ಬುಧವಾರ, 17 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಡಬ ಆ್ಯಸಿಡ್ ದಾಳಿ: ಕೇರಳದ ಆರೋಪಿ ವಶ– ಪ್ರೇಮ ವೈಫಲ್ಯದಿಂದ ಸಿಟ್ಟಿಗೆದ್ದು ಕೃತ್ಯ?

Published 4 ಮಾರ್ಚ್ 2024, 8:28 IST
Last Updated 4 ಮಾರ್ಚ್ 2024, 8:28 IST
ಅಕ್ಷರ ಗಾತ್ರ

ಉಪ್ಪಿನಂಗಡಿ (ದಕ್ಷಿಣ ಕನ್ನಡ): ಇಲ್ಲಿಗೆ ಸಮೀಪದ ಕಡಬ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿ.ಯು. ವಿದ್ಯಾರ್ಥಿನಿಯರ ಮೇಲೆ ಆ್ಯಸಿಡ್‌ ದಾಳಿ ನಡೆದಿದ್ದು ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

‘ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿಯೊಬ್ಬಳಿಗೆ ಆ್ಯಸಿಡ್‌ ಎರಚಿದ ಆರೋಪಿ ಅಬಿನ್‌ (23) ಕೇರಳದ ಮಲಪ್ಪುರಂ ಜಿಲ್ಲೆಯ ನಿಲಂಬೂರು ನಿವಾಸಿ. ಆತನನ್ನು ವಶಕ್ಕೆ ಪಡೆದಿದ್ದೇವೆ. ಆಸಿಡ್‌ ದಾಳಿಗೆ ಒಳಗಾದ ವಿದ್ಯಾರ್ಥಿನಿಯ ಅಕ್ಕಪಕ್ಕ ಇದ್ದ ಇಬ್ಬರು ವಿದ್ಯಾರ್ಥಿನಿಯರ ಮೇಲೂ ಸ್ವಲ್ಪ ಪ್ರಮಾಣದಲ್ಲಿ ಆ್ಯಸಿಡ್‌ ಬಿದ್ದಿದೆ. ಆ್ಯಸಿಡ್‌ ದಾಳಿಗೊಳಗಾದ ವಿದ್ಯಾರ್ಥಿನಿ ಪ್ರಾಣಾಪಾಯದಿಂದ ಪಾರಾಗಿದ್ದು, ಆಕೆಗೆ ಹೆಚ್ಚಿನ ಚಿಕಿತ್ಸೆ ಕೊಡಿಸಲಾಗುತ್ತಿದೆ’ ಎಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್‌ ಸುದ್ದಿಗಾರರಿಗೆ ಮಾಹಿತಿ ನೀಡಿದರು.

‌‘ಆ್ಯಸಿಡ್‌ ದಾಳಿಗೆ ಒಳಗಾದ ವಿದ್ಯಾರ್ಥಿನಿ ಹಾಗೂ ಆರೋಪಿ ಒಂದೇ ಕೋಮಿನವರು. ದಾಳಿಗೊಳಗಾದ ವಿದ್ಯಾರ್ಥಿನಿಯ ತಾಯಿ ಮನೆಯ ಸಮೀಪವೇ ಆರೋಪಿಯ ಮನೆ ಇದೆ. ವಿದ್ಯಾರ್ಥಿನಿ ಅಲ್ಲಿಗೆ ತೆರಳಿದ್ದಾಗ ಪರಸ್ಪರ ಪರಿಚಯವಾಗಿತ್ತು. ಪ್ರೇಮ ನಿರಾಕರಣೆಯಿಂದ ಹತಾಶನಾಗಿ ಕೃತ್ಯ ನಡೆಸಿದಂತೆ ಮೇಲ್ನೋಟಕ್ಕೆ ಕಾಣುತ್ತಿದೆ. ಆರೋಪಿಯ ಕಾಲೇಜಿನ ಸಮವಸ್ತ್ರ ಧರಿಸಿ ಸ್ಥಳಕ್ಕೆ ಬಂದಿದ್ದ. ಆತನಿಗೆ ಸಮವಸ್ತ್ರವನ್ನು ಯಾರು ನೀಡಿದರು ಎಂಬ ಬಗ್ಗೆ ತನಿಖೆ ನಡೆಯುತ್ತಿದೆ’ ಎಂದರು.

‘ದ್ವಿತೀಯ ಪಿ.ಯು. ಗಣಿತ ಪರೀಕ್ಷೆ ಸೋಮವಾರ ನಿಗದಿಯಾಗಿತ್ತು. ವಿದ್ಯಾರ್ಥಿನಿಯು ಪರೀಕ್ಷೆಗೆ ಹಾಜರಾಗಲು ಬರುವ ವಿಚಾರವನ್ನು ಮೊದಲೇ ತಿಳಿದಿದ್ದ ಆರೋಪಿ ಆ್ಯಸಿಡ್‌ ಎರಚಲು ಸಿದ್ಧತೆ ಮಾಡಿಕೊಂಡು ಬಂದಿದ್ದ. ಕಾಲೇಜಿನ ಆವರಣಕ್ಕೆ ಬರುವಾಗ ಮಾಸ್ಕ್, ಟೋಪಿ ಧರಿಸಿದ್ದ. ಆತ ಎಲ್ಲಿಂದ ಆ್ಯಸಿಡ್‌ ತಂದಿದ್ದ ಎಂಬ ಬಗ್ಗೆ ಇನ್ನಷ್ಟೇ ಮಾಹಿತಿ ಕಲೆ ಹಾಕಬೇಕಿದೆ’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಜಯಣ್ಣ ಅವರೂ ಕಾಲೇಜಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

‘ಆ್ಯಸಿಡ್‌ ದಾಳಿಗೊಳಗಾದ ವಿದ್ಯಾರ್ಥಿನಿಗೆ ಕಡಬದ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕರೆದೊಯ್ಯಲಾಗಿದೆ. ಗಣಿತ ಪರೀಕ್ಷೆ ಸಾಂಗವಾಗಿ ನೆರವೇರಿದೆ’ ಎಂದು ಅವರು ಮಾಹಿತಿ ನೀಡಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT