ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು ಗಾಂಜಾ ಪ್ರಕರಣ: ಮತ್ತಿಬ್ಬರು ವೈದ್ಯರು ಸೇರಿ 9 ಮಂದಿ ಬಂಧನ

ಪ್ರಕರಣದಲ್ಲಿ ಬಂಧಿತರ ಸಂಖ್ಯೆ 24ಕ್ಕೆ ಏರಿಕೆ– ನಾಲ್ವರು ವೈದ್ಯರು ದಂಧೆಯಲ್ಲಿ ಭಾಗಿ!
Last Updated 21 ಜನವರಿ 2023, 11:17 IST
ಅಕ್ಷರ ಗಾತ್ರ

ಮಂಗಳೂರು: ನಗರದ ವೈದ್ಯಕೀಯ ಕಾಲೇಜುಗಳನ್ನು ಗುರಿಯಾಗಿಸಿ ನಡೆಯುತ್ತಿದ್ದ ಗಾಂಜಾ ಸೇವನೆ ಮತ್ತು ಮಾರಾಟ ಪ್ರಕರಣಕ್ಕೆ ಸಂಬಂಧಿಸಿದ ತನಿಖೆಯನ್ನು ಇನ್ನಷ್ಟು ವಿಸ್ತರಿಸಿರುವ ನಗರದ ಪೊಲೀಸರು, ಈ ಸಂಬಂಧ ಮತ್ತೆ ಇಬ್ಬರು ವೈದ್ಯರನ್ನು ಹಾಗೂ ಏಳು ವೈದ್ಯ ವಿದ್ಯಾರ್ಥಿಗಳನ್ನು ‌ಶನಿವಾರ ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಬಂಧಿತರ ಒಟ್ಟು ಸಂಖ್ಯೆ 24ಕ್ಕೆ ಹೆಚ್ಚಳವಾಗಿದೆ.

‘ಬಂಧಿತರಲ್ಲಿ ಕರ್ನಾಟಕದ ಡಾ.ಸಿದ್ಧಾರ್ಥ ಪವಸ್ಕರ್‌ (29) ಹಾಗೂ ಡಾ.ಸುಧೀಂದ್ರ (34) ವೈದ್ಯರಾಗಿದ್ದಾರೆ. ಇವರಲ್ಲಿ ಒಬ್ಬರು ನಗರದ ಆಸ್ಪತ್ರೆಯೊಂದರಲ್ಲಿ ಹಾಗೂ ಇನ್ನೊಬ್ಬರು ಹೊರವಲಯದ ಆಸ್ಪತ್ರೆಯೊಂದರಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇನ್ನುಳಿದ ಏಳು ಆರೋಪಿಗಳಲ್ಲಿ ಇಬ್ಬರು ವೈದ್ಯ ವಿದ್ಯಾರ್ಥಿನಿಯರು. ಎಂಬಿಬಿಎಸ್‌– ಎಂ.ಎಸ್‌. ವಿದ್ಯಾರ್ಥಿ ಉತ್ತರ ಪ್ರದೇಶದ ಡಾ.ವಿದುಶ್‌ ಕುಮಾರ್‌ (27), ಮೂರನೇ ವರ್ಷದ ಎಂಬಿಬಿಎಸ್‌ ವಿದ್ಯಾರ್ಥಿ ಕೇರಳದ ಡಾ.ಸೂರ್ಯಜಿತ್‌ದೇವ (20), ಎಂಬಿಬಿಎಸ್‌ ಇಂಟರ್ನ್‌ಷಿಪ್‌ ಮಾಡುತ್ತಿರುವ ಕೇರಳದ ಡಾ.ಐಷಾ ಮೊಹಮ್ಮದ್‌ (23), ತೆಲಂಗಾಣದ ಡಾ.ಪ್ರಣಯ್‌ ನಟರಾಜ್‌ (24), ಡಾ.ಚೈತನ್ಯ ಆರ್‌. ತುಮುಲುರಿ (23) ಹಾಗೂ ಎಂಬಿಬಿಎಸ್‌ ವಿದ್ಯಾರ್ಥಿ ಉತ್ತರ ಪ್ರದೇಶದ ಡಾ.ಐಷ್‌ ಮಿಡ್ಡ (27) ಹಾಗೂ ಬಿಡಿಎಸ್‌ ಇಂಟರ್ನ್‌ಶಿಪ್‌ ಮಾಡುತ್ತಿರುವ ನವದೆಹಲಿಯ ಡಾ.ಶರಣ್ಯಾ (23) ಬಂಧಿತ ವೈದ್ಯ ವಿದ್ಯಾರ್ಥಿಗಳು.

ಈ ಕುರಿತು ಸುದ್ದಿಗಾರರ ಜೊತೆ ಶನಿವಾರ ಮಾತನಾಡಿದ ನಗರ ಪೊಲೀಸ್ ಕಮಿಷನರ್‌ ಎನ್‌.ಶಶಿಕುಮಾರ್‌, ‘ಗಾಂಜಾ ಪ್ರಕರಣ ಸಂಬಂಧ 15 ಮಂದಿಯನ್ನು ಈಗಾಗಲೇ ಬಂಧಿಸಿದ್ದೆವು. ಈಗ ಹೆಚ್ಚುವರಿಯಾಗಿ ಒಂಬತ್ತು ಆರೋಪಿಗಳನ್ನು ಬಂಧಿಸಿದ್ದೇವೆ. ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಅಗತ್ಯಬಿದ್ದರೆ ಅವರನ್ನೂ ಪೊಲೀಸ್‌ ಕಸ್ಟಡಿಗೆ ಕೇಳುತ್ತೇವೆ’ ಎಂದರು.

‘ಮಾದಕ ಪದಾರ್ಥ ಮಾರಾಟ ಮಾಡುವವರಿಗೆ ಗ್ರಾಹಕರು ಬೇಕು. ಇಲ್ಲಿ ವ್ಯಾಸಂಗ ಮಾಡುತ್ತಿರುವ ಒಂದೇ ರಾಜ್ಯದ ವಿದ್ಯಾರ್ಥಿಗಳು, ಗೆಳೆಯರ ಗುಂಪುಗಳನ್ನು ಗುರಿಯನ್ನಾಗಿಸಿ ಅವರು ಕಾರ್ಯಾಚರಿಸುತ್ತಿದ್ದರು. ಆರೋಪಿಗಳೆಲ್ಲರೂ ಗಾಂಜಾ ಸೇವಿಸಿರುವುದು ದೃಢಪಟ್ಟಿದೆ. ಬಂಧಿತರಿಂದ ಮೊಬೈಲ್‌ಗಳನ್ನು ವಶಕ್ಕೆ ಪಡೆದಿದ್ದೇವೆ. ಅವುಗಳಲ್ಲಿ ಸಾಕಷ್ಟು ಪುರಾವೆಗಳು ಸಿಕ್ಕಿವೆ. ಗಾಂಜಾ ಮಾರಾಟದಲ್ಲಿಇವರ ಪಾತ್ರ ಏನಿತ್ತು ಎಂಬ ಬಗ್ಗೆ ತನಿಖೆ ಮುಂದುವರಿದಿದೆ. ಆರೋಪಪಟ್ಟಿಯಲ್ಲಿ ಎಲ್ಲವನ್ನೂ ವಿವರವಾಗಿ ಉಲ್ಲೇಖಿಸಲಿದ್ದೇವೆ’ ಎಂದರು.

ಮಾದಕ ಪದಾರ್ಥ ದಂಧೆಯಲ್ಲಿ ತೊಡಗಿದ್ದ ಆರೋಪದ ಮೇರೆಗೆ ಪೊಲೀಸರು ಅನಿವಾಸಿ ಭಾರತೀಯ ನೀಲ್‌ ಕಿಶೋರಿಲಾಲ್‌ ರಾಮ್‌ಜಿ ಷಾ (38) ಎಂಬಾತನನ್ನು ಜ. 7ರಂದು ಬಂಧಿಸಿದ್ದರು. ಆತ ನೀಡಿದ ಮಾಹಿತಿ ಆಧಾರದಲ್ಲಿ ಇಬ್ಬರು ವೈದ್ಯರು, 10 ವೈದ್ಯ ವಿದ್ಯಾರ್ಥಿಗಳು ಸೇರಿದಂತೆ 14 ಮಂದಿಯನ್ನು ಈ ಹಿಂದೆಯೇ ಬಂಧಿಸಿದ್ದರು.

‘ಬಹಳ ಗಂಭೀರವಾದ ಪ್ರಕರಣ ಇದು. ಈ ಹಿಂದಿನ ಕೆಲವು ಪ್ರಕರಣಗಳಲ್ಲಿ ಮಾದಕ ಪದಾರ್ಥ ಮಾರಾಟ ಜಾಲ ಇಷ್ಟೊಂದು ವ್ಯವಸ್ಥಿತವಾಗಿ ಇರುತ್ತಿರಲಿಲ್ಲ. ಮಾದಕ ಪದಾರ್ಥ ಮಾರಾಟದಲ್ಲಿ ತೊಡಗಿರುವವರಿಂದ ಕಟ್ಟಡ ಕಾರ್ಮಿಕರಂತಹವರು ನೇರವಾಗಿ ಗಾಂಜಾ ಖರೀದಿಸುತ್ತಿದ್ದರು’ ಎಂದರು.

‘ಮಾದಕ ಪದಾರ್ಥಗಳ ಮಾರಾಟದಲ್ಲಿ ತೊಡಗಿದ್ದ ಅನೇಕರು ಈ ಪ್ರಕರಣದ ಮೊದಲ ಆರೋಪಿ( ನೀಲ್‌ ಕಿಶೋರಿಲಾಲ್‌ ರಾಮ್‌ಜಿ ಷಾ ) ಜತೆ ಅನೇಕ ಸಂಪರ್ಕದಲ್ಲಿದ್ದರು. ಅವರಲ್ಲಿ ಬಹುತೇಕರು ಈಗ ಮೊಬೈಲ್‌ ಸ್ವಿಚ್‌ ಆಫ್‌ ಮಾಡಿಕೊಂಡು ಕಣ್ಮರೆಯಾಗಿದ್ದಾರೆ’ ಎಂದು ಶಶಿಕುಮಾರ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT