ಗುರುವಾರ , ಮೇ 19, 2022
22 °C
ಬಾಕಿ ಭರವಸೆಗಳ ಸಮಿತಿ ಎದುರು ಸಮಸ್ಯೆ ಹೇಳಿಕೊಂಡ ಸಾರ್ವಜನಿಕರು

ನದಿ ನೀರು ಮಲಿನ: ಸಮಿತಿ ಅಸಮಾಧಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಕೂಳೂರಿನ ಪೈಪ್‌ಲೈನ್ ಕಾರಿಡಾರ್‌ಗೆ ಬುಧವಾರ ಭೇಟಿ ನೀಡಿದ ವಿಧಾನ ಪರಿಷತ್‌ನ ಬಾಕಿ ಭರವಸೆಗಳ ಸಮಿತಿ ಸದಸ್ಯರು, ಕುಡುಂಬೂರು ನದಿ ನೀರು ಮಲಿನವಾಗಿರುವುದನ್ನು ಕಂಡು, ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. 

ಎಸ್‌ಇಝಡ್ ಪ್ರದೇಶದ ಕೈಗಾರಿಕೆಗಳಿಂದ ಆಗುತ್ತಿರುವ ಮಾಲಿನ್ಯ ಮತ್ತಿತರ ಸಮಸ್ಯೆಗಳ ಬಗ್ಗೆ ಸರ್ಕಾರದ ಬಾಕಿ ಭರವಸೆಗಳನ್ನು ಪರಿಶೀಲಿಸಲು ಸಮಿತಿ ಅಧ್ಯಕ್ಷ ಬಿ.ಎಂ. ಫಾರೂಕ್ ನೇತೃತ್ವದಲ್ಲಿ ಸದಸ್ಯರಾದ ಯು.ಬಿ. ವೆಂಕಟೇಶ್, ಶಶಿಲ್ ಜಿ. ನಮೋಶಿ, ಕೆ.ಟಿ. ಶ್ರೀಕಂಠೇಗೌಡ, ಎಸ್‌.ವಿ. ಸಂಕನೂರು ಅವರು ಎಂಆರ್‌ಪಿಎಲ್, ಎಸ್‌ಆರ್‌ಪಿಎಲ್, ಐಎಸ್‌ಪಿಆರ್‌ಎಲ್ ಸೇರಿದಂತೆ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

ವಿವಿಧೆಡೆಗಳಲ್ಲಿ ಕೈಗಾರಿಕೆಗಳು ಕಲುಷಿತ ನೀರನ್ನು ಶುದ್ಧೀಕರಿಸದೆ ನದಿಗೆ ಬಿಡುತ್ತಿರುವ ಬಗ್ಗೆ ಸ್ಥಳೀಯರು ಸಮಿತಿಯ ಗಮನಕ್ಕೆ ತಂದರು. ಸಾರ್ವಜನಿಕ ರಸ್ತೆಯಲ್ಲಿ ಸ್ಥಳೀಯರ ವಾಹನಗಳಿಗೆ ಕೈಗಾರಿಕೆಗಳು ನಿರ್ಬಂಧ ಹೇರುತ್ತವೆ ಎಂದು ದೂರಿದರು.

ಎಂಆರ್‌ಪಿಎಲ್‌ನಿಂದ ಆಗುತ್ತಿರುವ ಮಾಲಿನ್ಯದ ಕುರಿತು ಹೋರಾಟಗಾರ ಮುನೀರ್ ಕಾಟಿಪಳ್ಳ ಮಾಹಿತಿ ನೀಡಿ, ‘ಮಾಲಿನ್ಯ ತಡೆಗೆ ಆರು ಕ್ರಮಗಳನ್ನು ಕೈಗೊಳ್ಳುವಂತೆ ಎಂಆರ್‌ಪಿಎಲ್‌ಗೆ ಸರ್ಕಾರ ಕೆಲವು ವರ್ಷಗಳ ಹಿಂದೆ ಆದೇಶ ಮಾಡಿದ್ದರೂ, ಅದರ ಪಾಲನೆ ಆಗುತ್ತಿಲ್ಲ’ ಎಂದರು. ‘ಕೋಕ್ ಘಟಕದಿಂದ ಜನವಸತಿ ಪ್ರದೇಶಕ್ಕೆ ಅಪಾಯಕಾರಿ ಕೋಕ್ ಪೌಡರ್ ಹಾರುವುದು ನಿಂತಿಲ್ಲ. ರಾಸಾಯನಿಕದ ಅಸಹನೀಯ ವಾಸನೆ ಸಮಸ್ಯೆ ತಂದೊಡ್ಡಿದೆ. ಶೇ 33ರಷ್ಟು ಹಸಿರು ನಿರ್ಮಾಣಕ್ಕೆ (ಗ್ರೀನ್ ಬೆಲ್ಟ್) 27 ಎಕರೆ ಜಾಗ ಗುರುತಿಸಲಾಗಿದ್ದು, ಕೂಡಲೇ ಅದನ್ನು ಕಾರ್ಯಗತಗೊಳಿಸಬೇಕು’ ಎಂದು ಒತ್ತಾಯಿಸಿದರು.

ದಿನವಿಡೀ ಉರಿಯುತ್ತಿದ್ದ ಎಂಆರ್‌ಪಿಎಲ್‌ನ ಚಿಮಣಿಗಳು ಸಮಿತಿ ಭೇಟಿಯ ಹಿನ್ನೆಲೆಯಲ್ಲಿ ಮಂಗಳವಾರ ಸಂಜೆಯಿಂದಲೇ ಹೊಗೆ ಉಗುಳುವುದನ್ನು ನಿಲ್ಲಿಸಿವೆ. ರಾಸಾಯನಿಕ ವಾಸನೆಯೂ ದಿಢೀರ್ ಆಗಿ ಕಡಿಮೆಯಾಗಿದೆ ಎಂದು ಸ್ಥಳೀಯರು ಆರೋಪಿಸಿದರು.

ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ. ಇ.ವಿ. ರಮಣರೆಡ್ಡಿ, ಪರಿಸರ ಮತ್ತು ಜೀವಿ ಪರಿಸ್ಥಿತಿಯ ಪ್ರಧಾನ ಕಾರ್ಯದರ್ಶಿ ವಿಜಯಮೋಹನ್ ರಾಜ್, ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ., ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕುಮಾರ್, ಕೈಗಾರಿಕಾ ಇಲಾಖೆ ಜಂಟಿ ನಿರ್ದೇಶಕ ಗೋಕುಲ್ ದಾಸ್, ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಸೀತಾ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕಿಶೋರ್ ಕುಮಾರ್, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿ ಕಿರಣ್ ಕುಮಾರ್, ಮೀನುಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಹರೀಶ್ ಇದ್ದರು.

ಅಧಿಕಾರಿಗಳೊಂದಿಗೆ ಸಭೆ: ವಿಶೇಷ ಆರ್ಥಿಕ ವಲಯದಲ್ಲಿ ಪರಿಸರ ಮಲಿನಗೊಂಡಿದೆ ಎಂದು ಸಾರ್ವಜನಿಕರು ಹಾಗೂ ಸ್ಥಳೀಯರು ಸಮಿತಿಗೆ ಮಾಹಿತಿ ನೀಡಿದ್ದಾರೆ. ಈ ಪ್ರದೇಶದಲ್ಲಿ ವಿಸ್ತಾರವಾದ ಸರ್ವೆ ಮಾಡಿ ಭತ್ತ, ತೋಟಗಾರಿಕಾ ಬೆಳೆಗಳ ಬಗ್ಗೆ ವರದಿ ನೀಡುವಂತೆ ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಸೀತಾ ಹಾಗೂ ತೋಟಗಾರಿಕೆ ಇಲಾಖೆಯ ಅಧಿಕಾರಿಗಳಿಗೆ ಸಮಿತಿ ಸದಸ್ಯರು ತಿಳಿಸಿದರು. ಮೀನು ತಳಿಗಳು ನಾಶಗೊಂಡಿರುವ ಬಗ್ಗೆ ಅಧ್ಯಯನ‌ ನಡೆಸಿ ವರದಿ ಸಲ್ಲಿಸುವಂತೆ ಮೀನುಗಾರಿಕೆ ಇಲಾಖೆಗೆ ಸೂಚಿಸಿದರು.

ಆ ಪರಿಸರದಲ್ಲಿರುವ ನೀರು, ಅಂತರ್ಜಲ, ಗಾಳಿ, ಸೇರಿದಂತೆ ನೆಲ-ಜಲ ಹಾಗೂ ವಾಯುಮಾಲಿನ್ಯದ ಬಗ್ಗೆ ಅಂತರರಾಷ್ಟ್ರೀಯ ಮಟ್ಟದ ಸಂಸ್ಥೆಯಿಂದ ತಪಾಸಣೆ ನಡೆಸಿ ವರದಿ ನೀಡುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದರು.

ಅಲ್ಲಿ ವಾಸಿಸುವ ಜನರ ಆರೋಗ್ಯದ ಸ್ಥಿತಿಗತಿಗಳ ಬಗ್ಗೆಯೂ ವರದಿ ನೀಡುವಂತೆ ಆರೋಗ್ಯಾಧಿಕಾರಿ ಡಾ. ಕಿಶೋರ್ ಕುಮಾರ್ ಅವರಿಗೆ ತಿಳಿಸಿದರು.

 ಕನ್ನಡಿಗರ ನಿಖರ ಸಂಖ್ಯೆ ಪತ್ತೆಗೆ ಸೂಚನೆ
ಇಲ್ಲಿನ ವಿಶೇಷ ಆರ್ಥಿಕ ವಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿಧ ಕಾರ್ಖಾನೆಗಳಲ್ಲಿ ಎ ಮತ್ತು ಬಿ ದರ್ಜೆಯ ಹುದ್ದೆಗಳಲ್ಲಿ ಕೆಲಸ ಮಾಡುತ್ತಿರುವ ಕನ್ನಡಿಗರ ನಿಖರ ಸಂಖ್ಯೆಯನ್ನು ಪತ್ತೆ ಮಾಡಿ ವರದಿ ನೀಡುವಂತೆ ವಿಧಾನ ಪರಿಷತ್‌ನ ಸರ್ಕಾರಿ ಭರವಸೆಗಳ ಸಮಿತಿಯ ಅಧ್ಯಕ್ಷರು ಹಾಗೂ ಸದಸ್ಯರು, ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಅವರಿಗೆ ನಿರ್ದೇಶನ ನೀಡಿದರು.

ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ನಡೆಸಿದ ಚರ್ಚೆಯ ಸಂದರ್ಭದಲ್ಲಿ ಈ ಸೂಚನೆ ನೀಡಿದರು. ವಿಶೇಷ ಆರ್ಥಿಕ ವಲಯದಲ್ಲಿರುವ ಎಂಆರ್‌ಪಿಎಲ್ ಸೇರಿದಂತೆ ಇತರ ಕಾರ್ಖಾನೆಗಳಲ್ಲಿ ನಿಯಮದಂತೆ ಶೇ 70ರಷ್ಟು ಕನ್ನಡಿಗರಿಗೆ ಉದ್ಯೋಗಾವಕಾಶ ನೀಡಬೇಕು. ಅಲ್ಲಿ ಅಷ್ಟು ಮಂದಿ ಕನ್ನಡಿಗರು ಕೆಲಸ ಮಾಡುತ್ತಿರುವ ಬಗ್ಗೆ ಖಚಿತಪಡಿಸಿಕೊಳ್ಳಲು ಜಿಲ್ಲಾಧಿಕಾರಿ ತಪಾಸಣೆ ನಡೆಸಿ ವರದಿ ನೀಡುವಂತೆ ಸಮಿತಿಯ ಅಧ್ಯಕ್ಷ ಬಿ.ಎಂ. ಫಾರೂಕ್, ಸದಸ್ಯರಾದ ಎಸ್.ವಿ. ಸಂಕನೂರು, ಕೆ.ಟಿ ಶ್ರೀಕಂಠೇಗೌಡ ಇತರರು ಸೂಚಿಸಿದರು. ಮುಂದಿನ ಎರಡು ತಿಂಗಳುಗಳಲ್ಲಿ ವರದಿ ನೀಡುವುದಾಗಿ ಜಿಲ್ಲಾಧಿಕಾರಿ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು