ಭಾನುವಾರ, 24 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳ್ತಂಗಡಿ: ಅಂಗಡಿ ಬಾಡಿಗೆ ಬಾಕಿದಾರರ ವಿರುದ್ಧ ಕ್ರಮಕ್ಕೆ ಒತ್ತಾಯ

Published 27 ಜೂನ್ 2023, 13:49 IST
Last Updated 27 ಜೂನ್ 2023, 13:49 IST
ಅಕ್ಷರ ಗಾತ್ರ

ಬೆಳ್ತಂಗಡಿ: ಅಳದಂಗಡಿ ಗ್ರಾಮ ಪಂಚಾಯಿತಿಯ 2023-24ನೇ ಸಾಲಿನ ಗ್ರಾಮ ಸಭೆ ಪಂಚಾಯಿತಿ ಅಧ್ಯಕ್ಷೆ ಸೌಮ್ಯ ಹರಿಪ್ರಸಾದ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಬೆಳ್ತಂಗಡಿ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ರಂಜಿತ್ ಮಾರ್ಗದರ್ಶಿ ಅಧಿಕಾರಿಯಾಗಿದ್ದರು.

ಗ್ರಾಮ ಪಂಚಾಯಿತಿಯ ಅಂಗಡಿ ಕೋಣೆಯ ಬಾಡಿಗೆದಾರರಿಂದ ಸುಮಾರು ₹ 10ಲಕ್ಷ ಬಾಡಿಗೆ‌ ಬಾಕಿ ಇದ್ದು ಅವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕು. ಅವರಿಂದ ಬಾಡಿಗೆ ವಸೂಲು ಮಾಡಲು ಆಗದೆ ಇದ್ದರೆ ನಮಗೂ ಎರಡು ಅಂಗಡಿ ಕೋಣೆ ಬೇಕು ಎಂದು ಗ್ರಾಮಸ್ಥರು ಹೇಳಿದರು.

ಪಿಲ್ಯ ಪರಿಸರದಲ್ಲಿ ಪಿಲ್ಯ ಕೆರೆ, ಬರಾಯ ಕೆರೆ, ಗುತ್ತು ಕೆರೆಗಳು ಒತ್ತುವರಿಯಾಗುತ್ತಿದೆ. ಈ ಕೆರೆಗಳಿಗೆ ಸರ್ಕಾರದಿಂದ ಭದ್ರತೆ ನೀಡುವ ವ್ಯವಸ್ಥೆ ಇದೆಯೇ ಎಂದು ಗ್ರಾಮಸ್ಥರ ಪ್ರಶ್ನಿಸಿದರು.

ಈ ಕೆರೆಗಳನ್ನು ಪ್ರವಾಸಿ ತಾಣ ಮಾಡುವ ಯೋಜನೆಯಿದೆ. ಉದ್ಯೋಗ ಖಾತರಿಯಲ್ಲಿ, ಅಮೃತ ಸರೋವರ ಯೋಜನೆಯಲ್ಲಿ ₹ 75 ಲಕ್ಷದ ಅಭಿವೃದ್ಧಿ ಕಾಮಗಾರಿ ನಡೆಸಲಾಗುತ್ತದೆ ಎಂದು ಪಿಡಿಒ ಉತ್ತರಿಸಿದರು.

ಅಳದಂಗಡಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಂಚರಿಸುವ ರಸ್ತೆ ಹದಗೆಟ್ಟಿದ್ದು, ಕೂಡಲೇ ದುರಸ್ತಿಗೊಳಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದರು.

ಸುಲ್ಕೇರಿಮೊಗ್ರು ಮಾಳಿಗೆ ಪ್ರದೇಶದಲ್ಲಿ 30 ಮನೆಗಳಿಗೆ ವಿದ್ಯುತ್ ಪೂರೈಕೆಯಿಲ್ಲ. ವಿದ್ಯಾರ್ಥಿಗಳಿಗೆ ಸಮಸ್ಯೆ ಆಗುತ್ತಿದೆ. ಸೀಮೆಎಣ್ಣೆ ದೀಪ ಹಚ್ಚಲು ಸೀಮೆ ಎಣ್ಣೆ ಸಿಗುವುದಿಲ್ಲ. ವಿದ್ಯುತ್‌ಗಾಗಿ ಇಲಾಖೆಗಳನ್ನು ಸಂಪರ್ಕಿಸಿದರೂ ಪ್ರಯೋಜನವಿಲ್ಲ. ಈ ಭಾಗದವರಿಗೆ ಸೀಮೆ ಎಣ್ಣೆ, ಸೋಲಾರ್ ನೀಡುವಿದಾ ಎಂದು ಗ್ರಾಮಸ್ಥರು ತಿಳಿಸಿದರು.

ಅರಣ್ಯ ಇಲಾಖೆಯ ಅಧಿಕಾರಿಗಳು ನಿರಾಕ್ಷೇಪಣಾ ಪತ್ರ ನೀಡಿದರೆ ವಿದ್ಯುತ್‌ ಸಂಪರ್ಕ ನೀಡಬಹುದು ಎಂದು ಮೆಸ್ಕಾಂ ಅಧಿಕಾರಿ ತಿಳಿಸಿದರು ಸೋಲಾರ್ ವ್ಯವಸ್ಥೆ ಕಲ್ಪಿಸುವ ಕುರಿತು ಪಿಡಿಒ ಭರವಸೆ ನೀಡಿದರು.

ಅಳದಂಗಡಿಯಲ್ಲಿ ರುಧ್ರಭೂಮಿಯ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಪಿಡಿಒ, ‘ಗುತ್ತಿಗೆ ತೆಗೆದುಕೊಳ್ಳಲು ಯಾರೂ ಮುಂದೆ ಬರುತ್ತಿಲ್ಲ. ಉದ್ಯೋಗ ಖಾತರಿಯಲ್ಲಿ ಮಾಡಬೇಕು. ಶೀಘ್ರದಲ್ಲೇ ಕೆಲಸ ಪ್ರಾರಂಭಿಸಲಾಗುವುದು’ ಎಂದರು.

ಪಿಡಿಒ ರಾಘವೇಂದ್ರ ಪಾಟೀಲ್, ಉಪಾಧ್ಯಕ್ಷ ಹರೀಶ್ ಆಚಾರ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT