ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಂಗಳೂರು: ವಾಚನಾಲಯಗಳಿಗೆ ಬಹು ಆಯಾಮ

Published 20 ಮೇ 2024, 7:32 IST
Last Updated 20 ಮೇ 2024, 7:32 IST
ಅಕ್ಷರ ಗಾತ್ರ

ಮಂಗಳೂರು: ಅಶೋಕನಗರದ ಮಾರುಕಟ್ಟೆ ಪ್ರದೇಶದಲ್ಲಿ ಹಿಂದೊಂದು ವಾಚನಾಲಯವಿತ್ತು. ಅದು, ಆ ಪ್ರದೇಶದ ಪುಸ್ತಕ ಪ್ರಿಯರಿಗೆ ಹಾಗೂ ಸುದ್ದಿಯ ಬೆನ್ನುಹತ್ತುವವರಿಗೆ ಗ್ರಂಥ ಮತ್ತು ಪತ್ರಿಕೆಗಳನ್ನು ಒದಗಿಸುತ್ತಿತ್ತು. ಜನಸಂಖ್ಯೆ ಬೆಳೆಯಿತು, ಓದುಗರ ಸಂಖ್ಯೆಯೂ ಹೆಚ್ಚಾಯಿತು. ಸಣ್ಣದೊಂದು ಕೊಠಡಿಯ ಜಾಗ ಸಾಕಾಗದೇ ಹೋದಾಗ ವಾಚನಾಲಯವನ್ನು ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ (ಮೂಡ) ಸಮೀಪವಿರುವ ಶೆಡ್ ಒಂದಕ್ಕೆ ಸ್ಥಳಾಂತರಿಸಲಾಯಿತು. ಅಲ್ಲಿಯೂ ಸೌಲಭ್ಯಗಳು ಸಾಕಾಗದೇ ಹೋದಾಗ ತುಳು ಭವನದತ್ತ ಚಿತ್ತ ಹರಿಯಿತು.

ಕೆಲ ಕಾಲ ತುಳುಭವನದಲ್ಲಿ ಕಾರ್ಯನಿರ್ವಹಿಸಿದ ವಾಚನಾಲಯಕ್ಕೆ ಭವನ ವಿಸ್ತರಣೆಯಾದಾಗ ನೆಲೆ ಇಲ್ಲದಾಯಿತು. ಈಗ ಅದು ಉರ್ವ ಸ್ಟೋರ್ ಬಳಿ ಪಿಡಬ್ಲ್ಯುಡಿ ಕ್ವಾರ್ಟರ್ಸ್‌ನ ಬಾಡಿಗೆ ಕಟ್ಟಡವೊಂದರಲ್ಲಿ ಇದೆ. ಈ ವಾಚನಾಲಯ ಚರರೂಪಿಯಾಗಿ ಸಂಚಿಸುತ್ತಿದ್ದಾಗ ಓದುಗರು ಕೂಡ ಜೊತೆಯಲ್ಲೇ ಸಾಗಿದ್ದರು. ಅವರೆಲ್ಲರೂ ನಿಟ್ಟುಸಿರು ಬಿಡುವ ಕಾಲ ಈಗ ಸಮೀಪಿಸಿದೆ. ಅಶೋಕ ನಗರದ ವಾಚನಾಲಯ ‘ಸ್ಥಿರ’ವಾಗುವತ್ತ ಹೆಜ್ಜೆ ಹಾಕಿದೆ. ಮೂಡ ಮತ್ತು ಇಂದಿರಾ ಕ್ಯಾಂಟೀನ್ ಮಧ್ಯದಲ್ಲಿ ಸುಸಜ್ಜಿತ ಕಟ್ಟಡವೊಂದು ನಿರ್ಮಾಣ ಆಗುತ್ತಿದ್ದು ಸದ್ಯದಲ್ಲೇ ಅಲ್ಲಿ ಈ ವಾಚನಾಲಯ ನೆಲೆಯಾಗಲಿವೆ.

ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ಜಿಲ್ಲಾ ಕೇಂದ್ರ ಗ್ರಂಥಾಲಯದ್ದು ಬೇರೊಂದು ಕಥೆ. ಇದು ಹಳೆಯ ಕಟ್ಟಡ. ಈಗಿನ ಜನಸಂಖ್ಯೆಗೆ ತಕ್ಕಂತೆ ಸೌಲಭ್ಯಗಳನ್ನು ಕೊಡಲು ಸಾಧ್ಯವಾಗದ ಪರಿಸ್ಥಿತಿ. ಹೀಗಿರುವಾಗ ವಿಸ್ತೃತ, ಹೊಸ ಕಟ್ಟಡದ ಪರಿಕಲ್ಪನೆ ಮೂಡಿತು. ಎಲ್ಲಿ ನಿರ್ಮಿಸುವುದು ಎಂಬ ಪ್ರಶ್ನೆ ಬಂದಾಗ ಯೆಯ್ಯಾಡಿ ಕೈಗಾರಿಕಾ ಪ್ರದೇಶದಲ್ಲಿರುವ ಸ್ಥಳದ ನೆನಪಾಯಿತು. ಅಲ್ಲಿ ಈಗ ಕಟ್ಟಡ ಸಜ್ಜಾಗುತ್ತಿದೆ.

ವೆಲೆನ್ಸಿಯಾದಲ್ಲಿ ಅಕ್ಕಪಕ್ಕ ಎರಡು ವಾಚನಾಲಯಗಳು ಇವೆ. ಒಂದು ಸಾರ್ವಜನಿಕ, ಮತ್ತೊಂದು ಮಕ್ಕಳ ಸಮುದಾಯ ಕೇಂದ್ರದ ಜೊತೆಯಲ್ಲಿರುವುದು. ಸಾರ್ವಜನಿಕರ ವಾಚನಾಲಯ ಶೋಚನೀಯ ಸ್ಥಿತಿಯಲ್ಲಿ ಇತ್ತು. ಸೋರುವ ಮಾಳಿಗೆ, ಕಲ್ಲುಮಣ್ಣು ಎದ್ದು ಅಸ್ತವ್ಯಸ್ತವಾಗಿದ್ದ ನೆಲ ಹಾಗೂ ಮುರಿದುಬಿದ್ದ ಕಿಟಕಿಗಳು ಓದುಗರಿಗೆ ವಿರಸ ಉಂಟುಮಾಡುತ್ತಿದ್ದವು. ಈಗ ಈ ಕಟ್ಟಡ ಹೊಸ ರೂಪ ಪಡೆದುಕೊಂಡಿದೆ. ಗೋಡೆಗಳು ಸುಂದರವಾಗಿವೆ. ಕಿಟಕಿಗಳು ಸುಭದ್ರವಾಗಿವೆ. ಪೇಂಟಿಂಗ್ ಮತ್ತು ಆವರಣ ಗೋಡೆಯ ಕೆಲಸ ಮುಕ್ತಾಯಗೊಂಡರೆ ‘ಹೊಸ’ತನದೊಂದಿಗೆ ಕಂಗೊಳಿಸಲಿದೆ.

ಸೂಟರ್‌ಪೇಟೆ, ಹೊಸಬೆಟ್ಟು, ಮಲ್ಲಿಕಟ್ಟೆ ಮುಂತಾದ ಕಡೆಗಳ ವಾಚನಾಲಯಗಳದ್ದೂ ವಿಭಿನ್ನ ಕಥೆಗಳು. ಸೂಟರ್ ಪೇಟೆಯ ಚಿಕ್ಕ, ಹಳೆಯ ಕಟ್ಟಡಕ್ಕೆ ಈಗ ಹೊಸ ರೂಪ ಸಿಕ್ಕಿದೆ. ಮಲ್ಲಿಕಟ್ಟೆ ಉದ್ಯಾನದಲ್ಲಿರುವ ಕದ್ರಿ ವಾಚನಾಲಯ ಓದುಗರನ್ನು ಕೈಬೀಸಿ ಕರೆಯುತ್ತಿದೆ. ಹೊಸಬೆಟ್ಟು ವಾಚನಾಲಯವಂತೂ ಅಭಿವೃದ್ಧಿ ಆದನಂತರ ಜನರ ಮನಸ್ಸನ್ನು ಗೆದ್ದಿದೆ.

ಬೆಳ್ತಂಗಡಿಯಲ್ಲಿ ಹೊಸ ಕಟ್ಟಡ ನಿರ್ಮಾಣ ಆಗುತ್ತಿದೆ. ಕಡಬ ತಾಲ್ಲೂಕು ಗ್ರಂಥಾಲಯವನ್ನು ಪುನರ್ನಿರ್ಮಾಣ ಮಾಡಲು ಸ್ಥಳ ನಿಗದಿ ಆಗಿದೆ. ಮುಲ್ಕಿಯಲ್ಲೂ ನಿರ್ಮಾಣ ಕಾರ್ಯಕ್ಕೆ ವೇದಿಕೆ ಸಿದ್ದವಾಗಿದೆ. ಉಳ್ಳಾಲ ಮತ್ತು ಪುತ್ತೂರಿನಲ್ಲೂ ಹೊಸ ಕಟ್ಟಡ ನಿರ್ಮಿಸುವ ಚಿಂತನೆ ನಡೆದಿದೆ. ಬಾವುಟಗುಡ್ಡದಲ್ಲಿರುವ ನಗರ ಕೇಂದ್ರ ಗ್ರಂಥಾಲಯದ ಬಳಿಯಲ್ಲಿ ಮತ್ತೊಂದು ಕಟ್ಟಡ ನಿರ್ಮಾಣ ಆಗುತ್ತಿದ್ದು ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ.

ಕೋಟ್ಯಂತರ ಮೊತ್ತ ವೆಚ್ಚ

ನಗರ ಪಾಲಿಕೆಯ ಶೇಕಡ 6 ಸೆಸ್‌ ಪಡೆದುಕೊಂಡು ನಗರ ವ್ಯಾಪ್ತಿಯ ವಾಚನಾಲಯಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಜಿಲ್ಲೆಯಲ್ಲಿ ನಗರಸಭೆ, ಪಟ್ಟಣ ಪಂಚಾಯಿತಿ ಮತ್ತು ಪುರಸಭೆಯಿಂದ ಸಿಗುವ ಸೆಸ್‌ನಿಂದ ಗ್ರಂಥಾಲಯದ ಎಲ್ಲ ಕಾರ್ಯಗಳನ್ನು ನಿರ್ವಹಿಸಬೇಕಾಗಿದೆ. ಜಿಲ್ಲಾ ವ್ಯಾಪ್ತಿಯಲ್ಲಿ ಸೆಸ್ ಪ್ರಮಾಣ ಕಡಿಮೆ, ಕೈಗೆ ಸಿಗುವುದಕ್ಕೂ ಅನೇಕ ತಾಪತ್ರಯಗಳು. ಗ್ರಂಥಾಲಯ ಪ್ರಾಧಿಕಾರದ ಸಭೆಯಲ್ಲಿ ಒಪ್ಪಿಗೆ ಪಡೆಯುವುದು ಮತ್ತೊಂದು ಸವಾಲು.

ಸಮಸ್ಯೆಗಳ ನಡುವೆ ನಗರ ಕೇಂದ್ರ ಗ್ರಂಥಾಲಯ ಸಮೀಪದ ಎರಡು ಮಹಡಿಗಳ ಈ ಕಟ್ಟಡ ಅಂದಾಜು ₹ 3 ಕೋಟಿ ವೆಚ್ಚದಲ್ಲಿ ನಿರ್ಮಾಣ ಆಗುತ್ತಿದೆ. ಜಿಲ್ಲಾ ಕೇಂದ್ರ ಗ್ರಂಥಾಲಯಕ್ಕಾಗಿ ಯೆಯ್ಯಾಡಿಯಲ್ಲಿ ನಿರ್ಮಾಣ ಆಗುವ ಕಟ್ಟಡದ ವೆಚ್ಚ ₹ 1.5 ಕೋಟಿ. ಅಶೋಕ ನಗರ ಗ್ರಂಥಾಲಯಕ್ಕೆ ಅಂದಾಜು ₹ 31 ಲಕ್ಷ ವೆಚ್ಚ ಆಗಲಿದ್ದು ₹ 15 ಲಕ್ಷ ಶಾಸಕರ ನಿಧಿಯಿಂದ ಲಭಿಸಿದೆ. ಕುಲಶೇಖರದ ದತ್ತ ನಗರ ಶ್ರೀನಿವಾಸ ಮಲ್ಯ ಬಡಾವಣೆಯಲ್ಲಿ ₹ 32 ಲಕ್ಷ ವೆಚ್ಚದಲ್ಲಿ ಹೊಸ ಶಾಖೆ ಆರಂಭಿಸಲಾಗುತ್ತಿದೆ. 

ಜನರಿಂದ ಜನರಿಗೆ ಸೇವೆ

ಸಾರ್ವಜನಿಕರಿಂದ ಪಡೆಯುವ ತೆರಿಗೆಯ ಒಂದಂಶವನ್ನು ಗ್ರಂಥಾಲಯ ಮತ್ತು ವಾಚನಾಲಯಗಳಿಗೆ ಬಳಸುವಾಗ ಜನರಿಂದ ಜನರಿಗೆ ಸೇವೆ ಎಂಬ ತತ್ವವನ್ನು ಪಾಲಿಸಲಾಗುತ್ತದೆ. ತೆರಿಗೆ ಮೊತ್ತದಲ್ಲಿ ಗ್ರಂಥಾಲಯದ ಪಾಲನ್ನು ಆನ್‌ಲೈನ್ ಮೂಲಕ ಪಾವತಿಸಲಾಗುತ್ತದೆ. ಇದಲ್ಲದೆ ವರ್ಷದಲ್ಲಿ ಒಂದು ಬಾರಿ ನಗರ ಸುಂಕ ಪರಿಹಾರ ಧನ ಬರುತ್ತದೆ. ಆದರೂ ಸಿಬ್ಬಂದಿ ಕೊರತೆ ಮತ್ತಿತರ ಸಮಸ್ಯೆಗಳಿಗೆ ಕೊನೆಯಾಗಿಲ್ಲ.

247- ಜಿಲ್ಲೆಯಲ್ಲಿರುವ ಒಟ್ಟು ಗ್ರಂಥಾಲಯಗಳು

223 - ಜಿಲ್ಲೆಯಲ್ಲಿರುವ ಗ್ರಾ.ಪಂ. ಗ್ರಂಥಾಲಯಗಳು

15 -ಜಿಲ್ಲೆಯಲ್ಲಿ ಕಾರ್ಯಾಚರಿಸುತ್ತಿರುವ ಶಾಖಾ ಗ್ರಂಥಾಲಯಗಳು

4 - ಜಿಲ್ಲೆಯ ಕೊಳಚೆ ಪ್ರದೇಶಗಳಲ್ಲಿರುವ ಗ್ರಂಥಾಲಯಗಳು

2- ಜಿಲ್ಲೆಯ ಅಲೆಮಾರಿ ಪ್ರದೇಶಗಳಲ್ಲಿರುವ ಗ್ರಂಥಾಲಯಗಳು

ತಾಲ್ಲೂಕುವಾರು ಗ್ರಂಥಾಲಯಗಳು

ತಾಲ್ಲೂಕು; ಗ್ರಂಥಾಲಯ

ಬಂಟ್ವಾಳ; 58

ಬೆಳ್ತಂಗಡಿ; 48

ಮಂಗಳೂರು; 38

ಸುಳ್ಯ; 25

ಪುತ್ತೂರು; 22

ಕಡಬ; 21

ಮೂಡುಬಿದಿರೆ; 11

20 - ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ವಾಚನಾಲಯಗಳು

21 - ಸಂಚಾರಿ ಗ್ರಂಥಾಲಯದ ಸೇವೆ ಲಭ್ಯವಿರುವ ಸ್ಥಳಗಳು

49123 - ನಗರದ ವಾಚನಾಲಯಗಳಲ್ಲಿರುವ ಒಟ್ಟು ಪುಸ್ತಕಗಳು

11,25,331 - ವಾಚನಾಲಯಗಳಲ್ಲಿ ನೋಂದಾಯಿತ ಓದುಗರು

ಮಂಗಳೂರಿನ ವೆಲೆನ್ಶಿಯಾದಲ್ಲಿ ಹೊಸತನದೊಂದಿಗೆ ಕಂಗೊಳಿಸುತ್ತಿರುವ ವಾಚನಾಲಯ -ಪ್ರಜಾವಾಣಿ ಚಿತ್ರ 
ಮಂಗಳೂರಿನ ವೆಲೆನ್ಶಿಯಾದಲ್ಲಿ ಹೊಸತನದೊಂದಿಗೆ ಕಂಗೊಳಿಸುತ್ತಿರುವ ವಾಚನಾಲಯ -ಪ್ರಜಾವಾಣಿ ಚಿತ್ರ 
ಮಂಗಳೂರಿನ ಆಶೋಕನಗರದ ವಾಚನಾಲಯ -ಪ್ರಜಾವಾಣಿ ಚಿತ್ರ / ಫಕ್ರುದ್ದೀನ್ ಎಚ್
ಮಂಗಳೂರಿನ ಆಶೋಕನಗರದ ವಾಚನಾಲಯ -ಪ್ರಜಾವಾಣಿ ಚಿತ್ರ / ಫಕ್ರುದ್ದೀನ್ ಎಚ್
ಜಿಲ್ಲೆಯಲ್ಲಿರುವ ಹೆಚ್ಚಿನ ಕಟ್ಟಡಗಳು ಹಳೆಯವು. ವಿಸ್ತಾರ ಮಾಡಲು ಸಾಧ್ಯವಾಗದಷ್ಟು ಜಾಗದ ಸಮಸ್ಯೆ ಇದೆ. ಆದ್ದರಿಂದ ಹೊಸ ಸ್ಥಳ ಹುಡುಕಿ ಖರೀದಿಸಿ ಹಣ ಹೊಂದಿಸಿ ಪ್ರತ್ಯೇಕವಾಗಿ ಕಟ್ಟಡ ನಿರ್ಮಿಸುವ ಅನಿವಾರ್ಯ ಸ್ಥಿತಿ ಇದೆ.
–ಗಾಯತ್ರಿ ಜಿಲ್ಲಾ ಮುಖ್ಯ ಗ್ರಂಥಾಲಯ ಅಧಿಕಾರಿ.
ಐಟಿ ಕ್ಷೇತ್ರದಲ್ಲಿ ಉದ್ಯೋಗದಲ್ಲಿದ್ದೆ. ಸ್ಪರ್ಧಾತ್ಮಕ ಪರೀಕ್ಷೆ ಬರೆಯಬೇಕೆಂಬ ಹಂಬಲದಿಂದ ಬಂದಿದ್ದೇನೆ. ಆನ್‌ಲೈನ್‌ನಲ್ಲಿ ಮಾಹಿತಿ ಪಡೆಯಬಹುದು. ಆದರೆ ಅದು ಕೆಲವೊಮ್ಮೆ ಅತಿಯಾಗುತ್ತದೆ. ಇಲ್ಲಿ ವಾತಾವರಣವೂ ಪೂರಕವಾಗಿದೆ.
–ವರ್ಷ ಗುರುಪುರ ಕೈಕಂಬ
ಅಗ್ನಿವೀರ್ ತರಬೇತಿ ಕೇಂದ್ರದಲ್ಲಿ ಶಿಕ್ಷಕನಾಗಿದ್ದೇನೆ. ಸ್ಪರ್ಧಾತ್ಮಕ ಪರೀಕ್ಷೆಗೂ ತರಬೇತಿ ಕೊಡುತ್ತೇನೆ. ಮಾಹಿತಿ ಲೋಕಕ್ಕೆ ಅಪ್‌ಡೇಟ್ ಆಗದೇ ಇದ್ದರೆ ಅಂಗವೈಕಲ್ಯ ಇದ್ದಂತೆ. ಆದ್ದರಿಂದ ನಾನು ಸಮಯ ಇದ್ದಾಗಲೆಲ್ಲ ಇಲ್ಲಿಗೆ ಬರುತ್ತೇನೆ.
–ವಸಂತ ಗೋಟೂರು ಮಂಗಳೂರು
ಕಟ್ಟಡವಿಡೀ ಹಾಳಾಗಿತ್ತು. ಪುಸ್ತಕಗಳು ಮತ್ತು ಪತ್ರಿಕೆಗಳನ್ನು ಓದಲು ಬೇಕಾದ ಪರಿಸರ ಇರಲಿಲ್ಲ. ಈಗ ಅಭಿವೃದ್ಧಿ ಆಗಿದೆ. ಕೆಲವೇ ಕೆಲಸಗಳು ಬಾಕಿ ಇವೆ. ಅದೆಲ್ಲವೂ ಆದಾಗ ವಾಚನಾಲಯ ಹೊಸ ಬಗೆಯಲ್ಲಿ ಕಂಗೊಳಿಸಲಿದೆ.
–ಮಾಲತಿ ವೆಲೆನ್ಸಿಯಾ ವಾಚನಾಲಯದ ಉಸ್ತುವಾರಿ.
ಸುಳ್ಯದಲ್ಲಿ ತರಬೇತಿ; ಮಂಗಳೂರಿನಲ್ಲಿ ಮಾಹಿತಿ
ಸುಳ್ಯ ವಾಚನಾಲದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ ನೀಡಲಾಗುತ್ತಿದೆ.  ತರಬೇತಿ ಪಡೆದ ಮೊದಲ ತಂಡ ಈಗಾಗಲೇ ಹೊರಬಂದಿದ್ದು ಸುಮಾರು 100 ಮಂದಿ ಇದರ ಲಾಭ ಪಡೆದುಕೊಂಡಿದ್ದಾರೆ. ಎರಡನೇ ತಂಡದ ತರಬೇತಿ ಸದ್ಯದಲ್ಲೇ ಆರಂಭವಾಗಲಿದೆ. ಮಂಗಳೂರಿನಲ್ಲಿ ಹೊಸ ಕಟ್ಟಡ ನಿರ್ಮಾಣ ಆದ ನಂತರ ಈ ಯೋಜನೆ ಜಿಲ್ಲಾಕೇಂದ್ರಕ್ಕೂ ವಿಸ್ತರಣೆ ಆಗಲಿದೆ. ಬಾವುಟಗುಡ್ಡದ ನಗರ ಕೇಂದ್ರ ಗ್ರಂಥಾಲಯದಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಸಿದ್ಧರಾಗುವವರಿಗಾಗಿ ಪೂರಕ ಮಾಹಿತಿಯ ಪುಸ್ತಕಗಳನ್ನು ಒದಗಿಸಲಾಗುತ್ತಿದೆ. ನಿತ್ಯವೂ ನೂರಾರು ಮಂದಿ ಇದರ ಪ್ರಯೋಜ ಪಡೆದುಕೊಳ್ಳುತ್ತಿದ್ದಾರೆ. ಪರೀಕ್ಷೆಗೆ ಸಜ್ಜಾಗುವವರಿಗಾಗಿ ಪ್ರಕಾಶ್‌ ಎಂಬವರು ವಾರದಲ್ಲಿ ಎರಡು ದಿನ ಉಚಿತವಾಗಿ ಆಪ್ತಸಮಾಲೋಚನೆ ನಡೆಸುತ್ತಾರೆ. ನಗರ ಕೇಂದ್ರ ಗ್ರಂಥಾಲಯ ಸಮೀಪದ ಹೊಸ ಕಟ್ಟಡವನ್ನು ಚಟುವಟಿಕೆ ಆಧಾರಿತ ಕೇಂದ್ರವನ್ನಾಗಿ ಮಾಡುವ ಸಲುವಾಗಿ ಸಭಾಂಗಣ ಮತ್ತಿತರ ಸೌಲಭ್ಯಗಳನ್ನು ಮಾಡಲಾಗಿದೆ.ಬಾವುಟಗುಡ್ಡದಲ್ಲಿ ಪುಸ್ತಕಗಳಿಂದ ಮಾಹಿತಿ ಕಲೆ ಹಾಕುವವರಲ್ಲಿ ಬೇರೆ ಬೇರೆ ಕ್ಷೇತ್ರಗಳ ಜನರು ಇದ್ದಾರೆ. ಉನ್ನತ ಹುದ್ದೆಯ ಮೇಲೆ ಕಣ್ಣಿಟ್ಟಿರುವ ಎಸ್‌ಐಗಳು ಎಸ್‌ಐ ಹುದ್ದೆ ಬೇಕೆಂದು ಬಯಸುವ ಕಾನ್‌ಸ್ಟೆಬಲ್‌ಗಳು ಉದ್ಯೋಗದ ನಡುವೆಯೇ ಅಭ್ಯಾಸ ಮಾಡುತ್ತಿದ್ದಾರೆ. ‘ಸನ್‌ ಇನ್‌ಸ್ಪೆಕ್ಟರ್ ಆಗಬೇಕೆಂಬ ಬಯಕೆ ಇದೆ. 2 ವರ್ಷದಿಂದ ಇಲ್ಲಿ ಓದುತ್ತಾ ಇದ್ದೇನೆ. ಇಲ್ಲಿ ಪಿಎಸ್‌ಐ ಕೆಎಎಸ್ ಪರೀಕ್ಷೆಗೆ ಪೂರಕವಾದ ಪುಸ್ತಕಗಳು ಹಳೆಯ ಪ್ರಶ್ನೆ ಪತ್ರಿಕೆಗಳು ಇವೆ. ಒಂದು ಪುಸ್ತಕ ಕೇಳಿದರೆ ಪೂರಕವಾದ ಮತ್ತೊಂದನ್ನೂ ತಂದುಕೊಡುವ ಉತ್ತಮ ಸಿಬ್ಬಂದಿ ಇದ್ದಾರೆ’ ಎಂದು ಉತ್ತರ ಕರ್ನಾಟಕದಿಂದ ಬಂದಿರುವ ಕಾನ್‌ಸ್ಟೆಬಲ್ ಒಬ್ಬರು ತಿಳಿಸಿದರು.
ಜನರ ಸಹಭಾಗಿತ್ವ ಕುಳಾಯಿ
ಹೊಸಬೆಟ್ಟು ಗ್ರಂಥಾಲಯದ ಅಭಿವೃದ್ಧಿ ಆದಂದಿನಿಂದ ಸುತ್ತಮುತ್ತಲ ಜನರು ಪುಸ್ತಕ ಪ್ರಿಯರು ಖುಷಿಯಾಗಿದ್ದಾರೆ. ನೀರು ಮತ್ತಿತರ ಸೌಲಭ್ಯಗಳನ್ನು ಒದಗಿಸಲು ಸಾರ್ವಜನಿಕರೇ ಮುಂದೆ ಬಂದಿದ್ದಾರೆ. ರೋಟರಿ ಸಂಸ್ಥೆಯವರೂ ಕೈಜೋಡಿಸಿದ್ದಾರೆ. ‘ಹೊಸಬೆಟ್ಟು ವಾಚನಾಲಯದ ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿತ್ತು. ಅದರ ಮುಂಭಾಗದಲ್ಲಿ ಮಹಾನಗರ ಪಾಲಿಕೆಯ ಉದ್ಯಾನದಲ್ಲಿ ಜಾಗ ಇತ್ತು. ಅದನ್ನು ಬಳಸಿಕೊಳ್ಳಲು ಯೋಜನೆ ರೂಪಿಸಲಾಗಿತ್ತು. ಹೊಸ ಕಟ್ಟಡಕ್ಕೆ ಸ್ಥಳಾಂತರಗೊಂಡು ನಾಲ್ಕು ವರ್ಷ ಕಳೆದಿದೆ. ಇಲ್ಲಿನ ಜನರು ಗ್ರಂಥಾಲಯದ ಬಗ್ಗೆ ತೋರುತ್ತಿರುವ ಕಾಳಜಿ ಅಭಿನಂದನೀಯ. ಕುಡಿಯುವ ನೀರಿನ ವ್ಯವಸ್ಥೆ ಅವರೇ ಮಾಡಿದ್ದಾರೆ. ಪುಸ್ತಕಗಳ ರ‍್ಯಾಕ್ ಮತ್ತಿತರ ಕೆಲವು ವಸ್ತುಗಳನ್ನು ರೋಟರಿ ಸಂಸ್ಥೆ ಕೊಡುಗೆಯಾಗಿ ನೀಡಿದೆ’ ಎಂದು ಗ್ರಂಥಾಲಯ ಇಲಾಖೆಯ ಉಪನಿರ್ದೇಶಕ ರಾಘವೆಂದ್ರ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT