ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರಾವಳಿಯಲ್ಲಿ ಗಾಳಿ– ಮಳೆ ಅಬ್ಬರ

ಸಂಪಾಜೆಯಲ್ಲಿ 70 ಮಿ.ಮೀ. ಮಳೆ: ಹಲವೆಡೆ ಬೆಳೆ, ಮನೆಗೆ ಹಾನಿ
Last Updated 14 ಏಪ್ರಿಲ್ 2022, 6:00 IST
ಅಕ್ಷರ ಗಾತ್ರ

ಮಂಗಳೂರು: ಜಿಲ್ಲೆಯ ಮಂಗಳೂರು ನಗರ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ಬುಧವಾರ ಗುಡುಗು, ಸಿಡಿಲಿನ ಅಬ್ಬರದ ಜೊತೆಗೆ ಧಾರಾಕಾರ ಮಳೆಯಾಗಿದೆ. ಕರಾವಳಿ ತೀರ ಮತ್ತು ಘಟ್ಟದ ತಪ್ಪಲು ಪ್ರದೇಶದಲ್ಲಿ ಗುಡುಗು, ಮಿಂಚು ಸಹಿತ ಉತ್ತಮ ಮಳೆಯಾಗಿದೆ.

ನಗರ ಪ್ರದೇಶದ ಬಹುತೇಕ ಕಡೆಗಳಲ್ಲಿ ಬುಧವಾರ ಸಂಜೆಯ ವೇಳೆಗೆ ಗುಡುಗು ಸಹಿತ ಭಾರೀ ಮಳೆಯಾಗಿದೆ. ಇನ್ನೂ ಕೆಲವು ದಿನಗಳ ಕಾಲ ಕರಾವಳಿಯಲ್ಲಿ ಗುಡುಗು ಸಹಿತ ಮಳೆ ಸುರಿಯಲಿದೆ.

ಸುಳ್ಯದ ಸಂಪಾಜೆಯಲ್ಲಿ ಅತ್ಯಧಿಕ 70 ಮಿ.ಮೀ., ಬಳ್ಪ 37, ಪುತ್ತೂರಿನ ಕೊಳ್ತಿಗೆ 50, ಅರಿಯಡ್ಕ 54.5, ಕಡಬ ತಾಲ್ಲೂಕಿನ ಪೆರಾಬೆಯಲ್ಲಿ 40 ಮಿ.ಮೀ. ಮಳೆಯಾಗಿದೆ.

ಜಿಲ್ಲೆಯಲ್ಲಿ ದಿನವಿಡೀ ಹಗಲು ವೇಳೆ ಮೋಡ ಕವಿದ ಸೆಕೆಯ ವಾತಾವರಣವಿತ್ತು. ಮಂಗಳೂರಿನಲ್ಲಿ ದಿನದ ಗರಿಷ್ಠ ತಾಪಮಾನ 31.7 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ 26.1 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.

ಕಾಸರಗೋಡು ವರದಿ: ಜಿಲ್ಲೆಯ ವಿವಿಧೆಡೆ ಬುಧವಾರ ಬಿರುಸಿನ ಗಾಳಿಮಳೆ ಸುರಿದಿದೆ. ಗುಡುಗು-ಸಿಡಿಲಿನ

ಹಲವೆಡೆ ಬೆಳೆ ನಷ್ಟ ಸಂಭವಿಸಿದೆ. ಕುಂಬಳೆ ಬಳಿಯ ಮಾವಿನಕಟ್ಟೆ ನಿವಾಸಿ ಖದೀಜಾ ಎಂಬುವರ ಮನೆಯಲ್ಲಿ ಸಿಡಿಲ ಆಘಾತಕ್ಕೆ ಅಡುಗೆ ಕೋಣೆಯ ಒಂದು ಭಾಗದ ಗೋಡೆ ಕುಸಿದಿದೆ. ವಿದ್ಯುತ್ ಸ್ವಿಚ್ ಬೋರ್ಡ್ ಸಿಡಿದು ಹೋಗಿದ್ದು, ಟಿ.ವಿ.ಗೆ ಹಾನಿಯಾಗಿದೆ.

ಬಂಟ್ವಾಳ ವರದಿ: ತಾಲ್ಲೂಕಿನಾದ್ಯಂತ ಬುಧವಾರ ಸಂಜೆ ಗುಡುಗು ಸಹಿತ ಕೆಲ ಹೊತ್ತು ದಿಢೀರ್ ಮಳೆಯಾಗಿದೆ. ಕೆಲವೆಡೆ ಮನೆಗೆ ಹಾನಿ ಉಂಟಾಗಿದೆ.

ಇಲ್ಲಿನ ಮಾಣಿ ಗ್ರಾಮದ ಶಂಭುಗ ನಿವಾಸಿ ಶೀನ ಮೂಲ್ಯ ಎಂಬುವರ ಮನೆಗೆ ಸಿಡಿಲು ಬಡಿದು ವಿದ್ಯುತ್ ಪರಿಕರ ಸುಟ್ಟು ಹೋಗಿದೆ. ಮಂಚಿ ಗ್ರಾಮದ ಕೇಪಳಗುರಿ ನಿವಾಸಿ ಜಯಶ್ರೀ ಮಂಜುನಾಥ ಆಚಾರ್ಯ ಎಂಬುವರ ಮನೆ ಗೋಡೆ ಮತ್ತು ಹೆಂಚು ಹಾನಿಗೀಡಾಗಿದೆ. ಕುಕ್ಕಾಜೆ ನಿವಾಸಿ ಆಯಿಷ ಎಂಬವರ ಮನೆಯ ಗೋಡೆ ಮತ್ತು ವಿದ್ಯುತ್ ಸಂಪರ್ಕಕ್ಕೆ ಹಾನಿಗೀಡಾಗಿದೆ ಎಂದು ಕಂದಾಯ ಇಲಾಖೆ ತಿಳಿಸಿದೆ.

ವಿಟ್ಲ ವರದಿ: ಗಾಳಿ– ಮಳೆಗೆ ವಿಟ್ಲದ ವಿ.ಎಚ್ ಕಾಂಪ್ಲೆಕ್ಸ್‌ನ ಪಾರ್ಕಿಂಗ್‌ನಲ್ಲಿ ನಿಲ್ಲಿಸಿದ್ದ ವಾಹನಗಳ ಮೇಲೆ ಕಟ್ಟಡದಿಂದ ಕಲ್ಲುಗಳು ಬಿದ್ದು ಹಲವು ವಾಹನಗಳಿಗೆ ಹಾನಿಯಾಗಿದೆ.

ವಿಟ್ಲದಲ್ಲಿ ಬುಧವಾರ ಸಂಜೆ ಗಾಳಿ ಸಹಿತ ಮಳೆ ಸುರಿದಿದೆ. ವಿ.ಎಚ್. ಕಾಂಪ್ಲೆಕ್ಸ್‌ನಲ್ಲಿ ಅಂಗಡಿ ಮಳಿಗೆಗಳ ಮುಂಭಾಗದ ಪಾರ್ಕಿಂಗ್‌ನಲ್ಲಿ ದ್ವಿಚಕ್ರ ವಾಹನ ನಿಲ್ಲಿಸಲಾಗಿತ್ತು. ಪಾರ್ಕಿಂಗ್‌ನ ಮೇಲ್ಭಾಗಕ್ಕೆ ಬೀಸಿಲು ಬಾರದಂತೆ ಹಳದಿ ಬಟ್ಟೆಯ ಚಪ್ಪರಕ್ಕೆ ಅಳವಡಿಸಲಾಗಿದ್ದ ಹೋಲೊ ಬ್ಲಾಕ್ ಕಲ್ಲುಗಳ ರಾಶಿ ಕೆಳಗಡೆ ಕುಸಿದಿದೆ. ಇದರಿಂದ ಐದು ದ್ವಿಚಕ್ರ ವಾಹನಗಳು ಹಾನಿಗೊಂಡಿದೆ. ಸ್ಥಳದಲ್ಲಿ ಜನರು ಇಲ್ಲದ ಕಾರಣ ಅನಾಹುತ ತಪ್ಪಿದೆ.

ಬೆಳ್ತಂಗಡಿ ವರದಿ: ತಾಲ್ಲೂಕಿನ ಅಳದಂಗಡಿ ಸಮೀಪದ ಪಿಲ್ಯ ಶ್ರೀಧರ ಆಚಾರ್ಯ ಅವರ ತೋಟದಲ್ಲಿ ಬುಧವಾರ ತೆಂಗಿನ ಮರಕ್ಕೆ ಸಿಡಿಲು ಬಡಿದು ಬೆಂಕಿಗೆ ಆಹುತಿಯಾಗಿದೆ.

ಸುಬ್ರಹ್ಮಣ್ಯ ವರದಿ: ಸುಳ್ಯ ತಾಲ್ಲೂಕಿನ ಅಲ್ಲಲ್ಲಿ ಮಂಗಳವಾರ ಸಂಜೆ ಗುಡುಗು ಸಹಿತ ಗಾಳಿ ಮಳೆಯಾಗಿದ್ದು, ಕೆಲವೆಡೆ ಹಾನಿ ಸಂಭವಿಸಿದೆ. ಪಂಜದ ಕೃಷ್ಣನಗರ ಎಂಬಲ್ಲಿ ಮರದ ಕೊಂಬೆ ವಿದ್ಯುತ್ ತಂತಿ ಮೇಲೆ ಬಿದ್ದು ಹಾನಿ ಸಂಭವಿಸಿದೆ. ಇನ್ನೂ ಹಲವೆಡೆ ಹಾನಿ ಸಂಭವಿಸಿದೆ.

ಸುಳ್ಯ ತಾಲ್ಲೂಕಿನ ಬೆಳ್ಳಾರೆ, ಸುಳ್ಯ, ಸಂಪಾಜೆ ಭಾಗದಲ್ಲಿ ಬುಧವಾರ ಸಂಜೆ ಗಾಳಿ ಮಳೆ ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT