ಶುಕ್ರವಾರ, 1 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳ್ತಂಗಡಿ: ಏಪ್ರಿಲ್‌ನಲ್ಲಿ ಭೂ ಹಕ್ಕೊತ್ತಾಯ ಜಾಥಾ

ಬೆಳ್ತಂಗಡಿ ತಾಲ್ಲೂಕು ದಲಿತರ ಭೂ ಹಕ್ಕೊತ್ತಾಯ ಸಮಿತಿ ಸಭೆ
Last Updated 26 ಫೆಬ್ರುವರಿ 2023, 7:29 IST
ಅಕ್ಷರ ಗಾತ್ರ

ಬೆಳ್ತಂಗಡಿ: ತಾಲ್ಲೂಕು ಮಟ್ಟದ ದಲಿತರ ಬೃಹತ್ ಭೂ ಹಕ್ಕೊತ್ತಾಯ ಜಾಥಾ ಮತ್ತು ಸಭೆಯನ್ನು ಏಪ್ರಿಲ್ ಪ್ರಥಮ ವಾರದಲ್ಲಿ ಬೆಳ್ತಂಗಡಿಯಲ್ಲಿ ಏರ್ಪಡಿಸಲು ಗುರುವಾಯನಕೆರೆ ನಾಗರಿಕ ಸೇವಾ ಟ್ರಸ್ಟ್ ಕಚೇರಿಯಲ್ಲಿ ನಡೆದ ಬೆಳ್ತಂಗಡಿ ತಾಲ್ಲೂಕು ದಲಿತರ ಭೂ ಹಕ್ಕೊತ್ತಾಯ ಸಮಿತಿಯ ಜಾಥಾ ಸಿದ್ಧತಾ ಸಭೆಯಲ್ಲಿ ನಿರ್ಧರಿಸಲಾಗಿದೆ.

ಭೂ ಮಂಜೂರಾತಿ ಕಾಯ್ದೆ ಪ್ರಕಾರ ಲಭ್ಯ ಸರ್ಕಾರಿ ಭೂಮಿಯಲ್ಲಿ ಶೇ 50 ದಲಿತರಿಗೆ ಹಂಚಬೇಕಾಗಿದೆ. ಆದರೆ, ಬೆಳ್ತಂಗಡಿ ತಹಶೀಲ್ದಾರರು ಸರ್ಕಾರಿ ಭೂಮಿ ಲಭ್ಯವಿಲ್ಲವೆಂದು ಪ್ರಕಟಣೆ ಕೊಟ್ಟಿದ್ದಾರೆ. ಧರ್ಮಸ್ಥಳ, ಅಂಡಿಂಜೆ, ತೋಟತ್ತಾಡಿ, ಕುವೆಟ್ಟು ಮತ್ತಿತರ ಗ್ರಾಮಗಳಲ್ಲಿ ಸರ್ಕಾರಿ ಭೂಮಿ ಲಭ್ಯತೆಯ ಅಧಿಕೃತ ಮಾಹಿತಿ ಇದೆ. ಡಿ.ಸಿ ಮನ್ನಾ ಭೂಮಿ ವಿತರಣೆ ಇನ್ನೂ ಕಗ್ಗಂಟಾಗಿ ಉಳಿದಿದೆ ಎಂದು ಸಭೆಯಲ್ಲಿ ಆಕ್ರೋಶ ವ್ಯಕ್ತಪವಾಯಿತು.

ಸಭಾಧ್ಯಕ್ಷತೆ ವಹಿಸಿದ್ದ ದಲಿತರ ಭೂ ಹಕ್ಕೊತ್ತಾಯ ಸಮಿತಿಯ ಪ್ರಧಾನ ಸಂಚಾಲಕ ಎಂ.ಬಿ. ಕರಿಯ ಧರ್ಮಸ್ಥಳ ಮಾತನಾಡಿ, ‘ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಎಕರೆ ಸರ್ಕಾರಿ ಭೂಮಿ ಲಭ್ಯ ಇದ್ದು, ಬಲಾಢ್ಯರು ಒತ್ತುವರಿ ಮಾಡಿದ್ದಾರೆ. ಸರ್ವೆ ಮಾಡಬೇಕೆಂದು ಕಂದಾಯ ನಿರೀಕ್ಷಕರು ವರದಿ ಕೊಟ್ಟಿದ್ದರೂ ತಹಶೀಲ್ದಾರರು ಕ್ರಮ ಕೈಗೊಂಡಿಲ್ಲ. ಧರ್ಮಸ್ಥಳದ ದಲಿತರಿಗೆ ಆದ್ಯತೆಯಲ್ಲಿ ತಲಾ ಒಂದು ಎಕರೆ ಭೂಮಿ ಕೊಡಬೇಕೆಂದು ಸಲ್ಲಿಸಿದ ಮನವಿಗೆ ಸ್ಪಂದಿಸಿದ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಕೋಟ ಶ್ರೀನಿವಾಸ ಪೂಜಾರಿ ನೀಡಿದ ಆಶ್ವಾಸನೆ ಹಾಗೂ ಈಗಿನ ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲಾಧಿಕಾರಿಗೆ ನೀಡಿದ ನಿರ್ದೇಶನಗಳು ಇನ್ನೂ ಜಾರಿಯಾಗಿಲ್ಲ. ದಲಿತರ ಬಗ್ಗೆ ಯಾಕೆ ನಿರ್ಲಕ್ಷ್ಯ’ ಎಂದು ಪ್ರಶ್ನಿಸಿದರು.

ಸಮಿತಿಯ ಸಂಚಾಲಕ, ದಲಿತ ಸಂಘರ್ಷ ಸಮಿತಿಯ ತಾಲ್ಲೂಕು ಸಂಚಾಲಕ ಕೆ. ನೇಮಿರಾಜ್ ಮಾತನಾಡಿ, ‘ತಾಲ್ಲೂಕಿನಾದ್ಯಂತ ದಲಿತರು ಎಚ್ಚೆತ್ತಿದ್ದಾರೆ. ತಮ್ಮ ಹಕ್ಕಿನ ಭೂಮಿಗಾಗಿ ಹೋರಾಟಕ್ಕೆ ಸಿದ್ಧರಾಗಿದ್ದಾರೆ. ಅಗತ್ಯ ಬಿದ್ದಲ್ಲಿ ಭೂ ಕಬಳಿಕೆ ತಡೆ ವಿಶೇಷ ನ್ಯಾಯಾಲಯದಲ್ಲಿ ದೂರು ಸಲ್ಲಿಸುತ್ತೇನೆ. ಹೈಕೊರ್ಟ್‍ನಲ್ಲಿ ಸಾರ್ವಜನಿಕ ಹಿತಾಸಕ್ತಿ ರಿಟ್ ಅರ್ಜಿ ಹಾಕುತ್ತೇವೆ’ ಎಂದರು.

ದಲಿತ ಅಭಿವೃದ್ಧಿ ಸಮಿತಿಯ ಸಂಚಾಲಕರಾದ ನಾರಾಯಣ ಕಿಲಂಗೋಡಿ, ಬಾಬು ಎ. ಇದ್ದರು.

ಆದಿವಾಸಿಗಳ ಹೋರಾಟಗಾರ ಎಲ್ಯಣ್ಣ ಮಲೆಕುಡಿಯ ನೆರಿಯ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT