ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮುಡಿಪು | ಕಾಂಕ್ರೀಟ್‌ ಕಂಬ ಕುಸಿತ; ಬಾಲಕಿ ಸಾವು: ಮತ್ತೋರ್ವ ಬಾಲಕಿ ಪಾರು

Published 21 ಮೇ 2024, 5:50 IST
Last Updated 21 ಮೇ 2024, 5:50 IST
ಅಕ್ಷರ ಗಾತ್ರ

ಮುಡಿಪು: ಹರೇಕಳ ಗ್ರಾಮದ ನ್ಯೂಪಡ್ಪು ಶಾಲೆಯ ಆವರಣ ಗೋಡೆಯ ಕಾಂಕ್ರೀಟ್‌ ಕಂಬ ಕುಸಿದು  ಬಾಲಕಿ  ಸೋಮವಾರ ಮೃತಪಟ್ಟಿದ್ದು, ಅದೇ ಸ್ಥಳದಲ್ಲಿ ಆಡುತ್ತಿದ್ದ ಮತ್ತೊಬ್ಬ ಬಾಲಕಿ ಪಾರಾಗಿದ್ದಾಳೆ.

ನ್ಯೂಪ‍ಡ್ಪುವಿನ  ಸಿದ್ದಿಕ್–ಜಮೀಲಾ ದಂಪತಿಯ ಪುತ್ರಿ ಶಾಜಿಯಾ ಬಾನು (7) ಮೃತ ಬಾಲಕಿ. ಸ್ಥಳೀಯ ಬಾಲಕಿ ಫಾತಿಮಾ (11) ಪಾರಾದ ಬಾಲಕಿ. ‘ಪದಶ್ರೀ ಪುರಸ್ಕೃತರಾದ‌ ಹರೇಕಳ ಹಾಜಬ್ಬರ‌ ಶಾಲೆ’ ಎಂದೇ ಗುರುತಿಸಲ್ಪಟ್ಟಿರುವ ನ್ಯೂಪಡ್ಪು ಶಾಲೆಯಲ್ಲಿ ಮುಡಿಪು ಸರ್ಕಾರಿ ಕಾಲೇಜಿನ‌ ರಾಷ್ಟ್ರೀಯ ಸೇವಾ ಯೋಜನೆಯ (ಎನ್‌ಎಸ್‌ಎಸ್‌) ಶಿಬಿರ ನಡೆಯುತ್ತಿದೆ.  ಎನ್‌ಎಸ್‌ಎಸ್‌ ವಿದ್ಯಾರ್ಥಿಗಳು  ಶ್ರಮದಾನದಲ್ಲಿ ನಡೆಸುತ್ತಿದ್ದಲ್ಲಿ ಶಾಜಿಯಾ ಬಾನು  ಆಟವಾಡುತ್ತಿದ್ದಳು. ಬಳಿಕ ಅಲ್ಲಿಂದ ಸ್ವಲ್ಪ ಎತ್ತರದ ಪ್ರದೇಶದಲ್ಲಿದ್ದ ಆವರಣ ಗೋಡೆಯ ಗೇಟ್ ಬಳಿಗೆ ತೆರಳಿ ಆಟವಾಡುತ್ತಿದ್ದಳು.  ಅದೇ ಊರಿನ  ಫಾತಿಮಾ ಕೂಡಾ ಅಲ್ಲಿ ಆಟವಾಡುತ್ತಿದ್ದಳು.  ಆವರಣ ಗೋಡೆಗೆ ಗೇಟ್‌ ಅಳವಡಿಸಿದ್ದ ಕಾಂಕ್ರೀಟ್‌ ಕಂಬವು, ಮಕ್ಕಳಿಬ್ಬರು ಆಟದಲ್ಲಿ ತಲ್ಲೀನರಾಗಿದ್ದಾಗ ಏಕಾಏಕಿಯಾಗಿ ಕುಸಿದು ಬಿದ್ದಿತ್ತು. ಅದರಡಿ ಸಿಲುಕಿ  ಶಾಜಿಯಾ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾಳೆ. ಫಾತಿಮಾಳಿಗೂ ಸಣ್ಣ ಪುಟ್ಟ ಗಾಯಗಳಾಗಿವೆ’ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

ನ್ಯೂಪಡ್ಪು ಶಾಲೆಯಲ್ಲಿ ಶಾಜಿಯಾ ಬಾನು ಮೂರನೇ ತರಗತಿಯಲ್ಲಿ ಕಲಿಯುತ್ತಿದ್ದಳು.‌ಸಿದ್ದಿಕ್ –ಜಮೀಲಾ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳು ಹಾಗೂ ಒಬ್ಬ  ಗಂಡು ಮಗ ಇದ್ದಾರೆ. ಶಾಜಿಯಾ ಬಾನು ಕೊನೆಯವಳು. ನ್ಯೂಪಡ್ಪು ಬಳಿ ಸಣ್ಣ ‌ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದ ಸಿದ್ದಿಕ್‌ ಅದನ್ನು ತೊರೆದು  ಇತ್ತೀಚೆಗೆ ಬೇರೆ ಕೆಲಸಕ್ಕೆ ಸೇರಿದ್ದರು. ಮಗಳನ್ನು ಕಳೆದುಕೊಂಡ ಬಡ ಕುಟುಂಬದ ಆಕ್ರಂದನ ಮುಗಿಲುಮುಟ್ಟಿತ್ತು.

ಹರೇಕಳದಲ್ಲಿ ಎರಡು ದಿನಗಳಿಂದ ಮಳೆ ಸುರಿದಿತ್ತು. ಸೋಮವಾರ ಸಂಜೆ ಮತ್ತೆ ಮಳೆ ಸುರಿಯಲಾರಂಭಿಸಿತ್ತು. ಮಳೆಯಿಂದಾಗಿ ಆವರಣ ಗೋಡೆ ಒದ್ದೆಯಾಗಿತ್ತು. ಇದೇ ಸಂದರ್ಭದಲ್ಲಿ ಬಾಲಕಿ‌ಯರು ಗೇಟ್‌ನಲ್ಲಿ ನೇತಾಡಿದ್ದು, ಶಿಥಿಲಗೊಂಡ ಆವರಣಗೋಡೆಯ ಕಾಂಕ್ರೀಟ್‌ ಕಂಬ ಉರುಳಿ ಬಿದ್ದು ತುಂಡಾಗಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಉಳ್ಳಾಲ ತಾಲ್ಲೂಕಿನ ತಹಶೀಲ್ದಾರ್, ಕೊಣಾಜೆ‌ಪೊಲೀಸರು ಹಾಗೂ ಇತರ ಅಧಿಕಾರಿಗಳು ಸ್ತಳಕ್ಕೆ ಭೇಟಿ ನೀಡಿ ಪರೀಶೀಲನೆ ನಡೆಸಿದರು. .

ಶಾಲೆಯಲ್ಲಿ ಮುಡಿಪುವಿನ ಎನ್ ಎಸ್ ಎಸ್ ವಿದ್ಯಾರ್ಥಿಗಳಿಂದ ಶಿಬಿರ ನಡೆಯುತ್ತಿದೆ. ಈ ಸ್ಥಳಕ್ಕೆ ಬಾಲಕಿ ಬಂದಿದ್ದಳು. ವಿಧಿಯ ಕ್ರೂರಲೀಲೆಗೆ ಬಾಲಕಿ ಬಲಿಯಾಗಿದ್ದಾಳೆ. ಈ ಘಟನೆಯಿಂದ ತುಂಬಾ ಬೇಸರವಾಗಿದೆ.
-ಹರೇಕಳ ಹಾಜಬ್ಬ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT