ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಕ್ಷಿಣ ಕನ್ನಡ | ಕುಂಟುತ್ತ ಸಾಗಿರುವ ಎಫ್‌ಎಸ್‌ಟಿಪಿ

ಜಿಲ್ಲೆಯಲ್ಲಿ ಉಜಿರೆ, ಗೋಳ್ತಮಜಲಿನಲ್ಲಿ ಎರಡು ಘಟಕಗಳ ಕಾರ್ಯನಿರ್ವಹಣೆ
Published 13 ಮಾರ್ಚ್ 2024, 6:32 IST
Last Updated 13 ಮಾರ್ಚ್ 2024, 6:32 IST
ಅಕ್ಷರ ಗಾತ್ರ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಎರಡು ಕಡೆಗಳಲ್ಲಿ ಏಳು ತಿಂಗಳುಗಳ ಹಿಂದೆ ಪ್ರಾರಂಭವಾಗಿರುವ ಬಹುಗ್ರಾಮ ಮಲತ್ಯಾಜ್ಯ ನಿರ್ವಹಣಾ ಘಟಕಗಳಿಗೆ (ಎಫ್‌ಎಸ್‌ಟಿಪಿ) ಸಾರ್ವಜನಿಕರಿಂದ ನಿರೀಕ್ಷಿತ ಸ್ಪಂದನ ಇಲ್ಲದ ಪರಿಣಾಮ ಕುಂಟುತ್ತ ಸಾಗಿವೆ.

ಮನೆಗಳಲ್ಲಿ ಉತ್ಪತ್ತಿಯಾಗುವ ಮಲತ್ಯಾಜ್ಯವನ್ನು ವೈಜ್ಞಾನಿಕ ವಿಲೇವಾರಿ ಮಾಡುವ ಉದ್ದೇಶದಿಂದ ಸ್ವಚ್ಛ ಭಾರತ್ ಮಿಷನ್ ಅಡಿಯಲ್ಲಿ ಬೆಳ್ತಂಗಡಿ ತಾಲ್ಲೂಕಿನ ಉಜಿರೆ ಗ್ರಾಮ ಪಂಚಾಯಿತಿಯಲ್ಲಿ ₹57.22 ಲಕ್ಷ ಹಾಗೂ ಬಂಟ್ವಾಳ ತಾಲ್ಲೂಕಿನ ಗೋಳ್ತಮಜಲು ಗ್ರಾಮ ಪಂಚಾಯಿತಿಯಲ್ಲಿ ₹79.22 ಲಕ್ಷ ವೆಚ್ಚದಲ್ಲಿ ಎಫ್‌ಎಸ್‌ಟಿಪಿ ನಿರ್ಮಿಸಲಾಗಿದೆ. ಎರಡೂ ಘಟಕಗಳು ಪ್ರತಿದಿನ 3,000 ಲೀಟರ್ ಮಲವನ್ನು ಸಂಸ್ಕರಿಸುವ ಸಾಮರ್ಥ್ಯ ಹೊಂದಿವೆ.

ಗ್ರಾಮೀಣ ಪ್ರದೇಶದ ಮನೆಗಳು, ವಸತಿ ಗೃಹಗಳು, ಅಪಾರ್ಟ್‌ಮೆಂಟ್‌ಗಳಲ್ಲಿರುವ ಮಲ ಶೇಖರಣೆ ಗುಂಡಿಗಳು ತುಂಬಿದ ಮೇಲೆ ಸಂಬಂಧಪಟ್ಟ ಗ್ರಾಮ ಪಂಚಾಯಿತಿ ನೀಡಿರುವ ಸಹಾಯವಾಣಿಗೆ ಕರೆ ಮಾಡಿದರೆ, ಸಕ್ಕಿಂಗ್ ವಾಹನಗಳು ಬಂದು ಮಲವನ್ನು ಶೇಖರಿಸಿ ಕೊಂಡೊಯ್ಯುತ್ತವೆ. ಎರಡು ಘಟಕಗಳು ಒಟ್ಟು 49 ಗ್ರಾಮ ಪಂಚಾಯಿತಿಗಳ ವ್ಯಾಪ್ತಿ ಹೊಂದಿವೆ. ಆದರೂ, ಸಾರ್ವಜನಿಕರಿಂದ ನಿರೀಕ್ಷಿತ ಸ್ಪಂದನ ಇಲ್ಲದ ಕಾರಣ, ಈ ವಾಹನಗಳು ಹೆಚ್ಚಿನ ಅವಧಿಯಲ್ಲಿ ಖಾಲಿ ನಿಂತಿರುವಂತಾಗಿದೆ.

‘ಜನಸಂಖ್ಯೆ ಹಾಗೂ ಅಗತ್ಯವನ್ನು ಆಧರಿಸಿ ಘಟಕದಲ್ಲಿ 12 ಬೆಡ್‌ಗಳನ್ನು ನಿರ್ಮಿಸಲಾಗಿದೆ. ಪ್ರತಿದಿನ ಒಂದು ಬೆಡ್ ಬಳಕೆ ಮಾಡಿಕೊಂಡು, ವಾರಕ್ಕೊಮ್ಮೆ ಇದೇ ಬೆಡ್ ಮತ್ತೆ ಬಳಸುವ ಯೋಜನೆ ರೂಪಿಸಿದ್ದೆವು. ಸಂಸ್ಕರಿಸಿದ ನಂತರ ಉಳಿಯುವ ಘನ ತ್ಯಾಜ್ಯವನ್ನು ಒಣಗಲು ಬಿಟ್ಟು, ಗೊಬ್ಬರಕ್ಕೆ ಬಳಸುವ ಯೋಚನೆ ಇದೆ. ಪ್ರಸ್ತುತ ವಾರಕ್ಕೆ ಸರಾಸರಿ ಎರಡು ಬಾರಿ ಮಾತ್ರ ಒಂದು ಲೋಡ್ ಮಲತ್ಯಾಜ್ಯ ಘಟಕಕ್ಕೆ ಬರುತ್ತಿದೆ. ಹೀಗಾಗಿ, ಬೆಡ್‌ಗಳು ಭರ್ತಿಯಾಗಿಲ್ಲ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

‘ಹೊಸ ಯೋಜನೆ ಆಗಿರುವ ಕಾರಣ ಘಟಕ ಹೊಂದಿರುವ ಪಂಚಾಯಿತಿಗಳು ಈ ಬಗ್ಗೆ ಹೆಚ್ಚು ಪ್ರಚಾರ ಮಾಡಬೇಕು. ಜಿಲ್ಲಾ ಪಂಚಾಯಿತಿಯು ಸಹಾಯವಾಣಿ ರೂಪದಲ್ಲಿ ಕರಪತ್ರಗಳನ್ನು ಮಾಡಿ, ಪ್ರಚಾರ ನಡೆಸಿದೆ. ಗ್ರಾಮ ಸಭೆಗಳಲ್ಲೂ ಮಾಹಿತಿ ನೀಡಿ, ಜಾಗೃತಿ ಮೂಡಿಸಲಾಗಿದೆ’ ಎಂದು ಅವರು ತಿಳಿಸಿದರು.

‘ಸಕ್ಕಿಂಗ್ ವಾಹನ ಒಮ್ಮೆ ಬಂದು ಮಲ ಶೇಖರಣೆ ಘಟಕ ಖಾಲಿ ಮಾಡಿದರೆ, ಅದಕ್ಕೆ ₹3,500ರಷ್ಟು ಮೊತ್ತ ಪಾವತಿಸಬೇಕಾಗುತ್ತದೆ. ಭೌಗೋಳಿಕ ಅಂತರದ ಮೇಲೆ ದರ ವ್ಯತ್ಯಾಸ ಆಗುತ್ತದೆ. ಇದು ಜನರಿಗೆ ಹೊರೆಯಾಗುತ್ತದೆ’ ಎನ್ನುತ್ತಾರೆ ಮಡಂತ್ಯಾರಿನ ಸುಧಾಕರ್.

ಜನರ ನಡುವೆ ಪ್ರಚಲಿತಗೊಳಿಸಲು ಸಹಾಯವಾಣಿ ಸಂಖ್ಯೆ ಒಟ್ಟು 49 ಗ್ರಾ.ಪಂ.ಗಳ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಣೆ ಸಾರ್ವಜನಿಕರಿಗೆ ದುಬಾರಿಯಾದ ಬಾಡಿಗೆ ದರ

ದತ್ತಾಂಶ ಸಂಗ್ರಹಕ್ಕೆ ಕ್ರಮ ಹೊಸ ವ್ಯವಸ್ಥೆ ಆಗಿರುವ ಕಾರಣ ಜನರು ಇದಕ್ಕೆ ಇನ್ನೂ ಹೊಂದಿಕೊಳ್ಳಬೇಕಾಗಿದೆ. ವಸತಿ ಗೃಹಗಳು ಹೋಟೆಲ್‌ಗಳು ಮಲತ್ಯಾಜ್ಯವನ್ನು ಹೇಗೆ ವಿಲೇವಾರಿ ಮಾಡುತ್ತವೆ ಎಂದು ಪರಿಶೀಲಿಸಲಾಗುತ್ತಿದೆ. ಬರುವ ದಿನಗಳಲ್ಲಿ ಪಂಚಾಯಿತಿ ವ್ಯಾಪ್ತಿಯ ಎಲ್ಲ ಹೋಟೆಲ್‌ಗಳಲ್ಲಿರುವ ಸೆಪ್ಟಿಕ್ ಟ್ಯಾಂಕ್‌ಗಳ ಸಾಮರ್ಥ್ಯ ಅವುಗಳು ಭರ್ತಿಯಾಗುವ ಸಮಯದ ದತ್ತಾಂಶವನ್ನು ಸಂಗ್ರಹಿಸಲಾಗುವುದು. ನಿಗದಿತ ಅವಧಿಯಲ್ಲಿ ಅವುಗಳನ್ನು ಖಾಲಿ ಮಾಡಲು ಸೂಚನೆ ನೀಡಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಸಿಇಒ ಡಾ. ಆನಂದ್ ತಿಳಿಸಿದರು. ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿ ಎಫ್‌ಎಸ್‌ಟಿಪಿ ನಿರ್ಮಾಣಕ್ಕೆ ಡಿಪಿಆರ್ ಸಲ್ಲಿಸಲಾಗಿದ್ದು ಯೋಜನೆ ಮಂಜೂರು ಹಂತದಲ್ಲಿದೆ. ಪ್ರತಿ ತಾಲ್ಲೂಕಿನಲ್ಲಿ ಎಫ್‌ಎಸ್‌ಟಿಪಿ ನಿರ್ಮಾಣ ಆಗಲಿದ್ದು ಭವಿಷ್ಯದಲ್ಲಿ ಎಲ್ಲ ಮನೆಗಳು ವಾಣಿಜ್ಯ ಬಳಕೆಯ ಕಟ್ಟಡಗಳು ಸೆಪ್ಟಿಕ್ ಟ್ಯಾಂಕ್ ಖಾಲಿ ಮಾಡಲು ಇವನ್ನೇ ಬಳಸಬೇಕಾಗುತ್ತದೆ ಎಂದು ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT