ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾತೃಭಾಷೆ ಅಳಿದರೆ ಇತಿಹಾಸ ಉಳಿಯದು

ಕರಾವಳಿ ಉತ್ಸವಕ್ಕೆ ಚಾಲನೆ ನೀಡಿದ ನಟ ರಿಷಭ್ ಶೆಟ್ಟಿ
Last Updated 10 ಜನವರಿ 2020, 15:25 IST
ಅಕ್ಷರ ಗಾತ್ರ

ಮಂಗಳೂರು: ಮಾತೃಭಾಷೆ ನಮ್ಮ ತಾಯಿ ಭಾಷೆ. ಮಾತೃ ಭಾಷೆಯಲ್ಲಿಯೇ ಮಕ್ಕಳಿಗೆ ಶಿಕ್ಷಣ ದೊರೆಯಬೇಕು. ಮಾತೃ ಭಾಷೆ ಅಳಿದರೆ, ನಮ್ಮ, ಸಂಸ್ಕೃತಿ, ಪರಂಪರೆ ಹಾಗೂ ಇತಿಹಾಸವನ್ನು ನಾವು ನಮ್ಮ ಮುಂದಿನ ಪೀಳಿಗೆಗೆ ಉಳಿಸಲು ಸಾಧ್ಯವಿಲ್ಲ ಎಂದು ಚಿತ್ರನಟ ರಿಷಭ್‌ ಶೆಟ್ಟಿ ಹೇಳಿದರು.

ನಗರದ ಕರಾವಳಿ ಉತ್ಸವ ಮೈದಾನದಲ್ಲಿ ಶುಕ್ರವಾರ ಸಂಜೆ ಕರಾವಳಿ ಉತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಮಾತೃಭಾಷೆಯ ಶಿಕ್ಷಣಕ್ಕೆ ಒತ್ತು ನೀಡಬೇಕು ಎನ್ನುವ ಉದ್ದೇಶದಿಂದ ‘ಕಾಸರಗೋಡು ಹಿರಿಯ ಪ್ರಾಥಮಿಕ ಶಾಲೆ– ಕೊಡುಗೆ ರಾಮಣ್ಣ ರೈ’ ಸಿನಿಮಾ ತಯಾರಿಸಿದ್ದೇವೆ. ಯಾವ ಭಾಷೆಯಲ್ಲಿ ಕನಸು ಬೀಳುತ್ತವೆಯೋ ಅದೇ ಭಾಷೆಯಲ್ಲಿ ಮಗುವಿಗೆ ಶಿಕ್ಷಣ ನೀಡಬೇಕು ಎಂದು ಆ ಚಿತ್ರದಲ್ಲಿ ಅನಂತನಾಗ್‌ ಹೇಳುತ್ತಾರೆ. ಅದು ಅಕ್ಷರಶಃ ನಿಜ. ಮಾತೃಭಾಷೆಯ ಶಿಕ್ಷಣ ಮಗುವಿನಲ್ಲಿ ಗಟ್ಟಿತನವನ್ನು ತಂದು ಕೊಡಬಲ್ಲದು ಎಂದು ಅಭಿಪ್ರಾಯಪಟ್ಟರು.

‘ನಾನು ಕೂಡ ಯಾವುದೇ ಇಂಗ್ಲಿಷ್‌ ಮಾಧ್ಯಮ ಶಾಲೆಯಲ್ಲಿ ಓದಿಲ್ಲ. ಕನ್ನಡ ಮಾಧ್ಯಮ ಶಾಲೆಯಲ್ಲಿಯೇ ಓದಿದ್ದೇನೆ. ಕರಾವಳಿಯ ಸೊಬಗಿನಲ್ಲಿಯೇ ಬೆಳೆದಿದ್ದೇನೆ. ಅದಕ್ಕಾಗಿ ನನ್ನ ಪ್ರತಿಯೊಂದು ಚಿತ್ರದಲ್ಲೂ ಕರಾವಳಿಯ ಸೊಬಗನ್ನು ಕಟ್ಟಿಕೊಡಲು ಪ್ರಯತ್ನಿಸಿದ್ದೇನೆ’ ಎಂದು ಹೇಳಿದರು.

ಕುಂದಾಪುರದಿಂದ ಕಾಸರಗೋಡಿನವರೆಗೆ ಇರುವ ನಮ್ಮ ಕರಾವಳಿ ವಿಶಿಷ್ಟ ಕಲೆ, ಸಂಪ್ರದಾಯ, ಸಾಹಿತ್ಯ, ಸಂಸ್ಕೃತಿಗಳಿಂದಾಗಿ ತನ್ನದೇ ಆದ ಮಹತ್ವವನ್ನು ಹೊಂದಿದೆ. ಇಂತಹ ಪರಂಪರೆಯನ್ನು ಉಳಿಸುವ ನಿಟ್ಟಿನಲ್ಲಿ ಕರಾವಳಿ ಉತ್ಸವ ಬಹುದೊಡ್ಡ ಕೊಡುಗೆ ನೀಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಒಂದೆಡೆ ಭೋರ್ಗರೆವ ಕಡಲು, ಇನ್ನೊಂದೆಡೆ ಮಾತನಾಡುವ ಮಂಜುನಾಥ. ಮಧ್ಯದಲ್ಲಿ ತೆಂಗು–ಕಂಗು, ಹರಿಯುವ ಜಲಧಾರೆಗಳು, ಅರಣ್ಯ, ಪ್ರಕೃತಿಯ ಸೊಬಗಿನಿಂದ ತುಂಬಿಕೊಂಡು ಕರಾವಳಿಗೆ ವಿಶಿಷ್ಟವಾದ ಸ್ಥಾನವಿದೆ ಎಂದರು.

ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳು ಸಂಸ್ಕೃತಿ, ಪರಂಪರೆಗೆ ತಮ್ಮದೇ ಆದ ಕೊಡುಗೆಯನ್ನು ನೀಡಿವೆ. ಸಾಹಿತ್ಯ, ಸಂಸ್ಕೃತಿ, ಸ್ವಾತಂತ್ರ್ಯ ಹೋರಾಟ ಹೀಗೆ ಪ್ರತಿಯೊಂದು ಕ್ಷೇತ್ರದಲ್ಲೂ ಕರಾವಳಿಯ ಕೊಡುಗೆ ಅಪಾರವಾಗಿದೆ. ಇಲ್ಲಿನ ಪರಂಪರೆ, ಸಂಸ್ಕೃತಿಯನ್ನು ಬಿಂಬಿಸುವ ಉದ್ದೇಶದಿಂದ ಕರಾವಳಿ ಉತ್ಸವ ಹಮ್ಮಿಕೊಂಡಿದ್ದು, 10 ದಿನ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಡಿ.ವೇದವ್ಯಾಸ ಕಾಮತ್‌, ‘ದೇವ, ದೈವಾರಾಧನೆ, ನಾಗಾರಾಧನೆಯಂತಹ ವಿಶಿಷ್ಟ ಆಚರಣೆಗಳು ನಮ್ಮಲ್ಲಿವೆ. ಅವುಗಳ ಜತೆಗೆ ಹಲವಾರು ಸಂಪ್ರದಾಯ, ಪರಂಪರೆಗಳು ಮೇಳೈಸಿವೆ. ಹಲವಾರು ದೇವಾಲಯಗಳು, ಪ್ರಕೃತಿಯ ಸೊಬಗಿನಿಂದ ತುಂಬಿರುವ ಕರಾವಳಿಯು ಕಲೆಯಲ್ಲೂ ಒಂದು ಹೆಜ್ಜೆ ಮುಂದಿದೆ. ಇಲ್ಲಿನ ಗಂಡು ಕಲೆ ಯಕ್ಷಗಾನವನ್ನು ಅನೇಕ ಹಿರಿಯ ಕಲಾವಿದರು ಶ್ರೀಮಂತಗೊಳಿಸಿದ್ದಾರೆ’ ಎಂದು ಹೇಳಿದರು.

ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್‌ ಸ್ವಾಗತಿಸಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಜೆ. ರೂಪಾ ವಂದಿಸಿದರು. ಮನೋಹರ ಪ್ರಸಾದ್‌ ನಿರೂಪಿಸಿದರು. ತುಳು ಅಕಾಡೆಮಿ ಅಧ್ಯಕ್ಷ ದಯಾನಂದ್‌ ಜಿ. ಕತ್ತಲ್‌ಸಾರ್‌, ಬ್ಯಾರಿ ಅಕಾಡೆಮಿ ಅಧ್ಯಕ್ಷ ರಹೀಂ ಉಚ್ಚಿಲ್‌, ಅರೆಭಾಷೆ ಅಕಾಡೆಮಿ ಅಧ್ಯಕ್ಷ ಲಕ್ಷ್ಮಿನಾರಾಯಣ ಕಜಗದ್ದೆ, ಉಪವಿಭಾಗಾಧಿಕಾರಿ ಮದನ ಮೋಹನ್‌, ಪಾಲಿಕೆ ಆಯುಕ್ತ ಎಸ್‌. ಅಜಿತ್‌ಕುಮಾರ್ ಹೆಗ್ಡೆ, ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕದ ಅಧ್ಯಕ್ಷ ಪ್ರದೀಪ್‌ಕುಮಾರ್‌ ಕಲ್ಕೂರ ವೇದಿಕೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT