ಶುಕ್ರವಾರ, ಡಿಸೆಂಬರ್ 2, 2022
20 °C
ಪಾಲಿಕೆ ಸಾಮಾನ್ಯ ಸಭೆಯಲ್ಲಿ ವಿರೋಧ ಪಕ್ಷ ಆರೋಪ * ಸಮಗ್ರ ಚರ್ಚೆಗೆ ಪ್ರತ್ಯೇಕ ಸಭೆ: ಮೇಯರ್‌ ಭರವಸೆ

ಕಸ ವಿಲೇವಾರಿ: ಸದಸ್ಯರನ್ನು ಕತ್ತಲಲ್ಲಿಟ್ಟು ಡಿಪಿಆರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ‘ನಗರದ ಕಸ ವಿಲೇವಾರಿ ವ್ಯವಸ್ಥೆಗೆ ಸಂಬಂಧಿಸಿದ ವಿಸ್ತೃತ ಯೋಜನಾ ವರದಿ (ಡಿಪಿಆರ್‌) ಅಂತಿಮಗೊಳಿಸುವುದಕ್ಕೆ ಸಂಬಂಧಿಸಿದ ನಡೆ ಪಾರದರ್ಶಕವಾಗಿಲ್ಲ. ಪಾಲಿಕೆಯ 60 ಸದಸ್ಯರನ್ನು ಕತ್ತಲಲ್ಲಿಟ್ಟು ಡಿಪಿಆರ್‌ ಅಂತಿಮಗೊಳಿಸಲಾಗುತ್ತಿದೆ. ಇದರ ಹಿಂದೆ ಅಕ್ರಮ ನಡೆದಿರುವ ಸಂದೇಹಗಳಿವೆ’ ಎಂದು ಪಾಲಿಕೆಯಲ್ಲಿ ವಿರೋಧ ಪಕ್ಷದ ಸದಸ್ಯರು ಆರೋಪಿಸಿದರು.

ಮೇಯರ್‌ ಜಯಾನಂದ ಅಂಚನ್‌ ನೇತೃತ್ವದಲ್ಲಿ ನಡೆದ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಶುಕ್ರವಾರ ಈ ವಿಚಾರ ಪ್ರಸ್ತಾಪಿಸಿದ ಕಾಂಗ್ರೆಸ್‌ ಸದಸ್ಯ ಎ.ಸಿ.ವಿನಯರಾಜ್, ‘ಕಸ ವಿಲೇವಾರಿ ಸಂಬಂಧ ರಾಮಕೃಷ್ಣ ಆಶ್ರಮದ ಜೊತೆ ಕಾರ್ಯನಿರ್ವಹಿಸುವ ಮಂಗಳಾ ಸಂಪನ್ಮೂಲ ನಿರ್ವಹಣೆ ಸಂಸ್ಥೆ (ಎಂಆರ್‌ಎಂಪಿಎಲ್‌)  ಸಲ್ಲಿಸಿದ್ದ ಡಿಪಿಆರ್‌ ಹಾಗೂ ಇನ್ನೊಂದು ಖಾಸಗಿ ಸಂಸ್ಥೆ ಸಲ್ಲಿಸಿದ್ದ ಡಿಪಿಆರ್‌ಗಳೆರಡನ್ನೂ  ಪಾಲಿಕೆಯಿಂದ ರಾಜ್ಯ ಮಟ್ಟದ ತಾಂತ್ರಿಕ ಸಮಿತಿಗೆ ಕಳುಹಿಸಲಾಗಿತ್ತು. ಇವೆರಡರಲ್ಲಿ ಒಂದು ಟೆಂಡರ್‌ ಅನ್ನು ಮಾತ್ರ ಆಯ್ಕೆ ಮಾಡಿ ಕಳುಹಿಸುವಂತೆ ಅಲ್ಲಿಂದ ಸೂಚನೆ ಬಂದಿತ್ತು. ಆದರೆ, ಅಧಿಕಾರಿಗಳು ಎಂಆರ್‌ಎಂಪಿಎಲ್‌ನ ಡಿಪಿಆರ್‌ ಕೈಬಿಟ್ಟು, ಇನ್ನೊಂದು ಖಾಸಗಿ ಸಂಸ್ಥೆ ರೂಪಿಸಿದ ಡಿಪಿಆರ್‌ ಅಂತಿಮಗೊಳಿಸಿದ್ದಾರೆ. ಈ ವಿಚಾರವನ್ನು ಪಾಲಿಕೆ ಸದಸ್ಯರ ಗಮನಕ್ಕೇ ತಂದಿಲ್ಲ ಏಕೆ’ ಎಂದು ಪ್ರಶ್ನಿಸಿದರು.

ಶೇ 40 ಕಮಿಷನ್‌ ಇದೆಯೇ:

‘ಎಂಆರ್‌ಎಂಪಿಎಲ್‌ ರೂಪಿಸಿದ್ದ ಡಿಪಿಆರ್‌ನಲ್ಲಿ ಪಾಲಿಕೆಗೆ ಯಾವುದೇ ಆರ್ಥಿಕ ಹೊರೆ ಇರಲಿಲ್ಲ. ಕಸವನ್ನು ಸಂಸ್ಥೆಯೇ ಹಣಕೊಟ್ಟು ಖರೀದಿಸುವಂತಹ ಪ್ರಸ್ತಾಪ ಅದರಲ್ಲಿತ್ತು. ಈಗ ಅಂತಿಮಗೊಳಿಸಲಾಗುತ್ತಿರುವ ಡಿಪಿಆರ್‌ನಲ್ಲಿ ಕಸ ವಿಲೇವಾರಿ ವಾಹನಗಳ ಖರೀದಿಗೆ ಪಾಲಿಕೆಯೇ ಕೊಟಿಗಟ್ಟಲೆ ರೂಪಾಯಿ ವ್ಯಯಿಸಬೇಕಿದೆ. ಪಾಲಿಕೆಗೆ ಉಳಿತಾಯ ಮಾಡುವ ಡಿಪಿಆರ್‌ ಅನ್ನು ಬದಿಗಿಟ್ಟು, ಪಾಲಿಕೆಯ ಹೊರೆ ಹೆಚ್ಚಿಸುವ  ಡಿಪಿಆರ್‌ ಅನ್ನು ಅಂತಿಮಗೊಳಿಸಲಾಗಿದೆ. ಇದರ ಹಿಂದಿನ ಮರ್ಮವೇನು. ಇದರ ಹಿಂದೆಯೂ ಶೇ 40 ಪಡೆಯಲಾಗಿದೆಯೇ’ ಎಂದು ಎ.ಸಿ.ವಿನಯರಾಜ್‌ ಪ್ರಶ್ನಿಸಿದರು.

ಜಂಟಿ ಆಯುಕ್ತ ಶಬರಿನಾಥ್‌, ‘ಡಿಪಿಆರ್‌ ಅಂತಿಮಗೊಳಿಸಲು ಕರೆದ ಸಭೆಗೆ ಎಂಆರ್‌ಎಂಪಿಎಲ್‌ ಪ್ರತಿನಿಧಿಗಳನ್ನೂ ಆಹ್ವಾನಿಸಿದ್ದೆವು. ಈ ಸಂಸ್ಥೆಯ ಡಿಪಿಆರ್‌ನ ಕಾರ್ಯಸಾಧ್ಯತೆ ಬಗ್ಗೆ ಸಂದೇಹಗಳಿದ್ದುದರಿಂದ ಅದನ್ನು ಕೈಬಿಡಲಾಗಿದೆ. ರಾಜ್ಯ ಮಟ್ಟದ ತಾಂತ್ರಿಕ ಸಲಹಾ ಸಮಿತಿಯೂ ಇದಕ್ಕೆ ಸಮ್ಮತಿಸಿದ್ದು, ಅಂತಿಮ ಅನುಮೋದನೆಗಾಗಿ ಉನ್ನತಾಧಿಕಾರ ಸಮಿತಿಗೆ ಕಳುಹಿಸಲಾಗಿದೆ. ಈ ಡಿಪಿಆರ್‌ಗೆ ಬೇಕಾಗುವುದು ₹ 42 ಕೋಟಿ ಮಾತ್ರ’ ಎಂದು ಸಮರ್ಥಿಸಿಕೊಂಡರು.

‘ಈಗಿನ ಟೆಂಡರ್‌ ಅವಧಿ ಇನ್ನು ನಾಲ್ಕು ತಿಂಗಳ ಒಳಗೆ ಮುಗಿಯಲಿದೆ. ನಾಲ್ಕು ತಿಂಗಳಲ್ಲಿ ಡಿಪಿಆರ್‌ ಅಂತಿಮಗೊಳಿಸಿ, ಟೆಂಡರ್‌ ಪ್ರಕ್ರಿಯೆಯನ್ನೂ ಮುಗಿಸಬೇಕು. ಟೆಂಡರ್ ಷರತ್ತುಗಳೇನು ಎಂಬುದು ಪಾಲಿಕೆ ಸದಸ್ಯರಿಗೂ ತಿಳಿಯಬೇಕು’ ಎಂದು ವಿನಯರಾಜ್‌ ಹೇಳಿದರು.

ವಿರೋಧ ಪಕ್ಷದ ನಾಯಕ ನವೀನ್‌ ಡಿಸೋಜಾ, ಕಾಂಗ್ರೆಸ್‌ನ ಶಶಿಧರ ಹೆಗ್ಡೆ, ಪ್ರವೀಣಚಂದ್ರ ಆಳ್ವ, ಅಬ್ದುಲ್‌ ರವೂಫ್‌ ಹಾಗೂ ಭಾಸ್ಕರ ಮೊಯಿಲಿ, ‘ಡಿಪಿಆರ್‌ ಕುರಿತು ವಿಸ್ತೃತ ಚರ್ಚೆಗೆ ಅವಕಾಶ ನೀಡಬೇಕು. ಡಿಪಿಆರ್ ಪರಿಶೀಲನೆಗೆ ಒಳಪಡಿಸಲು ಸಮಿತಿ ರಚಿಸಬೇಕು’ ಎಂದು ಒತ್ತಾಯಿಸಿದರು. ಬಿಜೆಪಿಯ ರಾಧಾಕೃಷ್ಣ ಅವರೂ ದನಿಗೂಡಿಸಿದರು.

‘ಡಿಪಿಆರ್‌ ಆರಂಭಿಕ ಹಂತದಲ್ಲೇ ಇದೆ. ಹಾಗಾಗಿ ಸಮಗ್ರವಾಗಿ ಚರ್ಚಿಸಿ ನಿರ್ಧಾರಕ್ಕೆ ಬರಲು ಅವಕಾಶ ಇದೆ’ ಎಂದು ಆಡಳಿತ ಪಕ್ಷದ ಸಚೇತಕ ಪ್ರೇಮಾನಂದ ಶೆಟ್ಟಿ ಹೇಳಿದರು.

ಈ ಬಗ್ಗೆ ವಿಶೇಷ ಸಭೆ ಕರೆದು ಚರ್ಚೆಗೆ ಅವಕಾಶ ನಿಡುವುದಾಗಿ ಮೇಯರ್‌ ಪ್ರಕಟಿಸಿದರು.

ಮತ್ತೆ ಸಾಲದ ಹೊರೆ ಏಕೆ: ‘ನಗರದಲ್ಲಿ ಕಸ ವಿಲೇವಾರಿಯನ್ನು ಗುತ್ತಿಗೆ ಪಡೆದ ಆ್ಯಂಟನಿ ಕಂಪನಿಗೆ ₹ 100 ಕೋಟಿಗೂ ಅಧಿಕ ಪಾವತಿ ಬಾಕಿ ಇದೆ. ಮೂಲಸೌಕರ್ಯ ಅಭಿವೃದ್ಧಿಗಾಗಿ ಏಷ್ಯಾ ಅಭಿವೃದ್ಧಿ ಬ್ಯಾಂಕ್‌ನಿಂದ (ಎಡಿಬಿ) ಪಡೆದ ₹ 1500 ಕೋಟಿ ಸಾಲ ಮರುಪಾವತಿಮಾಡಬೇಕಿದೆ. ಈ ನಡುವೆ ಶಾಸಕರು ಸೂಚಿಸಿದರು ಎಂಬ ಕಾರಣಕ್ಕೆ ತುಂಡು ಕಾಮಗಾರಿಗಳಿಗಾಗಿ ಮತ್ತೆ ₹ 100 ಕೋಟಿಯನ್ನು ಎಡಿಬಿಯಿಂದ  ಸಾಲ ಪಡೆಯಲಾಗುತ್ತಿದೆ. ಈ ಸಾಲ ಮರುಪಾವತಿಗೆ ಜನರಿಗೆ ಮತ್ತೆ ತೆರಿಗೆ ಹೊರೆ ಹೇರಬೇಕಾಗುತ್ತದೆ. ನಗರದ ನಿವಾಸಿಗಳು ಆಸ್ತಿ ಮಾರಿ ಪಾಲಿಕೆಗೆ ತೆರಿಗೆ ‍ಪಾವತಿಸಬೇಕೇ’ ಎಂದು ಕಾಂಗ್ರೆಸ್‌ನ ಅಬ್ದುಲ್‌ ರವೂಫ್‌ ಪ್ರಶ್ನಿಸಿದರು.

‘ಆ್ಯಂಟನಿ ಕಂಪನಿಗೆ ಪಾವತಿ ಬಾಕಿ ಇರುವುದು ₹ 9 ಕೋಟಿ ಮಾತ್ರ. ಕಾರ್ಮಿಕರಿಗೆ ಕನಿಷ್ಠ ವೇತನ ನೀಡುವ ಸಲುವಾಗಿ ₹ 60 ಕೋಟಿ ಪಾವತಿ ಬಾಕಿ ಇದೆ ಎಂದು ಕಂಪನಿ ಹೇಳುತ್ತಿದೆ. ಹಾಗೂ ₹ 17 ಕೋಟಿ ಬಾಕಿ ಪಾವತಿಗೆ ಸಂಬಂಧಿಸಿ ವ್ಯಾಜ್ಯ ನಡೆಯುತ್ತಿದೆ’ ಎಂದು ಶಬರಿನಾಥ್‌ ವಿವರ ನೀಡಿದರು.  

‘ನಗರದ ಅಭಿವೃದ್ಧಿಗೆ ಎಷ್ಟು ಸಾಲ ಪಡೆಯಲಾಗಿದೆ, ಎಷ್ಟು ಪಾವತಿ ಬಾಕಿ ಇದೆ. ಪಾಲಿಕೆಯ ವರಮಾನ ಎಷ್ಟು ಎಂಬುದರ ಬಗ್ಗೆ ಶ್ವೇತಪತ್ರ ಹೊರಡಿಸಬೇಕು’ ಎಂದು ಶಶಿಧರ ಹೆಗ್ಡೆ ಒತ್ತಾಯಿಸಿದರು. 

ಮಂಗಳೂರು ದಸರಾಕ್ಕೂ ಅನುದಾನ: ‘ಮೈಸೂರು ದಸರಾ ಹಾಗೂ ಶಿವಮೊಗ್ಗ ದಸರಾಗಳಿಗೆ ಸರ್ಕಾರ ವಿಶೇಷ ಅನುದಾನ ನೀಡುತ್ತಿದೆ. ಮಂಗಳೂರು ದಸರಾ ದಸರಾಕ್ಕೂ ಸರ್ಕಾರದ ಬಜೆಟ್‌ನಲ್ಲಿ ₹ 5 ಕೋಟಿ ಮೀಸಲಿಡುವಂತೆ ಪಾಲಿಕೆ ಪತ್ರ ಬರೆಯಬೇಕು’ ಎಂದು ಬಿಜೆಪಿ ಸದಸ್ಯ ಸುಧೀರ್‌ ಶೆಟ್ಟಿ ಒತ್ತಾಯಿಸಿದರು. ಕಾಂಗ್ರೆಸ್‌ನ ಶಶಿಧರ ಹೆಗ್ಡೆ ದನಿಗೂಡಿಸಿದರು.

ಎಲ್‌ಇಡಿ ಅಳವಡಿಕೆ ವಿಳಂಬ– ಆಕ್ರೋಶ

‘ನಗರದಲ್ಲಿ ಎಲ್‌ಇಡಿ ಬೀದಿ ದೀಪಗಳನ್ನು ಅಳವಡಿಸುವ ಕಾರ್ಯ ಆಮೆಗತಿಯಲ್ಲಿ ಸಾಗುತ್ತಿದೆ. ಇದಕ್ಕೆ ಅಧಿಕಾರಿಗಳ ಅಸಡ್ಡೆ ಹಾಗೂ ಆಡಳಿತ ನಡೆಸುವವರಲ್ಲಿ ಇಚ್ಛಾ ಶಕ್ತಿ ಇಲ್ಲದಿರುವುದೇ ಕಾರಣ’ ಎಂದು ಎ.ಸಿ.ವಿನಯರಾಜ್‌ ಆರೋಪಿಸಿದರು.

‘ಖಾಸಗಿ ಸಹಭಾಗಿತ್ವದ  (ಪಿಪಿಪಿ) ಈ ಕಾಮಗಾರಿ ಅನುಷ್ಠಾನಕ್ಕಾಗಿ ರಚಿಸಲಾದ ಗುತ್ತಿಗೆ ಏಜೆನ್ಸಿಗಳ ಒಕ್ಕೂಟದಲ್ಲಿ ಹಣಕಾಸಿನ ನೆರವು ಒದಗಿಸುವ ಕಂಪನಿಯು ಒಪ್ಪಂದದಿಂದ ಹಿಂದಕ್ಕೆ ಸರಿದಿದೆ. ಒಪ್ಪಂದದ ಮೂಲ ದಾಖಲೆ ಪರಿಶೀಲಿಸಿದಾಗ ಗುತ್ತಿಗೆ ಏಜೆನ್ಸಿಗಳ ಒಕ್ಕೂಟದಲ್ಲಿದ್ದ ಎರಡು ಕಂಪನಿಗಳ ಅಧಿಕಾರಿಗಳಿಂದ ಸಹಿಯನ್ನೇ ಪಡೆದಿಲ್ಲ’ ಎಂದೂ ಅವರು ಆರೋಪಿಸಿದರು. 

‘ನವೆಂಬರ್ ಅಂತ್ಯದೊಳಗೆ ಎಲ್‌ಇಡಿ ದೀಪಗಳನ್ನು ಅಳವಡಿಸಲು ಕಂಪನಿ ಒಪ್ಪಿದೆ. ಇಲ್ಲದಿದ್ದರೆ, ಅವರ ವಿರುದ್ಧ ಕ್ರಮಕೈಗೊಳ್ಳಲಿದ್ದೇವೆ‘ ಎಂದು ಎಂಜಿನಿಯರ್‌  ಸ್ಪಷ್ಟಪಡಿಸಿದರು.

ವಾಹನ ನಿಲುಗಡೆಗೆ ರಸ್ತೆ ಬಳಕೆ– ಆಕ್ರೋಶ

‘ರಸ್ತೆಗಳನ್ನು ವಿಸ್ತರಿಸಿದ ಬಳಿಕವೂ ಕಾರುಗಳ ನಿಲುಗಡೆಗೆ ಅವುಗಳನ್ನು ಬಳಸಲಾಗುತ್ತಿದೆ. ಸಂಚಾರ ಪೊಲಿಸರೂ ಕ್ರಮ ಕೈಗೊಳ್ಳುತ್ತಿಲ್ಲ. ಇಷ್ಟೆಲ್ಲ ದುಡ್ಡು ಸುರಿದು ಉತ್ತಮ ಪಾದಚಾರಿ ಮಾರ್ಗ ನಿರ್ಮಿಸಿದರೆ, ವ್ಯಾಪಾರಿಗಳು, ಗೂಡಂಗಡಿ ಮಾಲೀಕರು ಅವುಗಳನ್ನು ಒತ್ತುವರಿ ಮಾಡುತ್ತಿದ್ದಾರೆ. ನಗರದಲ್ಲಿ ಸಂಚಾರ ದಟ್ಟಣೆ ಬವಣೆ ನಿವರಣೆ ಆಗುತ್ತಿಲ್ಲ’‌ ಎಂದು ಪ್ರವೀಣ್ ಚಂದ್ರ ಆಳ್ವ ಹಾಗೂ ನವೀನ್‌ ಡಿಸೋಜಾ ದೂರಿದರು.

ಒತ್ತುವರಿ ತೆರವಿಗೆ ಕ್ರಮಕೈಗೊಳ್ಳುವಂತೆ ಹಾಗೂ ನವರಾತ್ರಿ ಹಬ್ಬದ ಸಂದರ್ಭದಲ್ಲಿ ಕುದ್ರೊಳಿ ಹಾಗೂ ಮಗಳಾದೇವಿ ದೇವಸ್ಥಾಗಳ ಬಳಿ ಸಂಚಾರ ದಟ್ಟಣೆ ಉಂಟಾಗದಂತೆ ಎಚ್ಚರ ವಹಿಸುವಂತೆ ಮೇಯರ್‌ ಅವರು ಅಧಿಕಾರಿಗಳಿಗೆ ಹಾಗೂ ಸಂಚಾರ ವಿಭಾಗದ ಎಸಿಪಿ ಅವರಿಗೆ ಸೂಚನೆ ನೀಡಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು