ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು | ಕರ್ಫ್ಯೂ ಬಿಸಿ: ಡಿಪೋದಲ್ಲೇ ಅಡುಗೆ ಮಾಡಿದ ಕೆಎಸ್‌ಆರ್‌ಟಿಸಿ ಸಿಬ್ಬಂದಿ

ಸ್ಟೇರಿಂಗ್, ಸ್ಪ್ಯಾನರ್ ಹಿಡಿವ ಕೈಗಳು ತರಕಾರಿ ಹೆಚ್ಚಿದವು
Last Updated 22 ಡಿಸೆಂಬರ್ 2019, 4:23 IST
ಅಕ್ಷರ ಗಾತ್ರ

ಮಂಗಳೂರು: ಕರ್ಫ್ಯೂ ಕಾರಣದಿಂದಾಗಿ ಮಂಗಳೂರಿನಲ್ಲಿಯೇ ನಿಲ್ಲಬೇಕಾದ, ರಾಜ್ಯದ ವಿವಿಧೆಡೆಗಳಿಂದ ಬಂದಿದ್ದ ಕೆಎಸ್‌ಆರ್‌ಟಿಸಿಸಿಬ್ಬಂದಿಗೆ ಶನಿವಾರ ಮಂಗಳೂರು ಘಟಕದಲ್ಲಿಯೇ ಆಹಾರ ತಯಾರಿಸಿ ವಿತರಿಸಲಾಯಿತು.

ಸ್ಟೇರಿಂಗ್‌ ಹಿಡಿಯುತ್ತಿದ್ದ ಚಾಲಕರು, ವಿಷಲ್ ಊದಿ ರೈಟ್ ಹೇಳುತ್ತಿದ್ದ ಕಂಡಕ್ಟರ್‌ಗಳು, ಸ್ಪ್ಯಾನರ್ ಹಿಡಿದು ರಿಪೇರಿ ಮಾಡುತ್ತಿದ್ದ ಮೆಕ್ಯಾನಿಕ್‌ಗಳು ಈರುಳ್ಳಿ ಹೆಚ್ಚುವ, ಕಾಯಿ ತುರಿಯುವ ಕೆಲಸ ನಿಭಾಯಿಸಿದರು. ಮಹಿಳಾ ಸಿಬ್ಬಂದಿಯೂ ಅಡುಗೆ ತಯಾರಿಕೆಗೆ ಸಹಕರಿಸಿದರು.

‘ನಗರದಲ್ಲಿ ಹೋಟೆಲ್‌ಗಳು ಬಾಗಿಲು ಹಾಕಿವೆ. ಹೀಗಾಗಿ ಘಟಕದಲ್ಲಿಯೇ ಆಹಾರ ತಯಾರಿಸಿ ಇತರೆಡೆಗಳಿಂದ ಸಿಬ್ಬಂದಿಗೆ ಕೊಟ್ಟೆವು’ ಎಂದು ಮಂಗಳೂರು ವಿಭಾಗೀಯ ನಿಯಂತ್ರಣಾಧಿಕಾರಿ ಅರುಣ್‌ಕುಮಾರ್ ತಿಳಿಸಿದರು.

‘ಮಂಗಳೂರು–ಕಾಸರಗೋಡು ಮಾರ್ಗ ಹೊರತುಪಡಿಸಿ ಉಳಿದಂತೆ ಕೆಎಸ್‌ಆರ್‌ಟಿಸಿ ಬಸ್‌ಗಳು ಸಂಚಾರ ಆರಂಭಿಸಿವೆ. ನಿನ್ನೆ ರಾತ್ರಿ ಒಟ್ಟು 39 ಬಸ್‌ಗಳು ಬೆಂಗಳೂರಿಗೆ ಮತ್ತು 11 ಬಸ್‌ಗಳು ಮೈಸೂರಿಗೆ ಹೊರಟವು’ ಎಂದು ಕೆಎಸ್‌ಆರ್‌ಟಿಸಿ ಪ್ರಕಟಣೆ ತಿಳಿಸಿದೆ.

ಶುಕ್ರವಾರ ಹಾಗೂ ಶನಿವಾರ ಮಂಗಳೂರಿನ ಬಸ್‌ ನಿಲ್ದಾಣದಲ್ಲಿ ನಿಲುಗಡೆಯಾಗಿದ್ದ ಕೆಎಸ್‌ಆರ್‌ಟಿಸಿ ಬಸ್‌ಗಳು. (ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ)
ಶುಕ್ರವಾರ ಹಾಗೂ ಶನಿವಾರ ಮಂಗಳೂರಿನ ಬಸ್‌ ನಿಲ್ದಾಣದಲ್ಲಿ ನಿಲುಗಡೆಯಾಗಿದ್ದ ಕೆಎಸ್‌ಆರ್‌ಟಿಸಿ ಬಸ್‌ಗಳು. (ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ)

ಕಲ್ಲುತೂರಾಟ, ಸಂಚಾರ ನಿರ್ಬಂಧ: ಕೆಎಸ್‌ಆರ್‌ಟಿಸಿಗೆ ₹ 2.15 ಕೋಟಿ ನಷ್ಟ

ಕರ್ಫ್ಯೂ ಹಾಗೂ ಬಸ್‌ ಸಂಚಾರ ನಿರ್ಬಂಧಿಸಿದ್ದರಿಂದ ಕೆಎಸ್‌ಆರ್‌ಟಿಸಿ ಮಂಗಳೂರು ಮತ್ತು ಪುತ್ತೂರು ವಿಭಾಗಗಳು ಎರಡು ದಿನದಲ್ಲಿ ಒಟ್ಟು ₹2.15 ಕೋಟಿ ನಷ್ಟ ಅನುಭವಿಸುವಂತಾಗಿದೆ.

ಮಂಗಳೂರು ವಿಭಾಗದಲ್ಲಿ ₹1.40 ಕೋಟಿ ನಷ್ಟ ಅಂದಾಜಿಸಲಾಗಿದೆ. ಕಾಸರಗೋಡು, ಧರ್ಮಸ್ಥಳ, ದಾವಣಗೆರೆ, ಚೆನ್ನೈ, ತಿರುಪತಿ, ಬೆಂಗಳೂರು, ಮೈಸೂರು ಸೇರಿದಂತೆ ಇತರ ಊರುಗಳಿಗೆ ಶುಕ್ರವಾರ ಇಡೀ ದಿನ ಬಸ್‌ ಸಂಚಾರ ಸ್ಥಗಿತವಾಗಿತ್ತು. ಅಲ್ಲದೇ ಜಿಲ್ಲೆಯ ಒಳಗಡೆಯೂ ಬಸ್‌ಗಳು ಸಂಚರಿಸಿಲ್ಲ ಎಂದು ಮಂಗಳೂರು ವಿಭಾಗೀಯ ನಿಯಂತ್ರಣಾಧಿಕಾರಿ ಅರುಣ್‌ಕುಮಾರ್ ತಿಳಿಸಿದ್ದಾರೆ.

ಮಂಗಳೂರು ವಿಭಾಗದ 530 ಬಸ್‌ಗಳ ಪೈಕಿ 250 ಕ್ಕೂ ಹೆಚ್ಚು ಬಸ್‌ಗಳು ದೂರದ ಊರುಗಳಿಗೆ ಸಂಚರಿಸುತ್ತವೆ. ಈ ಎಲ್ಲ ಬಸ್‌ಗಳ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು ಎಂದು ಹೇಳಿದ್ದಾರೆ.

ಇನ್ನು ಪುತ್ತೂರು ವಿಭಾಗದಲ್ಲಿ ಒಟ್ಟು ₹75 ಲಕ್ಷ ನಷ್ಟ ಉಂಟಾಗಿದೆ. ಶುಕ್ರವಾರ ರಾತ್ರಿ ಪುತ್ತೂರಿನಿಂದ ದೂರದ ಊರುಗಳಿಗೆ ಬಸ್‌ಗಳು ಸಂಚರಿಸಿವೆ. ಆದರೆ, ಜಿಲ್ಲೆಯ ವಿವಿಧೆಡೆ ಬಸ್‌ಗಳ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಶನಿವಾರ ಮಂಗಳೂರು ಹೊರತುಪಡಿಸಿ, ಜಿಲ್ಲೆಯ ವಿವಿಧೆಡೆ ಬಸ್‌ಗಳು ಸಂಚರಿಸಿವೆ ಎಂದು ಪುತ್ತೂರು ವಿಭಾಗೀಯ ನಿಯಂತ್ರಣಾಧಿಕಾರಿ ನಾಗೇಂದ್ರ ತಿಳಿಸಿದ್ದಾರೆ.

ಖಾಸಗಿ ಬಸ್‌ಗಳಿಗೂ ನಷ್ಟ

ಜಿಲ್ಲೆಯಲ್ಲಿ ಖಾಸಗಿ ಬಸ್‌ಗಳ ಮಾಲೀಕರೂ ಬಸ್‌ ಸಂಚಾರವಿಲ್ಲದೇ ₹75 ಕೋಟಿ ನಷ್ಟ ಅನುಭವಿಸುವಂತಾಗಿದೆ.

ಪ್ರತಿ ಬಸ್‌ನಿಂದ ನಿತ್ಯ ₹10 ಸಾವಿರ ಆದಾಯ ಬರುತ್ತಿತ್ತು. ನಗರದಲ್ಲಿ 300 ಕ್ಕೂ ಹೆಚ್ಚು ಬಸ್‌ಗಳಿದ್ದು, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ವಿವಿಧೆಡೆ ಹಾಗೂ ನಗರದಲ್ಲಿ ಸಂಚರಿಸುತ್ತವೆ. ಎರಡು ದಿನಗಳಿಂದ ಯಾವುದೇ ಬಸ್‌ಗಳ ಸಂಚಾರ ಇಲ್ಲದಾಗಿದ್ದು, ಗುರುವಾರ ಸಂಜೆಯ ನಂತರವೂ ಕೆಲ ಬಸ್‌ಗಳ ಸಂಚಾರ ಸ್ಥಗಿತಗೊಳಿಸಲಾಗಿತ್ತು ಎಂದು ದಕ್ಷಿಣ ಕನ್ನಡ ಬಸ್‌ ಮಾಲೀಕರ ಸಂಘದ ಅಧ್ಯಕ್ಷ ದಿಲ್‌ರಾಜ್‌ ಆಳ್ವ ತಿಳಿಸಿದ್ದಾರೆ.

ಮಂಗಳೂರಿನಲ್ಲಿ ತರಕಾರಿ ಹೆಚ್ಚುತ್ತಿರುವ ಕೆೆಎಸ್‌ಆರ್‌ಟಿಸಿ ಸಿಬ್ಬಂದಿ
ಮಂಗಳೂರಿನಲ್ಲಿ ತರಕಾರಿ ಹೆಚ್ಚುತ್ತಿರುವ ಕೆೆಎಸ್‌ಆರ್‌ಟಿಸಿ ಸಿಬ್ಬಂದಿ
ಮಂಗಳೂರಿನಲ್ಲಿ ಅಡುಗೆ ಮಾಡುತ್ತಿರುವ ಕೆೆಎಸ್‌ಆರ್‌ಟಿಸಿ ಸಿಬ್ಬಂದಿ
ಮಂಗಳೂರಿನಲ್ಲಿ ಅಡುಗೆ ಮಾಡುತ್ತಿರುವ ಕೆೆಎಸ್‌ಆರ್‌ಟಿಸಿ ಸಿಬ್ಬಂದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT