ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು: ಕನಕ ಸ್ಮರಣೆಗೆ ನೃತ್ಯ–ಕುಣಿತದ ದೀವಿಗೆ

ಕರಾವಳಿ ಕುರುಬರ ಸಂಘದ ಕಾರ್ಯಕ್ರಮ; ಭಕ್ತಿ–ಭಾವ ಮೇಳೈಸಿದ ಮೆರವಣಿಗೆ
Published 10 ಡಿಸೆಂಬರ್ 2023, 13:53 IST
Last Updated 10 ಡಿಸೆಂಬರ್ 2023, 13:53 IST
ಅಕ್ಷರ ಗಾತ್ರ

ಮಂಗಳೂರು: ಕನಕದಾಸರು ಆರಾಧಿಸುತ್ತಿದ್ದ ಶ್ರೀಹರಿಯ 10 ಅವತಾರಗಳ ಮನೋಜ್ಞ ರೂಪಕ, ಗಣೇಶ ಸ್ತುತಿಯಲ್ಲಿ ಪ್ರಣವಾಕಾರ ಸ್ವರೂಪಿಯ ತತ್ವಗಳ ಸಾರದ ಅನಾವರಣ. ಭಕ್ತ ಕನಕದಾಸ ಸಿನಿಮಾದ ಹಾಡಿಗೆ ಭಾವಾಭಿನಯದ ಮೂಲಕ ಮರುಜೀವ; ಮೈನವಿರೇಳಿಸಿದ ಡೊಳ್ಳು ಕುಣಿತ...

ಕರಾವಳಿ ಕುರುಬರ ಸಂಘ ನಗರದ ಪುರಭವನದಲ್ಲಿ ಭಾನುವಾರ ಆಯೋಜಿಸಿದ್ದ ಕನಕ ಜಯಂತಿಯಲ್ಲಿ ಮಂಗಳೂರಿನ ಗಾನ-ನೃತ್ಯ ಅಕಾಡೆಮಿಯ ಕಲಾವಿದರು ಭರತನಾಟ್ಯದ ಮೂಲಕ ಮುದ ನೀಡಿದರೆ, ಬಾಗಲಕೋಟೆ ಜಿಲ್ಲೆ ಮುತ್ತಲಗೇರಿ ಕುರಿಗೌಡಪ್ಪ ದೇವಸ್ಥಾನದ ಕಲಾತಂಡದವರು ಡೊಳ್ಳಿನಿಂದ ನಾದತರಂಗ ಸೃಷ್ಟಿಸಿ ನೃತ್ಯದ ಮೂಲಕ ಮೈನವಿರೇಳಿಸಿದರು.

ಜಯಂತಿ ಅಂಗವಾಗಿ ಕುಂಭಹೊತ್ತ ನಾರಿಯರು ಮತ್ತು ಜಾನಪದ ಕಲಾತಂಡಗಳನ್ನು ಒಳಗೊಂಡ ಮೆರವಣಿಗೆ ಶರವು ದೇವಸ್ಥಾನದ ಆವರಣದಿಂದ ಆರಂಭವಾಯಿತು. ಕನಕದಾಸರ ಬೃಹತ್ ಚಿತ್ರಕ್ಕೆ ರಸ್ತೆಯ ಇಕ್ಕೆಲಗಳಲ್ಲಿದ್ದ ಜನರು ಭಕ್ತಿಯ ನಮನ ಸಲ್ಲಿಸಿದರು. ಮೆರವಣಿಗೆ ಸಭಾಂಗಣವನ್ನು ತಲುಪುವಷ್ಟು ಹೊತ್ತು ಸಹೃದಯರ ಮನ ತಣಿಸಿದ್ದು ಗಾನ-ನೃತ್ಯ ಅಕಾಡೆಮಿ.

ಏಕವ್ಯಕ್ತಿ ನೃತ್ಯದ ಮೂಲಕ ದೇಶ– ವಿದೇಶಗಳಲ್ಲಿ ಹೆಸರು ಗಳಿಸಿರುವ ವಿದ್ಯಾಶ್ರೀ ರಾಧಾಕೃಷ್ಣ ಅವರ ವಿದ್ವತ್‌ಪೂರ್ಣ ಮಾಹಿತಿಯ ಬೆನ್ನಲ್ಲೇ ಕಲಾವಿದರು ವೇದಿಕೆಯಲ್ಲಿ ಭಾವಲೋಕ ಸೃಷ್ಟಿಸಿದರು. ಗಣೇಶ ಕೌತುವಂನಲ್ಲಿ ವಿಘ್ನ ವಿನಾಶಕನ ತತ್ವಗಳ ಸಾರವನ್ನು ಅಭಿನಯಿಸಿ ತೋರಿಸಲಾಯಿತು.  ಗಜ ಕರ್ಣ, ಲಂಬೋದರ, ಅಂಕುಶ, ಪಾಶ, ಮೂಷಿಕ (ವಾಹನ) ಇತ್ಯಾದಿಗಳ ಹಿಂದಿರುವ ತತ್ವಗಳಿಗೆ ಆಂಗಿಕಾಭಿನಯ ಕನ್ನಡಿ ಹಿಡಿಯಿತು. ‘ಪ್ರಸನ್ನನಾಗುತ ಎಮಗೆ ಸದ್ಬುದ್ಧಿಯ ತೋರಿಸು’ ಎಂಬ ಸಾಲಿನೊಂದಿಗೆ ಪ್ರಸ್ತುತಿ ಕೊನೆಗೊಂಡಾಗ ಚಪ್ಪಾಳೆಯ ಮಳೆ ಸುರಿಯಿತು.

ವಿಷ್ಣುವಿನ 10 ಅವತಾರಗಳ ಸುದೀರ್ಘ ರೂಪಕದ ಒಂದೊಂದು ಭಾಗವೂ ಕಲಾರಸಿಕರನ್ನು ರೋಮಾಂಚನಗೊಳಿಸಿತು. ಕೊಳಲಿನ  ಆಲಾಪದ‌ ಮೂಲಕ ಆರಂಭಗೊಂಡ ರೂಪಕದ ಉದ್ದಕ್ಕೂ ‘ಶ್ರೀಹರಿಯ ಪಾದ ಸೇರುವುದೆ ಪಾವನ’ ಎಂಬ ಸುಂದರ ಸಾಲುಗಳ ಪುನರಾವರ್ತನೆಯ ಜೊತೆಗೇ ಸಾಗಿದ ನೃತ್ಯದಲ್ಲಿ ಪ್ರಹ್ಲಾದ–ಹಿರಣ್ಯ ಕಶಿಪು ಪ್ರಸಂಗ, ಗೀತೋಪದೇಶ, ಸೀತಾಪಹಣ–ರಾವಣ ವಧೆ ಇತ್ಯಾದಿ ಸನ್ನಿವೇಶಗಳು ಸೊಗಯಿಸಿದವು.

‘ಬಾಗಿಲನು ತೆರೆದು ಸೇವೆಯನು ಕೊಡು ಹರಿಯೆ..’ ಚಿತ್ರಗೀತೆಯ ರೂಪಕದಲ್ಲಿ ವಿದ್ಯಾಶ್ರೀ ಅವರೇ ಕನಕದಾಸರ ಪಾತ್ರ ನಿರ್ವಹಿಸಿದರು. ಭಾಗವತದ ಪ್ರಸಂಗಗಳು ಮನೋಜ್ಞವಾಗಿ ಮೂಡಿಬಂದವು. ಕನಕನ ಭಕ್ತಿಗೆ ಕೃಷ್ಣ ಒಲಿದ ಸನ್ನಿವೇಶ ಪ್ರದರ್ಶನಗೊಂಡಾಗ ಸಭಿಕರಲ್ಲಿ ಅನೇಕರು ಭಾವತೀವ್ರತೆಯಲ್ಲಿ ಮುಳುಗಿ ಆನಂದ ಬಾಷ್ಪ ಸುರಿಸಿದರು.

ಬಾದಾಮಿಯ ಮುತ್ತಲಗೇರಿ ಕಲಾತಂಡದವರು ಡೊಳ್ಳು‌ಕುಣಿತದ ವಿವಿಧ ಪ್ರಕಾರಗಳನ್ನು ಪ್ರದರ್ಶಿಸಿ ಕೊನೆಗೆ ಪಿರಮಿಡ್ ನಿರ್ಮಿಸಿ ರಂಜಿಸಿದರು.

ಕಾಂತರಾಜು ಆಯೋಗದ ವರದಿ ಜಾರಿಗೆ ಮನವಿ

‘ಕಾಂತರಾಜು ಆಯೋಗದ ವರದಿ ಜಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಸಕ್ತಿ ತೋರಿಸಿದ್ದಾರೆ. ಸಾಮಾಜಿಕ ನ್ಯಾಯಕ್ಕೆ ಪೂರಕವಾದ ಈ ವರದಿ ಜಾರಿಗೆ ಮನವಿ ಮಾಡಲಾಗುವುದು’ ಎಂದು ಕನಕ ಜಯಂತಿ ಉದ್ಘಾಟಿಸಿದ ಕರ್ನಾಟಕ ಪ್ರದೇಶ ಕುರುಬರ ಸಂಘದ ಮಹಿಳಾ ಘಟಕದ ಅಧ್ಯಕ್ಷೆ ಪ್ರಭಾವತಿ ಕೆ.ಆರ್ ತಿಳಿಸಿದರು.

ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಆನಂದ ಸಿ.ಎಲ್ ಶಿವಮೊಗ್ಗದ ಸಹ ಪ್ರಾಧ್ಯಾಪಕ ಮಂಜುನಾಥ್ ವಾಣಿಜ್ಯ ತೆರಿಗೆ ಅಧಿಕಾರಿ ಓಂಕಾರಪ್ಪ ಎಸ್.ಜಿ ಜಿಲ್ಲಾ ಪಂಚಾಯಿತಿ ನಿವೃತ್ತ ಯೋಜನಾ ನಿರ್ದೇಶಕ ಟಿ.ಎಸ್. ಲೋಕೇಶ್ ಕ್ಯಾನ್ಸರ್ ತಜ್ಞ ಡಾ. ಲೇಪಾಕ್ಷಿ ಪ್ರದೇಶ ಕುರುಬರ ಸಂಘದ ನಿರ್ದೇಶಕ ಶಿವಾನಂದ ಯರಜೇರಿ ಕರಾವಳಿ ಕುರುಬರ ಸಂಘದ ಅಧ್ಯಕ್ಷ ಕೆ.ಎನ್ ಬಸವರಾಜಪ್ಪ ಪ್ರಧಾನ ಕಾರ್ಯದರ್ಶಿ ನಿರಂಜನ್ ಇದ್ದರು. ಲೋಕೋಪಯೋಗಿ ಇಲಾಖೆಯ ಎಇಇ ಶ್ರೀಧರ್ ಟಿ.ಡಿ ಅವರನ್ನು ಸನ್ಮಾನಿಸಲಾಯಿತು. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT