ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಕ್ಷಿಣ ಕನ್ನಡ ವಿಧಾನಸಭಾ ಕ್ಷೇತ್ರ: ಸಮಾನ ಅವಕಾಶ–‘ಕೈ’ಗೆ ಪ್ರಯಾಸ

ಬಂಟರಷ್ಟೇ ಬಿಲ್ಲವರಿಗೆ ಸ್ಥಾನಕ್ಕೆ ಪಟ್ಟು– ಟಿಕೆಟ್‌ ಹಂಚಿಕೆ ಬಿಕ್ಕಟ್ಟು
Last Updated 25 ಜನವರಿ 2023, 6:18 IST
ಅಕ್ಷರ ಗಾತ್ರ

ಮಂಗಳೂರು: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಟಿಕೆಟ್‌ ಹಂಚಿಕೆ ವೇಳೆ ಬಂಟ ಮತ್ತು ಬಿಲ್ಲವ ಸಮುದಾಯಗಳ ನಡುವೆ ಸಮತೋಲನ ಕಾಯ್ದುಕೊಳ್ಳಬೇಕಾದ ‘ಅನಿವಾರ್ಯತೆ’ ಕಾಂಗ್ರೆಸ್‌ ಪಾಳೆಯವನ್ನು ಇಕ್ಕಟ್ಟಿಗೆ ಸಿಲುಕಿಸಿದೆ.

ಕಳೆದ ಚುನಾವಣೆಯಲ್ಲಿ ಜಿಲ್ಲೆಯ ಒಟ್ಟು ಎಂಟರಲ್ಲಿ ನಾಲ್ಕು ಕ್ಷೇತ್ರಗಳಲ್ಲಿ ಪಕ್ಷವು ಅಲ್ಪಸಂಖ್ಯಾತ ಸಮುದಾಯದ ಅಭ್ಯರ್ಥಿಗಳಿಗೆ ಟಿಕೆಟ್‌ ನೀಡಿತ್ತು‌. ಮೂಲ್ಕಿ–ಮೂಡುಬಿದಿರೆಯಿಂದ ಅಭಯಚಂದ್ರ ಜೈನ್‌, ಮಂಗಳೂರು ಉತ್ತರದಿಂದ ಮೊಹಿಯುದ್ದೀನ್‌ ಬಾವ, ಮಂಗಳೂರು ಕ್ಷೇತ್ರದಿಂದ ಯು.ಟಿ. ಖಾದರ್‌ ಹಾಗೂ ಮಂಗಳೂರು ದಕ್ಷಿಣದಿಂದ ಜೆ.ಆರ್‌. ಲೋಬೊ ಅವರನ್ನು ಕಣಕ್ಕಿಳಿಸಿತ್ತು. ಬೆಳ್ತಂಗಡಿ ಕ್ಷೇತ್ರದಲ್ಲಿ ಮಾತ್ರ ಬಿಲ್ಲವರಿಗೆ (ವಸಂತ ಬಂಗೇರ) ಟಿಕೆಟ್‌ ನೀಡಿತ್ತು. ಬಂಟ್ವಾಳ (ರಮಾನಾಥ ರೈ) ಮತ್ತು ಪುತ್ತೂರು (ಶಕುಂತಳಾ ಶೆಟ್ಟಿ) ಕ್ಷೇತ್ರಗಳಲ್ಲಿ ಬಂಟ ಸಮುದಾಯದವರಿಗೆ ಟಿಕೆಟ್‌ ನೀಡಿತ್ತು.

‘ಪ್ರಜಾಧ್ವನಿ ಯಾತ್ರೆ’ಯ ಸಮಾವೇಶಕ್ಕೆ ಸಿಕ್ಕ ಪ್ರತಿಕ್ರಿಯೆಯಿಂದ ಕೈ ಪಾಳೆಯ ತುಸು ಹುರುಪು ಪಡೆದುಕೊಂಡಿದೆ. ಬಿಜೆಪಿ ನಾಯಕ ಕೋಡಿಂಬಾಡಿ ಅಶೋಕ್ ಕುಮಾರ್‌ ರೈ ಅವರು ಪುತ್ತೂರು ಕ್ಷೇತ್ರದ ಟಿಕೆಟ್‌ ಸಿಗಲಿದೆ ಎಂಬ ನಿರೀಕ್ಷೆಯಿಂದ ಕಾಂಗ್ರೆಸ್‌ ಸೇರಿದ್ದಾರೆ. ಇನ್ನೊಂದೆಡೆ ಬಂಟ್ವಾಳ ಕ್ಷೇತ್ರದಲ್ಲಿ ಈ ಬಾರಿಯೂ ರಮಾನಾಥ ರೈ ಅವರು ಪ್ರಬಲ ಆಕಾಂಕ್ಷಿ. ಮೂಲ್ಕಿ–ಮೂಡುಬಿದಿರೆ ಕ್ಷೇತ್ರದಿಂದ ಟಿಕೆಟ್‌ ಸಿಗಲಿದೆ ಎಂದು ಮಿಥುನ್‌ ರೈ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಮೂವರೂ ಬಂಟ ಸಮುದಾಯಕ್ಕೆ ಸೇರಿದವರು.

‘ಈ ಬಾರಿ ಅಭಯಚಂದ್ರ ಜೈನ್‌ ಅವರು ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿಲ್ಲ. ಮಂಗಳೂರು ನಗರ ಕ್ಷೇತ್ರದಲ್ಲಿ ಹಾಲಿ ಶಾಸಕ ಯು.ಟಿ. ಖಾದರ್‌ ಅವರಿಗೆ ಟಿಕೆಟ್ ನೀಡುವುದು ಬಹುತೇಕ ಖಚಿತ. ಮಂಗಳೂರು ದಕ್ಷಿಣದಲ್ಲಿ ಈ ಸಲವೂ ಕ್ರೈಸ್ತರಿಗೆ ಮಣೆ ಹಾಕಿದರೆ, ಮಂಗಳೂರು ಉತ್ತರ ಕ್ಷೇತ್ರದಲ್ಲಿ ಮುಸ್ಲಿಂ ಅಭ್ಯರ್ಥಿಗೆ ಮತ್ತೆ ಟಿಕೆಟ್‌ ನೀಡಿದರೆ ಮೂರು ಸ್ಥಾನಗಳು ಅಲ್ಪಸಂಖ್ಯಾತರ ಪಾಲಾಗಲಿವೆ. ಸುಳ್ಯ ಮೀಸಲು ಕ್ಷೇತ್ರವನ್ನು ಹೊರತುಪಡಿಸಿದರೆ, ಇನ್ನುಳಿಯುವುದು ನಾಲ್ಕು ಕ್ಷೇತ್ರಗಳು. ಅವುಗಳಲ್ಲಿ ಮೂರು ಕ್ಷೇತ್ರಗಳಲ್ಲಿ ಬಂಟ ಸಮುದಾಯದವರಿಗೆ ಟಿಕೆಟ್‌ ನೀಡಿದರೆ, ಬಿಲ್ಲವರು ಮುನಿಸಿಕೊಳ್ಳುವ ಸಾಧ್ಯತೆ ಹೆಚ್ಚು ಎಂಬ ಅಳಕು ಪಕ್ಷವನ್ನು ಕಾಡುತ್ತಿದೆ’ ಎಂದು ಹೆಸರು ಬಹಿರಂಗ ಪಡಿಸಲು ಒಲ್ಲದ ಪಕ್ಷದ ಹಿರಿಯ ಮುಖಂಡರೊಬ್ಬರು ವಿಶ್ಲೇಷಿಸಿದರು.

‘ನಾರಾಯಣಗುರು ಅಭಿವೃದ್ಧಿ ನಿಗಮ ಸ್ಥಾಪನೆ ವಿಚಾರದಲ್ಲಿ ರಾಜ್ಯ ಸರ್ಕಾರದ ನಡೆ, ನಾರಾಯಣ ಗುರುಗಳ ಕುರಿತ ಪಠ್ಯವನ್ನು ಕೈಬಿಟ್ಟ ವಿಚಾರಗಳು ಹಾಗೂ ರಾಜಕೀಯವಾಗಿ ನಡೆದ ಕೆಲವು ಬೆಳವಣಿಗೆಗಳಿಂದಾಗಿ ಬಿಲ್ಲವ ಸಮುದಾಯ ಬಿಜೆಪಿಯ ಕುರಿತು ಅಸಮಾಧಾನ ಹೊಂದಿದೆ. ಅದರ ಲಾಭ ನಮ್ಮ ಪಕ್ಷಕ್ಕೆ ಸಿಗಬೇಕಾದರೆ ಕನಿಷ್ಠ ಎರಡು ಕ್ಷೇತ್ರಗಳಲ್ಲಾದರೂ ಬಿಲ್ಲವರಿಗೆ ಅವಕಾಶ ನೀಡಬೇಕಾಗುತ್ತದೆ’ ಎಂದು ಅವರು ಅಭಿಪ್ರಾಯಪಟ್ಟರು.

ಮೂಲ್ಕಿ–ಮೂಡುಬಿದಿರೆ ಮತ್ತು ಬೆಳ್ತಂಗಡಿ ಕ್ಷೇತ್ರದಲ್ಲಿ ಬಿಲ್ಲವರ ಮತಗಳು ಹೆಚ್ಚಿನ ಪ್ರಮಾಣದಲ್ಲಿವೆ. ಬೆಳ್ತಂಗಡಿಯಲ್ಲಿ ಬಿಲ್ಲವ ಸಮುದಾಯದ ರಕ್ಷಿತ್‌ ಶಿವರಾಂ, ವಸಂತ ಬಂಗೇರ ಹಾಗೂ ಮೂಲ್ಕಿ–ಮೂಡುಬಿದಿರೆ ಕ್ಷೇತ್ರದಿಂದ ಟಿಕೆಟ್‌ ಬಯಸಿ ಬಿಲ್ಲವ ಸಮುದಾಯದ ಪ್ರತಿಭಾ ಕುಳಾಯಿ, ರಾಷ್ಟ್ರೀಯ ಬಿಲ್ಲವ ಮಹಾಮಂಡಳದ ರಾಜಶೇಖರ ಕೋಟ್ಯಾನ್‌ ಅರ್ಜಿ ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT