ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೇಲ್‌ ಪೈಪ್‌ಲೈನ್‌ 5 ರಂದು ಉದ್ಘಾಟನೆ

ವರ್ಚ್ಯುವಲ್‌ ಕಾರ್ಯಕ್ರಮದ ಮೂಲಕ ಪ್ರಧಾನಿ ಮೋದಿ ಚಾಲನೆ
Last Updated 3 ಜನವರಿ 2021, 4:11 IST
ಅಕ್ಷರ ಗಾತ್ರ

ಮಂಗಳೂರು: ಕೊಚ್ಚಿನ್‌ನಿಂದ ಮಂಗಳೂರಿಗೆ ನೈಸರ್ಗಿಕ ಅನಿಲ ಪೂರೈಸುವ ಗೇಲ್‌ ಪೈಪ್‌ಲೈನ್‌ ಸಿದ್ಧವಾಗಿದ್ದು, ಇದೇ 5 ರಂದು ಪ್ರಧಾನಿ ನರೇಂದ್ರ ಮೋದಿ ಅವರು ವರ್ಚುವಲ್‌ ಮೂಲಕ ಉದ್ಘಾಟನೆ ಮಾಡಲಾಗಿದ್ದಾರೆ ಎಂದು ಗೇಲ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಮನೋಜ್ ಜೈನ್ ತಿಳಿಸಿದರು.

ಶನಿವಾರ ವರ್ಚುವಲ್‌ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೈಗಾರಿಕಾ ಮತ್ತು ಮನೆಗಳಿಗೆ ಶುದ್ಧ ಮತ್ತು ಅಗ್ಗದ ದರದಲ್ಲಿ ಅನಿಲ ಒದಗಿಸಿ, ಅನಿಲ ಆರ್ಥಿಕತೆಗೆ ಪೈಪ್‌ಲೈನ್ ಉತ್ತೇಜನ ಸಿಗುವ ನಿರೀಕ್ಷೆಯಿದೆ ಎಂದರು.

ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಖಾತೆ ಸಚಿವ ಧರ್ಮೇಂದ್ರ ಪ್ರಧಾನ್, ಕೇರಳದ ರಾಜ್ಯಪಾಲ ಆರೀಫ್‌ ಮೊಹಮ್ಮದ್‌ ಖಾನ್‌, ಮುಖ್ಯಮಂತ್ರಿ ಪಿಣರಾಯಿ ವಿಜಯನ್‌, ಕರ್ನಾಟಕದ ರಾಜ್ಯಪಾಲ ವಜುಭಾಯಿ ವಾಲಾ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ವರ್ಚುಯಲ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.

450 ಕಿ.ಮೀ. ಉದ್ದದ ಪೈಪ್‌ಲೈನ್ ನಿತ್ಯ 1.2 ಕೋಟಿ ಮೆಟ್ರಿಕ್ ಸ್ಟ್ಯಾಂಡರ್ಡ್ ಕ್ಯುಬಿಕ್ ಮೀಟರ್‌ ನೈಸರ್ಗಿಕ ಅನಿಲವನ್ನು ಕೊಚ್ಚಿನ್‌ನ ದ್ರವೀಕೃತ ನೈಸರ್ಗಿಕ ಅನಿಲ ಗ್ಯಾಸಿಫಿಕೇಶನ್ ಟರ್ಮಿನಲ್‌ನಿಂದ ಮಂಗಳೂರಿಗೆ ಸಾಗಿಸುವ ಸಾಮರ್ಥ್ಯ ಹೊಂದಿದೆ. ಎರ್ನಾಕುಲಂ, ತ್ರಿಶೂರ್, ಪಾಲ್ಘಾಟ್‌, ಮಲ್ಲಪುರಂ, ಕೊಯಿಕ್ಕೋಡ್, ಕಣ್ಣೂರು ಮತ್ತು ಕಾಸರಗೋಡು ಜಿಲ್ಲೆಗಳ ಮೂಲಕ ಸಾಗುವ ಈ ಪೈಪ್‌ಲೈನ್ ಮಂಗಳೂರಿನಲ್ಲಿ ಕೊನೆಗೊಳ್ಳುತ್ತಿದೆ ಎಂದು ಮಾಹಿತಿ ನೀಡಿದರು.

ಸುಮಾರು ₹5 ಸಾವಿರ ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿರುವ ಈ ಪೈಪ್‌ಲೈನ್‌ನಿಂದ ಮನೆಗಳು, ವಾಣಿಜ್ಯ ಘಟಕಗಳಿಗೆ ಅಡಚಣೆಯಿಲ್ಲದೇ ಪರಿಸರಸ್ನೇಹಿ ನೈಸರ್ಗಿಕ ಅನಿಲವನ್ನು ಪೂರೈಸಲಾಗುತ್ತದೆ. ಕೇರಳ ರಾಜ್ಯದಾದ್ಯಂತ ಸಾರಿಗೆ ವಲಯಕ್ಕೆ ಸಿಎನ್ ಜಿ ಪೂರೈಸಲಾಗುವುದು ಎಂದು ಗೇಲ್ ನಿರ್ದೇಶಕ ಎಂ.ವಿ. ಅಯ್ಯರ್ ಹೇಳಿದರು.

2009 ರಲ್ಲಿ ₹2.915 ಕೋಟಿ ಅಂದಾಜು ವೆಚ್ಚದಲ್ಲಿ ಆರಂಭಿಸಿದ ಈ ಪೈಪ್‌ಲೈನ್ ಕಾಮಗಾರಿ 2014 ರಲ್ಲಿ ಮುಕ್ತಾಯ ಆಗಬೇಕಿತ್ತು. ಆದರೆ, ಸಾರ್ವಜನಿಕರಿಂದ ಸುರಕ್ಷತೆ ಹಾಗೂ ಭೂಮಿಗಾಗಿ ಅಧಿಕ ಬೆಲೆ ಬೇಡಿಕೆಯಂತಹ ಸವಾಲು ಎದುರಾಗಿದ್ದರಿಂದ ವಿಳಂಬವಾಯಿತು ಎಂದು ತಿಳಿಸಿದರು.

ಪೈಪ್‌ಲೈನ್‌ ಮೂಲಕ ಈಗಾಗಲೇ ಮಂಗಳೂರು ಕೆಮಿಕಲ್ಸ್‌ ಆಂಡ್‌ ಫರ್ಟಿಲೈಸರ್ಸ್‌ (ಎಂಸಿಎಫ್‌)ಗೆ ನೈಸರ್ಗಿಕ ಅನಿಲ ಪೂರೈಕೆ ಆರಂಭಿಸಲಾಗಿದೆ. ನಿತ್ಯ 6–7 ಲಕ್ಷ ಸ್ಟ್ಯಾಂಡರ್ಡ್‌ ಕ್ಯುಬಿಕ್‌ ಮೀಟರ್‌ ಅನಿಲ ಪೂರೈಸಲಾಗುತ್ತಿದೆ. ಬರುವ ದಿನಗಳಲ್ಲಿ ಎಂಆರ್‌ಪಿಎಲ್‌ ಹಾಗೂ ಒಎಂಪಿಎಲ್‌ಗೂ ನಿತ್ಯ 5 ಲಕ್ಷ ಸ್ಟ್ಯಾಂಡರ್ಡ್‌ ಕ್ಯುಬಿಕ್‌ ಮೀಟರ್ ಅನಿಲ ಪೂರೈಸುವ ಯೋಜನೆ ಇದೆ ಎಂದು ಹೇಳಿದರು.

ಕೊಚ್ಚಿನ್‌ನಲ್ಲಿ ಕೆಲ ವರ್ಷಗಳ ಹಿಂದೆಯೇ ಎಲ್‌ಎನ್‌ಜಿ ಟರ್ಮಿನಲ್‌ ಅನ್ನು ಉದ್ಘಾಟಿಸಲಾಗಿದೆ. ಆದರೆ, ಸಂಪರ್ಕ ಇಲ್ಲದೇ ಇದ್ದುದರಿಂದ ಸಾಮರ್ಥ್ಯಕ್ಕಿಂತ ಕಡಿಮೆ ಅನಿಲ ಉತ್ಪಾದಿಸಲಾಗುತ್ತಿತ್ತು. ಇದೀಗ ಪೈಪ್‌ಲೈನ್‌ ಕಾಮಗಾರಿ ಪೂರ್ಣಗೊಂಡಿದ್ದು, ಎಲ್‌ಎನ್‌ಜಿಯ ಸಂಪೂರ್ಣ ಸಾಮರ್ಥ್ಯವನ್ನು ಬಳಕೆ ಮಾಡಲು ಸಾಧ್ಯವಾಗಲಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT