ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರಿನಿಂದ ಉತ್ತರ ಕರ್ನಾಟಕಕ್ಕೆ 47 ಹೆಚ್ಚುವರಿ ಬಸ್‌: ಎಲ್ಲವೂ ಭರ್ತಿ

ಮತದಾನದ ಸಲುವಾಗಿ ಕೆಎಸ್‌ಆರ್‌ಟಿಸಿಯಿಂದ ವಿಶೇಷ ಸೇವೆ
Published 8 ಮೇ 2024, 13:05 IST
Last Updated 8 ಮೇ 2024, 13:05 IST
ಅಕ್ಷರ ಗಾತ್ರ

ಮಂಗಳೂರು: ಉತ್ತರ ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳ ಮತದಾನ ಮಂಗಳವಾರ ನಡೆದಿದ್ದು, ಈ ಸಲುವಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು (ಕೆಎಸ್‌ಆರ್‌ಟಿಸಿ) ದಕ್ಷಿಣ ಕನ್ನಡ ಜಿಲ್ಲೆಯಿಂದ ಸೋಮವಾರ ಒಟ್ಟು 47 ಹೆಚ್ಚುವರಿ ಬಸ್‌ಗಳ ವ್ಯವಸ್ಥೆ ಕಲ್ಪಿಸಿತ್ತು. ಆ ಎಲ್ಲ ಬಸ್‌ಗಳೂ ಪ್ರಯಾಣಿಕರಿಂದ ಭರ್ತಿಯಾಗಿದ್ದವು.

ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗದಿಂದ 35 ಹಾಗೂ ಪುತ್ತೂರು ವಿಭಾಗದಿಂದ 12 ಹೆಚ್ಚುವರಿ ಬಸ್‌ಗಳು ಸಂಚರಿಸಿವೆ. ಹೆಚ್ಚುವರಿ ಹಾಗೂ ದೈನಂದಿನ ಸೇವೆಯ ಬಸ್‌ಗಳೂ ಸೇರಿದಂತೆ ಜಿಲ್ಲೆಯಿಂದ ಸುಮಾರು 130 ಬಸ್‌ಗಳು ಸೋಮವಾರ ಸಂಚರಿಸಿದ್ದು, ಅವೆಲ್ಲವುಗಳ ಆಸನಗಳು ಭರ್ತಿಯಾಗಿದ್ದವು ಎಂದು ನಿಗಮದ ಮೂಲಗಳು ತಿಳಿಸಿವೆ.

‘ನಿಗಮದ ಮಂಗಳೂರು ವಿಭಾಗದಿಂದ ನಿತ್ಯ ಸುಮಾರು 70 ಬಸ್‌ಗಳು ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ಸಂಚರಿಸುತ್ತವೆ. ಅವುಗಳಲ್ಲದೇ ಒಟ್ಟು 35 ಬಸ್‌ಗಳ ಸೇವೆಯನ್ನು ಸೋಮವಾರ ಹೆಚ್ಚುವರಿಯಾಗಿ ಒದಗಿಸಲಾಗಿತ್ತು. ಈ ಎಲ್ಲ ಬಸ್‌ಗಳು ಭರ್ತಿಯಾಗಿದ್ದವು’ ಎಂದು ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಮಹೇಶ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಲೋಕಸಭಾ ಚುನಾವಣೆಯ ಮತದಾನದ ಸಲುವಾಗಿ ಪುತ್ತೂರು ಹಾಗೂ ಬಿ.ಸಿ. ರೊಡ್‌ನಿಂದ ತಲಾ ಐದು ಬಸ್‌ಗಳನ್ನು ಹಾಗೂ ಸುಳ್ಯದಿಂದ ಎರಡು ಬಸ್‌ಗಳನ್ನು ಸೋಮವಾರ ಹೆಚ್ಚುವರಿಯಾಗಿ ಒದಗಿಸಿದ್ದೆವು. ಅಷ್ಟೂ ಬಸ್‌ಗಳು ಪ್ರಯಾಣಿಕರಿಂದ ಭರ್ತಿಯಾಗಿದ್ದವು’ ಎಂದು ಕೆಎಸ್‌ಆರ್‌ಟಿಸಿ ಪುತ್ತೂರು ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಜಯಕರ ಶೆಟ್ಟಿ ತಿಳಿಸಿದರು.

‘ಪುತ್ತೂರು, ಬಿ.ಸಿ.ರೋಡ್‌, ಸುಳ್ಯದಿಂದ ನಿತ್ಯ ತಲಾ ಒಂದು ಬಸ್‌ ಮಾತ್ರ ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ಸಂಚರಿಸುತ್ತವೆ. ಧರ್ಮಸ್ಥಳದಿಂದ ಹೊಸಪೇಟೆ ಹಾಗೂ ಹುಬ್ಬಳ್ಳಿಗೆ ನಿತ್ಯ ತಲಾ ನಾಲ್ಕು ಬಸ್‌ಗಳು ಸಂಚರಿಸುತ್ತವೆ. ಸೋಮವಾರ ಹೆಚ್ಚುವರಿ ಬಸ್‌ಗಳ ಜೊತೆಗೆ ದೈನಂದಿನ ಸೇವೆಯ ಬಸ್‌ಗಳೂ ಪ್ರಯಾಣಿಕರಿಂದ ತುಂಬಿದ್ದವು’ ಎಂದು ಅವರು ಮಾಹಿತಿ ನೀಡಿದರು.

‘ಮಂಗಳೂರಿನಿಂದ ಹುಬ್ಬಳ್ಳಿ, ಬೆಳಗಾವಿ, ಬೈಲಹೊಂಗಲ, ರಾಯಚೂರು, ಗದಗ, ವಿಜಯಪುರ, ಬಾಗಲಕೋಟೆ ಮೊದಲಾದ ಕಡೆಗಳಿಗೆ ದೈನಂದಿನ ಬಸ್‌ ಸೇವೆಗಳಿವೆ. ಆದರೆ, ವಾರದ ಮಧ್ಯೆ ಬಸ್‌ಗಳು ಭರ್ತಿಯಾಗುವುದು ಕಡಿಮೆ. ವಾರಾಂತ್ಯಗಳಲ್ಲಿ ಪ್ರಯಾಣಿಕರ ಸಂಖ್ಯೆ ಜಾಸ್ತಿ ಇರುತ್ತದೆ.  ಇಲ್ಲಿ ಕಟ್ಟಡ ಕಾರ್ಮಿಕರು, ಕೂಲಿ ಕಾರ್ಮಿಕರು ಮತದಾನ ಮಾಡಲು ಊರಿಗೆ ಮರಳಿದ್ದರಿಂದ ಉತ್ತರ ಕರ್ನಾಟಕದ ಕಡೆಗೆ ಸಂಚರಿಸಿದ ಎಲ್ಲ ಬಸ್‌ಗಳಲ್ಲಿ ಸೀಟುಗಳು ಸೋಮವಾರ ಭರ್ತಿಯಾಗಿದ್ದವು’ ಎಂದು ಮಹೇಶ್‌ ತಿಳಿಸಿದರು.

‘ಸಾಮಾನ್ಯವಾಗಿ ಯುಗಾದಿ, ರಂಜಾನ್, ಗಣೇಶ ಚತುರ್ಥಿ, ದೀಪಾವಳಿ ಹಾಗೂ ದಸರಾ ಸಂದರ್ಭದಲ್ಲಿ ಮಾತ್ರ ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ಹೆಚ್ಚುವರಿ ಬಸ್‌ ವ್ಯವಸ್ಥೆ ಕಲ್ಪಿಸಲಾಗುತ್ತದೆ. ವಿಧಾನ ಸಭಾ ಚುನಾವಣೆ ಹಾಗೂ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಹೆಚ್ಚುರಿ ಬಸ್‌ ಸೌಕರ್ಯ ಮಾಡಿದ್ದೇವೆ’ ಎಂದರು.

‘ಉತ್ತರ ಕರ್ನಾಟಕ ಜಿಲ್ಲೆಗೆ ತೆರಳಿರುವ ಹೆಚ್ಚುವರಿ ಬಸ್‌ಗಳು ಮಂಗಳವಾರ ಮರಳಲಿವೆ. ಮೇ 10ರಂದು ಬಸವ ಜಯಂತಿ ಇದೆ. ಉತ್ತರ ಕರ್ನಾಟಕದಲ್ಲಿ ಬಸವ ಜಯಂತಿಯನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. ಮತದಾನ ಮಾಡಲು ತೆರಳಿದವರು ಆ ಹಬ್ಬವನ್ನು ಪೂರೈಸಿಯೇ ಮರಳಲು ನಿರ್ಧರಿಸಿದರೆ, ಹೆಚ್ಚುವರಿ ಬಸ್‌ಗಳ ಆಸನಗಳು ಅಲ್ಲಿಂದ ಮರಳುವಾಗ ಭರ್ತಿಯಾಗಲಿಕ್ಕಿಲ್ಲ. ಆದರೂ ಕೂಲಿ ಕಾರ್ಮಿಕರು ಹಾಗೂ ಕಟ್ಟಡ ಕಾರ್ಮಿಕರು ಮತಚಲಾಯಿಸಿ ಮಂಗಳವಾರವೇ ಮರಳಬಹುದು ಎಂಬ ನಿರೀಕ್ಷೆ ನಮ್ಮದು’ ಎಂದರು.

‘ಇಲ್ಲಿನ ಕುಂಜತ್ತಬೈಲ್‌ ಪ್ರದೇಶದಲ್ಲಿ ಉತ್ತರ ಕರ್ನಾಟಕದಿಂದ ವಲಸೆ ಬಂದವರ ಕಾಲೊನಿಯೇ ಇದೆ. ಈ ಕಾಲೊನಿಯ ಕೆಲವು ನಿವಾಸಿಗಳು ಇಲ್ಲಿಯೇ ಮತದಾನದ ಹಕ್ಕನ್ನು ಹೊಂದಿದ್ದಾರೆ. ಈಗಲೂ ಊರಿನ ಮತದಾನದ ಹಕ್ಕನ್ನು ಹೊಂದಿರುವವರೂ ಇದ್ದಾರೆ. ಅವರಲ್ಲಿ ಬಹುತೇಕರು ಮತದಾನ ಮಾಡಲು ಸೋಮವಾರ ಊರಿಗೆ ಮರಳಿದ್ದಾರೆ. ನಮ್ಮ ವಠಾರದ ಆಸುಪಾಸಿನ ಮನೆಗಳಿಂದ ಏನಿಲ್ಲವೆಂದರೂ  200–250 ಮಂದಿ ಊರಿಗೆ ಮರಳಿದ್ದಾರೆ’ ಎಂದು ಕುಂಜತ್ತಬೈಲ್‌ನ ನಿವಾಸಿ ಮಲ್ಲಣ್ಣ ತಿಳಿಸಿದರು.

‘ಅಭ್ಯರ್ಥಿಗಳ ವಿಶೇಷ ಬಸ್‌ ಇಲ್ಲ’

‘ಹಿಂದೆಲ್ಲ ಮತದಾನದ ಸಂದರ್ಭದಲ್ಲಿ ಯಾವುದಾದರೂ ಪಕ್ಷಗಳ ಮುಖಂಡರು ಅಥವಾ ಅಭ್ಯರ್ಥಿಗಳು ಇಲ್ಲಿಂದ ವಿಶೇಷ ಬಸ್‌ ಸೌಕರ್ಯ ಮಾಡಿಸಿ ಊರಿಗೆ ಉಚಿತವಾಗಿ ಕರೆದೊಯ್ಯುತ್ತಿದ್ದರು. ಆದರೆ ಈ ಸಲ ಯಾರೂ ಉಚಿತ ಬಸ್‌ನ ವ್ಯವಸ್ಥೆ ಮಾಡಿಸಿಲ್ಲ. ಮಹಿಳೆಯರು  ಉಚಿತ ಪ್ರಯಾಣಕ್ಕೆ ಅವಕಾಶ ಇರುವ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲೇ ಊರಿಗೆ ತೆರಳಿದ್ದಾರೆ’ ಎಂದು ಕುಂಜತ್ತಬೈಲ್‌ನ ಮಲ್ಲಣ್ಣ ತಿಳಿಸಿದರು.

‘ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲೂ ಮಹಿಳಾ ಪ್ರಯಾಣಿಕರೇ ಜಾಸ್ತಿ ಇದ್ದರು. ಸೀಟುಗಳು ಭರ್ತಿಯಾಗಿದ್ದರೂ ಅನೇಕರು 300–400 ಕಿ.ಮೀ ದೂರದವರೆಗೆ ನಿಂತು ಕೊಂಡೇ ಪ್ರಯಾಣಿಸಿದ್ದಾರೆ’ ಎಂದು ನಿಗಮದ ಸಿಬ್ಬಂದಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT