ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಡುಬಿದಿರೆ | ಆಳ್ವಾಸ್‌ ವಿರಾಸತ್‌: ಸಪ್ತ ಮೇಳಗಳ ಮೆರುಗು

ಆಕರ್ಷಕ ಪುಷ್ಪ ಪ್ರದರ್ಶನ, ಕಣ್ಸೆಳೆಯುವ ಹಸಿರು ತರಕಾರಿ ವನ
Published 16 ಡಿಸೆಂಬರ್ 2023, 13:14 IST
Last Updated 16 ಡಿಸೆಂಬರ್ 2023, 13:14 IST
ಅಕ್ಷರ ಗಾತ್ರ

ಮೂಡುಬಿದಿರೆ (ದಕ್ಷಿಣ ಕನ್ನಡ): ಆಳ್ವಾಸ್‌ ವಿರಾಸತ್‌ನಲ್ಲಿ ಸಾಂಸ್ಕೃತಿಕ ವೈಭವವನ್ನು ಸವಿಯಲು ಬಂದವರಿಗೆ ಇಲ್ಲಿನ ಏಳು ಮೇಳಗಳು ಕಣ್ಣಿಗೆ ರಸದೂಟವನ್ನು ಉಣಬಡಿಸುತ್ತಿವೆ.

ಮಿಜಾರುಗುತ್ತು ಶತಾಯುಷಿ ಆನಂದ ಆಳ್ವ ಸ್ಮರಣಾರ್ಥ ಇಲ್ಲಿನ ವಿದ್ಯಾಗಿರಿಯಲ್ಲಿ ಮುಂಡ್ರುದೆಗುತ್ತು ಕೆ.ಅಮರನಾಥ ಶೆಟ್ಟಿ ಆವರಣದಲ್ಲಿ ‘ಪ್ರದರ್ಶನ ಮತ್ತು ಮಾರಾಟ ಮಹಾಮೇಳ’ ಏರ್ಪಡಿಸಲಾಗಿದೆ. ಇಲ್ಲಿರುವ ಕೃಷಿಮೇಳ, ಆಹಾರ ಮೇಳ, ಫಲಫುಷ್ಪ ಪ್ರದರ್ಶನ, ಕರಕುಶಲ ಮತ್ತು ಪ್ರಾಚ್ಯವಸ್ತು ಪ್ರದರ್ಶನ ಮೇಳ, ಚಿತ್ರಕಲಾ ಮೇಳ, ಕಲಾಕೃತಿಗಳ ಮತ್ತು ಛಾಯಾಚಿತ್ರಗಳ ಪ್ರದರ್ಶನ ಕಣ್ಣಿಗೆ ಆನಂದವನ್ನು ನೀಡುವುದರ ಜೊತೆಗೆ ನಾಲಗೆಯ ಚಪಲವನ್ನು ತೀರಿಸಿಕೊಳ್ಳುವ ಅವಕಾಶವನ್ನೂ ಒದಗಿಸಿವೆ.

ಕೃಷಿ ಮೇಳದ ಆವರಣವನ್ನು ಪ್ರವೇಶಿಸಿದಂತೆಯೇ ಚಪ್ಪರದಲ್ಲಿ ನೇತಾಡುತ್ತಿರುವ ಸೊರೆಕಾಯಿ, ಅಲಸಂಡೆ, ಗಿಡಗಳಲ್ಲಿ ನಳನಳಿಸುವ ಬದನೆಕಾಯಿ, ಬೆಂಡೆ ಮೊದಲಾದ ತರಕಾರಿಗಳನ್ನು ಹೊತ್ತು ತಲೆದೂಗುವ ‘ಹಸಿರು ವನ’ ನಮ್ಮನ್ನು ಸ್ವಾಗತಿಸುತ್ತದೆ. ಈ ತರಹೇವಾರಿ ತರಕಾರಿಗಳನ್ನು ಎರಡು ತಿಂಗಳು ಶ್ರಮವಹಿಸಿ ಬೆಳೆಸಲಾಗಿದೆ. 

ಅಲ್ಲಿಂದ ಮುಂದಕ್ಕೆ ಸಾಗಿದಂತೆ ಬಣ್ಣಬಣ್ಣದ ಫಲಫುಷ್ಪ ಪ್ರದರ್ಶನ ಕಣ್ಸೆಯುತ್ತದೆ. ಸೇವಂತಿಗೆ ಹೂವುಗಳಲ್ಲಿ ರೂಪುಗೊಂಡ ಆನೆಯ ಫುಷ್ಪಕಲಾಕೃತಿಗಳು, ಅಚ್ಚ ಬಿಳಿಬಣ್ಣ ಹೂವುಗಳಿಂದ ರೂಪುಗೊಂಡ ನವಿಲುಗಳು, ಯಕ್ಷಗಾನದ ಕಿರೀಟ ಮನತಣಿಸುತ್ತವೆ. ಇಲ್ಲಿ ಅಳವಡಿಸಿರುವ ಭಾರಿ ಗಾತ್ರದ ಡೊಳ್ಳು ಕುಣಿತ, ಗೊರವರ ಕುಣಿತದ ಬೊಂಬೆಗಳು, ಎತ್ತಿನ ಬಂಡಿಯ ಪ್ರತಿಕೃತಿ ಫಲಫುಷ್ಪ ಪ್ರದರ್ಶನದ ಒಟ್ಟಂದವನ್ನು ಮತ್ತಷ್ಟು ಹೆಚ್ಚಿಸಿದೆ. ಅಲ್ಲಲ್ಲಿ ನಿಲ್ಲಿಸಿರುವ ಬೊಂಬೆಗಳು ಕರಾವಳಿಯ ಹಾಗೂ ಕರುನಾಡ ಸಂಸ್ಕೃತಿಯ ಹಿರಿಮೆಯನ್ನು ಸಾರುವುದರ ಜೊತೆಗೆ ಮನಸ್ಸಿಗೂ ಮುದ ನೀಡುತ್ತಿವೆ. 

ವಿರಾಸತ್‌ನಲ್ಲಿ ಪುಷ್ಪಪ್ರದರ್ಶನ
ವಿರಾಸತ್‌ನಲ್ಲಿ ಪುಷ್ಪಪ್ರದರ್ಶನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT