ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಧಾನಸಭೆ ಚುನಾವಣೆ: ಮತ ಹಾಕಲು ಊರಿನತ್ತ ಮುಖಮಾಡಿದ ವಲಸೆ ಕಾರ್ಮಿಕರು

ನೀರಿನ ಅಭಾವ–ನಿರ್ಮಾಣ ಚಟುವಟಿಕೆ ಕುಂಠಿತ
Published 9 ಮೇ 2023, 20:32 IST
Last Updated 9 ಮೇ 2023, 20:32 IST
ಅಕ್ಷರ ಗಾತ್ರ

ಮಂಗಳೂರು: ನಗರಕ್ಕೆ ನೀರು ಉಣಿಸುವ ತುಂಬೆ ಜಲಾಶಯದಲ್ಲಿ ನೀರಿನ ಸಂಗ್ರಹ ಕಡಿಮೆಯಾಗುತ್ತಿದ್ದಂತೆಯೇ ಮಹಾನಗರ ಪಾಲಿಕೆಯು ನಿರ್ಮಾಣ ಕಾಮಗಾರಿಗಳಿಗೆ ಕುಡಿಯುವ ನೀರು ಬಳಸುವುದಕ್ಕೆ ನಿರ್ಬಂಧ ಹೇರಿದೆ. ನಿರ್ಮಾಣ ಚಟುವಟಿಕೆ ಕಡಿಮೆಯಾಗಿದ್ದರಿಂದ ಹಾಗೂ ವಿಧಾನಸಭಾ ಚುನಾವಣೆಯೂ ಇರುವುದರಿಂದ, ಇಲ್ಲಿ ನೆಲೆಸಿದ್ದ ಬಹುತೇಕ ವಲಸೆ ಕಾರ್ಮಿಕರು ಊರಿನತ್ತ ಮುಖಮಾಡಿದ್ದಾರೆ.

ನಗರ ಹೊರವಲಯದ ಕಾವೂರಿನ ಜ್ಯೋತಿನಗರ, ಕುಂಜತ್ತಬೈಲ್‌, ಪಂಜಿಮೊಗರು, ಕೊಂಚಾಡಿ, ಬಸವನಗರ, ಮೂಡುಶೆಡ್ಡೆ, ವಾಮಂಜೂರು ಪ್ರದೇಶಗಳಲ್ಲಿ ವಲಸೆ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿದ್ದು, ಅನೇಕರು ವಾರದಿಂದ ಈಚೆಗೆ ಊರಿಗೆ ಮರಳಿದ್ದಾರೆ.

‘ಇಲ್ಲಿ ನಾವು ನಿರೀಕ್ಷೆ ಮಾಡಿದಷ್ಟು ಕೆಲಸ ಸಿಗುತ್ತಿಲ್ಲ. ಇಲ್ಲಿ ಜೀವನ ನಿರ್ವಹಣೆಯೂ ದುಬಾರಿ. ಮತದಾನಕ್ಕೆ ಬರುವಂತೆ ಊರಿನ ಕೆಲ ಮುಖಂಡರು ಒತ್ತಾಯಿಸುತ್ತಿದ್ದಾರೆ. ಹಾಗಾಗಿ ಊರಿಗೆ ಹೋಗುತ್ತೇವೆ. ಈಗಲಾದರೆ, ರಾಜಕೀಯ ಪಕ್ಷದವರೇ ಪ್ರಯಾಣಕ್ಕೆ ವ್ಯವಸ್ಥೆ ಮಾಡುತ್ತಾರೆ. ಕೆಲಸ ಇಲ್ಲ ಎಂದು ನಾವಾಗಿ ಊರಿಗೆ ಹೋಗಿ ಬರುವುದಾದರೆ ಏನಿಲ್ಲವೆಂದರೂ ಐದಾರು ಸಾವಿರ ಖರ್ಚಾಗುತ್ತದೆ’ ಎಂದು ಹೆಸರು ಬಹಿರಂಗಪಡಿಸಲು ಬಯಸದ ವಿಜಯಪುರ ಜಿಲ್ಲೆಯ ವಲಸೆ ಕಾರ್ಮಿಕರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಇಲ್ಲಿ ನೆಲೆಸಿರುವ ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ ಜಿಲ್ಲೆಗಳ ವಲಸೆ ಕಾರ್ಮಿಕರಲ್ಲಿ ಅನೇಕರು ಇಲ್ಲಿನ ಮತದಾರರ ಚೀಟಿಯಲ್ಲಿ ಹೆಸರು ನೋಂದಾಯಿಸಿಲ್ಲ. ಹಾಗಾಗಿ ಹೆಚ್ಚಿನವರು ಚುನಾವಣೆ ಸಂದರ್ಭದಲ್ಲಿ ಊರಿಗೆ ಮರಳುತ್ತಾರೆ. ಇಲ್ಲಿ ಕೆಲಸವೂ ಕಡಿಮೆ ಆಗಿರುವುದರಿಂದ ನಾಲ್ಕೈದು ದಿನಗಳಿಂದ ಈಚೆಗೆ ಅನೇಕರು ಊರಿಗೆ ಮರಳಿದ್ದಾರೆ’ ಎಂದು ಕಲಬುರಗಿಯ ಶರಣಪ್ಪ ಹೇಳಿದರು.

‘ಇಲ್ಲಿನ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸದ ಕಾರ್ಮಿಕರು ಮತದಾನಕ್ಕಾಗಿ ಊರಿಗೆ ಮರಳುತ್ತಿದ್ದು, ಒಂದು ವಾರದಿಂದ ಈಚೆಗೆ ಬಸ್‌ಗಳಲ್ಲಿ ಸೀಟೂ ಸಿಗುತ್ತಿಲ್ಲ’ ಎಂದು ಬಾದಾಮಿಯ ರಂಗಪ್ಪ ತಿಳಿಸಿದರು. 

ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಮಂಗಳೂರು ವಿಭಾಗದಿಂದ ನಿತ್ಯ 70ಕ್ಕೂ ಅಧಿಕ ಬಸ್‌ಗಳು ಹಾಗೂ ವಾಯವ್ಯ ಕರ್ನಾಟಕ ಸಾರಿಗೆ ನಿಗಮದ 30ಕ್ಕೂ ಹೆಚ್ಚು ಬಸ್‌ಗಳು ಇಲ್ಲಿಂದ ಸಂಚರಿಸುತ್ತವೆ.

‘ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ಹೋಗುವ ಬಸ್‌ಗಳಲ್ಲಿ ನಮಗೆ ನಿತ್ಯ ಶೇ 70ರಷ್ಟು ಸೀಟುಗಳು ಭರ್ತಿಯಾಗುತ್ತಿರಲಿಲ್ಲ. ಆದರೆ ವಾರದಿಂದ ಈಚೆಗೆ ಬಹುತೇಕ ಎಲ್ಲ ಬಸ್‌ಗಳ ಸೀಟುಗಳೂ ಭರ್ತಿಯಾಗಿವೆ. ನಿಂತುಕೊಂಡೇ ಜನ ಪ್ರಯಾಣಿಸಿದ್ದಾರೆ’ ಎಂದು ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗ ವಿಭಾಗೀಯ ನಿಯಂತ್ರಣಾಧಿಕಾರಿ ರಾಜೇಶ್‌ ಶೆಟ್ಟಿ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಶರಣಪ್ಪ
ಶರಣಪ್ಪ

ನಿರ್ಮಾಣ ಚಟುವಟಿಕೆ ಶೇ 50ರಷ್ಟು ಸ್ಥಗಿತ

‘ಕುಡಿಯುವ ನೀರನ್ನು ನಿರ್ಮಾಣ ಚಟುವಟಿಕೆಗೆ ಬಳಸುವುದನ್ನು ನಿರ್ಬಂಧಿಸಿದ ಬಳಿಕ ಮಂಗಳೂರು ನಗರದಲ್ಲಿ ಕಟ್ಟಡ ನಿರ್ಮಾಣ ಚಟುವಟಿಕೆ ಶೇ 50ರಷ್ಟು ಸ್ಥಗಿತಗೊಂಡಿದೆ’ ಎಂದು ರಿಯಲ್‌ ಎಸ್ಟೇಟ್‌ ಅಭಿವೃದ್ಧಿ ಸಂಘಟನೆಗಳ ಒಕ್ಕೂಟದ (ಕ್ರೆಡಾಯ್‌) ಮಂಗಳೂರು ಘಟಕದ ಚೇರ್‌ಮನ್‌ ಪುಷ್ಪರಾಜ್‌ ಜೈನ್‌ ‘ಪ್ರಜಾವಾಣಿ’ಗೆ ತಿಳಿಸಿದರು.  

‘ಲಭ್ಯ ಇರುವ ನೀರನ್ನು ಜತನದಿಂದ ಬಳಸಬೇಕಿದೆ. ನಮ್ಮ ಸಂಘಟನೆಯ ಸದಸ್ಯರಿಗೂ ನಾವು ಕುಡಿಯುವ ನೀರನ್ನು ನಿರ್ಮಾಣ ಚಟುವಟಿಕೆಗೆ ಬಳಸಬಾರದು ಎಂದು ಸೂಚನೆ ನೀಡಿದ್ದೇವೆ’ ಎಂದು ಅವರು ಹೇಳಿದರು.

‘ಪಾಲಿಕೆಯು ನಿರ್ಮಾಣ ಚಟುವಟಿಕೆಗೆ ನೀರು ಪೂರೈಕೆ ಸ್ಥಗಿತಗೊಳಿಸಿರುವುದರಿಂದ ಕಟ್ಟಡ ನಿರ್ಮಾಣಕ್ಕೆ ಟ್ಯಾಂಕರ್‌ ನೀರನ್ನು ಅಥವಾ ಕೊಳವೆಬಾವಿಯ ನೀರನ್ನು ಬಳಸಬೇಕಾದ ಸ್ಥಿತಿ ಇದೆ. ಬೇಸಿಗೆಯಲ್ಲಿ ಬಹುತೇಕ ಕೊಳವೆಬಾವಿಗಳಲ್ಲಿ ಸಾಕಷ್ಟು ನೀರು ಸಿಗದು. ಟ್ಯಾಂಕರ್‌ ನೀರಿಗೆ ₹ 4ಸಾವಿರಕ್ಕೂ ಹೆಚ್ಚು ದರ ವಿಧಿಸುತ್ತಾರೆ. ಅಷ್ಟು ದುಬಾರಿ ದರದ ನೀರು ತರಿಸಿ ಕಟ್ಟಡ ಕಾಮಗಾರಿ ಮುಂದುವರಿಸಿದರೆ ನಷ್ಟ ಉಂಟಾಗುತ್ತದೆ’ ಎಂದು ಗುತ್ತಿಗೆದಾರ ರಾಜೇಶ್‌ ತಿಳಿಸಿದರು.

‘ಗುತ್ತಿಗೆದಾರರಲ್ಲಿ ಅನೇಕರು ಕಾರ್ಮಿಕರಿಗೆ ರಜೆ ನೀಡಿದ್ದಾರೆ. ನೀರಿನ ಬಳಕೆಯ ಅಗತ್ಯವಿರದ ಕೆಲಸಗಳನ್ನು ಮಾತ್ರ ಈಗ ನಿರ್ವಹಿಸಲಾಗುತ್ತಿದೆ. ರಾಜ್ಯದಲ್ಲಿ ಚುನಾವಣೆಯೂ ನಡೆಯುತ್ತಿರುವುದರಿಂದ ಉತ್ತರ ಕರ್ನಾಟಕದ ಜಿಲ್ಲೆಗಳಿಂದ ಬಂದಿರುವ ವಲಸೆ ಕಾರ್ಮಿಕರು ಊರಿಗೆ ಮರಳಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT