ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಗೋಡಂಬಿ ಸುತ್ತ ಯಂತ್ರಗಳ ಲೋಕ

ಉರ್ವದಲ್ಲಿ ನಡೆಯುತ್ತಿರುವ ಪ್ರಾತ್ಯಕ್ಷಿಕೆಯಲ್ಲಿ ವಿವಿಧ ಕಂಪನಿಗಳು ಭಾಗಿ; ನಾಳೆ ಮುಕ್ತಾಯ
Published 11 ಜನವರಿ 2024, 6:39 IST
Last Updated 11 ಜನವರಿ 2024, 6:39 IST
ಅಕ್ಷರ ಗಾತ್ರ

ಮಂಗಳೂರು: ಕಾಳುಗಳನ್ನು ಬಣ್ಣದ ಆಧಾರದಲ್ಲಿ ಬೇರ್ಪಡಿಸುವ ತೆಲಂಗಾಣ, ಆಂಧ್ರಪ್ರದೇಶ ಮತ್ತು ಕರ್ನಾಟಕದ ಬೇರೆ ಬೇರೆ ಪ್ರದೇಶಗಳಿಂದ ತಂದಿರುವ ಯಂತ್ರಗಳು, ಪ್ಯಾಕೇಜಿಂಗ್‌ಗೆ ಸಂಬಂಧಿಸಿದ ಹೊಸ ಮಾದರಿಯ ಡಬ್ಬಗಳು, ತೈಲದ ಟಿನ್‌ಗಳಿಗೆ ಭದ್ರ ಮುಚ್ಚಳ ಹಾಕುವ ವೆಲ್ಡಿಂಗ್ ತಂತ್ರಜ್ಞಾನ, ಅತ್ಯಾಧುನಿಕ ಏರ್ ಕಂಪ್ರೆಸರ್, ಮನೆಯಲ್ಲೂ ಕೈಗಾರಿಕೆಗಳಲ್ಲೂ ವಿದ್ಯುತ್ ಉಳಿತಾಯ ಮಾಡಿಕೊಡುವ ಸಣ್ಣ ಉಪಕರಣ...

ಗೋಡಂಬಿ ಕೃಷಿ ಮತ್ತು ಪೂರಕ ಕೈಗಾರಿಕೆಗಳಿಗೆ ಸಂಬಂಧಿಸಿದ ಹತ್ತಾರು ಯಂತ್ರೋಪಕರಣಗಳ ಲೋಕ ನಗರದ ಉರ್ವ ಚರ್ಚ್ ಮೈದಾನದಲ್ಲಿ ಅನಾವರಣಗೊಂಡಿದೆ. 

ಟೆಂಡರ್ ಟುಡೆ ಗ್ರೂಪ್ಸ್ ಸಹಯೋಗದಲ್ಲಿ ಕರ್ನಾಟಕ ಕ್ಯಾಶ್ಯೂ ಮ್ಯಾನುಫ್ಯಾಕ್ಚರರ್ಸ್ ಅಸೋಸಿಯೇಷನ್ ಆಯೋಜಿಸಿರುವ ಕೈಗಾರಿಕೆ ಯಂತ್ರೋಪಕರಣಗಳ ಪ್ರಾತ್ಯಕ್ಷಿಕೆ ಮತ್ತು ಪ್ರದರ್ಶನ ಇದೇ 12ರ ವರೆಗೆ ನಡೆಯಲಿದೆ.

ಗೋಡಂಬಿ ಮತ್ತು ಧಾನ್ಯಗಳನ್ನು ಬಣ್ಣದ ಆಧಾರದಲ್ಲಿ ಬೇರ್ಪಡಿಸುವ ದೊಡ್ಡ ಕಲರ್ ಸಾರ್ಟರ್ ಯಂತ್ರಗಳನ್ನು ಚೆನ್ನೈ ಮತ್ತು ಕೊಯಮತ್ತೂರಿನ ಕ್ಯೂಬ್ ಕಲರ್ ಸಾರ್ಟರ್ ಕಂಪನಿ ಮತ್ತು ಹೈದರಾಬಾದ್‌ನ ಮೀನಾ ಟೆಕ್ನಾಲಜೀಸ್ ತಂದಿದೆ. ‘ನಿರ್ದಿಷ್ಟ ಬಣ್ಣವನ್ನು ಹೊಂದಿರುವ ಕಾಳುಗಳನ್ನು ಹೊರಹಾಕುವಂತೆ ಪ್ರೋಗ್ರಾಮಿಂಗ್ ಮಾಡಲಾಗುತ್ತದೆ. ಅದಕ್ಕೆ ತಕ್ಕಂತೆ ಯಂತ್ರವು ಕಾಳುಗಳನ್ನು ಬೇರ್ಪಡಿಸುತ್ತದೆ’ ಎಂದು ಮಾರಾಟ ಪ್ರತಿನಿಧಿ ಮೈಸೂರಿನ ನಂಜುಂಡಸ್ವಾಮಿ ತಿಳಿಸಿದರು.

‘300ರಿಂದ 400 ಕೆಜಿ ಧಾನ್ಯಗಳನ್ನು ಏಕಕಾಲದಲ್ಲಿ ಹಾಕಬಲ್ಲ ಈ ಯಂತ್ರಗಳಿಗೆ ₹ 7ರಿಂದ 8 ಲಕ್ಷ ಬೆಲೆ ಇದೆ. ಧಾನ್ಯಗಳಿಗೆ ಸಂಬಂಧಿಸಿದ ದೊಡ್ಡ ಉದ್ದಿಮೆಗಳಿಗೆ ಇದು ಅನುಕೂಲ ಆಗಲಿದೆ’ ಎಂದು ಮೀನಾ ಟೆಕ್ನಾಲಜೀಸ್‌ನ ಪ್ರಾದೇಶಿಕ ವ್ಯವಸ್ಥಾಪಕ ಅದ್ರಿಸ್ ‘ಪ್ರಜಾವಾಣಿ’ಗೆ ತಿಳಿಸಿದರು.

ಹೈದರಾಬಾದ್‌ನ ಮೋಲ್ಡ್ ಟೆಕ್ ಪ್ಯಾಕೇಜಿಂಗ್ ಲಿಮಿಟೆಡ್ ಕಂಪನಿಯ ಪ್ಯಾಕೇಜ್‌ ಕಂಟೇನರ್‌ಗಳು ಗಮನ ಸೆಳೆಯುತ್ತವೆ. ವಿಶಾಖಪಟ್ಟಣದಿಂದ ಬಂದಿರುವ ರೇವಂತ್ ಟೆಕ್ನಾಲಜಿಸ್‌ನವರ ಬಳಿ ವರ್ಟಿಕಲ್ ಬಾಯ್ಲರ್‌ನೊಂದಿಗೆ ಗೋಡಂಬಿಯ ಹೊರ ಆವರಣವನ್ನು ಕ್ಷಿಪ್ರವಾಗಿ ತೆಗೆಯುವ ಕ್ಯಾಶ್ಯೂ ಪೀಲಿಂಗ್ ಯಂತ್ರವೂ ಇದೆ. ಕೃಷ್ಣರಾಜ್ ಕ್ಯಾಶ್ಯೂ ಪ್ರೊಸೆಸಿಂಗ್, ಮ್ಯಾಕ್ಸಿಮ್ ಎಂಜಿನಿಯರಿಂಗ್, ಪರಿವರ್ತನ್ ಕಾಜೂ ಹೌಸ್, ಶ್ರೀ ಬಾಲಾಜಿ ಮೊದಲಾದ ಕಂಪನಿಗಳು ಕೂಡ ಇಂಥಹುದೇ ವೈವಿಧ್ಯಮಯ ಯಂತ್ರಗಳೊಂದಿಗೆ ಭಾಗವಹಿಸಿದ್ದಾರೆ. ಬೆಂಗಳೂರಿನ ಆರ್ಬ್‌ ಎನರ್ಜಿ ಕಂಪನಿ, ಸೋಲಾರ್ ಸಿಸ್ಟಂ ಪ್ರದರ್ಶನಕ್ಕೆ ಇರಿಸಿದೆ.

ಟಿನ್‌ಗೆ ಭದ್ರ ಮುಚ್ಚಳ

ದಕ್ಷಿಣ ಕನ್ನಡದ ಮೂಲ್ಕಿಯ ಏ ಒನ್ ಪ್ಲ್ಯಾಷ್ ಕಂಪನಿ ಸೋಲ್ಡರಿಂಗ್‌ಗೆ ಸಂಬಂಧಿಸಿದ ಹೊಸ ತಂತ್ರಜ್ಞಾನದೊಂದಿಗೆ ಪಾಲ್ಗೊಂಡಿದ್ದಾರೆ. ಯಂತ್ರದ ಒಂದು ಭಾಗದಲ್ಲಿ ಟಿನ್ ಇರಿಸಿ ಮುಚ್ಚಳದ ಸುತ್ತ ಸೋಲ್ಡರಿಂಗ್ ರೋಲ್‌ ಇಟ್ಟು ಸ್ವಿಚ್ ಅದುಮಿದರೆ ಮುಚ್ಚಳ ಭದ್ರವಾಗುತ್ತದೆ. ಒಂದು ಸೋಲ್ಡರಿಂಗ್ ರೋಲ್‌ನಲ್ಲಿ 500 ಟಿನ್‌ಗಳನ್ನು ಮುಚ್ಚಬಹುದು ಎನ್ನುತ್ತಾರೆ ಕಂಪನಿಯ ಮಾಲೀಕ ಗಿರೀಶ್‌.

ಬೆಂಗಳೂರಿನ ಫರ್ಸ್ಟ್ ಏರ್ ಕಂಪನಿ, ಏರ್ ಕಂಪ್ರೆಸರ್‌ನೊಂದಿಗೆ ಬಂದಿದೆ. ಸಾಮಾನ್ಯ ಏರ್‌ ಕಂಪ್ರೆಸರ್‌ಗಳು 4:6 ಪ್ರೊಫೈಲ್ ಹೊಂದಿರುತ್ತವೆ. ನಮ್ಮ ಯಂತ್ರಗಳಲ್ಲಿ 5:6 ಪ್ರೊಫೈಲ್ ಇರುವುದರಿಂದ ವಿದ್ಯುತ್ ಉಳಿತಾಯ ಆಗುತ್ತದೆ. ಆರ್‌ಪೆಎಂ ಕಡಿಮೆ ಆಗುವುದರಿಂದ ಹೆಚ್ಚು ಬಾಳಿಕೆ ಬರುತ್ತದೆ ಎಂದು ವ್ಯವಸ್ಥಾಪಕ ಕುಬೇರ್ ಹೇಳಿದರು.

ವಿದ್ಯುತ್ ಉಳಿತಾಯಕ್ಕೊಂದು ಉಪಾಯ

ವಿದ್ಯುತ್ ಉಳಿತಾಯ ಮಾಡಲು ಬೆಂಗಳೂರಿನ ಆರ್‌ಎಸ್‌ ಪವರ್ ಸೇವರ್ ಕಂಪನಿ ಕಿರು ಉಪಕರಣದ ಆವಿಷ್ಕಾರ ಮಾಡಿದೆ. ₹ 2 ಸಾವಿರ ಬೆಲೆಯ ಇದನ್ನು ಯಾವುದಾದರೂ ಒಂದು ಪ್ಲಗ್ ಪಾಯಿಂಟ್‌ಗೆ ಜೋಡಿಸಿದರೆ ಇಡೀ ಮನೆಯಲ್ಲಿ ಬಳಕೆಯಾಗುವ ವಿದ್ಯುತ್ ಪ್ರಮಾಣ ಕಡಿಮೆಯಾಗುತ್ತದೆ ಎಂದು ಸ್ಥಳೀಯ ವಿತರಕ ರೋಷನ್ ತಿಳಿಸಿದರು.

5 ಕಿಲೊವ್ಯಾಟ್ ವರೆಗೆ ವಿದ್ಯುತ್ ಬಳಸುವವರು ಒಂದು ಡಿವೈಸ್ ಇರಿಸಿದರೆ ಸಾಕು. ಹೆಚ್ಚು ಬಳಸುವವರು ಬಳಕೆಯ ಪ್ರಮಾಣಕ್ಕೆ ತಕ್ಕಂತೆ ಡಿವೈಸ್ ಇರಿಸಬೇಕು. 6 ವರ್ಷ ಗ್ಯಾರಂಟಿ ಇರುವ ಇದರ ಬೆಲೆ ಪ್ರಾತ್ಯಕ್ಷಿಕೆಯಲ್ಲಿ ₹ 1 ಸಾವಿರ ಎಂದು ಅವರು ವಿವರಿಸಿದರು. 

ಪ್ರಾತ್ಯಕ್ಷಿಕೆಯಲ್ಲಿ ಯಂತ್ರೋಪಕರಣದ ಪ್ರಾತ್ಯಕ್ಷಿಕೆ –ಪ್ರಜಾವಾಣಿ ಚಿತ್ರ
ಪ್ರಾತ್ಯಕ್ಷಿಕೆಯಲ್ಲಿ ಯಂತ್ರೋಪಕರಣದ ಪ್ರಾತ್ಯಕ್ಷಿಕೆ –ಪ್ರಜಾವಾಣಿ ಚಿತ್ರ

ಬೃಹತ್ ಯಂತ್ರಗಳ ಜೊತೆಯಲ್ಲಿ ಸ್ಟಾರ್ಟ್ ಅಪ್‌ಗಳ ಆವಿಷ್ಕಾರಗಳು ಇವೆ ತೈಲದ ಟಿನ್‌ ಮುಚ್ಚಳ ಭದ್ರಪಡಿಸುವ ಹೊಸ ಸೋಲ್ಡರಿಂಗ್‌ ತಂತ್ರಜ್ಞಾನ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT