ಮಂಗಳೂರು: ‘ಮಂಗಳೂರು ವಿಶ್ವವಿದ್ಯಾಲಯದಲ್ಲಿ ಕೊಂಕಣಿ ಎಂ.ಎ ಕೋರ್ಸ್ ಆರಂಭಿಸಲು ಹಾಗೂ ಪದವಿ ಪೂರ್ವ ತರಗತಿಯಲ್ಲಿ ಕೊಂಕಣಿಯನ್ನು ಒಂದು ಭಾಷೆಯಾಗಿ ಕಲಿಯುವುದಕ್ಕೆ ಅವಕಾಶ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ನಡೆಸುತ್ತೇನೆ’ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ತಿಳಿಸಿದರು.
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ವತಿಯಿಂದ ಇಲ್ಲಿ ಮಂಗಳವಾರ ಏರ್ಪಡಿಸಿದ್ದ ಕೊಂಕಣಿ ಮಾನ್ಯತಾ ದಿನಾಚರಣೆಯಲ್ಲಿ 2024ರ ಕೊಂಕಣಿ ಪುಸ್ತಕ ಪುರಸ್ಕಾರ ಪ್ರದಾನ ಮಾಡಿ ಅವರು ಮಾತನಾಡಿದರು.
‘ಕೊಂಕಣಿ ಹೃದಯದ ಭಾಷೆ. ಶಕ್ತಿಶಾಲಿ ಭಾಷೆ. ಕೊಂಕಣಿಗರು ತಮ್ಮ ಭಾಷೆಯನ್ನು ಅಭಿಮಾನದಿಂದ ಬಳಸುತ್ತಾರೆ. ಇದರಲ್ಲಿ ಉತ್ತಮ ಸಾಹಿತ್ಯ ಕೃತಿಗಳು ಬರುತ್ತಿವೆ. ಸಾಹಿತಿಗಳನ್ನು ಗುರುತಿಸಿ ಗೌರವಿಸಿದರೆ ಕೊಂಕಣಿ ಸಾಹಿತ್ಯ ಮತ್ತಷ್ಟು ಸಮೃದ್ಧವಾಗಲಿದೆ. ಈ ನಿಟ್ಟಿನಲ್ಲಿ ಅಕಾಡೆಮಿಯ ಪ್ರಯತ್ನ ಶ್ಲಾಘನೀಯ’ ಎಂದರು.
ಸನ್ಮಾನ ಸ್ವೀಕರಿಸಿದ ಮಾಂಡ್ ಸೊಭಾಣ್‌ನ ಸ್ಥಾಪಕಾಧ್ಯಕ್ಷ ಎರಿಕ್ ಒಝೇರಿಯೊ, ‘ಅಕಾಡೆಮಿಯು ಕೇವಲ ಸಾಹಿತ್ಯಕ್ಕೆ ಸೀಮಿತವಾಗಿರದೇ ಕೊಂಕಣಿಯ ಸಮಗ್ರ ಏಳಿಗೆಗೆ ಶ್ರಮಿಸಬೇಕು. ಮಂಗಳೂರು ವಿಶ್ವ ವಿದ್ಯಾನಿಲಯದಲ್ಲಿ ಕೊಂಕಣಿ ಎಂ.ಎ ಕೋರ್ಸ್‌ಗೆ ಮಾನ್ಯತೆ ಸಿಗಬೇಕು’ ಎಂದು ಒತ್ತಾಯಿಸಿದರು.
ರೋಶನ್ ಮೆಲ್ಕಿ ಸಿಕ್ವೇರಾ ಅವರ ‘ಪೇಯಿಂಗ್ ಗೆಸ್ಟ್’ ಹಾಗೂ ಫಾ.ಫ್ರಾನ್ಸಿಸ್ ರಾಡ್ರಿಗಸ್ ಅವರ ‘ಜಿರೆಂ ಮಿರಿ’ ಕೃತಿಗಳು ಪುಸ್ತಕ ಪುರಸ್ಕಾರಕ್ಕೆ ಆಯ್ಕೆಯಾಗಿದ್ದು, ಆ ಲೇಖಕರಿಬ್ಬರನ್ನು ಗೌರವಿಸಲಾಯಿತು.
ಪ್ರಾಧ್ಯಾಪಕ ಪ್ರೊ.ಸ್ಟೀವನ್ ಕ್ವಾಡ್ರಸ್ ಕೊಂಕಣಿಯ ಹಿರಿಮೆ ಕುರಿತು ಉಪನ್ಯಾಸ ನೀಡಿದರು.
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ರಾಯ್ ಕ್ಯಾಸ್ಟಲಿನೊ, ಸ್ಥಾಪಕ ಸದಸ್ಯ ರೊನಾಲ್ಡ್ ಕ್ರಾಸ್ತಾ ಶುಭ ಹಾರೈಸಿದರು.
ಕೊಂಕಣಿ ಭಾಷಾ ಮಂಡಳಿಯ ಅಧ್ಯಕ್ಷ ಕೆ. ವಸಂತ ರಾವ್, ಕೆಥೋಲಿಕ್ ಸಭಾ ಅಧ್ಯಕ್ಷ ಆಲ್ವಿನ್ ಡಿಸೋಜ, ಮಾಂಡ್ ಸೊಭಾಣ್ ಅಧ್ಯಕ್ಷ ಲುವಿ ಪಿಂಟೊ, ಪ್ರಮುಖರಾದ ಪ್ರವೀಣ್ ತಾವ್ರೊ, ಮಂಜುಳಾ ನಾಯಕ್, ರಿಚರ್ಡ್ ಮೊರಾಸ್, ಶೇಖರ ಗೌಡ, ಲಕ್ಷ್ಮೀ ಪೂರ್ಣಿಮಾ ಭಂಡಾರ್ಕರ್, ವೆಂಕಟೇಶ್ ಬಾಳಿಗ, ಮಣೇಲ ಗಜಾನನ ಶೆಣೈ, ಫ್ಲೋರಾ ಕ್ಯಾಸ್ಟಲಿನೊ, ಮರೋಳಿ ಸವಿತಾ ಕಾಮತ್, ಡಾ. ಫ್ಲಾವಿಯಾ ಕ್ಯಾಸ್ಟಲಿನೊ, ಡೊನಾಲ್ಡ್ ಪಿರೇರಾ, ಲಿಸ್ಟನ್ ಡೆರಿಲ್ ಡಿಸೋಜ, ಮಹೇಶ್ ನಾಯಕ್ ಭಾಗವಹಿಸಿದ್ದರು.
ಅಕಾಡೆಮಿಯ ಅಧ್ಯಕ್ಷ ಸ್ಟ್ಯಾನಿ ಆಳ್ವಾರಿಸ್ ಸ್ವಾಗತಿಸಿದರು. ಕನ್ನಡ ಸಂಸ್ಕೃತಿ ಇಲಾಖೆಯ ಉಪ ನಿರ್ದೇಶಕ ರಾಜೇಶ್ ಜಿ. ವಂದಿಸಿದರು. ಡೆಲಿಶಾ ಅಸುಂತಾ ಪಿರೇರಾ ನಿರೂಪಿಸಿದರು.
ಹೈಸ್ಕೂಲ್ ವಿಭಾಗದ ವಿವಿಧ ವಿನೋದಾವಳಿ ಸ್ಪರ್ಧೆಯಲ್ಲಿ ಬೊಂದೇಲ್‌ನ ಸೇಂಟ್ ಲಾರೆನ್ಸ್ ಇಂಗ್ಲಿಷ್ ಮಾಧ್ಯಮ ಶಾಲೆ ಪ್ರಥಮ, ಮೂಲ್ಕಿಯ ವ್ಯಾಸ ಮಹರ್ಷಿ ವಿದ್ಯಾಪೀಠ ದ್ವಿತೀಯ ಹಾಗೂ ಉರ್ವದ ಕೆನರಾ ಹೈಸ್ಕೂಲ್ ತೃತೀಯ ಬಹುಮಾನ ಪಡೆದವು. ಕಾಲೇಜು ವಿಭಾಗದ ಸ್ಪರ್ಧೆಯಲ್ಲಿ ಸೇಂಟ್ ಅಲೋಶಿಯಸ್ ಕಾಲೇಜಿನ ಎ ತಂಡ ಪ್ರಥಮ, ಮೊಡಂಕಾಪುವಿನ ಕಾರ್ಮೆಲ್ ಕಾಲೇಜು ದ್ವಿತೀಯ ಹಾಗೂ ಸೇಂಟ್ ಅಲೋಶಿಯಸ್ ಪದವಿ ಕಾಲೇಜು ತಂಡ ತೃತಿಯ ಸ್ಥಾನ ಪಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.