ಶುಕ್ರವಾರ, ಜೂಲೈ 3, 2020
21 °C
ಹಣ್ಣು, ತರಕಾರಿ ಸಗಟು ವ್ಯಾಪಾರ ಸ್ಥಳಾಂತರ

ಬೈಕಂಪಾಡಿಯಲ್ಲಿ ಮಾರುಕಟ್ಟೆ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಈವರೆಗೂ ನಗರದ ಸೆಂಟ್ರಲ್‌ ಮಾರುಕಟ್ಟೆಯಲ್ಲಿ ನಡೆಯುತ್ತಿದ್ದ ಹಣ್ಣು ಮತ್ತು ತರಕಾರಿ ಸಗಟು ಮಾರಾಟ ಬುಧವಾರದಿಂದ ಬೈಕಂಪಾಡಿಯ ಕೃಷ್ಟಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಯಾರ್ಡ್‌ ಆವರಣಕ್ಕೆ ಸ್ಥಳಾಂತರ ವಾಗಿದೆ. ಮೊದಲ ದಿನವೇ ಹಲವು ವರ್ತಕರು ಅಲ್ಲಿ ವಹಿವಾಟು ನಡೆಸಿದರು.

ವಾರದ ಹಿಂದೆಯೇ ಮಾರುಕಟ್ಟೆಯ ಸ್ಥಳಾಂತರಕ್ಕೆ ಆದೇಶ ಹೊರಡಿಸಲಾಗಿತ್ತು. ಆದರೆ, ಸಗಟು ಮತ್ತು ಚಿಲ್ಲರೆ ವ್ಯಾಪಾರಿಗಳ ವಿರೋಧದಿಂದ ಅದು ಕಾರ್ಯರೂಪಕ್ಕೆ ಬಂದಿರಲಿಲ್ಲ. ಈ ಕಾರಣದಿಂದ ಸೆಂಟ್ರಲ್‌ ಮಾರುಕಟ್ಟೆಯನ್ನು ಸಂಪೂರ್ಣವಾಗಿ ಬಂದ್‌ ಮಾಡಿ ಮಂಗಳವಾರ ಆದೇಶ ಹೊರಡಿಸಲಾಗಿತ್ತು. ಬುಧವಾರ ಬೆಳಿಗ್ಗೆಯಿಂದಲೇ ಬೈಕಂಪಾಡಿ ಎಪಿಎಂಸಿ ಆವರಣದಲ್ಲಿ ಹೊಸ ಮಾರುಕಟ್ಟೆ ಕಾರ್ಯಾರಂಭ ಮಾಡಿತು.

ಹಣ್ಣು, ತರಕಾರಿ, ಈರುಳ್ಳಿ, ತೆಂಗಿನಕಾಯಿ ಮತ್ತಿತರ ಉತ್ಪನ್ನಗಳನ್ನು ತುಂಬಿದ ಹತ್ತಾರು ಲಾರಿಗಳು ಮಂಗಳವಾರ ಸಂಜೆಯೇ ಎಪಿಎಂಸಿ ಯಾರ್ಡ್‌ ಆವರಣ ತಲುಪಿದ್ದವು. ಬುಧವಾರ ಬೆಳಗ್ಗಿನ ಜಾವದಿಂದಲೇ ಮಾರುಕಟ್ಟೆಯಲ್ಲಿ ಚಟುವಟಿಕೆಗಳು ಆರಂಭವಾಗಿದ್ದವು.

ಎಪಿಎಂಸಿ ಯಾರ್ಡ್‌ ಪ್ರವೇಶ ದ್ವಾರದ ಬಲ ಭಾಗದಲ್ಲಿ ತೆರೆದ ಶೆಡ್‌ ಮತ್ತು ಬಯಲು ಪ್ರದೇಶದಲ್ಲಿ ಹಣ್ಣು, ತರಕಾರಿ ಸಗಟು ವ್ಯಾಪಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಬೇಡಿಕೆ ಆಧರಿಸಿ ಸಗಟು ವ್ಯಾಪಾರಿಗಳಿಗೆ ಸ್ಥಳ ಹಂಚಿಕೆ ಮಾಡಲಾಗಿದೆ. ಚಿಲ್ಲರೆ ವ್ಯಾಪಾರಿಗಳು ಅಲ್ಲಿಗೆ ಬಂದು ಖರೀದಿಸಿದರು.

‘ಸಗಟು ವ್ಯಾಪಾರಿಗಳಿಗೆ ನಿರ್ದಿಷ್ಟವಾಗಿ ಮಳಿಗೆಗಳನ್ನು ಹಂಚಿಕೆ ಮಾಡಿಲ್ಲ. ತಾತ್ಕಾಲಿಕವಾಗಿ ಖಾಲಿ ಜಾಗದಲ್ಲಿ ವ್ಯಾಪಾರ ನಡೆಸಲು ಅವಕಾಶ ಕಲ್ಪಿಸಲಾಗಿದೆ. ಎಪಿಎಂಸಿ ನಿರ್ಮಿಸಿರುವ ಮಳಿಗೆಗಳು ತುಂಬಾ ಹಳೆಯದಾಗಿವೆ. ದುರಸ್ತಿ ಬಳಿಕ ಮಳಿಗೆಗಳ ಹಂಚಿಕೆ ಕುರಿತು ಎಪಿಎಂಸಿ ಆಡಳಿತವೇ ಕ್ರಮ ಕೈಗೊಳ್ಳುತ್ತದೆ’ ಎಂದು ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಪ್ರವೀಣ್‌ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು