ಮಂಗಳೂರು: ರಾಜ್ಯ ಸರ್ಕಾರ ಶೈಕ್ಷಣಿಕ ನೀತಿ ಕುರಿತು ಸ್ಪಷ್ಟ ನಿಲುವು ತೆಗೆದುಕೊಳ್ಳಬೇಕು. ರಾಷ್ಟ್ರೀಯ ಶಿಕ್ಷಣ ನೀತಿ ಮತ್ತು ರಾಜ್ಯ ಶಿಕ್ಷಣ ನೀತಿ ನಡುವಿನ ಗೊಂದಲ ಪರಿಹರಿಸಬೇಕು ಎಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಆಗ್ರಹಿಸಿದೆ.
ಇಲ್ಲಿ ಭಾನುವಾರ ಮುಕ್ತಾಯಗೊಂಡ ಪರಿಷತ್ ಪ್ರಾಂತ ಕಾರ್ಯಕಾರಿಣಿ ಸಭೆಯಲ್ಲಿ ವಿಶ್ವವಿದ್ಯಾಲಯಗಳಲ್ಲಿ ನಡೆಯುತ್ತಿರುವ ಹಗರಣ, ಪರೀಕ್ಷೆಗಳ ಫಲಿತಾಂಶ ವಿಳಂಬ, ಪರೀಕ್ಷಾ ಶುಲ್ಕ ಹೆಚ್ಚಳ, ಅಂಕಪಟ್ಟಿಗೆ ಹೆಚ್ಚುವರಿ ಶುಲ್ಕ ವಿಧಿಸುವುದು, ವಿಶ್ವವಿದ್ಯಾಲಯಗಳಲ್ಲಿನ ಸಮಸ್ಯೆ, ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆಗಳ ವಿರುದ್ಧ ರಾಜ್ಯಮಟ್ಟದಲ್ಲಿ ಹೋರಾಟ ನಡೆಸಲು ನಿರ್ಣಯ ಕೈಗೊಳ್ಳಲಾಯಿತು.
ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ಏಕರೂಪ ವೇಳಾಪಟ್ಟಿ ಇಲ್ಲದಿರುವುದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ತೊಡಕಾಗುತ್ತಿರುವ ಬಗ್ಗೆ ಎಬಿವಿಪಿ ಎಲ್ಲಾ ವಿಶ್ವವಿದ್ಯಾಲಯಗಳಿಗೆ ಮನವಿ ಸಲ್ಲಿಸಿದ ಪರಿಣಾಮ ಉನ್ನತ ಶಿಕ್ಷಣ ಇಲಾಖೆ ಏಕರೂಪ ವೇಳಾಪಟ್ಟಿ ಅನುಸರಿಸುವಂತೆ ಮಾದರಿ ವೇಳಾಪಟ್ಟಿ ನೀಡಿದ್ದರೂ ಅನುಸರಿಸಿಲ್ಲ. ಈ ನಿಟ್ಟಿನಲ್ಲಿ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಎಬಿವಿಪಿ ಆಗ್ರಹಿಸಿದೆ.
ಸಮಗ್ರ ವಿಶ್ವವಿದ್ಯಾಲಯ ಮತ್ತು ಕಾಲೇಜು ನಿರ್ವಹಣಾ ವ್ಯವಸ್ಥೆ (ಯುಯುಸಿಎಂಎಸ್) ತಂತ್ರಾಂಶದ ಸಮರ್ಪಕ ಬಳಕೆ, ಕಾರ್ಯ ನಿರ್ವಹಣೆಯಲ್ಲಿನ ಲೋಪದೋಷ ಸರಿಪಡಿಸಬೇಕು. ಸಾಕಷ್ಟು ತಾಂತ್ರಿಕ ಪರಿಣಿತ ಸಹಾಯಕರನ್ನು ನೇಮಿಸಿ ವಿದ್ಯಾರ್ಥಿಗಳ ಶೈಕ್ಷಣಿಕ ಹಿತಾಸಕ್ತಿ ಕಾಯಬೇಕೆಂದು ಪರಿಷತ್ ಆಗ್ರಹಿಸಿದೆ.
ಕರ್ನಾಟಕ ಲೋಕಸೇವಾ ಆಯೋಗವು, ಕೇಂದ್ರ ಲೋಕಸೇವಾ ಆಯೋಗ ನಡೆಸುವಂತೆ ನಿಯಮಿತವಾಗಿ ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿಯನ್ನು ಕಾಲಮಿತಿಯೊಳಗೆ ನಡೆಸಬೇಕು. ಕೆಪಿಎಸ್‌ಸಿಯ ಸಾಕಷ್ಟು ಪರೀಕ್ಷೆಗಳು ಕಾರಣಾಂತರಗಳಿಂದ ಮುಂದೂಡುವುದು ಅಥವಾ ಅಧಿಸೂಚನೆ ಹೊರಡಿಸಿದ ಪರೀಕ್ಷೆಗಳೇ ನಡೆಸದಿರುವಂಥ ಧೋರಣೆಯನ್ನು ಬದಲಿಸಿಕೊಳ್ಳಬೇಕು. ರಾಜ್ಯದ ಪದವಿ ಮತ್ತು ಸ್ನಾತಕೋತ್ತರ ಕಾಲೇಜುಗಳಲ್ಲಿ ಅಸಮರ್ಪಕ ಶುಲ್ಕ ಏರಿಕೆಯನ್ನು ಖಂಡಿಸಿರುವ ಎಬಿವಿಪಿ, ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, ಶಿಷ್ಯವೇತನವನ್ನು ಸರಿಯಾದ ಪ್ರಮಾಣದಲ್ಲಿ, ತಾಂತ್ರಿಕ ಲೋಪ ದೋಷಗಳಿಲ್ಲದಂತೆ ನೀಡಬೇಕು ಎಂದು ಆಗ್ರಹಿಸಿದೆ. ಉನ್ನತ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಸಮರ್ಪಕ ಹಾಸ್ಟೆಲ್ ಸೌಲಭ್ಯ ಒದಗಿಸಬೇಕು. ಹಾಸ್ಟೆಲ್ ಪ್ರವೇಶಾತಿ ಪ್ರಕ್ರಿಯೆಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದು ಆಗ್ರಹಿಸಿದೆ.
ರಾಜ್ಯ ಕಾನೂನು ವಿಶ್ವವಿದ್ಯಾಲಯವು ಪ್ರಸಕ್ತ ಸಾಲಿನಿಂದ ಮೆರಿಟ್ ಆಧಾರಿತ ಪ್ರವೇಶಾತಿ ಪ್ರಕ್ರಿಯೆ ಅನುಸರಿಸಲು ಮುಂದಾಗಿದೆ. ಆದರೆ ವಾಸ್ತವವಾಗಿ ಬೇರೆ ಬೇರೆ ವಿಷಯಧಾರಿತ ಅಧ್ಯಯನ ಮಾಡಿ ಬರುವ ವಿದ್ಯಾರ್ಥಿಗಳನ್ನು ಮೆರಿಟ್ ಆಧಾರಿತವಾಗಿ ಕಾನೂನು ಪದವಿ ಪ್ರವೇಶಾತಿಗೆ ಪರಿಗಣಿಸುವುದು ಚರ್ಚಿಸಬೇಕಾದ ವಿಷಯ. ಆದ್ದರಿಂದ ನೆರೆಯ ರಾಜ್ಯಗಳಲ್ಲಿ ಇರುವಂತೆ ಕಾನೂನು ಪದವಿಗೆ ಸಾಮಾನ್ಯ ಪ್ರವೇಶಾತಿ ಪರೀಕ್ಷೆ ನಡೆಸಲು ಸರ್ಕಾರದ ಮಟ್ಟದಲ್ಲಿ ಚಿಂತನೆ ನಡೆಸಬೇಕು ಎಂದು ಪರಿಷತ್ ತಿಳಿಸಿದೆ.
ಎಬಿವಿಪಿ ರಾಜ್ಯಾಧ್ಯಕ್ಷ ಸತೀಶ್ ಎಚ್.ಕೆ, ರಾಜ್ಯ ಸಂಘಟನಾ ಕಾರ್ಯದರ್ಶಿ ಬಸವೇಶ್ ಕೋರಿ, ಕಾರ್ಯದರ್ಶಿ ಪ್ರವೀಣ್ ಎಚ್.ಕೆ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.