ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಂಟ್ವಾಳ | ಅಕ್ರಮ ಮರಳು ಸಾಗಾಟ: ಶಾಶ್ವತ ಪರಿಹಾರಕ್ಕೆ ಅಧಿಕಾರಿಗಳ ಹಿಂದೇಟು ಆರೋಪ

ಮೋಹನ್ ಕೆ.ಶ್ರೀಯಾನ್ ರಾಯಿ
Published 23 ಜೂನ್ 2024, 5:49 IST
Last Updated 23 ಜೂನ್ 2024, 5:49 IST
ಅಕ್ಷರ ಗಾತ್ರ

ಬಂಟ್ವಾಳ: ಹಲವು ವರ್ಷಗಳಿಂದ ಜಿಲ್ಲೆಯಲ್ಲಿ ಹಗಲು ರಾತ್ರಿ ನಿರಂತರವಾಗಿ ಅಕ್ರಮ ಮರಳು ಸಾಗಾಟ ನಡೆಯುತ್ತಿದ್ದರೂ ಬಡ ಜನರಿಗೆ ಮನೆ ಕಟ್ಟಿಕೊಳ್ಳಲು ಕೈಗೆಟಕುವ ದರದಲ್ಲಿ ಮರಳು ಸಿಗುತ್ತಿಲ್ಲ. 

ಐದು ವರ್ಷಗಳ ಹಿಂದೆ ಇಲ್ಲಿನ ಕರಿಯಂಗಳ ಮತ್ತು ಕಡೇಶಿವಾಲಯ ಎಂಬಲ್ಲಿ ಮಾತ್ರ ಇಬ್ಬರಿಗೆ ಸಕ್ರಮ ಮರಳುಗಾರಿಕೆಗೆ ಟೆಂಡರ್ ಲಭಿಸಿತ್ತು. ಇದೀಗ ಬೇಸಿಗೆಯಲ್ಲಿ ಸಂಗ್ರಹಿಸಿಟ್ಟ ಮರಳು ದುಬಾರಿ ದರದಲ್ಲಿ ಮಾರಾಟವಾಗುತ್ತಿದೆ. ಇದರಿಂದಾಗಿ ಸ್ವಂತ ಮನೆ ಕನಸು ಹೊತ್ತ ಬಡವರಿಗೆ ಮರಳು ತರಿಸುವುದೇ ದೊಡ್ಡ ಹೊರೆಯಾಗಿದೆ ಎನ್ನುತ್ತಾರೆ ಇಲ್ಲಿನ ಜನ.

ಪ್ರತಿ ಚುನಾವಣೆ ವೇಳೆ ‘ಕರಾವಳಿಗೆ ಪ್ರತ್ಯೇಕ ಮರಳು ನೀತಿ’ ಎನ್ನುತ್ತಾ ಮತದಾರರನ್ನೇ ಮರುಳು ಮಾಡುವ ರಾಜಕಾರಣಿಗಳು ಬಳಿಕ ಅಕ್ರಮ ಮರಳುಗಾರರಿಗೆ ಬೆಂಗಾವಲಾಗಿ ನಿಲ್ಲುತ್ತಾರೆ ಎಂಬ ಆರೋಪವೂ ಕೇಳಿ ಬಂದಿದೆ.

ಬಂಟ್ವಾಳ ಮತ್ತು ಮಂಗಳೂರು ವ್ಯಾಪ್ತಿಯ ವಳಚ್ಚಿಲ್, ಫರಂಗಿಪೇಟೆ, ತುಂಬೆ, ಅಡ್ಡೂರು, ಕರಿಯಂಗಳ, ಉಳಾಯಿಬೆಟ್ಟು, ಕಡೇಶಿವಾಲಯ, ಶಂಭೂರು, ಸರಪಾಡಿ, ಸಜಿಪನಡು, ಮೂಲಾರಪಟ್ನ, ಪುಚ್ಚಮೊಗರು, ಮಳಲಿ ಮೊದಲಾದ ಕಡೆ ಟಿಪ್ಪರ್‌ಗಳಲ್ಲಿ ಮರಳು ಸಾಗಾಟ ಮಾಡಲಾಗುತ್ತಿದೆ. ಅಕ್ರಮ ಮರಳು ಸಾಗಾಟದಿಂದ ಜಿಲ್ಲಾ ಗಣಿ ಮತ್ತು ಭೂವಿಜ್ಞಾನ ಇಲಾಖೆ ಮಾತ್ರವಲ್ಲದೆ ಕಂದಾಯ, ಪೊಲೀಸ್ ಇಲಾಖೆ ಜೊತೆಗೆ ಕೆಲವು ರಾಜಕಾರಣಿಗಳಿಗೂ ಪ್ರಯೋಜನ ಇದೆ. ಇದರಿಂದಾಗಿ ಜಿಲ್ಲೆಯ ಜನರಿಗೆ ಕಡಿಮೆ ದರದಲ್ಲಿ ಮರಳು ಸಿಗುತ್ತಿಲ್ಲ. ಜಿಲ್ಲೆಯಲ್ಲಿ ಸಕ್ರಮ ಮರಳುಗಾರಿಕೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವಲ್ಲಿ ಇವರೆಲ್ಲರೂ ವಿಫಲರಾಗಿದ್ದಾರೆ ಎಂದು ಸ್ಥಳೀಯರು ದೂರುತ್ತಾರೆ.

ಪ್ರತಿ ವರ್ಷ ಬೇಸಿಗೆಯಲ್ಲಿ ನೇತ್ರಾವತಿ ಮತ್ತು ಫಲ್ಗುಣಿ ನದಿಯಿಂದ ಮರಳು ತೆಗೆದರೆ ನೀರಿನ ಸಂಗ್ರಹಕ್ಕೆ ಅನುಕೂಲವಾಗುತ್ತದೆ ಎನ್ನುತ್ತಾರೆ ಇಲ್ಲಿನ ಮರಳು ಗುತ್ತಿಗೆದಾರರು.

ಬಂಟ್ವಾಳ ತಾಲ್ಲೂಕಿನಲ್ಲಿ ಯಾವುದೇ ಅಕ್ರಮ ಮರಳು ಸಾಗಾಟ ನಡೆಯುತ್ತಿರುವುದು ಗಮನಕ್ಕೆ ಬಂದಿಲ್ಲ ಎಂದು ಡಿವೈಎಸ್ಪಿ ವಿಜಯಪ್ರಕಾಶ್ ತಿಳಿಸಿದರು.

ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಮಾತ್ರ ಕೆಲವೆಡೆ ಅಕ್ರಮ ಮರಳುಗಾರಿಕೆ ಮತ್ತು ಕೆಂಪು ಕಲ್ಲು ಕ್ವಾರಿ ಪತ್ತೆಯಾಗಿದ್ದು, ಈ ಬಗ್ಗೆ ಜಿಲ್ಲಾ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ ಎಂದು ತಹಶೀಲ್ದಾರ್ ಅರ್ಚನಾ ಡಿ.ಭಟ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT