ಬುಧವಾರ, 18 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಡಬ: ವಿದ್ಯಾರ್ಥಿಗಳು ಆಟವಾಡುತ್ತಿದ್ದಾಗ ಕುಸಿದ ಶಾಲಾ ಗೋಡೆ– ತಪ್ಪಿದ ಭಾರಿ ದುರಂತ

ಮೈದಾನದಲ್ಲಿ ಆಟವಾಡುತ್ತಿದ್ದ ವಿದ್ಯಾರ್ಥಿಗಳು ಪಾರು
Published : 27 ಆಗಸ್ಟ್ 2024, 14:05 IST
Last Updated : 27 ಆಗಸ್ಟ್ 2024, 14:05 IST
ಫಾಲೋ ಮಾಡಿ
Comments

ಕಡಬ (ದಕ್ಷಿಣ ಕನ್ನಡ): ಕಡಬ ತಾಲ್ಲೂಕಿನ ಕುಂತೂರಿನ ದಕ್ಷಿಣ ಕನ್ನಡ ಜಿಲ್ಲಾ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡದ ದುರಸ್ತಿ ಕಾರ್ಯ ಪ್ರಗತಿಯಲ್ಲಿರುವಾಗಲೇ ಗೋಡೆ ಹಾಗೂ ಚಾವಣಿ ಕುಸಿದು ನಾಲ್ವರು ವಿದ್ಯಾರ್ಥಿನಿಯರು ಮಂಗಳವಾರ ಗಾಯಗೊಂಡಿದ್ದಾರೆ.

ಗೋಡೆ ಕುಸಿದ ಸಂದರ್ಭದಲ್ಲಿ ವಿದ್ಯಾರ್ಥಿಗಳು ಮೈದಾನದಲ್ಲಿ ಆಟೋಟ ಚಟುವಟಿಕೆಯಲ್ಲಿ ತೊಡಗಿದ್ದರು. ಗಾಯಗೊಂಡ ನಾಲ್ವರು ವಿದ್ಯಾರ್ಥಿಗಳು ಮಾತ್ರ ಕೊಠಡಿಯೊಳಗಿದ್ದರು. ಹಾಗಾಗಿ ಹೆಚ್ಚಿನ ಅನಾಹುತ ಆಗುವುದು ತಪ್ಪಿದೆ ಎಂದು ಸ್ಥಳೀಯ ಮೂಲಗಳು ತಿಳಿಸಿವೆ.

ಪುತ್ತೂರಿನ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್‌ ಎಸ್‌.ಆರ್‌. ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ‘ಈ ಶಾಲೆ 74 ವರ್ಷ ಹಳೆಯದು. ಇದರ ಕೊಠಡಿಗಳ ದುರಸ್ತಿಗೆ ಅನುದಾನ ಬಿಡುಗಡೆಯಾಗಿತ್ತು. ಕಟ್ಟಡದ ತಳಪಾಯವನ್ನು ಬಲಪಡಿಸಲು ಜೆಸಿಬಿ ಬಳಸಿ ಕಾಮಗಾರಿ ನಡೆಸಲಾಗುತಿತ್ತು. ಆಗ ಏಕಾಏಕಿ ಗೋಡೆ ಮತ್ತು ಚಾವಣಿ ಕುಸಿದಿದೆ. ನಾಲ್ವರು ಬಾಲಕಿಯರ ಕಾಲಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅವರಿಕೆ ಚಿಕಿತ್ಸೆ ನೀಡಲಾಗಿದೆ’ ಎಂದು ಮಾಹಿತಿ ನೀಡಿದರು.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ದಕ್ಷಿಣ ಕನ್ನಡ ಜಿಲ್ಲಾ ಉಪನಿರ್ದೇಶಕ ವೆಂಕಟೇಶ ಪಟಗಾರ, ‘ಈ ಶಾಲೆಯಲ್ಲಿ 181 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಕಟ್ಟಡ ಶಿಥಿಲಗೊಂಡಿದ್ದ ಕಾರಣ ದುರಸ್ತಿಗೆ ಪ್ರಕೃತಿ ವಿಕೋಪ ನಿಧಿಯಡಿ ₹ 1.50 ಲಕ್ಷ ಅನುದಾನ ಬಿಡುಗಡೆಯಾಗಿತ್ತು. ಇದರ ಕಾಮಗಾರಿ ನಡೆಯುತ್ತಿರುವಾಗಲೇ ಈ ಅನಾಹುತ ಸಂಭವಿಸಿದೆ’ ಎಂದು ‘ಪ್ರಜಾವಾಣಿ‘ಗೆ ತಿಳಿಸಿದರು.

ಕಾಮಗಾರಿ ವೇಳೆ ಸುರಕ್ಷತಾ ಕ್ರಮ ಕೈಗೊಳ್ಳದ ಕಾರಣಕ್ಕೆ ಶಾಲೆಯ ಮುಖ್ಯೋಪಾಧ್ಯಾಯಿನಿ ರಮ್ಯಶ್ರೀ ಹಾಗೂ ಕಾಮಗಾರಿಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಕಿರಿಯ ಎಂಜಿನಿಯರ್‌ ಅವರನ್ನು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ಎಂ.ಪಿ. ಅವರು ಅಮಾನತು ಮಾಡಿದ್ದಾರೆ.

‘ಕಾಮಗಾರಿ ಪ್ರಗತಿಯಲ್ಲಿರುವಾಗ ಆ ಸ್ಥಳದಲ್ಲಿ ವಿದ್ಯಾರ್ಥಿಗಳು ಇಲ್ಲದಂತೆ ಮುಖ್ಯೋಪಾಧ್ಯಾಯರು ಕ್ರಮ ವಹಿಸಬೇಕಿತ್ತು. ನಿತ್ಯವೂ ತರಗತಿ ಆರಂಭವಾಗುವ ಮುನ್ನ ಕೊಠಡಿಗಳ ಸುರಕ್ಷತೆಯನ್ನು ಖಾತರಿಪಡಿಸಿಕೊಂಡ ನಂತರವೇ ವಿದ್ಯಾರ್ಥಿಗಳು ಕೊಠಡಿ ಪ್ರವೇಶಕ್ಕೆ ಅವಕಾಶ ನೀಡಬೇಕು ಎಂದು ಸ್ಪಷ್ಟ ಸೂಚನೆ ನೀಡಿದ್ದೇವೆ. ಈ ಘಟನೆ ಬಗ್ಗೆ ಸಮಗ್ರವಾದ ತನಿಖೆ ಕೈಗೊಳ್ಳಲಾಗುತ್ತದೆ’ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

‘ನಾಲ್ವರು ವಿದ್ಯಾರ್ಥಿಗಳು ಕೊಠಡಿಯೊಳಗೆ ಉಳಿದುಕೊಂಡಿದ್ದು ಹೇಗೆ ಎಂದು ಪರಿಶೀಲನೆ ನಡೆಸುತ್ತಿದ್ದೇವೆ. ತರಗತಿ ಕೊಠಡಿಯಲ್ಲಿ ವಿದ್ಯಾರ್ಥಿಗಳು ಇರುವಾಗ ಒಬ್ಬರಾದರೂ ಶಿಕ್ಷಕರು ಆ ಕೊಠಡಿಯಲ್ಲಿರಬೇಕು. ಕರ್ತವ್ಯ ಲೋಪದ ಕಾರಣಕ್ಕೆ ಶಾಲಾ ಮುಖ್ಯೋಪಾಧ್ಯಾಯರ ವಿರುದ್ಧ ಕ್ರಮ ವಹಿಸಲಾಗಿದೆ’ ಎಂದು ವೆಂಕಟೇಶ ಪಟಗಾರ ತಿಳಿಸಿದರು.

ಮಂಗಳವಾರ ಬೆಳಿಗ್ಗೆಯಿಂದಲೇ ಕುಂತೂರು ಪರಿಸರದಲ್ಲಿ ಮಳೆಯಾಗಿತ್ತು. ‌ಶಾಲೆಯಲ್ಲಿ ಜೆಸಿಬಿ ಬಳಸಿ ಕಾಮಗಾರಿ ನಡೆಯುತ್ತಿತ್ತು. ಈ ವೇಳೆ ಈ ಘಟನೆ ನಡೆದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT