ಮಂಗಳೂರು: ಜನರ ನಡುವೆ ಸಾಮರಸ್ಯದ ಕೊಂಡಿ ಬೆಸೆಯುವ, ಎಲ್ಲೆಲ್ಲೂ ಸಡಗರದ ಅಲೆ ಉಕ್ಕಿಸುವ ಗಣೇಶ ಚತುರ್ಥಿ ಹಬ್ಬಕ್ಕೆ ಭರದ ಸಿದ್ಧತೆಗಳು ಪ್ರಾರಂಭವಾಗಿವೆ. ದಿನಸಿ ಅಂಗಡಿ, ತರಕಾರಿ ಮಾರುಕಟ್ಟೆ, ಹೂವಿನ ಪೇಟೆ, ಮೂಡೆ ಕಟ್ಟುವ ಸೂರು, ಸಾರ್ವಜನಿಕ ಗಣೇಶ ಮಂಟಪಗಳು, ಆಲಂಕಾರಿಕ ವಸ್ತುಗಳ ಮಳಿಗೆಗಳು ಎಲ್ಲೆಡೆಯೂ ಹಬ್ಬದ ಸಂಭ್ರಮ ಹರಡಿದೆ.
ತಿಂಗಳಿನಿಂದ ಶ್ರಮವಹಿಸಿ ಆವೆ ಮಣ್ಣಿಗೆ ರೂಪ ನೀಡಿರುವ ಮೂರ್ತಿ ತಯಾರಕರು ಗಣೇಶನ ಮೂರ್ತಿಗೆ ಬಣ್ಣ ಬಳಿಯುವ ಕೆಲಸದಲ್ಲಿ ತೊಡಗಿದ್ದಾರೆ. ಸೆ.7ರಂದು ಗಣೇಶ ಚತುರ್ಥಿ ಆಚರಣೆ. ಹಬ್ಬದ ಮುನ್ನಾ ದಿನವೇ ಹಲವರು ಮೂರ್ತಿಯನ್ನು ಮನೆಗೆ ಕೊಂಡೊಯ್ದು ಇಡುತ್ತಾರೆ.
‘ತುಳುನಾಡಿನಲ್ಲಿ ಗಣೇಶ ಮೂರ್ತಿ ಇಟ್ಟು ಪೂಜಿಸುವ ಪದ್ಧತಿ ಅಷ್ಟಾಗಿ ಇಲ್ಲ. ಹೊರ ಜಿಲ್ಲೆಗಳಿಂದ ಬಂದವರು, ಮೂರ್ತಿ ಪೂಜೆ ಮಾಡುತ್ತಾರೆ. ತಿಂಗಳ ಮೊದಲೇ ಬಂದು ಬೇಡಿಕೆ ಸಲ್ಲಿಸಿ ಹೋಗುತ್ತಾರೆ. ಸುಮಾರು 300ರಷ್ಟು ಚಿಕ್ಕ ಮೂರ್ತಿಗಳನ್ನು ತಯಾರಿಸಿದ್ದೇವೆ. ಗಣೇಶನ ಸೇವೆಯಾಗಿ ಮೂರು ದಶಕಗಳಿಂದ ಈ ಕಾಯಕವನ್ನು ಮಾಡುತ್ತಿದ್ದೇವೆ’ ಎನ್ನುತ್ತಾರೆ ರಥಬೀದಿಯ ಮೂರ್ತಿ ತಯಾರಕ ವಿನಾಯಕ ಶೇಟ್.
ಹೆಂಚಿನ ಕಾರ್ಖಾನೆಗಳು ಬಂದಾಗಿರುವ ಪರಿಣಾಮ ಆವೆಮಣ್ಣಿನ ಅಭಾವ ಎದುರಾಗಿದೆ. ನಮ್ಮ ಸಂಸ್ಕೃತಿ, ಸಂಪ್ರದಾಯ ಉಳಿಸಿಕೊಂಡು ಹೋಗಲು ಮಕ್ಕಳಲ್ಲಿ ಮೂರ್ತಿ ತಯಾರಿಕೆಯ ಆಸಕ್ತಿ ಬೆಳೆಸಬೇಕು. ಇದು ಶಾಲಾ ಚಟುವಟಿಕೆಯ ಭಾಗವಾಗಬೇಕು ಎಂಬುದು ಅವರ ಸಲಹೆ.
ಮಣ್ಣಗುಡ್ಡೆಯ ಸುಧಾಕರ ರಾವ್ ಅವರ ಮನೆಯಲ್ಲೂ ಗಣೇಶ ಮೂರ್ತಿಗಳು ಮೈದಳೆದಿವೆ. 76 ವರ್ಷ ಇತಿಹಾಸ ಇರುವ ಸಂಘ ನಿಕೇತನದ ಗಣೇಶ ಮೂರ್ತಿ ತಯಾರಕರು ಕೂಡ ಇದೇ ಕುಟುಂಬದವರು.
ತರಕಾರಿ ದರ ಏರಿಕೆ: ಕೊಂಕಣಿಗರಲ್ಲಿ ಗಣೇಶ ಚತುರ್ಥಿ, ಗೌರಿ ಹಬ್ಬ ಹೆಚ್ಚು ವಿಶೇಷ. ಹಬ್ಬದ ಆಚರಣೆಗೆ ಮುಳ್ಳು ಸೌತೆ, ಕಾಡು ಹಾಗಲ, ಅರಿಸಿನ ಎಲೆ, ಕೆಸುವಿನ ಎಲೆ, ಊರುಬೆಂಡೆ ಸೇರಿದಂತೆ ಸ್ಥಳೀಯವಾಗಿ ಬೆಳೆಯುವ ಎಲ್ಲ ತರಕಾರಿಗಳು ಬೇಕು. ಹೀಗಾಗಿ, ಹಬ್ಬದ ಎದುರಿನಲ್ಲಿ ತರಕಾರಿ ದರ ಏರಿಕೆಯಾಗಿದೆ ಎನ್ನುತ್ತಾರೆ ಕಾರ್‌ಸ್ಟ್ರೀಟ್‌ನ ತರಕಾರಿ ವ್ಯಾಪಾರಿ ಜಯರಾಂ.
ಮುಳ್ಳು ಸೌತೆ ಕೆ.ಜಿ.ಗೆ ₹160, ಕಾಡುಹಾಗಲ–₹200, ಊರುಬೆಂಡೆ– ₹160, ಅರಿಸಿನ ಎಲೆ 25ರ ಕಟ್ಟಿಗೆ ₹60, ಕೆಸುವಿನ ಎಲೆ ಕಟ್ಟಿಗೆ ₹20ರಂತೆ ಮಾರಾಟವಾಗುತ್ತಿದೆ.
‘ಗಣೇಶ ಮತ್ತು ಪ್ರಕೃತಿ ನಡುವೆ ಅವಿನಾಭಾವ ಸಂಬಂಧ. ಪ್ರಕೃತಿಯಲ್ಲಿ ಸಿಗುವ ಸಿರಿಯಲ್ಲೇ ಗಣೇಶನನ್ನು ಅಲಂಕರಿಸಲಾಗುತ್ತದೆ. ಪೂಜೆಗೆ ಕಬ್ಬು, ಶುಂಠಿ ಗಿಡ ಬೇಕು. ಹಾಗಲಕಾಯಿ, ಬೆಂಡೆಕಾಯಿ ಅಂಬಡೆ, ಪಾಯಸ ಸೇರಿದಂತೆ ಏಳು ಅಥವಾ ಒಂಬತ್ತು ಬಗೆಯ ತಿನಿಸುಗಳನ್ನು ಮಾಡುತ್ತಾರೆ. ಹಲವಾರು ಮನೆಗಳಲ್ಲಿ ಕಬ್ಬಿನಲ್ಲೇ ಗಣಪತಿ ಮಾಡಿ ತುಳಸಿಕಟ್ಟೆ ಎದುರು ಪೂಜಿಸುತ್ತಾರೆ ಎನ್ನುತ್ತಾರೆ ಟೈಲರ್ ವಿದ್ಯಾ ಶೆಟ್ಟಿ.
ಕೇದಿಗೆ ಮೂಡೆಗೆ ಬೇಡಿಕೆ
ಗಣೇಶ ಚತುರ್ಥಿಗೆ ಕೇದಿಗೆ ಮೂಡೆಗೆ ಎಲ್ಲಿಲ್ಲದ ಬೇಡಿಕೆ. ಕೇದಿಗೆ ಮೂಡೆ ₹100ಕ್ಕೆ ನಾಲ್ಕರಂತೆ ಹಲಸಿನ ಹಲಸಿನ ಎಲೆಯ ಏಳು ಕೊಟ್ಟಿಗೆಗೆ ₹100ರಂತೆ ಮಾರಾಟವಾಗುತ್ತಿದೆ. ‘ವರ್ಷವಿಡೀ ನಾವು ಕೇದಿಗೆ ಮೂಡೆ ಮಾರಾಟ ಮಾಡುತ್ತೇವೆ. ಅಜ್ಜನ ಕಾಲದಿಂದ ಇದೇ ಕೆಲಸ ಮಾಡಿಕೊಂಡು ಬಂದಿದ್ದು ತಂದೆ ತೀರಿಕೊಂಡ ಮೇಲೆ ನಾನು ಆ ಕೆಲಸ ಮಾಡುತ್ತೇನೆ. ಬೆಂಗಳೂರಿನಲ್ಲಿ ಸಿಕ್ಕಿದ ಕೆಲಸವನ್ನು ಬಿಟ್ಟು ಊರಿಗೆ ಬಂದು ತಾಯಿಗೆ ನೆರವಾಗುತ್ತೇನೆ. ಮುಳ್ಳು ನಡುವೆ ನುಸುಳಿ ಕೇದಿಗೆ ತರುವುದು ಸುಲಭವಲ್ಲ. ನಾಗರಹಾವು ಸದಾ ಕೇದಿಗೆಯ ಎಡೆಯಲ್ಲೇ ಇರುತ್ತದೆ ಎಚ್ಚರ ಬೇಕು’ ಎನ್ನುತ್ತಾರೆ ಡಿಪ್ಲೊಮಾ ಪದವೀಧರ ಮೋಕ್ಷಿತ್ ಪೂಜಾರಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.