ಶುಕ್ರವಾರ, ಏಪ್ರಿಲ್ 3, 2020
19 °C
ಪರೇಡ್‌ನಲ್ಲಿ ಆರೋಪಿಯನ್ನು ಗುರುತಿಸಿದ ಸಾಕ್ಷಿಗಳು

15 ಜನರ ಎದುರು ಆದಿತ್ಯ ರಾವ್‌ ಹಾಜರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆದಿತ್ಯ ರಾವ್

ಮಂಗಳೂರು: ಬಜ್ಪೆಯ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಜನವರಿ 20ರಂದು ಬಾಂಬ್‌ ಇರಿಸಿದ್ದ ಆರೋಪಿ ಆದಿತ್ಯ ರಾವ್‌ ಗುರುತು ಪತ್ತೆ ಪರೇಡ್‌ ಮಂಗಳವಾರ ಇಲ್ಲಿನ ಜಿಲ್ಲಾ ಕಾರಾಗೃಹದಲ್ಲಿ ನಡೆಯಿತು. ಬಹುತೇಕ ಸಾಕ್ಷಿಗಳು ಆರೋಪಿಯನ್ನು ಗುರುತಿಸಿದ್ದಾರೆ.

ತಾಲ್ಲೂಕು ದಂಡಾಧಿಕಾರಿಯೂ ಆಗಿರುವ ಮಂಗಳೂರು ತಹಶೀಲ್ದಾರ್‌ ಟಿ.ಜಿ. ಗುರುಪ್ರಸಾದ್‌ ನೇತೃತ್ವದಲ್ಲಿ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೂ ಪರೇಡ್‌ ನಡೆಸಲಾಯಿತು. ಜ.20ರಂದು ಆರೋಪಿಯು ವಿಮಾನ ನಿಲ್ದಾಣಕ್ಕೆ ಬಂದು ಬಾಂಬ್‌ ಇರಿಸಿ, ವಾಪಸ್‌ ಹೋದ ಸಮಯದಲ್ಲಿ ಆತನನ್ನು ಪ್ರತ್ಯಕ್ಷವಾಗಿ ನೋಡಿದ್ದ 15 ಮಂದಿ ಪರೇಡ್‌ಗೆ ಹಾಜರಾಗಿದ್ದರು.

ಸಾಕ್ಷಿಗಳ ಎದುರಿನಲ್ಲಿ ಆರೋಪಿಯನ್ನು ಹಾಜರುಪಡಿಸಲಾಯಿತು. ನಿಯಮಗಳ ಅನುಸಾರ ಗುರುತಿಸುವ ಪ್ರಕ್ರಿಯೆಯನ್ನು ನಡೆಸಲಾಯಿತು. ಆರೋಪಿ ಬಳಸಿದ್ದ ಆಟೊ ರಿಕ್ಷಾದ ಚಾಲಕ, ಕೆಂಜಾರು ಬಳಿಯ ಕ್ಷೌರದಂಗಡಿಯ ಮಾಲೀಕ, ಭದ್ರತಾ ಸಿಬ್ಬಂದಿ, ವಿಮಾನ ನಿಲ್ದಾಣದ ಸಿಬ್ಬಂದಿ ಸೇರಿದಂತೆ 15 ಮಂದಿ ಪ್ರತ್ಯಕ್ಷ ಸಾಕ್ಷಿಗಳು ಪರೇಡ್‌ನಲ್ಲಿ ಹಾಜರಿದ್ದರು. ಬಹುತೇಕ ಸಾಕ್ಷಿಗಳು ಆದಿತ್ಯ ರಾವ್‌ನನ್ನು ಗುರುತಿಸಿದ್ದಾರೆ ಮತ್ತು ವಿಮಾನ ನಿಲ್ದಾಣದಲ್ಲಿ ಬಾಂಬ್‌ ಪತ್ತೆಯಾದ ದಿನ ಆತನನ್ನು ಕಂಡಿರುವುದಾಗಿ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಭಾರತೀಯ ಸಾಕ್ಷ್ಯ ಕಾಯ್ದೆಯ ಅಡಿಯಲ್ಲಿ ಆರೋಪಿಯ ಗುರುತು ಪತ್ತೆ ಪರೇಡ್‌ ನಡೆಸಿ, ನ್ಯಾಯಾಲಯಕ್ಕೆ ವರದಿ ನೀಡುವಂತೆ ಪ್ರಕರಣದ ತನಿಖಾಧಿಕಾರಿಯಾಗಿರುವ ಮಂಗಳೂರು ಉತ್ತರ ಉಪ ವಿಭಾಗದ ಎಸಿಪಿ ಕೆ.ಯು. ಬೆಳ್ಳಿಯಪ್ಪ ಅವರು ತಹಶೀಲ್ದಾರ್‌ ಅವರಿಗೆ ಪತ್ರ ಬರೆದಿದ್ದರು. ಫೆಬ್ರುವರಿ 25ರಂದು ಪರೇಡ್‌ ನಿಗದಿಯಾಗಿತ್ತು. ಮಲೇರಿಯಾ ರೋಗದಿಂದ ಬಳಲುತ್ತಿದ್ದ ಕಾರಣದಿಂದ ಅದೇ ದಿನ ಆರೋಪಿಯನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು.

ಪರೇಡ್‌ನ ಪೂರ್ಣ ವಿವರಗಳುಳ್ಳ ವರದಿಯನ್ನು ತಹಶೀಲ್ದಾರ್‌ ಅವರು ಪ್ರಕರಣದ ವಿಚಾರಣೆ ನಡೆಸುತ್ತಿರುವ ನ್ಯಾಯಾಲಯಕ್ಕೆ ಸಲ್ಲಿಸಲಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)