ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಾವು: ವಿಮೆ ‘ಬರ’ದ ನೋವು

ವಿಮೆಗೆ ಪರಿಗಣಿಸುವ ಅವಧಿಯಲ್ಲಿ ತೊಂದರೆ ಆಗಿಲ್ಲ ಎಂಬ ಕಾರಣಕ್ಕೆ ಸಿಗುತ್ತಿಲ್ಲ ಪರಿಹಾರ
Published 11 ಮೇ 2024, 6:21 IST
Last Updated 11 ಮೇ 2024, 6:21 IST
ಅಕ್ಷರ ಗಾತ್ರ

ಮಂಗಳೂರು: ‘ಸರಿಯಾದ ಸಮಯದಲ್ಲಿ ಮಳೆ ಬರಲಿಲ್ಲ. ಹೀಗಾಗಿ ಬೆಳೆ ಅರ್ಧಕ್ಕರ್ಧ ಹಾಳಾಗಿ ಹೋಗಿದೆ. ಫಸಲು ಬಾರದೇ ಇದ್ದರೂ ವಿಮೆ ಮೊತ್ತ ಸಿಗುತ್ತದಲ್ಲ ಎಂದುಕೊಂಡು ಸಮಾಧಾನಪಟ್ಟುಕೊಂಡಿದ್ವಿ. ಆದರೆ ಅದೂ ಸಿಗುವುದಿಲ್ಲ ಎಂದು ಗೊತ್ತಾದ ಮೇಲೆ ಆಕಾಶವೇ ಕಳಚಿ ಬಿದ್ದಂತೆ ಆಗಿದೆ...’

ನಗರದ ಕದ್ರಿ ಪಾರ್ಕ್‌ನಲ್ಲಿ ಗುರುವಾರ ಆರಂಭಗೊಂಡ ಮಾವು–ಹಲಸು ಮೇಳದಲ್ಲಿ ಮಾವಿನ ಹಣ್ಣಿನ ಬಾಕ್ಸ್‌ಗಳನ್ನು ತೆರೆಯುತ್ತ ಸಂಕಟ ಹೊರಹಾಕಿದರು ರಾಮನಗರ ಜಿಲ್ಲೆ ದಶವಾರ ಗ್ರಾಮದ ರವಿಕುಮಾರ್.

ಕರ್ನಾಟಕದ ಮಾವು ಬೆಳೆಯುವ ಪ್ರಮುಖ ಪ್ರದೇಶಗಳಲ್ಲಿ ಬಿಸಿಲಿನ ಬೇಗೆಯಿಂದಾಗಿ ಈ ಬಾರಿ ಇಳುವರಿಗೆ ಭಾರಿ ಪೆಟ್ಟು ಬಿದ್ದಿದೆ. ಬೆಳೆ ನಷ್ಟ ಅನುಭವಿಸಿದರೂ ವಿಮೆಯ ಮೊತ್ತ ಪಡೆಯಲು ತಾಂತ್ರಿಕ ಸಮಸ್ಯೆ ಅಡ್ಡಿಯಾಗಿರುವುದರಿಂದ ಗಾಯದ ಮೇಲೆ ಬರೆ ಬಿದ್ದಂಥ ಪರಿಸ್ಥಿತಿ ಆಗಿದೆ ಎಂಬುದು ಮೇಳಕ್ಕೆ ಬಂದಿರುವ ಬಹುತೇಕ ರೈತರ ಅಳಲು.

ಕೋಲಾರ ಮತ್ತು ರಾಮನಗರ ಜಿಲ್ಲೆಗಳಲ್ಲಿ ಮಾವು ಯಥೇಚ್ಛವಾಗಿ ಬೆಳೆಯುತ್ತದೆ. ಆದರೆ, ಈ ಬಾರಿ ಬೇಸಿಗೆ ಮಳೆ ಬಾರದೇ ಇದ್ದುದರಿಂದ ಮತ್ತು ಬಿಸಿಲ ಧಗೆ ವಿಪರೀತ ಇದ್ದ ಕಾರಣ ಶೇಕಡ 50ರಷ್ಟು ಇಳುವರಿ ಕೂಡ ಆಗಿಲ್ಲ. ಹೂ ಬಿಟ್ಟು ಕಾಯಿಕಟ್ಟುವ ಸಂದರ್ಭದಲ್ಲಿ ಸಾಮಾನ್ಯವಾಗಿ ಮಳೆ ಆಗುತ್ತದೆ. ಅದರಿಂದ ಉತ್ತಮ ಇಳುವರಿ ಸಿಗುತ್ತದೆ. ಈ ಬಾರಿ ಮಳೆ ಕೈಕೊಟ್ಟ ಕಾರಣ ನಿರೀಕ್ಷೆ ಹುಸಿಯಾಗಿದೆ ಎನ್ನುತ್ತಾರೆ ರೈತರು. 

ಟರ್ಮ್ ಶೀಟ್‌ನಲ್ಲಿ ಸೇರ್ಪಡೆಯಾಗಲಿಲ್ಲ: ಬೆಳೆ ವಿಮೆಯ ಟರ್ಮ್‌ ಶೀಟ್‌, ಆಯಾ ಪ್ರದೇಶದ ಬೆಳೆ ಮತ್ತು ಪ್ರಕೃತಿ ವಿಕೋಪದಿಂದ ಉಂಟಾಗಬಹುದಾದ ತೊಂದರೆಗೆ ಅನುಗುಣವಾಗಿ ಸಿದ್ಧವಾಗಿರುತ್ತದೆ. ರಾಮನಗರ ಜಿಲ್ಲೆಯ ಮಾವು ಬೆಳೆಗೆ ಆಲಿಕಲ್ಲು ಮಳೆ ಮತ್ತು ಬಿರುಗಾಳಿಯನ್ನು ಪರಿಗಣಿಸಲಾಗಿದೆ. ಫೆಬ್ರುವರಿ, ಮಾರ್ಚ್‌ ಮತ್ತು ಏಪ್ರಿಲ್ ತಿಂಗಳಿಗೆ ಇದು ಅನ್ವಯ ಆಗುತ್ತದೆ. ಈ ಸಂದರ್ಭದಲ್ಲಿ ಹಾನಿ ಸಂಭವಿಸಲಿಲ್ಲ. ಆದ್ದರಿಂದ ತಾಂತ್ರಿಕವಾಗಿ ವಿಮೆ ಮೊತ್ತ ಸಿಗುವ ಸಾಧ್ಯತೆ ಕಡಿಮೆ ಎಂದು ರಾಮನಗರ ಜಿಲ್ಲಾ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ರಾಜು ‘ಪ್ರಜಾವಾಣಿ’ಗೆ ತಿಳಿಸಿದರು. 

ಬೆಂಗಳೂರು, ಕೋಲಾರ ಮತ್ತು ರಾಮನಗರದ ಹವಾಮಾನ ಮಾವು ಬೆಳೆಗೆ ಅತ್ಯಂತ ಸೂಕ್ತವಾಗಿದೆ. ಆದರೆ. ಈ ಬಾರಿ ಅದು ಕೈಕೊಟ್ಟಿದೆ. ಇದು ದುರದೃಷ್ಟಕರ ಎಂದು ಅವರು ತಿಳಿಸಿದರು.

‘ವಿಮೆಯ ಕಂತು ಎಕರೆಗೆ ತಲಾ ₹ 6 ಸಾವಿರದಂತೆ ತುಂಬಿದ್ದೆವು. ಹೀಗಾಗಿ ಪರಿಹಾರ ಮೊತ್ತ ಸಿಗುವ ಭರವಸೆ ಇತ್ತು. ಆದರೆ ಗಾಳಿ–ಮಳೆಯಿಂದ ಆಗುವ ನಷ್ಟಕ್ಕೆ ಮಾತ್ರ ಪರಿಹಾರ ಸಿಗಲು ಸಾಧ್ಯ, ಬಿಸಿಲಿನ ಹೊಡೆತದ ನಷ್ಟ ಪಟ್ಟಿಯಲ್ಲಿ ಇಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಅತ್ತ ಬೆಳೆಯೂ ಇಲ್ಲ, ಇತ್ತ ಪರಿಹಾರವೂ ಇಲ್ಲ, ಮತ್ತೊಂದು ಕಡೆ ವಿಮೆಗೆ ಕಟ್ಟಿದ ಮೊತ್ತವೂ ನಷ್ಟವಾಗಿದೆ’ ಎಂದು ರವಿಕುಮಾರ್ ಹೇಳಿದರು.

ಮಂಗಳೂರಿನಲ್ಲಿ ನಡೆಯುತ್ತಿರುವ ಮಾವು ಮೇಳದಲ್ಲಿ ರಾಮನಗರದ ಹಣ್ಣುಗಳು
ಮಂಗಳೂರಿನಲ್ಲಿ ನಡೆಯುತ್ತಿರುವ ಮಾವು ಮೇಳದಲ್ಲಿ ರಾಮನಗರದ ಹಣ್ಣುಗಳು
ಈ ಬಾರಿ 2.74 ಲಕ್ಷ ಟನ್ ಮಾವು ಬೆಳೆಯ ನಿರೀಕ್ಷೆ ಇತ್ತು. ಆದರೆ ಈ ವರೆಗೆ ಆಗಿರುವುದು 25 ಸಾವಿರ ಟನ್ ಮಾತ್ರ. ಅತಿಯಾದ ಬಿಸಿಲಿನಿಂದ ಹೂ ಮತ್ತು ಕಾಯಿಗಳು ಉದುರಿದ ಕಾರಣ ಇಳುವರಿಗೆ ಪೆಟ್ಟು ಬಿದ್ದಿದೆ.
–ರಾಜು ರಾಮನಗರ ಜಿಲ್ಲೆ ತೋಟಗಾರಿಕೆ ಇಲಾಖೆ ಉಪನಿರ್ದೇಶಕ

ಈ ಕುಟುಂಬಕ್ಕೆ ವಿಮೆ ಬೇಡ ರಾಮನಗರ ಬಿಳಗುಂಬ ಗ್ರಾಮದ ಬಿ.ಸಿ.ವಾಸು ಅವರ ಕುಟುಂಬಕ್ಕೆ ಭೂಮಿತಾಯಿ ಮೇಲೆ ಅಪಾರ ನಂಬಿಕೆ. ಆದ್ದರಿಂದ ವಿಮೆ ಮಾಡಿಸಿಕೊಳ್ಳುವುದಿಲ್ಲ. ‘ಭೂಮಿ ಕೈಬಿಡುವುದಿಲ್ಲ ಎಂಬ ಅಚಲವಾದ ನಂಬಿಕೆ ಇರುವವರು ನನ್ನ ಮಾವ. ವಿಮೆ ಮಾಡಿಸಿ ಭೂಮಿಯ ಮೇಲೆ ಅಪನಂಬಿಕೆ ಇರಿಸಿಕೊಳ್ಳಬಾರದು. ಹಾಗೆ ಮಾಡಿದರೆ ಮುನಿಸಿಕೊಂಡು ಮುಂದಿನ ಬಾರಿ ಬೆಳೆ ಕೊಡುವುದಿಲ್ಲ ಎಂದು ನಮಗೆಲ್ಲ ಹೇಳಿಕೊಟ್ಟಿದ್ದಾರೆ. ಈ ಬಾರಿ ಇಳುವರಿ ಕಡಿಮೆ ಆಗಿದೆ. ಆದರೂ ಪರವಾಗಿಲ್ಲ ಎಷ್ಟು ಬಂದಿದೆಯೋ ಅಷ್ಟರಲ್ಲೇ ಸಮಾಧಾನವಿದೆ. ನೀರಿನ ವ್ಯವಸ್ಥೆ ಚೆನ್ನಾಗಿ ಮಾಡಿಕೊಂಡಿದ್ದೇವೆ ಕೊಟ್ಟಿಗೆ ಗೊಬ್ಬರ ಬಳಸಿ ಮರಗಳಿಗೆ ಶಕ್ತಿ ತುಂಬಿದ್ದೇವೆ. ಆದ್ದರಿಂದ ಬಂದಿರುವ ಬೆಳೆಯಲ್ಲಿ ಯಾವ ಹಣ್ಣು ಕೂಡ ಹಾಳಾಗಲಿಲ್ಲ’ ಎಂದು ವಾಸು ಅವರ ಸೊಸೆ ಪ್ರಮೋದಿನಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT