ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರಗರ ಶ್ರೇಯೋಭಿವೃದ್ಧಿಗೆ ಅಗತ್ಯ ಕ್ರಮ: ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ.

ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಭರವಸೆ
Last Updated 20 ಸೆಪ್ಟೆಂಬರ್ 2022, 5:23 IST
ಅಕ್ಷರ ಗಾತ್ರ

ಮಂಗಳೂರು: ಜಿಲ್ಲೆಯಲ್ಲಿರುವ ಕೊರಗ ಜನಾಂಗದ ಸಂಪೂರ್ಣ ಶ್ರೇಯೋಭಿವೃದ್ಧಿಗೆ ಅಗತ್ಯವಿರುವ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲು ಅನುಕೂಲವಾಗುವಂತೆ ವಿವಿಧ ಮಜಲುಗಳಲ್ಲಿ ಆಳವಾದ ಅಧ್ಯಯನ ನಡೆಸಿ ವರದಿ ನೀಡುವಂತೆ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಅವರು ಸಂಬಂಧಿಸಿದ ಇಲಾಖೆಗಳಿಗೆ ನಿರ್ದೇಶನ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಸಭೆಯಲ್ಲಿ ಅವರು ಮಾತನಾಡಿದರು. ಈ ಸಮುದಾಯದ ವಿದ್ಯಾರ್ಥಿಗಳಲ್ಲಿ ಕೆಲವರು ಶಿಕ್ಷಣವನ್ನು ಪೂರ್ಣಗೊಳಿಸದೆ ಇರುವುದು, ಮಹಿಳೆಯರಲ್ಲಿ ಅಪೌಷ್ಟಿಕತೆ ಹಾಗೂ ರಕ್ತ ಹೀನತೆ, ಮಕ್ಕಳಲ್ಲಿನ ಅಪೌಷ್ಟಿಕತೆ ಹೋಗಲಾಡಿಸಲು ವಿವರವಾದ ಅಧ್ಯಯನ ಮಾಡಬೇಕು. ಅದಕ್ಕೆ ಪೂರಕವಾದ ಪ್ರಶ್ನೋತ್ತರ ಮಾಲಿಕೆಗಳನ್ನು ಸಿದ್ಧಪಡಿಸಿಕೊಂಡು ಅವರು ವಾಸಿಸುವ ಸ್ಥಳಗಳಿಗೆ ತೆರಳಿ, ಪ್ರತಿ ಮನೆಯಿಂದ ಮಾಹಿತಿ ಸಂಗ್ರಹಿಸಬೇಕು ಎಂದು ಸೂಚಿಸಿದರು.

ಅಧ್ಯಯನದ ಸಂದರ್ಭದಲ್ಲಿ ಪ್ರಮುಖವಾಗಿ ಶಾಲೆಯಿಂದ ಹೊರಗುಳಿದ ಮಕ್ಕಳು ಇದ್ದರೆ ಯಾವ ಕಾರಣಕ್ಕಾಗಿ ಶಾಲೆಯಿಂದ ಹೊರಗುಳಿದಿದ್ದಾರೆ, ಸಮುದಾಯದಲ್ಲಿ ಕೆಲವರು ದುಶ್ಚಟಗಳಿಗೆ ಒಳಗಾಗಿದ್ದರೆ, ಅವುಗಳಿಗೆ ಕಾರಣ ಹೀಗೆ ಸಂಪೂರ್ಣ ವಿವರಗಳನ್ನು ಸಂಗ್ರಹಿಸಬೇಕು. ಈ ಕಾರ್ಯಕ್ಕಾಗಿ ಜಿಲ್ಲಾ ಖನಿಜ ನಿಧಿಯಿಂದ ₹ 25 ಲಕ್ಷ ಬಿಡುಗಡೆ ಮಾಡಲಾಗುವುದು ಎಂದರು.

ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು, ಜಿಲ್ಲೆಯಲ್ಲಿರುವ 9 ವೈದ್ಯಕೀಯ ಕಾಲೇಜುಗಳ ವಿಭಾಗದ ಮುಖ್ಯಸ್ಥರು ಹಾಗೂ ಅವರಿಂದ ನಿಯೋಜಿಸುವ ಅಧಿಕಾರಿಗಳು ಮತ್ತು ಇತರ ಸದಸ್ಯರನ್ನು ಒಳಗೊಂಡ ಸಮಿತಿಯೊಂದನ್ನು ಅದಕ್ಕಾಗಿ ರಚಿಸಲಾಗುವುದು. ಈ ಸಮಿತಿಯು ಕೂಲಂಕಷವಾಗಿ ಅಧ್ಯಯನ ಮಾಡಬೇಕು. ಇದಕ್ಕೆ ಪೂರಕವಾಗಿ ಮೊಬೈಲ್ ಆ್ಯಪ್ ಹಾಗೂ ಕಂಪ್ಯೂಟರ್ ಸಾಫ್ಟ್‌ವೇರ್ ಅಭಿವೃದ್ಧಿಪಡಿಸಿ ನೀಡಲಾಗುವುದು. ಇದರಲ್ಲಿ ಕೊರಗ ಸಮುದಾಯದ ಮಾಹಿತಿಯನ್ನು ಅಪ್‌ಡೇಟ್‌ ಮಾಡಬೇಕು. ಕಮ್ಯುನಿಟಿ ಮೆಡಿಸಿನ್ ಸ್ಟಾಫ್‍ನವರು ಸಹಕರಿಸಬೇಕು ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕುಮಾರ್, ಉಪವಿಭಾಗಾಧಿಕಾರಿ ಮದನ್ ಮೋಹನ್, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ರಶ್ಮಿ, ತಜ್ಞ ವೈದ್ಯರಾದ ಡಾ. ವಿಜಯ್ ಕುಮಾರ್, ಜಿಲ್ಲಾ ಆರೋಗ್ಯ ಹಾಗೂ ಕುಟುಂಬ ಕಲ್ಯಾಣಾಧಿಕಾರಿ ಡಾ.ಕಿಶೋರ್ ಕುಮಾರ್, ಜಿಲ್ಲಾ ಕೊರಗ ಸಂಘದ ಅಧ್ಯಕ್ಷ ಎಂ. ಸುಂದರ್ ಹಾಗೂ ಜಿಲ್ಲಾ ಕೊರಗ ಸಂಘದ ಪದಾಧಿಕಾರಿಗಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT