ಮಂಗಳವಾರ, ಮೇ 26, 2020
27 °C
ಲಾಕ್‌ಡೌನ್‌: ಲಂಗರು ಹಾಕಿದ ದೋಣಿಗಳಲ್ಲಿ ಸಿಲುಕಿರುವ ಕಾರ್ಮಿಕರು

ಮಂಗಳೂರು | ಬಂದರು ಧಕ್ಕೆಯಲ್ಲಿ ಮೀನುಗಾರರ ತೊಳಲಾಟ: ಜೀವನ ನಿರ್ವಹಣೆಯೇ ಸವಾಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಒಡಿಶಾ, ಛತ್ತೀಸ್‌ಗಡ, ಜಾರ್ಖಂಡ್, ಗದಗ, ಕೊಪ್ಪಳ, ಕಲಬುರ್ಗಿ ಸೇರಿದಂತೆ ವಿವಿಧೆಡೆಯಿಂದ ಬಂದು ಮೀನುಗಾರಿಕೆಯಲ್ಲಿ ತೊಡಗಿರುವ ನೂರಾರು ಕಾರ್ಮಿಕರು ಇಲ್ಲಿನ ಹಳೆಯ ಬಂದರು ಧಕ್ಕೆಯಲ್ಲಿ ಲಂಗರು ಹಾಕಿರುವ ಬೋಟ್‌ಗಳಲ್ಲಿ ಸಿಲುಕಿದ್ದಾರೆ. ಇತ್ತ ಕೆಲಸವೂ ಇಲ್ಲದೇ, ಅತ್ತ ಊರಿಗೂ ಹೋಗಲಾಗದೇ ಅತಂತ್ರ ಸ್ಥಿತಿಯನ್ನು ಎದುರಿಸುತ್ತಿದ್ದಾರೆ.

‘ದೋಣಿ ಮಾಲೀಕರು ನಮಗೆ ಪಡಿತರವನ್ನು ಪೂರೈಸಿದ್ದಾರೆ. ಅದು ಕೆಲವೇ ದಿನಗಳವರೆಗೆ ಇರಬಹುದು. ಪರಿಸ್ಥಿತಿ ಸುಧಾರಿಸುವವರೆಗೆ ದೋಣಿಗಳಲ್ಲಿ ಉಳಿಯುವಂತೆ ಬೋಟ್‌ಗಳ ಮಾಲೀಕರು ತಿಳಿಸಿದ್ದಾರೆ. ನಮ್ಮ ಊರುಗಳಿಗೆ ತೆರಳಲು ವಾಹನಗಳೂ ಇಲ್ಲದಾಗಿವೆ. ಇಂತಹ ಸಮಯದಲ್ಲಿ ನಮ್ಮ ಕುಟುಂಬ ಸದಸ್ಯರೊಂದಿಗೆ ಇರಲು ಅವಕಾಶ ಸಿಕ್ಕರೆ ಒಳ್ಳೆಯದು’ ಎಂದು ಕಲಬುರ್ಗಿಯ ಶಿವರಾಜ್ ಹೇಳಿದರು.

ಲಂಗರು ಹಾಕಿದ ದೋಣಿಗಳಲ್ಲಿ ಒಡಿಶಾ, ಜಾರ್ಖಂಡ್, ಛತ್ತೀಸ್‌ಗಡದಿಂದ ಸುಮಾರು 400 ಕಾರ್ಮಿಕರಿದ್ದಾರೆ. ಅನೇಕ ದೋಣಿಗಳಲ್ಲಿನ ಕುಡಿಯುವ ನೀರನ್ನು ತುಂಬಿಸಬೇಕಾಗಿದೆ. ಆದರೆ, ಲಾಕ್‌ಡೌನ್‌ದಿಂದಾಗಿ ಟ್ಯಾಂಕರ್‌ಗಳಿಗೆ ನೀರು ಪೂರೈಸಲು ಸಾಧ್ಯವಾಗುತ್ತಿಲ್ಲ. ನಮ್ಮಲ್ಲಿ ಅಡುಗೆ ಮಾಡಲು ಅಲ್ಪ ಪ್ರಮಾಣದ ಪಡಿತರವಿದೆ. ಭವಿಷ್ಯದಲ್ಲಿ ಏನಾಗಬಹುದು ಎಂಬ ಬಗ್ಗೆ ನಮಗೆ ಭಯ ಕಾಡುತ್ತಿದೆ. ನಮ್ಮ ಹಳ್ಳಿಗಳಲ್ಲಿರುವ ಕುಟುಂಬ ಸದಸ್ಯರು ಕೂಡ ಆತಂಕಕ್ಕೊಳಗಾಗಿದ್ದಾರೆ’ ಎಂದು ಒಡಿಶಾದ ಇಂದ್ರಪಣ್ಣ ತಮ್ಮ ಅಳಲು ತೋಡಿಕೊಂಡರು.

ಸಾಮಾನ್ಯವಾಗಿ ಮೀನುಗಾರಿಕೆ ಬೋಟ್‌ಗಳಲ್ಲಿ ಇರುವ ಕಾರ್ಮಿಕರು ಮೂರು ತಿಂಗಳಿಗೊಮ್ಮೆ ತಮ್ಮ ಊರಿಗೆ ತೆರಳಿ, ಕುಟುಂಬದವರನ್ನು ಭೇಟಿ ಮಾಡುತ್ತಾರೆ. 10 –15 ದಿನಗಳ ಕಾಲ ಅಲ್ಲಿಯೇ ಇದ್ದು, ನಂತರ ಮತ್ತೆ ಕೆಲಸಕ್ಕೆ ಬರುತ್ತಾರೆ. ಮೀನುಗಾರಿಕೆಗಾಗಿ ಕಡಲಿಗೆ ಇಳಿದರೆ, 10 ದಿನಗಳ ನಂತರವೇ ಮೀನಿನ ರಾಶಿಯೊಂದಿಗೆ ಈ ಕಾರ್ಮಿಕರು ದಡಕ್ಕೆ ಬರುತ್ತಾರೆ. ದೋಣಿ ಮಾಲೀಕರಿಂದ ಕಮಿಷನ್ ರೂಪದಲ್ಲಿ ಹಣವನ್ನು ಪಡೆಯುತ್ತಾರೆ.

ಕಳೆದ 25 ವರ್ಷಗಳಿಂದ ಮೀನುಗಾರಿಕಾ ದೋಣಿಗಳಲ್ಲಿ ಕೆಲಸ ಮಾಡುತ್ತಿದ್ದೇನೆ. ನನ್ನ ಜೀವನದಲ್ಲಿ ಇಂತಹ ಪರಿಸ್ಥಿತಿಯನ್ನು ನೋಡಿರಲಿಲ್ಲ. ನಾವು ಮೂರು ದೋಣಿಗಳಲ್ಲಿ 40 ಜನರಿದ್ದೇವೆ. ಕೊಪ್ಪಳದ ನನ್ನ ಸ್ನೇಹಿತನ ತಾಯಿ ಶುಕ್ರವಾರ ತೀರಿಕೊಂಡಿದ್ದಾರೆ. ಕೊನೆಯ ವಿಧಿಗಳಿಗೆ ಹಾಜರಾಗಲು ಸಾಧ್ಯವಾಗಲಿಲ್ಲ. ನಾವು ಪೊಲೀಸ್ ಸಹಾಯವನ್ನು ಕೋರಿದ್ದು, ಅವರಿಗೂ ನಮ್ಮನ್ನು ನಮ್ಮ ಊರುಗಳಿಗೆ ಕಳುಹಿಸುವಲ್ಲಿ ಸಾಧ್ಯವಾಗುತ್ತಿಲ್ಲ. ಲಭ್ಯವಿರುವ ಪಡಿತರದಿಂದ ಜೀವನ ನಡೆಸುತ್ತಿದ್ದೇವೆ’ ಎಂದು ಗದಗನ ಗಂಗಾಧರ ಅವರು ಪರಿಸ್ಥಿತಿಯ ಗಂಭೀರತೆಯನ್ನು ವಿವರಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು