ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸ್ವಚ್ಛವಾಹಿನಿ’ಗೆ ಜಿಪಿಎಸ್: ಕಸ ಸಂಗ್ರಹಕ್ಕೆ ನಿಗಾ

ದಕ್ಷಿಣ ಕನ್ನಡ ಜಿಲ್ಲೆಯ ಎಂಟು ಗ್ರಾಮ ಪಂಚಾಯಿತಿಗಳಲ್ಲಿ ಪೈಲಟ್ ಯೋಜನೆಯಾಗಿ ಅನುಷ್ಠಾನ
Last Updated 24 ಮೇ 2022, 11:17 IST
ಅಕ್ಷರ ಗಾತ್ರ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಎಂಟು ಗ್ರಾಮ ಪಂಚಾಯಿತಿಗಳಲ್ಲಿ ಮನೆ–ಮನೆಯಿಂದ ಕಸ ಸಂಗ್ರಹಿಸುವ ‘ಸ್ವಚ್ಛವಾಹಿನಿ’ ವಾಹನಕ್ಕೆ ಜಿಪಿಎಸ್‌ ಅಳವಡಿಸಿ, ಟ್ರ್ಯಾಕಿಂಗ್ ಮಾಡುವ ವ್ಯವಸ್ಥೆ ಜಾರಿಗೊಂಡಿದೆ. ಪೈಲಟ್ ಯೋಜನೆಯಾಗಿ ಇದನ್ನು ಅನುಷ್ಠಾನಗೊಳಿಸಲಾಗಿದೆ.

ಮಂಗಳೂರು ಹಾಗೂ ಬಂಟ್ವಾಳ ತಾಲ್ಲೂಕುಗಳ ಹಳೆಯಂಗಡಿ, ಪಡುಪಣಂಬೂರು, ಮುತ್ತೂರು, ಯೆಕ್ಕೂರು, ಕರಿಯಂಗಳ, ಸಂಗಬೆಟ್ಟು, ಬಡಗ ಎಡಪದವು, ಎಡಪದವು ಗ್ರಾಮ ಪಂಚಾಯಿತಿಗಳ ವಾಹನಗಳಿಗೆ ಜಿಪಿಎಸ್‌ ಅಳವಡಿಸಲಾಗಿದೆ. ಆಯ್ದ ಪಂಚಾಯಿತಿಗಳಲ್ಲಿ ಯೋಜನೆ ಅನುಷ್ಠಾನಗೊಂಡು ಒಂದು ತಿಂಗಳು ಕಳೆದಿದೆ. ವಾಹನ ಸಂಚಾರಕ್ಕೆ ಮಾರ್ಗಸೂಚಿ ನಕಾಶೆ ಸಿದ್ಧಪಡಿಸಲಾಗಿದ್ದು, ಕಸ ಸಂಗ್ರಹ ವಾಹನಗಳು ಎಲ್ಲೆಲ್ಲಿ ಹೋಗುತ್ತವೆ, ಎಷ್ಟು ಮನೆಗಳನ್ನು ತಲುಪುತ್ತವೆ, ಎಷ್ಟು ದೂರ ಕ್ರಮಿಸಿವೆ ಎಂಬುದನ್ನು ಗಮನಿಸಲು ಸಾಧ್ಯವಾಗುತ್ತಿದೆ.

‘ಯಾವ ಸಮಯದಲ್ಲಿ ವಾಹನ ಹೊರಟಿದೆ, ಯಾವ ಭಾಗದಲ್ಲಿ ಸಂಚರಿಸಿದೆ ಎಂಬುದನ್ನು ಗಮನಿಸಲಾಗುತ್ತದೆ. ಕಸ ಸಂಗ್ರಹ ವಾಹನಗಳು ವಿನಾಕಾರಣ ವಿಳಂಬ ಮಾಡಿದರೆ, ಜಿಪಿಎಸ್‌ ಮೂಲಕ ಪತ್ತೆ ಮಾಡಬಹುದು. ನಿರ್ದಿಷ್ಟ ಪಂಚಾಯಿತಿ ವ್ಯಾಪ್ತಿಯಲ್ಲಿ ಮೊದಲು ಸಂಗ್ರಹವಾಗುವ ತ್ಯಾಜ್ಯಕ್ಕಿಂತ ಶೇ 15ರಷ್ಟು ಹೆಚ್ಚುವರಿ ತ್ಯಾಜ್ಯ ಸಂಗ್ರಹವಾಗುತ್ತಿದೆ. ಇದರಿಂದ ವಾಸ್ತವದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯದ ಪ್ರಮಾಣ ಲೆಕ್ಕಾಚಾರ ಹಾಕಬಹುದು’ ಎನ್ನುತ್ತಾರೆ ಈ ವ್ಯವಸ್ಥೆಯ ಉಸ್ತುವಾರಿ ನೋಡಿಕೊಳ್ಳುತ್ತಿರುವ ಸಾಹಸ ಸ್ವಯಂ ಸೇವಾ ಸಂಸ್ಥೆಯ ಸಂಯೋಜಕ ಸುದೇಶ್ ಕಿಣಿ.

‘ಎಚ್‌ಸಿಎಲ್ ಫೌಂಡೇಷನ್‌ನ ಸಿಎಸ್‌ಆರ್ ನಿಧಿಯಲ್ಲಿ ಆರಂಭದಲ್ಲಿ ಎಂಟು ಗ್ರಾಮ ಪಂಚಾಯಿತಿಗಳ ವಾಹನಗಳಿಗೆ ಜಿಪಿಎಸ್ ಅಳವಡಿಸಲಾಗಿದೆ. ಇನ್ನು ಎರಡು ತಿಂಗಳುಗಳಲ್ಲಿ ಇನ್ನೂ 15 ಗ್ರಾಮ ಪಂಚಾಯಿತಿಗಳ ವಾಹನಗಳಿಗೆ ಜಿಪಿಎಸ್ ಅಳವಡಿಸಲಾಗುವುದು. ಸಾಹಸ ಸಂಸ್ಥೆಯ ಕಚೇರಿ ಹಾಗೂ ಜಿಲ್ಲಾ ಪಂಚಾಯಿತಿ ಕಚೇರಿಗಳಲ್ಲಿ ಡಿವೈಸ್ ಇಡಲಾಗಿದ್ದು, ಕಸ ಸಂಗ್ರಹ ವಾಹನಗಳ ಸಂಚಾರವನ್ನು ಕಚೇರಿಯಲ್ಲಿಯೇ ಕುಳಿತು ಗಮನಿಸಲು ಸಾಧ್ಯವಾಗುತ್ತದೆ’ ಎಂದು ತಿಳಿಸಿದರು.

ಒಣಕಸವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ತಾಲ್ಲೂಕಿನ ತೆಂಕಎಡಪದವಿನಲ್ಲಿ ಸಮಗ್ರ ಘನತ್ಯಾಜ್ಯ ವಿಲೇವಾರಿ ಕೇಂದ್ರ (ಎಂಆರ್‌ಎಫ್) ಸ್ಥಾಪನೆಯಾಗುತ್ತಿದೆ. ಮುಂದಿನ ದಿನಗಳಲ್ಲಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕೂಡ ಇದನ್ನು ಮಾಡಲು ಉದ್ದೇಶಿಸಲಾಗಿದೆ. ಕಸ ಸಂಗ್ರಹ ವ್ಯವಸ್ಥೆ ಉತ್ತಮಗೊಂಡರೆ, ಈ ಯೋಜನೆಯ ಯಶಸ್ವಿ ಅನುಷ್ಠಾನ ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಜಿಪಿಎಸ್ ಅಳವಡಿಕೆ ಮಹತ್ವದ್ದಾಗಿದೆ ಎಂದು ಅವರು ಹೇಳಿದರು.

‘ಫಲಿತಾಂಶ ಗಮನಿಸಿ ವಿಸ್ತರಣೆ’

ಎಂಟು ವಾಹನಗಳಿಗೆ ಗ್ರಾಮ ಪಂಚಾಯಿತಿಗಳ ಕಸ ಸಂಗ್ರಹ ವಾಹನಕ್ಕೆ ಅಳವಡಿಸಿರುವ ಜಿಪಿಎಸ್ ಮೂಲಕ ವ್ಯವಸ್ಥೆಯನ್ನು ಪರಿಶೀಲಿಸಲಾಗುತ್ತಿದೆ. ಕಚೇರಿಯಲ್ಲಿ ಒಬ್ಬ ಸಿಬ್ಬಂದಿಗೆ ಇದರ ಬಗ್ಗೆ ನಿಗಾವಹಿಸಲು ಸೂಚಿಸಲಾಗಿದೆ. ಫಲಿತಾಂಶವನ್ನು ಗಮನಿಸಿ, ಮುಂದಿನ ದಿನಗಳಲ್ಲಿ ಉಳಿದ ಗ್ರಾಮ ಪಂಚಾಯಿತಿಗಳಿಗೆ ಇದನ್ನು ವಿಸ್ತರಿಸುವ ಬಗ್ಗೆ ಯೋಚಿಸಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT