ಗುರುವಾರ , ಜನವರಿ 28, 2021
15 °C
ಜನಸ್ನೇಹಿ ಪೊಲೀಸ್‌ನತ್ತ ಶಶಿಕುಮಾರ್ ಚಿತ್ತ

ಗಾಯನದ ಬಳಿಕ ಬ್ಯಾಟಿಂಗ್ ಮೋಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಜನಸ್ನೇಹಿ ಪೊಲೀಸ್ ಭಾಗವಾಗಿ ಸ್ಥಳೀಯರೊಂದಿಗಿನ ಬಾಂಧವ್ಯ ಹೆಚ್ಚಿಸುವ ನಿಟ್ಟಿನಲ್ಲಿ ‘ವಿಶ್ವಾಸ’ ರೂಪಿಸುವ ಹೆಜ್ಜೆಗಳನ್ನು ಇಟ್ಟಿರುವ ಪೊಲೀಸ್ ಕಮಿಷನರ್ ಎನ್‌. ಶಶಿಕುಮಾರ್, ಶನಿವಾರ ಮಂದಿರ–ದರ್ಗಾಗಳ ಭೇಟಿ ಜೊತೆ ಸ್ಥಳೀಯರ ಜೊತೆ ಬ್ಯಾಟಿಂಗ್ ಮಾಡಿ ಬೆರೆತರು.

ಉಳ್ಳಾಲದ ಕೋಡಿಯಲ್ಲಿ ಸ್ಥಳೀಯವಾಗಿ ಕ್ರಿಕೆಟ್ ಆಡುತ್ತಿದ್ದ ಹುಡುಗರ ಜೊತೆ ಮೈದಾನಕ್ಕಿಳಿದ ಕಮಿಷನರ್ ಬ್ಯಾಟಿಂಗ್ ಮೂಲಕ ಅವರೊಂದಿಗೆ ಬೆರೆತರು.

ಡಿಸಿಪಿ ಹರಿರಾಂ, ಎಎಸ್ಪಿ ರಂಜಿತ್, ಇನ್‌ಸ್ಪೆಕ್ಟರ್ ಸಂಜೀವ್, ಮಹೇಶ್‌ ಪ್ರಸಾದ್ ಸೇರಿದಂತೆ ಸುಮಾರು 30 ಮಂದಿ ಪೊಲೀಸರ ತಂಡವು ಕಮಿಷನರ್ ನೇತೃತ್ವದಲ್ಲಿ ಕೋಡಿ, ಮೊಗವೀರಪಟ್ಣ, ಕೋಟೆಪುರ, ಮಾಸ್ತಿಕಟ್ಟೆ, ಉಳ್ಳಾಲ, ಒಳಪೇಟೆ ಮತ್ತು ತೊಕ್ಕೊಟ್ಟು ಪ್ರದೇಶಗಳಿಗೆ ಶನಿವಾರ ಭೇಟಿ ನೀಡಿ ಸ್ಥಳೀಯರೊಂದಿಗೆ ಸಂವಾದ ನಡೆಸಿತು. ಅಲ್ಲಿನ ಧಾರ್ಮಿಕ ಕ್ಷೇತ್ರಗಳಿಗೂ ಭೇಟಿ ನೀಡಿ, ಪ್ರಮುಖರ ಜೊತೆ ಸ್ಥಳೀಯ ಸಮಸ್ಯೆಗಳ ಬಗ್ಗೆ ಆಲಿಸಿತು. ಬೀಚ್‌ಗೆ ತೆರಳಿದ ತಂಡವು ಮೀನುಗಾರ ಸಮಸ್ಯೆಗಳ ಕುರಿತು ಚರ್ಚಿಸಿತು.

‘ಕೇವಲ ಪೊಲೀಸರು ಎಲ್ಲ ಕಾನೂನು ಸುವ್ಯವಸ್ಥೆ ನಿರ್ವಹಿಸಲು ಸಾಧ್ಯವಿಲ್ಲ. ಕಾನೂನು ಸುವ್ಯವಸ್ಥೆ ನಿರ್ವಹಿಸುವವರೇ ಜನರು. ಅವರು ಕಾನೂನು ಪಾಲಿಸಿವುದು, ಸುವ್ಯವಸ್ಥೆಗೆ ಸಹಕರಿಸುವುದು, ಪೊಲೀಸರಿಗೆ ಮಾಹಿತಿ ನೀಡುವ ಮೂಲಕ ಉತ್ತಮ ವ್ಯವಸ್ಥೆಯ ಸಮಾಜ ರೂಪುಗೊಳ್ಳುತ್ತದೆ. ಈ ನಿಟ್ಟಿನಲ್ಲಿ ನಿಮ್ಮೆಲ್ಲರ ಸಹಕಾರ ನಮ್ಮ ಪೊಲೀಸರಿಗೆ ಅತಿಮುಖ್ಯ’ ಎಂದು ಕಮಿಷನರ್ ಎನ್‌. ಶಶಿಕುಮಾರ್ ಜನರ ವಿಶ್ವಾಸ ರೂಪಿಸಲು ಯತ್ನಿಸಿದರು.

ಈಚೆಗೆ ನಗರದ ಪಾಂಡೇಶ್ವರದಲ್ಲಿ ಬ್ರಹ್ಮಕಲಶೋತ್ಸವ ಕಾರ್ಯಕ್ರಮದಲ್ಲಿ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಭಕ್ತಿಗೀತೆ ಹಾಡಿದ್ದರು. ಜೊತೆಗೆ ಸಾರ್ವಜನಿಕ ಸ್ಥಳಗಳಲ್ಲಿ ಮದ್ಯ, ಮಾದಕ ವಸ್ತುಗಳ ಸೇವನೆ, ಶಂಕಾಸ್ಪದವಾಗಿ ಅಡ್ಡಾಡುವವರಿಗೂ ಬಿಸಿ ಮುಟ್ಟಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು