ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಗಾಂಧೀಜಿಗೆ ದೇಶಕ್ಕಿಂತ ವರ್ಚಸ್ಸೇ ಮುಖ್ಯವಾಯಿತು: ಶಿಕಾರಿಪುರ ಕೃಷ್ಣಮೂರ್ತಿ

ಭಾರತ ವಿಭಜನೆಯ ಕರಾಳ ದಿನ ಸಂವಾದದಲ್ಲಿ ಶಿಕಾರಿಪುರ ಕೃಷ್ಣಮೂರ್ತಿ ಅಭಿಮತ
Published 15 ಆಗಸ್ಟ್ 2024, 3:03 IST
Last Updated 15 ಆಗಸ್ಟ್ 2024, 3:03 IST
ಅಕ್ಷರ ಗಾತ್ರ

ಮಂಗಳೂರು: ‘ದೇಶ ವಿಭಜನೆಯ ಇಕ್ಕಟ್ಟು ಎದುರಾದಾಗ ಮಹಾತ್ಮ ಗಾಂಧಿಯವರಿಗೆ ದೇಶಕ್ಕಿಂತ ತಮ್ಮ ಮೌಲ್ಯಗಳೇ ಹೆಚ್ಚಾದವು. ತನ್ನ ವರ್ಚಸ್ಸನ್ನು ಉಳಿಸಿಕೊಳ್ಳುವುದೇ ಅವರಿಗೆ ಮುಖ್ಯವಾಯಿತು. ಅವರು ಮನಸ್ಸು ಮಾಡಿದ್ದರೆ ದೇಶ ವಿಭಜನೆಯನ್ನು ತಡೆಯಬಹುದಿತ್ತು’ ಎಂದು ಇತಿಹಾಸಕಾರ ಶಿಕಾರಿಪುರ ಕೃಷ್ಣಮೂರ್ತಿ ಅಭಿಪ್ರಾಯಪಟ್ಟರು.

ಇಲ್ಲಿ ಬುಧವಾರ ಏರ್ಪಡಿಸಿದ್ದ ‘ಭಾರತ ವಿಭಜನೆಯ ಕರಾಳ ದಿನ’ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‘ಗಾಂಧೀಜಿ ಪಾಲಿಸುತ್ತಿದ್ದ ಸತ್ಯ, ಅಹಿಂಸೆ, ಸತ್ಯಾಗ್ರಹ, ಜಾತ್ಯತೀತ ಮನೋಭಾವ, ಆಧ್ಯಾತ್ಮಿಕತೆಯ ಮೌಲ್ಯಗಳೆಲ್ಲವೂ ಒಪ್ಪುವಂತಹದ್ದೇ. ಆದರೆ ಯುದ್ಧದ ಸಂದರ್ಭದಲ್ಲಿ ಇವನ್ನೆಲ್ಲ ತ್ಯಜಿಸಬೇಕಾಗುತ್ತದೆ. ಆಗ ದೇಶವೇ ಮೊದಲ ಆದ್ಯತೆಯಾಗಬೇಕು’ ಎಂದರು.

‘ಮಹಾತ್ಮ ಗಾಂಧಿಯವರು ನೂರಾರು ಒಳ್ಳೆಯ ಕೆಲಸಗಳನ್ನು ಮಾಡಿದ್ದಾರೆ. ಅದರಿಂದ ದೇಶಕ್ಕೆ ಒಳ್ಳೆಯದಾಗಿರುವುದೂ ನಿಜ. ಆದರೆ ಅವರು ನಾಲ್ಕೈದು ಪ್ರಮಾದಗಳನ್ನೂ  ಮಾಡಿದ್ದಾರೆ. ಧೃತರಾಷ್ಟ್ರನಿಗೆ ಮಗ ದುರ್ಯೋಧನನ ಮೇಲಿನ ವ್ಯಾಮೋಹದ ದೌರ್ಬಲ್ಯವಿದ್ದ ಹಾಗೆ ಗಾಂಧೀಜಿಗೆ ನೆಹರೂಕೂಟದ ಮೇಲಿನ ವ್ಯಾಮೋಹದ ದೌರ್ಬಲ್ಯವಿತ್ತು’ ಎಂದು ತಿಳಿಸಿದರು.

‘ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದು ನಾವು ಎಂದು ಹೇಳಿಕೊಳ್ಳುವ ಕಾಂಗ್ರೆಸ್‌, ದೇಶ ವಿಭಜನೆಯ ಪಾಪದ ಹೊಣೆಯನ್ನೂ ಹೊತ್ತುಕೊಳ್ಳಬೇಕಾಗುತ್ತದೆ. ನನ್ನ ಪ್ರಕಾರ ದೇಶ ವಿಭಜನೆಗೆ ಕಾಂಗ್ರೆಸ್ ನೇರ ಕಾರಣ’ ಎಂದರು.

ರಾಜಕೀಯ ಕಾರ್ಯಕರ್ತ ವಿಕಾಸ್‌ ಪಿ., ‘ದೇಶ ವಿಭಜಿಸುವ ಮನಸ್ಥಿತಿ ಈಗಲೂ ಮುಂದುವರಿದಿದೆ. ಸಂವಿಧಾನದ 370ನೇ ವಿಧಿಯಡಿ ನೀಡಲಾದ ಸವಲತ್ತುಗಳು ರದ್ದಾಗುವವರೆಗೂ ಜಮ್ಮು ಮತ್ತು ಕಾಶ್ಮೀರ ಮತ್ತೊಂದು ಪಾಕಿಸ್ತಾನದ ರೀತಿಯಲ್ಲೇ ಇತ್ತು. ಪ್ರತ್ಯೇಕ ಧ್ವಜ, ಪ್ರತ್ಯೇಕ ಆಳ್ವಿಕೆ, ಪ್ರತ್ಯೇಕ ಸಂವಿಧಾನದ ಸವಲತ್ತುಗಳನ್ನು ಅನುಭವಿಸುತ್ತಿತ್ತು’ ಎಂದರು. 

ಭಾರತ್ ಫೌಂಡೇಷನ್‌ನ ಟ್ರಸ್ಟಿ ಸುನೀಲ್‌ ಕುಲಕರ್ಣಿ ಸಂವಾದ ನಡೆಸಿಕೊಟ್ಟರು.

ದೇಶವಿಭಜನೆ– ಛಾಯಾಚಿತ್ರ ಪ್ರದರ್ಶನ ದೇಶ ವಿಭಜನೆ ಸನ್ನಿವೇಶದಲ್ಲಿ ಎದುರಾದ ಸಂಕಷ್ಟಗಳ ಭೀಕರತೆಯನ್ನು ಕಟ್ಟಿಕೊಡುವ ಛಾಯಾಚಿತ್ರಗಳು ಹಾಗೂ ಮಾಹಿತಿಗಳ ಪ್ರದರ್ಶನವನ್ನು ಭುವನೇಂದ್ರ ಸಭಾಂಗಣದಲ್ಲಿ ಏರ್ಪಡಿಸಲಾಗಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT