ಶನಿವಾರ, ಸೆಪ್ಟೆಂಬರ್ 18, 2021
30 °C
ಪಲ್ಲೋಡಿ ಉಳ್ಳಾಕುಲು ಕಲಾರಂಗದ ನೆರವು

ಸುಬ್ರಹ್ಮಣ್ಯ: ಬಡಕುಟುಂಬದ ಶಿಥಿಲಗೊಂಡ ಮನೆ ದುರಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸುಬ್ರಹ್ಮಣ್ಯ: ಪಂಜದ ಪಲ್ಲೋಡಿಯಲ್ಲಿ ಸಂಕಷ್ಟದಲ್ಲಿದ್ದ ಕುಟುಂಬವೊಂದರ ಮನೆಯ ಚಾವಣಿ ಕುಸಿಯುವ ಹಂತದಲ್ಲಿದ್ದಾಗ ಸ್ಥಳೀಯ ಸಂಘಟನೆಯೊಂದು ನೆರವಾಗಿ, ಚಾವಣಿ ದುರಸ್ತಿ ಮಾಡಿಕೊಟ್ಟಿದೆ.

ಎರಡು ವರ್ಷಗಳ ಹಿಂದೆ ಅಪಘಾತದಲ್ಲಿ ಮೃತಪಟ್ಟಿದ್ದ ಕೊರಗಪ್ಪ ಅಜಲ ಅವರ ಕುಟುಂಬ ತೀವ್ರ ಆರ್ಥಿಕ ಸಂಕಷ್ಟದಲ್ಲಿತ್ತು. ಅವರ ಪತ್ನಿ ಲೀಲಾವತಿ ದುಡಿಮೆಯಲ್ಲಿ ಕುಟುಂಬ ನಿರ್ವಹಣೆ ನಡೆಯುತ್ತಿದ್ದು, ಮನೆ ಮಾಡು ಸೋರುತ್ತಿತ್ತು. ಈ ವಿಷಯವನ್ನು ಕೊರಗಪ್ಪ ಅವರ ಪುತ್ರಿ ಶಾಂತಾ ಮತ್ತು ಅಳಿಯ ಕಾಂತು, ಪಲ್ಲೋಡಿ ಉಳ್ಳಾಕುಲು ಕಲಾರಂಗದ ಪದಾಧಿಕಾರಿಗಳಿಗೆ ತಿಳಿಸಿದರು.

ಪಂಜ ಉಪ ವಲಯ ಅರಣ್ಯಾಧಿಕಾರಿ ಕೆ ಸಂತೋಷ್ ರೈ ಇಲಾಖಾ ವತಿಯಿಂದ ನೆರವಾಗುವುದಾಗಿ ತಿಳಿಸಿದರು. ಕಲಾರಂಗದ ಅನೇಕ ಸದಸ್ಯರು ಊಟ ಉಪಾಹಾರ ಮತ್ತು ಮನೆ ಮಾಡಿಗೆ ಬೇಕಾದ ಪರಿಕರಗಳನ್ನು ನೀಡಿದರು. ಕೆಲವರು ಮಳೆಯನ್ನೂ ಲೆಕ್ಕಿಸದೆ, ಮನೆ ದುರಸ್ತಿ ಕಾರ್ಯ ನಡೆಸಿದರು. ಗ್ರಾಮ ಪಂಚಾಯಿತಿ ವತಿಯಿಂದ ಮನೆಗೆ ವಿದ್ಯುತ್ ಸಂಪರ್ಕ ಒದಗಿಸಲಾಗಿದೆ. ಚಾವಣಿ ಹೊದೆಸಿದ ಮನೆಯನ್ನು ಲೀಲಾವತಿ ಕುಟುಂಬಕ್ಕೆ ಹಸ್ತಾಂತರಿಸಲಾಯಿತು.

ಪಲ್ಲೋಡಿ ಜ್ಞಾನಭಾರತಿ ಶಿಶುಮಂದಿರದಲ್ಲಿ ಸಭಾ ಕಾರ್ಯಕ್ರಮ ಜರಗಿತು. ಉಪ ವಲಯ ಅರಣ್ಯಧಿಕಾರಿ ಕೆ ಸಂತೋಷ್ ರೈ ಅವರನ್ನು ಸನ್ಮಾನಿಸಲಾಯಿತು. ಉಳ್ಳಾಕುಲು ಕಲಾರಂಗದ ಅಧ್ಯಕ್ಷ ಕವನ್ ಪಲ್ಲೋಡಿ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪೂರ್ಣಿಮಾ ದೇರಾಜೆ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ನೇಮಿರಾಜ ಪಲ್ಲೋಡಿ, ಕಾರ್ಯದರ್ಶಿ ಪ್ರದೀಪ್ ಪಲ್ಲೋಡಿ, ಫಲಾನುಭವಿ ಕಾಂತು ಕಲ್ಮಕಾರು ಇದ್ದರು. ರಾಧಾಕೃಷ್ಣ ಪಲ್ಲೋಡಿ ಸ್ವಾಗತಿಸಿದರು. ಸಂದೀಪ್ ಪಲ್ಲೋಡಿ, ಪ್ರಕಾಶ್ ಜಾಕೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಲಿಖಿತ್ ಪಲ್ಲೋಡಿ ವಂದಿಸಿದರು.

‘ಕಷ್ಟದಲ್ಲಿದ್ದವರ ಆಸ್ಪತ್ರೆ ಖರ್ಚಿಗೆ ಹಣ ನೀಡುವುದು, ಕಡುಬಡವರು ಮೃತಪಟ್ಟರೆ ಅವರ ಮನೆಯವರಿಗೆ  ನೆರವಾಗುವುದು ಹೀಗೆ ಅನೇಕ ಸೇವೆಗಳು, ಸಾಮಾಜಿಕ ಕೆಲಸ, ಸಾಂಸ್ಕೃತಿಕ, ಕ್ರೀಡಾ ಕಾರ್ಯಕ್ರಮಗಳೊಂದಿಗೆ ಪಲ್ಲೋಡಿ ಉಳ್ಳಾಕುಲು ಕಲಾರಂಗ ಸಾಮಾಜಿಕ ಕಾರ್ಯ ಮಾಡುತ್ತಿದೆ’ ಎಂದು ಕಲಾರಂಗದ ಪೂರ್ವಾಧ್ಯಕ್ಷ ಪ್ರಕಾಶ್ ಜಾಕೆ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.