಬೆಂಗಳೂರಿನಿಂದ ಖಾಸಗಿ ಬಸ್ ಹತ್ತಿದ್ದ ಅಮೃತವರ್ಷಿಣಿ ಮತ್ತು ಮೂವರು ಮಕ್ಕಳು, ಮಂಗಳವಾರ ಬೆಳಿಗ್ಗೆ ನಗರಕ್ಕೆ ಬಂದಿದ್ದಾರೆ. ಬೆಳಿಗ್ಗೆ 7 ಗಂಟೆ ಸುಮಾರಿಗೆ ನಗರದ ಅಂಬೇಡ್ಕರ್‌ ವೃತ್ತದ ಬಳಿ ಬಸ್‌ನಿಂದ ಇಳಿದ ನಾಲ್ವರು, ಪಕ್ಕದಲ್ಲೇ ಆಟೋ ಚಾಲಕರ ಕಣ್ಣಿಗೆ ಬಿದ್ದಿದ್ದಾರೆ.

ಮಕ್ಕಳು ಕೆಲವರ ಬಳಿ ಮೊಬೈಲ್ ಕೇಳಿ, ಕರೆ ಮಾಡಲು ಪ್ರಯತ್ನಿಸುತ್ತಿದ್ದರು. ಇನ್ನೂ ಕೆಲವರಲ್ಲಿ ಲಾಡ್ಜ್ ಎಲ್ಲಿದೆ ಎಂದು ವಿಚಾರಿಸುತ್ತಿದ್ದರು. ಇಲ್ಲಿ ಆಭರಣ ಒತ್ತೆ ಇಡುವ ಅಂಗಡಿ ಎಲ್ಲಿದೆ ಎಂಬುದರ ಮಾಹಿತಿಯನ್ನೂ ಕೇಳುತ್ತಿದ್ದರು. ಮಕ್ಕಳ ಚಲನವಲನಗಳನ್ನು ಸೂಕ್ಷ್ಮವಾಗಿ ಗಮನಿಸಿದ ಆಟೋ ಚಾಲಕರಾದ ಪ್ರಶಾಂತ್ ಮತ್ತು ರಮೇಶ್‌, ಬೆಂಗಳೂರಿನಿಂದ ನಾಪತ್ತೆಯಾದ ಮಕ್ಕಳು ಇವರೇ ಇರಬಹುದು ಎಂಬ ಸಂಶಯ ಕಾಡಲಾರಂಭಿಸಿತು.

ಆಟೋದಲ್ಲಿದ್ದ ಸೋಮವಾರದ ಪತ್ರಿಕೆಯನ್ನು ನೋಡಿದ ಬಳಿಕ ಇವರೇ ಎನ್ನುವುದು ಸ್ಪಷ್ಟವಾಗಿದೆ. ಮಕ್ಕಳ ಗುಂಪಿನಲ್ಲಿದ್ದ ಒಬ್ಬ ಬಾಲಕ ತನ್ನ ಬ್ಯಾಗ್ ಅನ್ನು ಅಲ್ಲೇ ಇದ್ದ ಡಸ್ಟ್ ಬಿನ್‌ಗೆ ಹಾಕಲು ಯತ್ನಿಸಿದ್ದರಿಂದ ಆಟೋ ಚಾಲಕ ಪ್ರಶಾಂತ್ ಮತ್ತು ರಮೇಶ್ ಮಕ್ಕಳ ಬಳಿಗೆ ಹೋಗಿ ಪ್ರಶ್ನೆ ಮಾಡಿದ್ದಾರೆ.

ಈ ಬಗ್ಗೆ ಮಾತನಾಡಿರುವ ಆಟೋ ಚಾಲಕ ಪ್ರಶಾಂತ್, ‘ಮಕ್ಕಳು ಗಾಬರಿಗೊಂಡಿದ್ದರು. ಅವರಲ್ಲಿ ಮಾತನಾಡುವ ಸಂದರ್ಭದಲ್ಲಿ ಎಲ್ಲವನ್ನೂ ಬಾಯಿ ಬಿಟ್ಟರು. ಆಟೋ ಹತ್ತಿ ಕುಳಿತುಕೊಂಡರು. ಪೊಲೀಸ್ ಠಾಣೆಗೆ ಹೋಗುವುದಾಗಿ ಹೇಳಿದರೂ, ಸರಿ ಎಂದು ಮಕ್ಕಳು ಹೇಳಿದರು. ಡಸ್ಟ್ ಬೀನ್‌ನಲ್ಲಿ ಹಾಕಿದ್ದ ಬ್ಯಾಗ್ ತರೋಕೆ ಹೇಳಿ, ಆಟೋ ಹತ್ತಿಸಿಕೊಂಡೆವು. ಬಳಿಕ ಪಾಂಡೇಶ್ವರ ಪೊಲೀಸ್ ಠಾಣೆಗೆ ಹೋಗಿ ಮಕ್ಕಳನ್ನು ಪೊಲೀಸರಿಗೆ ಒಪ್ಪಿಸಿದೆವು’ ಎಂದು ತಿಳಿಸಿದರು.

‘ನನಗೆ ಪತ್ರಿಕೆ ಓದುವ ಹವ್ಯಾಸ ಇದೆ. ಸೋಮವಾರದ ಪತ್ರಿಕೆಯಲ್ಲಿ ಮಕ್ಕಳು ನಾಪತ್ತೆಯಾದ ಸುದ್ದಿ ಗಮನಿಸಿದ್ದೆ. ಮಂಗಳವಾರ ಬೆಳಿಗ್ಗೆ ಅದೇ ಮಕ್ಕಳು ಜ್ಯೋತಿ ವೃತ್ತದ ಬಳಿ ಗಮನಿಸಿದಾಗ, ಇವರೇ ನಾಪತ್ತೆಯಾದ ಮಕ್ಕಳು ಎನ್ನುವ ಸಂಶಯ ಬಂತು. ಕೂಡಲೇ ಸೋಮವಾರದ ಪತ್ರಿಕೆ ನೋಡಿ ದೃಢಪಡಿಸಿಕೊಂಡೆ. ಮತ್ತೆ ಮಕ್ಕಳ ಬಳಿ ಮಾತನಾಡಿದಾಗ ಬೆಂಗಳೂರಿನಿಂದ ನಾಪತ್ತೆಯಾದವರು ಎನ್ನುವುದು ಗೊತ್ತಾಯಿತು’ ಎಂದು ಮತ್ತೊಬ್ಬ ಆಟೋ ಚಾಲಕ ರಮೇಶ್ ಹೇಳಿದರು.

ನಂತರ ಪೊಲೀಸರು ಪಾಲಕರನ್ನು ಕರೆಸಿ, ಮಕ್ಕಳನ್ನು ಅವರಿಗೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು