ಕಾರ್ಕಳ/ಉಡುಪಿ: ಮಾದಕ ವಸ್ತು ನೀಡಿ ಯುವತಿಯ ಅತ್ಯಾಚಾರ ಮಾಡಿದ ಘಟನೆಗೆ ಸಂಬಂಧಿಸಿ ಜಿಲ್ಲೆಯ ರಾಜಕಾರಣಿಗಳು ಮತ್ತು ವಿವಿಧ ಸಂಘಟನೆಗ ಪ್ರತಿನಿಧಿಗಳು ತೀವ್ರ ಖಂಡನೆ ವ್ಯಕ್ತಪಡಿಸಿದ್ದು ಆರೋಪಿಗಳಿಗೆ ಉಗ್ರ ಶಿಕ್ಷೆ ಆಗದಿದ್ದರೆ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಅತ್ಯಾಚಾರ ಆರೋಪಿಗಳಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ರಾಷ್ಟೀಯ ಮಹಿಳಾ ಆಯೋಗದ ಮಾಜಿ ಸದಸ್ಯೆ ಶ್ಯಾಮಲಾ ಎಸ್. ಕುಂದರ್ ಒತ್ತಾಯಿಸಿದ್ದಾರೆ.
ಈಗಾಗಲೇ ರಾಷ್ಟ್ರೀಯ ಮಹಿಳಾ ಆಯೋಗ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿದೆ. ಕಾನೂನಿನ ಭಯವಿಲ್ಲದೆ ಅತ್ಯಾಚಾರದಂಥ ಘಟನೆಗಳು ನಡೆಯುತ್ತಿವೆ. ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದ್ದು ಜಿಲ್ಲೆಯ ಉಸ್ತುವಾರಿ ಸಚಿವರು ಘಟನೆಗೆ ಸಂಬಂಧಿಸಿ ಈ ವರೆಗೆ ಹೇಳಿಕೆಯನ್ನೇ ನೀಡಿಲ್ಲ ಎಂದು ಶ್ಯಾಮಲಾ ದೂರಿದ್ದಾರೆ.
ಅತ್ಯಾಚಾರ ಕೃತ್ಯ ನಾಗರಿಕ ಸಮಾಜವನ್ನು ಬೆಚ್ಚಿ ಬೀಳಿಸಿದೆ. ಕಾಮಾಂಧರ ಅಟ್ಟಹಾಸ ಖಂಡನೀಯ ಎಂದು ಬಿಜೆಪಿ ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರೇಷ್ಮಾ ಉದಯ ಶೆಟ್ಟಿ ಹೇಳಿದ್ದಾರೆ.
ಬಂಧಿತ ಆರೋಪಿಗಳ ಹಿನ್ನೆಲೆ ಹಾಗೂ ಅವರಿಗಿರುವ ಮಾದಕ ವಸ್ತು ಜಾಲದ ನಂಟಿನ ಬಗ್ಗೆ ಕೂಲಂಕಷ ತನಿಖೆ ನಡೆಸಬೇಕು. ಸುಸಂಸ್ಕೃತರ ನಾಡು ಉಡುಪಿ ಜಿಲ್ಲೆಯಲ್ಲಿ ಈ ಹೇಯ ಕೃತ್ಯ ನಡೆದಿರುವುದು ಜಿಲ್ಲೆಗೆ ಕಳಂಕ ತಂದಿದೆ ಎಂದು ಅವರು ಹೇಳಿದ್ದಾರೆ.
ಉಡುಪಿ: ಯುವತಿಗೆ ಅಮಲು ಪದಾರ್ಥ ನೀಡಿ ಪೈಶಾಚಿಕ ಕೃತ್ಯ ಎಸಗಿದ ಮತಾಂಧ ಜಿಹಾದಿ ಶಕ್ತಿಗಳನ್ನು ತಕ್ಷಣ ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಯಶ್‌ಪಾಲ್ ಸುವರ್ಣ ಆಗ್ರಹಿಸಿದ್ದಾರೆ.
ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ರಾಜ್ಯದ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ಕರಾವಳಿಯಲ್ಲಿ ಮಾದಕ ದ್ರವ್ಯ ಸೇವನೆ, ಕೊಲೆ, ಸುಲಿಗೆ, ಅತ್ಯಾಚಾರ ಪ್ರಕರಣದಿಂದ ಜನಸಾಮಾನ್ಯರು ಆತಂಕಕ್ಕೊಳಗಾಗಿದ್ದಾರೆ. ಕಾಂಗ್ರೆಸ್ ಸರ್ಕಾರ ಮತೀಯ ಶಕ್ತಿಗಳ ಓಲೈಕೆ ಮಾಡುತ್ತಿದ್ದು ಲವ್ ಜೆಹಾದ್ ಭಾಗವಾಗಿ ಹಿಂದೂ ಹುಡುಗಿಯರ ಮೇಲೆ ನಿರಂತರ ಅತ್ಯಾಚಾರ ಪ್ರಕರಣಗಳು ನಡೆಯುತ್ತಿದ್ದರೂ ರಾಜ್ಯ ಗೃಹ ಇಲಾಖೆ ನಿಷ್ಕ್ರಿಯವಾಗಿದೆ ಎಂದು ಅವರು ದೂರಿದ್ದಾರೆ. ಪ್ರಕರಣದ ಉಳಿದ ಆರೋಪಿಗಳನ್ನು ತಕ್ಷಣ ಬಂಧಿಸಬೇಕು. ಇಲ್ಲದಿದ್ದರೆ ಜಿಲ್ಲೆಯಾದ್ಯಂತ ಹೋರಾಟ ನಡೆಸುವುದಾಗಿ ಅವರು ಎಚ್ಚರಿಕೆ ನೀಡಿದ್ದಾರೆ.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ನೊಂದ ಯುವತಿಗೆ ನ್ಯಾಯ ಒದಗಿಸಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಜಿಲ್ಲಾ ಪ್ರಧಾನ ಸಂಚಾಲಕ ಸುಂದರ್ ಮಾಸ್ತರ್ ಒತ್ತಾಯಿಸಿದ್ದಾರೆ.
ಮಾದಕ ವಸ್ತು ಸೇವಿಸುವಂತೆ ಒತ್ತಾಯಿಸಿ ನಡೆಸಿದ ಅತ್ಯಾಚಾರ ಪ್ರಕರಣದ ತನಿಖೆಯನ್ನು ಎನ್‌ಐಎಗೆ ಒಪ್ಪಿಸಬೇಕು ಎಂದು ಬಿಜೆಪಿ ಮಹಿಳಾ ಮೋರ್ಚಾ ಆಗ್ರಹಿಸಿದೆ. ಇದೊಂದು ಪೂರ್ವಯೋಜಿತ ಕೃತ್ಯ ಎಂಬ ಸಂದೇಹ ಇದೆ. ಇದರ ಹಿಂದೆ ಅಂತರರಾಷ್ಟ್ರೀಯ ಡ್ರಗ್ಸ್ ಜಾಲ ಇದೆ. ಕಾರ್ಕಳದ ಕಾಲೇಜ್ ಕ್ಯಾಂಪಸ್‌ಗಳ ವ್ಯಾಪ್ತಿಯಲ್ಲಿ ಡ್ರಗ್ಸ್ ದಂಧೆ ನಡೆಯುತ್ತಿರುವ ಬಗ್ಗೆ ಮಾಧ್ಯಮಗಳು ವರದಿ ಮಾಡುತ್ತಿವೆ. ಆದರೂ ಪೊಲೀಸರು ಕ್ರಮ ಕೈಗೊಂಡಿಲ್ಲ ಎಂದು ಮೋರ್ಚಾದ ಕಾರ್ಯಕರ್ತೆಯರು ದೂರಿದ್ದಾರೆ.
ಹೆಣ್ಣು ಮಗಳ ಅತ್ಯಾಚಾರ ಕೃತ್ಯವನ್ನು ಕಾರ್ಕಳದ ಭೋವಿ ಸಮುದಾಯ ಖಂಡಿಸುತ್ತಿದ್ದು ಅತ್ಯಾಚಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಉಗ್ರ ಹೋರಾಟ ಆಯೋಜಿಸಲಾಗುವುದು ಎಂದು ಜಿಲ್ಲಾ ಭೋವಿ ಸಮಾಜದ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಶಿವಕುಮಾರ್ ಎಚ್ಚರಿಕೆ ನೀಡಿದರು.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಡ್ರಗ್ ಮಾಫಿಯಾ ಇಂತಹ ಕೃತ್ಯಗಳ ಹಿಂದೆ ಇದೆ. ತಾಲ್ಲೂಕಿನಲ್ಲಿ ಡ್ರಗ್ ಜಾಲ ವ್ಯಾಪಕವಾಗಿ ಪಸರಿಸಿದ್ದು ಮಟ್ಟ ಹಾಕಬೇಕು ಎಂದು ಆಗ್ರಹಿಸಿದರು. ಜಗದೀಶ್, ಆನಂದ, ಅಶೋಕ್ ಇದ್ದರು.
ಯುವತಿಯ ಅತ್ಯಾಚಾರ ಪ್ರಕರಣ ಅಮಾನವೀಯ ಘಟನೆ. ಇದೊಂದು ಪೂರ್ವನಿಯೋಜಿತ ಷಡ್ಯಂತ್ರವಾಗಿದ್ದು ಇದರ ಹಿಂದೆ ವ್ಯವಸ್ಥಿತ ಸಂಚು ಇರುವ ಶಂಕೆ ಇದೆ ಎಂದು ವಿಶ್ವ ಹಿಂದೂ ಪರಿಷತ್ ದಕ್ಷಿಣ ಪ್ರಾಂತ ಪ್ರಮುಖ್ ಸುನಿಲ್ ಕೆ.ಆರ್ ದೂರಿದರು.
ವಿಶ್ವ ಹಿಂದೂ ಪರಿಷತ್, ಬಜರಂಗದಳ ಹಾಗೂ ಹಿಂದೂ ಜಾಗರಣ ವೇದಿಕೆಯ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕಾಡಿನಲ್ಲಿ ಯುವತಿಗೆ ಅಮಲು ಪದಾರ್ಥ ನೀಡಿ ಸ್ನೇಹಿತರೊಂದಿಗೆ ಸೇರಿ ಗ್ಯಾಂಗ್ ರೇಪ್ ಮಾಡಲಾಗಿದೆ. ಇದು ಲವ್ ಜಿಹಾದ್ ಷಡ್ಯಂತ್ರ. ಇದೇ 26ರಂದು ಹಿಂದೂ ಸಂಘಟನೆಳಿಂದ ಕಾರ್ಕಳದ ಬಸ್ ನಿಲ್ದಾಣದಲ್ಲಿ ಖಂಡನಾ ಸಭೆ ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಹಿಂದೂ ಜಾಗರಣ ವೇದಿಕೆ ಮುಖಂಡ ಮಹೇಶ್ ಬೈಲೂರು, ಜಿಲ್ಲಾ ಪ್ರಮುಖ್ ಉಮೇಶ್ ಸೂಡ, ತಾಲ್ಲೂಕು ಪ್ರಮುಖ್ ಹರೀಶ್ ಮುಡಾರು, ಶ್ರೀಕಾಂತ್ ಶೆಟ್ಟಿ, ಬಜರಂಗದಳ ಮುಖಂಡ ಮನೀಶ್ ನಿಟ್ಟೆ, ಚೇತನ್ ಪೇರಲ್ಕೆ, ಸುಧೀರ್ ನಿಟ್ಟೆ, ಗುರುಪ್ರಸಾದ್ ಸೂಡ, ಸಂತೋಷ್ ಮಾವಿನಕಟ್ಟೆ, ಮಹಿಳಾ ಪ್ರಮುಖ್ ರಮಿತಾ ರಾವ್, ಮನೋಜ್ ಕರಿಯಕಲ್ಲು ಇದ್ದರು.
ಅತ್ಯಾಚಾರ ಪ್ರಕರಣದ ಆರೋಪಿಗಳನ್ನು ಶೀಘ್ರ ಬಂಧಿಸಬೇಕು ಎಂದು ಬ್ಲಾಕ್ ಕಾಂಗ್ರೆಸ್ ವಕ್ತಾರ ಶುಭದರಾವ್ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ. ಅತ್ಯಾಚಾರ ಖಂಡನೀಯ ಎಂದು ಮುಸ್ಲಿಂ ಮುಖಂಡ ಮೊಹಮ್ಮದ್ ಶರೀಫ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದು ಕಾರ್ಕಳದಲ್ಲಿ ಸೌಹಾರ್ದದ ಜೀವನ ನಡೆಸುತ್ತಿದ್ದೇವೆ. ಮುಸ್ಲಿಂ ಸಮುದಾಯಕ್ಕೆ ಕಳಂಕ ತಂದಿರುವ ಆರೋಪಿಯನ್ನು ಬಹಿಷ್ಕರಿಸಬೇಕು, ಆರೋಪಿಗಳ ಪರ ಮುಸ್ಲಿಂ ಸಮುದಾಯದ ವಕೀಲರು ವಾದಿಸಬಾರದು ಎಂದು ವಿನಂತಿಸಿದರು.
ಜಿಲ್ಲಾ ಮುಸ್ಲಿಂ ಒಕ್ಕೂಟ ಕಾರ್ಕಳ ಘಟಕಾಧ್ಯಕ್ಷ ಮೊಹಮ್ಮದ್ ಗೌಸ್, ಕಾರ್ಕಳ ಮುಸ್ಲಿಂ ಜಮಾತ್ ಅಧ್ಯಕ್ಷ ಅಶ್ಫಾಕ್ ಅಹಮದ್, ಕರ್ನಾಟಕ ಮುಸ್ಲಿಂ ಜಮಾತ್ ಕಾರ್ಕಳ ಘಟಕಾಧ್ಯಕ್ಷ ನಾಸಿರ್ ಶೇಖ್, ಮುಸ್ಲಿಂ ಫೆಡರೇಷನ್ ಅಧ್ಯಕ್ಷ ಶಬ್ಬೀರ್ ಅಹಮದ್, ರೋಟರಿ ಕ್ಲಬ್ ಅಧ್ಯಕ್ಷ ಇಕ್ಬಾಲ್ ಅಹಮದ್, ಜೇಸಿಸ್ ವಲಯ ಚೇರ್‌ಮನ್ ಸಮದ್ ಖಾನ್, ಸೇವಾದಳ ಅಧ್ಯಕ್ಷ ಅಬ್ದುಲ್ಲಾ ಶೇಖ್ ಇದ್ದರು.
ಕರಾವಳಿ ಜಿಲ್ಲೆಯಲ್ಲಿ ಹೇಯ ಘಟನೆ ನಡೆದಿರುವುದು ನಾಗರಿಕ ಸಮಾಜ ತಲೆ ತಗ್ಗಿಸುವಂತೆ ಮಾಡಿದೆ. ಮತಾಂಧರು ಯುವತಿಯರನ್ನು ಗುರಿಯಾಗಿಸುತ್ತಿದ್ದಾರೆ. ರಾಜ್ಯದಲ್ಲಿ ಮಹಿಳೆಯರಿಗೆ ರಕ್ಷಣೆಯೇ ಇಲ್ಲದಂತಾಗಿದೆ.–ನಯನಾ ಗಣೇಶ್ ಬಿಜೆಪಿ ಮಾಜಿ ರಾಜ್ಯ ಉಪಾಧ್ಯಕ್ಷೆ
ಈ ಘಟನೆ ನಡೆದಿರುವ ಬಗ್ಗೆ ಊಹಿಸಲೂ ಆಗುತ್ತಿಲ್ಲ. ಇದು ಪೂರ್ವಯೋಜಿತ ಕೃತ್ಯ ಎನ್ನುವ ಸಂದೇಹ ದಟ್ಟವಾಗಿದೆ. ಆರೋಪಿಗಳು ಹಿಂದೆಯೂ ಇಂಥ ಕೃತ್ಯ ಎಸಗಲಾಗಿದೆಯೇ ಎಂಬುದನ್ನು ತನಿಖೆ ಆಗಬೇಕು.–ವಿ.ಸುನಿಲ್ ಕುಮಾರ್ ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.