ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಳು ಭಾಷೆಯ ಪೋಷಣೆ ಹೆಚ್ಚಾಗಲಿ: ಪ್ರೊ.ಬಿ.ಎ.ವಿವೇಕ ರೈ

ಮಂಗಳೂರು ವಿಶ್ವವಿದ್ಯಾಲಯದಲ್ಲಿ 'ಹಾರ್ಟ್ ಬೀಟ್ಸ್' ಕೃತಿ ಬಿಡುಗಡೆ
Last Updated 10 ಮಾರ್ಚ್ 2021, 12:10 IST
ಅಕ್ಷರ ಗಾತ್ರ

ಕೊಣಾಜೆ (ಮಂಗಳಗಂಗೋತ್ರಿ): ‘ಭಾಷೆ ಬೆಳೆಯಬೇಕಾದರೆ ಆ ಕ್ಷೇತ್ರದಲ್ಲಿ ಶೈಕ್ಷಣಿಕವಾಗಿ ವಿದ್ವತ್ ಕಾರ್ಯಗಳು ನಡೆಯಬೇಕು. ತುಳು ಭಾಷೆಗೆ ಮಾನ್ಯತೆ ದೊರೆಯಬೇಕಾದರೆ ತುಳುವಿನ ಪೋಷಣೆಯ ಕೆಲಸಗಳು ಹೆಚ್ಚೆಚ್ಚು ನಡೆಯಬೇಕು’ ಎಂದು ಜಾನಪದ ವಿದ್ವಾಂಸ, ವಿಶ್ರಾಂತ ಕುಲಪತಿ ಪ್ರೊ.ಬಿ.ಎ.ವಿವೇಕ ರೈ ಅಭಿಪ್ರಾಯಪಟ್ಟರು.

ಮಂಗಳೂರು ವಿಶ್ವವಿದ್ಯಾಲಯದ ಪ್ರಸಾರಾಂಗದ ವತಿಯಿಂದ ಪ್ರೊ.ಸುರೇಂದ್ರ ರಾವ್ ಹಾಗೂ ಪ್ರೊ.ಕೆ.ಚಿನ್ನಪ್ಪ ಗೌಡ ಅವರು ಅನುವಾದಿಸಿರುವ ತುಳು ಕತೆಗಳ ಅನುವಾದ ಸಂಪುಟ ‘ಹಾರ್ಟ್ ಬೀಟ್ಸ್’ ಕೃತಿಯನ್ನು ಬುಧವಾರ ಅನಾವರಣಗೊಳಿಸಿ ಅವರು ಮಾತನಾಡಿದರು.

‘ಹಾರ್ಟ್ ಬೀಟ್’ ಕೃತಿಯೊಂದಿಗೆ ಒಟ್ಟು ಏಳು ಅನುವಾದ ಕೃತಿಗಳನ್ನು ತರುವ ಮೂಲಕ ತುಳು ಭಾಷೆ, ಸಂಸ್ಕೃತಿಗೆ ಜಾಗತಿಕ ಮನ್ನಣೆ ದೊರಕಿಸುವ ಪ್ರಯತ್ನ ಮಾಡಿರುವುದು ಮಹತ್ತರ ಕಾರ್ಯವಾಗಿದೆ. ಅನುವಾದ ಕಾರ್ಯ ಅಷ್ಟು ಸರಳವಲ್ಲ. ಓದುಗನಿಗೆ ಬೇಕಾದ ವಾತಾವರಣದ ಚೌಕಟ್ಟನ್ನು ಅನುವಾದಕರು ಆರಂಭದಲ್ಲಿಯೇ ಮಾಡಿರಬೇಕಾಗುತ್ತದೆ. ಪ್ರೊ.ಸುರೇಂದ್ರರಾವ್ ಹಾಗೂ ಪ್ರೊ. ಚಿನ್ನಪ್ಪ ಗೌಡ ಅವರು ಪ್ರತಿಯೊಂದು ಶಬ್ದವನ್ನು ಅನುಭವಿಸಿಯೇ ಅನುವಾದ ಮಾಡಿ ಸಮಾಜಕ್ಕೆ ಕೊಡುಗೆ ನೀಡಿದ್ದಾರೆ’ ಎಂದರು.

ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಪಿ.ಎಸ್‌.ಯಡಪಡಿತ್ತಾಯ ಅಧ್ಯಕ್ಷತೆ ವಹಿಸಿದ್ದರು. ಪ್ರಸಾರಂಗದ ಮೂಲಕ ಮೌಲಿಕ ಕೃತಿಗಳನ್ನು ಪ್ರಕಟಿಸುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಪ್ರಸಾರಾಂಗದ ಕೃತಿಗಳನ್ನು ಆನ್‌ಲೈನ್‌ ಮೂಲಕ ಮಾರಾಟ‌ಕ್ಕೆ ಅವಕಾಶ ಕಲ್ಪಿಸುವ ಯೋಚನೆಯಿದೆ ಎಂದರು.

ರೋಶನಿ‌ ನಿಲಯ ವಿಶ್ರಾಂತ ಪರೀಕ್ಷಾಂಗ ಕುಲಸಚಿವ ಡಾ.ಲಕ್ಷ್ಮೀನಾರಾಯಣ ಭಟ್ ಅವರು ‘ಹಾರ್ಟ್ ಬೀಟ್ಸ್’ ಕೃತಿಯನ್ನು ಪರಿಚಯಿಸಿದರು. ವಿಶ್ವವಿದ್ಯಾಲಯದ ಕುಲಸಚಿವ ರಾಜು ಮೊಗವೀರ ಉಪಸ್ಥಿತರಿದ್ದರು. ಪ್ರಸಾರಾಂಗದ ನಿರ್ದೇಶಕ ಪ್ರೊ.ಅಭಯ ಕುಮಾರ್ ಸ್ವಾಗತಿಸಿದರು. ಡಾ.ಧನಂಜಯ ಕುಂಬ್ಳೆ ವಂದಿಸಿದರು. ಡಾ. ಯಶುಕುಮಾರ್ ಕಾರ್ಯಕ್ರಮ ನಿರೂಪಿಸಿದರು.

‘42 ಜನರ 50 ಕಥೆಗಳು’

‘ನಾವು ಒಟ್ಟು 450 ತುಳು ಕಥೆಗಳನ್ನು ಓದಿದ್ದೆವು. ಅಂತಿಮವಾಗಿ 42 ಜನರ 50 ಕಥೆಗಳನ್ನು ಆಯ್ಕೆ ಮಾಡಿ ಅನುವಾದ ಮಾಡಲಾಗಿದೆ. ತುಳು ಓದುಗರ ಸಂಖ್ಯೆಯನ್ನು ಹೆಚ್ಚಿಸುವ ಹಾಗೂ ತುಳುವಿಗೆ ನಾಯಕತ್ವವನ್ನು ಒದಗಿಸುವ ಉದ್ದೇಶದಿಂದ ತುಳು– ಇಂಗ್ಲಿಷ್ ಅನುವಾದದ ಹಲವು ಸವಾಲುಗಳನ್ನು ಎದುರಿಸಿ ಪ್ರೊ.ಸುರೇಂದ್ರರಾವ್ ಹಾಗೂ ನಾನು ಸೇರಿ‌ ಒಟ್ಟು ಏಳು ಅನುವಾದ ಮಾಡಿ, ತುಳು ಸಂಸ್ಕೃತಿಯನ್ನು ತುಳುವೇತರಿಗೂ ತಲುಪಿಸುವ ಪ್ರಯತ್ನ ಮಾಡಿದ್ದೇವೆ. ಪ್ರೊ. ಸುರೇಂದ್ರರಾವ್ ಇಂದು‌ ನಮ್ಮ ಜೊತೆ ಇಲ್ಲ. ಈ ಕೃತಿಗೆ ‘ಹಾರ್ಟ್ ಬೀಟ್ಸ್’ ಎಂಬ ಹೆಸರನ್ನು ಅವರೇ ಇಟ್ಟಿದ್ದರು’ ಎಂದು ಜಾನಪದ ವಿದ್ವಾಂಸ ಪ್ರೊ.ಕೆ.ಚಿನ್ನಪ್ಪ ಗೌಡ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT