ಮಂಗಳೂರು: ರಾಜ್ಯದ 5,307 ಸರ್ಕಾರಿ ಪ್ರೌಢಶಾಲೆಗಳ ಸುಮಾರು 1.59 ಕೋಟಿ ವಿದ್ಯಾರ್ಥಿನಿಯರು ಸ್ವ–ರಕ್ಷಣೆಯ ಕೌಶಲ ಕಲಿಕೆಗೆ ಸಿದ್ಧರಾಗಿದ್ದಾರೆ. ಇದೇ ತಿಂಗಳಿನಲ್ಲಿ ರಾಜ್ಯದ ಎಲ್ಲ ಶಾಲೆಗಳಲ್ಲಿ ಕರಾಟೆ ತರಬೇತಿ ಕಾರ್ಯಕ್ರಮ ಅನುಷ್ಠಾನಗೊಳ್ಳಲಿದೆ.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಮಗ್ರ ಶಿಕ್ಷಣ ಕರ್ನಾಟಕದ ಮೂಲಕ ‘ರಾಣಿ ಲಕ್ಷ್ಮಿಬಾಯಿ ಆತ್ಮರಕ್ಷಣಾ ಪ್ರಶಿಕ್ಷಣ’ ತರಬೇತಿಯನ್ನು 35 ಶೈಕ್ಷಣಿಕ ಜಿಲ್ಲೆಗಳಲ್ಲಿ ನಡೆಸಲು ಸರ್ಕಾರ ₹1.59 ಕೋಟಿ ಅನುದಾನ ನಿಗದಿಪಡಿಸಿದೆ.
ಸ್ಥಳೀಯ ಕರಾಟೆ ಪರಿಣತರು ಎಂಟು, ಒಂಬತ್ತು ಮತ್ತು ಎಸ್ಸೆಸ್ಸೆಲ್ಸಿ ತರಗತಿಯ ವಿದ್ಯಾರ್ಥಿನಿಯರಿಗೆ ಆತ್ಮರಕ್ಷಣೆ ತರಬೇತಿ ನೀಡಲಿದ್ದಾರೆ. ಪ್ರತಿ ಶಾಲೆಯಲ್ಲಿ 10 ಅವಧಿಗಳಲ್ಲಿ ತರಬೇತಿಗಳು ನಡೆಯುತ್ತವೆ. ತರಬೇತುದಾರರಿಗೆ ಗೌರವಧನ ನೀಡಲು ಪ್ರತಿ ಶಾಲೆಗೆ ₹3,000 ನೀಡಲಾಗುತ್ತದೆ.
‘ವಿದ್ಯಾರ್ಥಿಗಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆ ವೃದ್ಧಿಸುವ, ಸ್ವರಕ್ಷಣಾ ಕೌಶಲ ಬೆಳೆಸಿ, ಆತ್ಮವಿಶ್ವಾಸ ಹೆಚ್ಚಿಸಲು ಈ ಕಾರ್ಯಕ್ರಮ ಹಮ್ಮಿಕೊಂಡಿದೆ. ಗ್ರಾಮೀಣ ಪ್ರದೇಶದಲ್ಲಿ ಕಾಲ್ನಡಿಗೆಯಲ್ಲಿ ಬರುವ ವಿದ್ಯಾರ್ಥಿನಿಯರು, ಒಬ್ಬಂಟಿಯಾಗಿ ಬರುವಾಗ ಯಾರಾದರೂ ಆಕ್ರಮಣ ಮಾಡಲು ಬಂದರೆ ಸ್ವರಕ್ಷಣೆಗೆ ಇಂತಹ ತರಬೇತಿ ಸಹಕಾರಿ’ ಎಂದು ಡಿಡಿಪಿಐ ದಯಾನಂದ ನಾಯಕ್ ತಿಳಿಸಿದರು.
‘ತರಬೇತಿ ನೀಡುವ ಪೂರ್ವದಲ್ಲಿ ವಿದ್ಯಾರ್ಥಿನಿಯರು ದೈಹಿಕವಾಗಿ ಆರೋಗ್ಯವಾಗಿರುವುದನ್ನು ದೃಢಪಡಿಸಿಕೊಳ್ಳಲು ಸೂಚಿಸಲಾಗಿದೆ. ಅನಾರೋಗ್ಯವಿರುವ ಹೆಣ್ಣು
ಮಕ್ಕಳನ್ನು ತರಬೇತಿಯಿಂದ ಹೊರಗಿಡಲಾಗುವುದು’ ಎಂದು ಪ್ರತಿಕ್ರಿಯಿಸಿದರು.
ತರಬೇತಿಯಲ್ಲಿ ಏನಿರಲಿದೆ?: ಕೌಶಲ ತರಬೇತಿಗಾಗಿ ಪ್ರತ್ಯೇಕ ಪಠ್ಯಕ್ರಮ ರೂಪಿಸಲಾಗಿದೆ.
ಆಕ್ರಮಣ ಮಾಡಿದರೆ ಪ್ರತಿರೋಧ ತೋರುವ ಫೇಸ್ ಪಂಚ್, ಲೋವರ್ ಪಂಚ್ ಹೀಗೆ ಪ್ರತಿ ಆಕ್ರಮಣದ ತಂತ್ರಗಳು, ಕಾಲಿನಿಂದ ಕಿಕ್ ಮಾಡುವ, ರಕ್ಷಣಾತ್ಮಕ ತಂತ್ರಗಳು, ಕರಾಟೆಯ ಕಾಟಾ ಮಾದರಿ, ಪಂಚಿಂಗ್ ತಂತ್ರಗಳನ್ನು ಕರಾಟೆ ತರಬೇತುದಾರರು ವಿದ್ಯಾರ್ಥಿನಿಯರಿಗೆ ಕಲಿಸುತ್ತಾರೆ.
ಆಯಾ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರು ಕೂಡ ತರಬೇತಿಯಲ್ಲಿ ಭಾಗಿಯಾಗಲಿದ್ದಾರೆ. ನಂತರ
ವಿದ್ಯಾರ್ಥಿನಿಯರು ಕಲಿತ ಕೌಶಲಗಳನ್ನು ಮರೆಯದೇ ಮುಂದುವರಿಸಿಕೊಂಡು ಹೋಗಲು ಅವರು ನಿಗಾವಹಿಸಲಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಂಟು ಶೈಕ್ಷಣಿಕ ಬ್ಲಾಕ್‌ಗಳಿಂದ ಒಟ್ಟು 10,840 ವಿದ್ಯಾರ್ಥಿನಿಯರು ಕರಾಟೆ ಕೌಶಲ ಕಲಿಯಲಿದ್ದಾರೆ.
35 ಶೈಕ್ಷಣಿಕ ಜಿಲ್ಲೆಗಳಲ್ಲಿ ಅನುಷ್ಠಾನ 1.59 ಕೋಟಿ ವಿದ್ಯಾರ್ಥಿನಿಯರಿಗೆ ತರಬೇತಿ ಕರಾಟೆ ಪರಿಣತರಿಂದ ಮಾರ್ಗದರ್ಶನ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.