ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಟ್ಟಂಪಾಡಿ: ಅಲ್ಪಾವಧಿ ಬೆಳೆ; ಕೈಹಿಡಿದ ವೀಳ್ಯದೆಲೆ

ಪುತ್ತೂರು ತಾಲ್ಲೂಕಿನ ಕರ್ನೂರು, ಬೆಟ್ಟಂಪಾಡಿ ಗ್ರಾಮದ ಮಹಿಳೆಯರ ಯಶೋಗಾಥೆ
Last Updated 16 ಸೆಪ್ಟೆಂಬರ್ 2020, 5:42 IST
ಅಕ್ಷರ ಗಾತ್ರ

ಮಂಗಳೂರು: ಜಿಲ್ಲೆಯಲ್ಲಿ ಹೆಚ್ಚಿನ ಕೃಷಿಕರು ಅಡಿಕೆ, ರಬ್ಬರ್‌ನಂತಹ ದೀರ್ಘಾವಧಿ ಬೆಳೆಯ ಜೊತೆಗೆ ಅಲ್ಪಾವಧಿ ಬೆಳೆಗಳನ್ನು ಬೆಳೆಯುವ ಮೂಲಕ ಉತ್ತಮ ಆದಾಯ ಗಳಿಸುತ್ತಿದ್ದಾರೆ. ಇದೇ ರೀತಿಯ ಕೃಷಿಯನ್ನು ಅಳವಡಿಸಿಕೊಂಡಿರುವ ಪುತ್ತೂರು ತಾಲ್ಲೂಕಿನ ರೈತ ಮಹಿಳೆಯರು ಕೈತುಂಬಾ ಆದಾಯ ಗಳಿಸುತ್ತಿದ್ದಾರೆ.

ಕರ್ನೂರು ನಿವಾಸಿ ಜಯಂತಿ ರೈ, ಕೃಷಿಯಲ್ಲಿ ಪ್ರಗತಿ ತೋರುತ್ತಿರುವ ಮಹಿಳೆ. ಪ್ರಗತಿಪರ ಕೃಷಿಕ ಕರ್ನೂರು ಸತೀಶ್ ರೈ ಜೊತೆ ಜಯಂತಿ ರೈ ಕೂಡ ಕಳೆದ ಹಲವು ವರ್ಷಗಳಿಂದ ಕೃಷಿಯಲ್ಲಿ ತೊಡಗಿಸಿಕೊಂಡವರು. ಪತಿ ಸತೀಶ್ ರೈ ಅಡಿಕೆ ಹಾಗೂ ಗೇರು ಕೃಷಿಯಲ್ಲಿ ಹೆಸರುವಾಸಿಯಾಗಿದ್ದರೆ, ಪತ್ನಿ ಜಯಂತಿ ಮಾತ್ರ ತೋಟದ ಮಧ್ಯದಲ್ಲಿ ವೀಳ್ಯದೆಲೆ ಬೆಳೆಯುವ ಮೂಲಕ ಕೃಷಿಯಲ್ಲಿ ಆದಾಯ ವೃದ್ಧಿ ಮಾಡಿಕೊಂಡಿದ್ದಾರೆ.

ಕೃಷಿ ಕುಟುಂಬದಿಂದಲೇ ಬಂದಿರುವ ಜಯಂತಿ ಅವರು, ಪತಿಯ ಜೊತೆಗೆ ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವ ಸಮಯದಲ್ಲಿ ವೀಳ್ಯದೆಲೆ ಬೆಳೆಸಲು ಆರಂಭಿಸಿದರು.

ಇದೀಗ 100ಕ್ಕೂ ಅಧಿಕ ವೀಳ್ಯದೆಲೆಯ ಬಳ್ಳಿಗಳನ್ನು ಬೆಳೆದಿರುವ ಅವರು, ವಾರಕ್ಕೆ ₹5ರಿಂದ ₹7 ಸಾವಿರ ಆದಾಯವನ್ನು ಕೇವಲ ವೀಳ್ಯದೆಲೆಯಿಂದ ಪಡೆಯುತ್ತಿದ್ದಾರೆ. ವಾರಕ್ಕೆ ಎರಡು ಬಾರಿ ಬಳ್ಳಿಗಳಿಂದ ವೀಳ್ಯದೆಲೆಗಳನ್ನು ಸಂಗ್ರಹಿಸುವ ಇವರಿಗೆ ಮಕ್ಕಳೂ ಸಾಥ್ ನೀಡುತ್ತಿದ್ದಾರೆ.

ಈ ವೀಳ್ಯದೆಲೆಯಿಂದ ಸಂಗ್ರಹವಾದ ಆದಾಯವನ್ನು ಮಕ್ಕಳ ವಿದ್ಯಾಭ್ಯಾಸಕ್ಕೆ ಹಾಗೂ ಇತರ ಅವಶ್ಯಕತೆಗಳಿಗೆ ಬಳಸಿಕೊಳ್ಳುತ್ತಿರುವ ಜಯಂತಿ ರೈ, ಉಳಿದ ಹಣವನ್ನು ಮಕ್ಕಳ ಹೆಸರಿನಲ್ಲಿ ಠೇವಣಿ ಇಡುತ್ತಿದ್ದಾರೆ. ಸಾವಯವ ಗೊಬ್ಬರ ಬಳಸಿ ಸಮೃದ್ಧ ವೀಳ್ಯದೆಲೆಗಳನ್ನು ಬೆಳೆಸುತ್ತಿರುವ ಇವರ ವೀಳ್ಯದೆಲೆಗೆ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆಯೂ ಇದೆ.

‘ಮನಸ್ಸಿದ್ದರೆ ಯಾವ ಕೃಷಿಯಲ್ಲೂ ಉತ್ತಮ ಆದಾಯ ಗಳಿಸಬಹುದು. ಅಡಿಕೆಯ ಜೊತೆಗೆ ವೀಳ್ಯದೆಲೆಯನ್ನು ಬೆಳೆಯುವ ಆಲೋಚನೆ ಬಂದಿತ್ತು. ಅದನ್ನು ಹಂತಹಂತವಾಗಿ ಕಾರ್ಯರೂಪಕ್ಕೆ ತಂದೆ. ಇದೀಗ ವೀಳ್ಯದೆಲೆಯಿಂದ ಉತ್ತಮ ಆದಾಯ ಬರುತ್ತಿದೆ’ ಎಂದು ಜಯಂತಿ ರೈ ಹೇಳುತ್ತಾರೆ.

ಮನೆಯ ಕೆಲಸದ ಜೊತೆಗೆ ವೀಳ್ಯದೆಲೆಯ ತೋಟವನ್ನೂ ನೋಡಿಕೊಳ್ಳುತ್ತಿರುವ ಜಯಂತಿ ಅವರು, ವರ್ಷಕ್ಕೆ ₹ 2 ಲಕ್ಷ ರಿಂದ ₹ 3 ಲಕ್ಷದಷ್ಟು ಆದಾಯವನ್ನು ಪಡೆಯುತ್ತಿದ್ದಾರೆ.

ಅಡಿಕೆ ಬೆಳೆಗೆ ಹನಿ ನೀರಾವರಿ

ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಸೂಕ್ಷ್ಮ ನೀರಾವರಿ ಕಾರ್ಯಕ್ರಮದ ಪ್ರಯೋಜನ ಪಡೆದಿರುವ ಪುತ್ತೂರು ತಾಲ್ಲೂಕಿನ ರೈತ ಮಹಿಳೆ ಚಂದ್ರಾವತಿ, ಅಡಿಕೆ ಬೆಳೆಗೆ ಹನಿ ನೀರಾವರಿ ಅಳವಡಿಸಿದ್ದಾರೆ.

ಪುತ್ತೂರು ತಾಲ್ಲೂಕಿನ ಬೆಟ್ಟಂಪಾಡಿ ಗ್ರಾಮದ ಚಂದ್ರಾವತಿ ಅವರು ನೀರಿನ ನಿರ್ವಹಣೆ ಹಾಗೂ ಕೂಲಿ ಆಳುಗಳ ಸಮಸ್ಯೆಯಿಂದಾಗಿ ಬೇಸತ್ತು ತೋಟಗಾರಿಕೆ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿದರು. ನೀರಾವರಿಯ ಬಗ್ಗೆ ವಿಚಾರಿಸಿ, ಇಲಾಖೆಯ ಮಾರ್ಗದರ್ಶನದಲ್ಲಿ ಸುಮಾರು 0.3 ಹೆಕ್ಟೇರ್ ಅಡಿಕೆ ಬೆಳೆಗೆ ಹನಿ ನೀರಾವರಿಯನ್ನು ಅಳವಡಿಕೊಂಡಿದ್ದಾರೆ. ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಸಹಾಯಧನವನ್ನೂ ಪಡೆದಿದ್ದಾರೆ.

‘ಸಾಧ್ಯವಾದಷ್ಟು ಕಡಿಮೆ ಖರ್ಚು, ಮಿತನೀರು ಬಳಕೆ, ಬೆಳೆ ನಿರ್ವಹಣೆ ಮತ್ತು ಅಧಿಕ ಆದಾಯ ರೈತನ ದೃಷ್ಟಿಕೋನ ಅಲ್ಲವೇ’ ಎನ್ನುತ್ತಾರೆ ಚಂದ್ರಾವತಿ.

ಪ್ರತಿಕ್ರಿಯೆ

ಹನಿ ನೀರಾವರಿಯಲ್ಲಿ ಬೆಳೆಗೆ ನಿರಂತರವಾಗಿ ತೇವಾಂಶ ದೊರೆಯುತ್ತದೆ. ನೀರಿನ ಕೊರತೆ ಇಲ್ಲ. ಕಳೆಯ ಸಮಸ್ಯೆಯೂ ಇಲ್ಲ. ಕೂಲಿ ವೆಚ್ಚದಲ್ಲಿ ಉಳಿತಾಯವಾಗಿದೆ ಎಂದು ರೈತ ಮಹಿಳೆ ಚಂದ್ರಾವತಿ ಪ್ರತಿಕ್ರಿಯಿಸಿದರು.

ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಸಹಾಯಧನ ನೀಡಲಾಗುತ್ತಿದೆ. ಮಾಹಿತಿಗೆ 8277806372 ಸಂಪರ್ಕಿಸಬಹುದು ಎಂದುತೋಟಗಾರಿಕೆ ವಿಷಯ ತಜ್ಞ ರಿಶಲ್ ಡಿಸೋಜ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT