ಗುರುವಾರ , ಜೂನ್ 30, 2022
27 °C
ಮಳಲಿ ರಾಮಾಂಜನೇಯ ಭಜನಾ ಮಂದಿರದಲ್ಲಿ ತಾಂಬೂಲ ಪ್ರಶ್ನೆ

ಅಷ್ಟಮಂಗಲ ಪ್ರಶ್ನೆಗೆ ಜ್ಯೋತಿಷಿ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಮಳಲಿ ಪೇಟೆಯ ಜುಮ್ಮಾ ಮಸೀದಿಯ ನವೀಕರಣದ ವೇಳೆ ದೇವಾಲಯ ರಚನೆ ಕಂಡು ಬಂದ ಹಿನ್ನೆಲೆಯಲ್ಲಿ ಹಿಂದುತ್ವ ಸಂಘಟನೆಗಳು ಬುಧವಾರ ತಾಂಬೂಲ ಪ್ರಶ್ನೆ ಕಾರ್ಯಕ್ರಮ ಹಮ್ಮಿಕೊಂಡಿದ್ದವು.

ತೆಂಕ ಉಳಿಪಾಡಿ ಗ್ರಾಮದ ಜೋಡು ತಡಮೆ ಬಳಿಯ ರಾಮಾಂಜನೇಯ ಭಜನಾ ಮಂದಿರದಲ್ಲಿ ಕೇರಳ ಜ್ಯೋತಿಷಿ ಗೋಪಾಲಕೃಷ್ಣ ಪಣಿಕ್ಕರ್ ನೇತೃತ್ವದಲ್ಲಿ ಬೆಳಿಗ್ಗೆ 9 ಗಂಟೆ ವೇಳೆಗೆ ತಾಂಬೂಲ ಪ್ರಶ್ನೆ ಆರಂಭವಾಯಿತು. ಉಳಿಪ್ಪಾಡಿ ಗುತ್ತಿನ ಉದಯಕುಮಾರ್ ಶೆಟ್ಟಿ ತಾಂಬೂಲ ಪ್ರಶ್ನೆಯ ಯಜಮಾನಿಕೆ ವಹಿಸಿಕೊಂಡಿದ್ದರು. ಜ್ಯೋತಿಷಿಗಳಿಗೆ 9 ವೀಳ್ಯದೆಲೆಗಳನ್ನು ಕೊಟ್ಟು ಅವರು ತಾಂಬೂಲ ಪ್ರಶ್ನೆ ಕೇಳಿದರು. ಕಾರ್ಯಕ್ರಮ ಆರಂಭಿಸುವ ಮೊದಲು ಪೊಳಲಿ ರಾಜರಾಜೇಶ್ವರಿ ದೇವಾಲಯಕ್ಕೆ ತೆರಳಿ ಹಿಂದುತ್ವ ಸಂಘಟನೆ ಕಾರ್ಯಕರ್ತರು ಪೂಜೆ ಸಲ್ಲಿಸಿದರು.

‘ಇದು ದೈವ ಸ್ಥಾನ ಇರುವ ಭೂಮಿ ಎಂಬುದರಲ್ಲಿ ಸಂಶಯವಿಲ್ಲ. ಪೂರ್ವ ಕಾಲದಲ್ಲಿ ಗುರುಮಠವಾಗಿರಬಹುದು. ಯಾವುದೋ ಕಾಲದಲ್ಲಿ ನಾಶವಾದ ಭೂಮಿಗೆ ಈಗ ಅಭಿವೃದ್ಧಿಯಾಗುವ ಸಮಯ ಬಂದಿದೆ. ಯಾವುದೋ ವಿವಾದದಿಂದ ಭೂಮಿ ನಾಶವಾಗಿದೆ. ಈ ವೇಳೆ ಕೆಲ ಶಕ್ತಿಗಳು ಬಿಟ್ಟು ಹೋಗಿದ್ದರೂ, ಇನ್ನೂ ಕೆಲ ಶಕ್ತಿಗಳು ನೆಲೆಸಿವೆ. ಸಾನ್ನಿಧ್ಯ ಯಾವುದೆಂದು ತಿಳಿಯಲು ಅಷ್ಟಮಂಗಲ ಪ್ರಶ್ನೆ ಆಗಬೇಕು’ ಎಂದು ಗೋಪಾಲಕೃಷ್ಣ ಪಣಿಕ್ಕರ್ ಅಭಿಪ್ರಾಯಪಟ್ಟರು.

‘ಅಲ್ಲಿ ಶೈವ ಅಥವಾ ವೈಷ್ಣವ ಸಂಪ್ರದಾಯದ ದೇವರು ಇರಬಹುದು. ಶೈವ ಸಂಪ್ರದಾಯದ ಗುರು ಇಲ್ಲಿಗೆ ಬಂದು ಮಠ ಮಾಡಿದ್ದು, ಹಿಂದೂ ದೇವರನ್ನು ಪ್ರತಿಷ್ಠಾಪಿಸಿದ್ದರು ಎಂಬುದನ್ನು ಜ್ಯೋತಿಷಿಗಳು ತಿಳಿಸಿದ್ದಾರೆ’ ಎಂದು ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಪ್ರತಿಕ್ರಿಯಿಸಿದ್ದಾರೆ.

‘ನಾವು ಸಂಘರ್ಷ ಬಯಸುವುದಿಲ್ಲ. ಅದು ನಮ್ಮ ಮಂದಿರವಾಗಿತ್ತು. ಅದು ನಮಗೆ ಬೇಕು. ಅದಕ್ಕೆ ಕಾನೂನು ಸೇರಿದಂತೆ ಅಗತ್ಯ ಹೋರಾಟ ಮಾಡಲಾಗುವುದು’ ಎಂದು ವಿಶ್ವಹಿಂದೂ ಪರಿಷತ್ ವಿಭಾಗ ಕಾರ್ಯದರ್ಶಿ ಶರಣ್ ಪಂಪ್‌ವೆಲ್ ಹೇಳಿದ್ದಾರೆ. ತಾಂಬೂಲ ಪ್ರಶ್ನೆ ನಡೆಯುವ ವೇಳೆ ಹಿಂದುತ್ವ ಸಂಘಟನೆಗಳ ಪ್ರಮುಖರು ಹಾಜರಿದ್ದರು.

ಅಸಹಾಯಕತೆ ಏಕೆ: ಮುನೀರ್ ಪ್ರಶ್ನೆ

‘ಜುಮ್ಮಾ ಮಸೀದಿ ಸಂಬಂಧಿಸಿ ವಿವಾದ ಸೃಷ್ಟಿಸುತ್ತಿರುವುದು ಕೋಮು ಗಲಭೆಗೆ ನಡೆಸುತ್ತಿರುವ ಪಿತೂರಿಯಾಗಿದೆ. ಮಸೀದಿಯ ಜಾಗದಲ್ಲಿ ಹಿಂದೆ ಏನಿತ್ತು ಎಂದು ವೈದಿಕರನ್ನು ಕರೆಸಿ ತಾಂಬೂಲ ಪ್ರಶ್ನೆ ಇಡುವುದು, ಅದರ ಆಧಾರದಲ್ಲಿ ಮಸೀದಿ ಹೌದೊ, ಅಲ್ಲವೊ ಎಂದು ನಿರ್ಧರಿಸಲು ಬಿಜೆಪಿಯ ಸಹೋದರ ಸಂಘಟನೆ ವಿಶ್ವಹಿಂದೂ ಪರಿಷತ್‌ನವರು ಯಾರು’ ಎಂದು ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಪ್ರಶ್ನಿಸಿದ್ದಾರೆ.

‘ಅವರಿಗೆ ಇದೆಲ್ಲಾ ಅಧಿಕಾರ ದಕ್ಕಿದ್ದು ಹೇಗೆ? ಜಿಲ್ಲಾಧಿಕಾರಿ, ಪೊಲೀಸ್ ಕಮಿಷನರ್ ಅವರು ಶರಣ್ ಪಂಪ್‌ವೆಲ್ ರಂತಹ ಸಂಘಟನೆಯ ಮುಖಂಡರ ಮುಂದೆ ಅಸಹಾಯಕರಂತೆ ನಿಲ್ಲುವುದು ಯಾಕೆ? ಅನಗತ್ಯವಾಗಿ ಮಸೀದಿ ನವೀಕರಣದಲ್ಲಿ ಮೂಗು ತೂರಿಸಿರುವ, ತಾಂಬೂಲ ಪ್ರಶ್ನೆಯಂತಹ ಜನರ ಭಾವನೆ, ನಂಬಿಕೆಗಳನ್ನು ದುರುಪಯೋಗಪಡಿಸಿ ಕೋಮುಗಲಭೆಗೆ ಪಿತೂರಿ ನಡೆಸುತ್ತಿರುವ ಶರಣ್ ಪಂಪ್‌ವೆಲ್ ಮತ್ತವರ ಕೋಮುವಾದಿ ಗ್ಯಾಂಗ್ ಅನ್ನು ಪೊಲೀಸರು ತಕ್ಷಣ ಬಂಧಿಸಿ ಜೈಲಿಗಟ್ಟಬೇಕು. ಮಳಲಿ ಗ್ರಾಮ ಪ್ರವೇಶಿಸುವುದರ ಮೇಲೆ ನಿರ್ಬಂಧ ವಿಧಿಸಬೇಕು’ ಎಂದು ಅವರು ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.