ಸೋಮವಾರ, ಅಕ್ಟೋಬರ್ 18, 2021
23 °C
ಸ್ಮಾರ್ಟ್‌ ಸಿಟಿ: ಸ್ವಾತಂತ್ರ್ಯದ ಅಮೃತ ಮಹೋತ್ಸವ

ವಿಂಟೇಜ್‌ ವಾಹನ ರ‍್ಯಾಲಿ: ಕಲಾ ಪ್ರದರ್ಶನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ದೇಶದ ಸ್ವಾತಂತ್ರ್ಯದ ಅಮೃತಮಹೋತ್ಸವದ ಅಂಗವಾಗಿ ಮಂಗಳೂರು ಸ್ಮಾರ್ಟ್‌ ಸಿಟಿ ಲಿಮಿಟೆಡ್‌ (ಎಂಎಸ್‌ಸಿಎಲ್‌) ಭಾನುವಾರ ನಗರದಲ್ಲಿ ವಿಂಟೇಜ್‌ ವಾಹನಗಳ ರ್‍ಯಾಲಿ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿತ್ತು.

ರ್‍ಯಾಲಿಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ.  ಚಾಲನೆ ನೀಡಿದರು. ಮಹಾನಗರ ಪಾಲಿಕೆ ಮೇಯರ್‌ ಪ್ರೇಮಾನಂದ ಶೆಟ್ಟಿ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ನಗರದ ಎ.ಬಿ. ಶೆಟ್ಟಿ ವೃತ್ತದಲ್ಲಿ ಆರಂಭವಾದ ರ್‍ಯಾಲಿ, ಗಡಿಯಾರಗೋಪುರ, ಹಂಪನಕಟ್ಟೆ ವೃತ್ತ, ಅಂಬೇಡ್ಕರ್‌ ವೃತ್ತ, ಬಂಟ್ಸ್‌ ಹಾಸ್ಟೆಲ್‌, ಪಿವಿಎಸ್‌ ವೃತ್ತ, ಲಾಲ್‌ಬಾಗ್‌ ಮೂಲಕ ಸಾಗಿ ಲೇಡಿಹಿಲ್‌ ಬಳಿಯ ಮಂಗಳಾಕ್ರೀಡಾಂಗಣದಲ್ಲಿ ಸಮಾವೇಶಗೊಂಡಿತು.

ವಿಂಟೇಜ್‌ ವಾಹನಗಳ ರ್‍ಯಾಲಿಯಲ್ಲಿ ಕಾರುಗಳು, ದ್ವಿಚಕ್ರ ವಾಹನಗಳು ಗತವೈಭವಕ್ಕೆ ಹೊಸತನದ ಮೆರುಗಿನೊಂದಿಗೆ ಸಾಗಿದವು. ಅವುಗಳ ರಾಜಗಾಂಭೀರ್ಯ ವೀಕ್ಷಕರನ್ನು ಪುಳಕಗೊಳಿಸಿತು. ಮಕ್ಕಳು, ಹಿರಿಯರು ಸೇರದಂತೆ ನೂರಾರು ಜನರು ಅಲ್ಲಲ್ಲಿ ನಿಂತು ವೀಕ್ಷಿಸುತ್ತಿದ್ದುದು ಕಂಡುಬಂತು.

ಸ್ಪರ್ಧೆ: ಚಿತ್ರರಚನಾ ಸ್ಪರ್ಧೆ ಆಯೋಜಿಸಲಾಗಿದ್ದು, 15 ವರ್ಷಕ್ಕಿಂತ ಕೆಳಗಿನ ವಯಸ್ಸಿನವರು ಹಾಗೂ 16ರಿಂದ 21 ವಯೋಮಾನದವರು ಎಂಬ ಎರಡು ವಿಭಾಗಗಳಲ್ಲಿ ಸ್ಪರ್ಧೆ ನಡೆಯಿತು.

ಕಲಾ ಸಮೃದ್ಧಿ: ಲಾಲ್‌ಬಾಗ್‌ ವೃತ್ತದಿಂದ ಲೇಡಿಹಿಲ್‌ವರೆಗೆ ಕಲಾ ಪ್ರದರ್ಶನ ಆಯೋಜಿಸಲಾಗಿತ್ತು. ರ‍್ಯಾಲಿಯಲ್ಲಿ ಸ್ತಬ್ಧ ಚಿತ್ರ ಮತ್ತಿತರ ವೇಷಗಳು ಆಕರ್ಷಕವಾಗಿದ್ದವು. ಸ್ವಾತಂತ್ರ್ಯ ಸಂಗ್ರಾಮ ಸ್ಮರಣೆಯ ಸ್ತಬ್ಧಚಿತ್ರ ವಿಶೇಷ ಗಮನಸೆಳೆಯಿತು. ಹುಲಿ ಕುಣಿತ, ಯಕ್ಷಗಾನ ಗೊಂಬೆ ಮೇಳೈಸಿದವು. ಸಾಂಸ್ಕೃತಿಕ ಕಲಾ ಪ್ರದರ್ಶನ, ಬೀದಿ ಕಾರ್ಯಕ್ರಮಗಳ ಭಾಗವಾಗಿ ನೆರವೇರಿದವು.

ಕಾರ್ಯಕ್ರಮದಲ್ಲಿ ಎಂಎಸ್‌ಸಿಎಲ್‌  ವ್ಯವಸ್ಥಾಪಕ ನಿರ್ದೇಶಕ  ಪ್ರಶಾಂತ ಕುಮಾರ್‌ ಮಿಶ್ರಾ, ಪಾಲಿಕೆ ಮುಖ್ಯ ಸಚೇತಕ ಸುಧೀರ್‌ ಕುಮಾರ್‌ ಶೆಟ್ಟಿ, ಕರ್ನಾಟಕ ಮೀನುಗಾರಿಕೆ ನಿಗಮದ ಅಧ್ಯಕ್ಷ ನಿತಿನ್‌ ಕುಮಾರ್‌ , ಇತರ ಪ್ರಮುಖರು ಭಾಗವಹಿಸಿದ್ದರು.

ವಿಂಟೇಜ್‌ ಒಳಗೆ ‘ಸಾರಥಿಗಳು’: ಅದು ಕಂದು ಬಣ್ಣದ ವಿಂಟೇಜ್‌ ಕಾರು. ರಾಜದರ್ಭಾರಿನ ಮೆರುಗು. ಅದರೊಳಗೆ ಜಿಲ್ಲೆ–ನಗರ ಸಾರಥಿಗಳಾದ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಹಾಗೂ ಮೇಯರ್‌ ಪ್ರೇಮಾನಂದ ಶೆಟ್ಟಿ ಪೋಸ್‌ ಕೊಟ್ಟದ್ದು ವಿಶೇಷವಾಗಿತ್ತು. ಕಾರಿನಲ್ಲೂ ಸಾರಥ್ಯದಲ್ಲಿ  ‘ನಗರ ಸಾರಥಿ’ಯೇ ಇದ್ದರು. ಜಿಲ್ಲೆಯ ಸಾರಥಿ ಪಕ್ಕದಲ್ಲಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು